Previous ಲಿಂಗಾಯತರು ಹಿಂದುಗಳಲ್ಲ ಹಿಂದೂ, ಲಿಂಗಾಯತ ವ್ಯತ್ಯಾಸ Next

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

2. ಹಿಂದು ಧರ್ಮ ಎಂದರೇನು ?

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಹಿಂದು ಧರ್ಮ ಎಂದರೇನು ?

ಲಿಂಗಾಯತ ಧರ್ಮದ ಸ್ವರೂಪ ತಿಳಿಯುವ ಮೊದಲು, ಲಿಂಗಾಯತರು ಹಿಂದುಗಳಲ್ಲವೆಂದು ಮನವರಿಕೆ ಮಾಡಿಕೊಳ್ಳಲು ಹಿಂದು ಧರ್ಮದ ಸ್ವರೂಪ ತಿಳಿಯುವುದು ಅಗತ್ಯವಿದೆ. ಹಿಂದು ಧರ್ಮವನ್ನು ಸಾವಿರಾರು ಪುಟಗಳಲ್ಲಿ ವಿವರಿಸಬಹುದೇ ವಿನಾ ಕೆಲವೇ ವಾಕ್ಯಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.

“ಹಿಂದು ಎಂಬುದು ಪುರಾತನ ಪರ್ಶಿಯನ್ನರು ಸಿಂಧೂ ನದಿಯನ್ನು ಉದ್ದೇಶಿಸಿ ಹೇಳುತ್ತಿದ್ದ ಶಬ್ದವಾಗಿದ್ದಿತು. ಸಂಸ್ಕೃತದಲ್ಲಿರುವ ' ಸ ಕಾರಗಳೆಲ್ಲವೂ ಪುರಾತನ ಪರ್ಶಿಯಾ ಭಾಷೆಯಲ್ಲಿ 'ಹ ಕಾರವಾಗಿ ಬದಲಾಗುತ್ತಿದ್ದು, “ಸಿಂಧು" ಎನ್ನುವುದು “ಹಿಂದು”ವಾಯಿತು. - ಸ್ವಾಮಿ ವಿವೇಕಾನಂದರು.

ಸಿಂಧು ನದಿಯ ಬಯಲಲ್ಲಿ ವಾಸಿಸುತ್ತಿದ್ದ ಜನರನ್ನು ಹಿಂದುಗಳೆಂದು ಕರೆಯುವ ಪರಿಪಾಠ ಪರ್ಶಿಯಾ, ಗ್ರೀಸ್, ಅರೇಬಿಯಾ ಮುಂತಾದ ಜನರಿಂದ ರೂಢಿಗೆ ಬಂದಿತು. ಆರಂಭದಲ್ಲಿ ಹಿಂದು ಪದ ಭೌಗೋಲಿಕವಾಗಿ ಆರಂಭವಾಯಿತೇ ವಿನಾ ಧರ್ಮ ಸೂಚಕವಾಗಿರಲಿಲ್ಲ. ಪರ್ಶಿಯನ್ನರು ಸಕಾರವನ್ನು ಹ ಕಾರವಾಗಿ ಉಚ್ಚರಿಸುವ ಅಭ್ಯಾಸ ಹೊಂದಿದ್ದರಿಂದ ಸಿಂಧುಗಳು ಎಂಬ ಪದ ಹಿಂದು ಎಂದು ಆಯಿತು. ಮೊದಲು ಸಿಂಧು ನದಿಯ ಬಯಲಲ್ಲಿ ಇದ್ದವರಿಗೆ ಅನ್ವಯವಾದುದು ಕಾಲಾನಂತರ ಭರತ ಖಂಡದ ನಿವಾಸಿಗಳಿಗೆ ಅನ್ವಯವಾಗ ತೊಡಗಿತು. ವಚನ ವಾಙ್ಞಯವನ್ನೇ ತೆಗೆದುಕೊಂಡರೆ ಅಲ್ಲಿ ಶೈವ, ವೈದಿಕ, ವೈಷ್ಣವ, ಶಾಕ್ತ ಕಾಳಾಮುಖ, ಕಾಪಾಲಿಕ ಮುಂತಾದ ಪದಗಳು ಬರುತ್ತವೇ ವಿನಾ ಹಿಂದು ಪದ ಬಳಕೆಯಾಗಿಲ್ಲ, ಭರತ ಖಂಡದ ಹೊರಗಿನಿಂದ ಬರತೊಡಗಿದ ಜನರು ಮೂಲ ನಿವಾಸಿಗಳನ್ನು ಹಿಂದು ಪದದಿಂದ ಜನಾಂಗ ವಾಚಕವಾಗಿ ಕರೆದರು. ವಾಸ್ತವಿಕವಾಗಿ ಹಿಂದು ಧರ್ಮವೇ ಅಲ್ಲ, ಮುಸ್ಲಿಮರು ಮೂಲ ನಿವಾಸಿಗಳನ್ನು ಹಿಂದುಗಳು ಎನ್ನುತ್ತ ಈ ದೇಶವನ್ನು ಹಿಂದೂ ಸ್ಥಾನ ಎನ್ನತೊಡಗಿದರು. ಆಗ ಹಿಂದುಸ್ಥಾನದಲ್ಲಿದ್ದ ಜೈನ, ಬೌದ್ಧಎಲ್ಲರೂ ಅವರಿಗೆ ಹಿಂದುಗಳೇ ಎನಿಸಿದರು. ಅವರ ಪ್ರಕಾರ ಹಿಂದುಗಳೆಂದರೆ ಮುಸ್ಲಿಮರಲ್ಲದವರು.

ಮುಂದೆ ಬ್ರಿಟಿಷರು ಆಡಳಿತ ನಡೆಸ ತೊಡಗಿದಾಗ ಅವರು ಅಧ್ಯಯನ ಮಾಡುತ್ತ ಸಾಂಪ್ರದಾಯಿಕ ಹಿಂದು ಧರ್ಮಕ್ಕೆ ಬೇರೆಯೇ ಆದ ಆಚರಣೆಗಳನ್ನು ಜೈನ, ಬೌದ್ಧ, ಸಿಖ್ಖರು ಹೊಂದಿರುವುದನ್ನು ಗಮನಿಸಿ ಅವನ್ನು ಅಹಿಂದು ಧರ್ಮಗಳೆಂದು ಗುರುತಿಸಿದರು. ಸಾಂಪ್ರದಾಯಿಕ ಹಿಂದುಗಳು ತಮ್ಮದು ವೈದಿಕ ಧರ್ಮವೆಂದು, ಸನಾತನ ಧರ್ಮವೆಂದು ಹೇಳಿಕೊಳ್ಳುತ್ತಿದ್ದರು. ಭಾರತದಲ್ಲಿ ಇದ್ದ ಮೂಲ ನಿವಾಸಿಗಳಾದ ಬುಡಕಟ್ಟು ಜನರು ಮತ್ತು ದ್ರಾವಿಡ ಜನಾಂಗ, ನಂತರ ಬಂದ ಆರ್ಯರು - ಹೀಗೆ ಎಲ್ಲರ ನಂಬಿಕೆ – ಆಚಾರ - ವಿಚಾರ ಕೂಡಿ ಕಲಸು ಮೇಲೋಗರವಾಗಿ ಹಿಂದು ಧರ್ಮ ಎಂದು ಕರೆಯಲ್ಪಟ್ಟಿತು. ಹೀಗಾಗಿಯೇ ಅದರಲ್ಲಿ ಇದಮಿತ್ಥಮ್ ಎಂದು ಖಚಿತವಾಗಿ ಇದೇ ಸರಿ ಎಂದು ಹೇಳದೆ ಇರುವ ವಾತಾವರಣ ನಿರ್ಮಾಣವಾಗಿರುವುದು.

ಹಿಂದು ಧರ್ಮಕ್ಕೆ ಒಬ್ಬ ಸ್ಥಾಪಕರಿಲ್ಲ. ಹಾಗೆ ನೋಡಿದರೆ ಆರ್ಯರು ಭಾರತವನ್ನು ಪ್ರವೇಶಿಸುವ ಮೊದಲು ಇದ್ದ ಶಿವ ಸಂಸ್ಕೃತಿಯ ಮೂಲ ಪುರುಷ ಯೋಗಿರಾಜ ಶಿವ ಒಂದು ರೀತಿಯಲ್ಲಿ ಸ್ಥಾಪಕನೆನ್ನಬಹುದು. ಏಕೆಂದರೆ ಓಂಕಾರದ ದ್ರಷ್ಟಾರ ಶಿವ, ಹೇಗೆ ಹಿಮಾಲಯದಲ್ಲಿ ಹುಟ್ಟಿದ ಗಂಗಾ ತನ್ನೊಡನೆ ಹಲವಾರು ಹಳ್ಳ, ನದಿಗಳನ್ನು ಸೇರಿಸಿಕೊಂಡು ಬೆಳೆಯುತ್ತಾ ಸಾಗಿ ಬೃಹತ್ ನದಿಯಾಯಿತೋ ಹಾಗೆ ಶಿವನಿಂದ ಉಗಮಿಸಿದ ಶೈವ ಧರ್ಮ ಕಾಲಾನಂತರದಲ್ಲಿ ಆಗಮಿಸಿದ ಆರ್ಯ ಧರ್ಮ-ಸಂಸ್ಕೃತಿಗಳನ್ನು ಒಳಗೊಂಡು, ನಂತರದ ದಿನಗಳಲ್ಲಿ ಪರ್ಶಿಯನ್ನರು ಮುಂತಾದವರಿಂದ ಹಿಂದು ಧರ್ಮ ಎನ್ನಿಸಿಕೊಂಡಿತು. ಅನೇಕ ಋಷಿ ಮುನಿಗಳು, ಸಾಧು ಸಂತರು, ತತ್ವಜ್ಞಾನಿಗಳು - ದಾರ್ಶನಿಕರು, ಪೂಜಾರಿ - ಪುರೋಹಿತರು ಎಲ್ಲರೂ ಬರೆದಂತಹ ಮಾತುಗಳು ಪರಸ್ಪರ ವೈರುದ್ಧತೆಯಿಂದ ಕೂಡಿದವುಗಳೆಲ್ಲ ಹಿಂದು ಧರ್ಮದೊಳಕ್ಕೆ ಸೇರ್ಪಡೆಯಾಗಿವೆ.

ಸ್ವತಃ ವೇದಗಳಲ್ಲೇ ಪರಸ್ಪರ ವಿರುದ್ಧವಾದ ವಿಚಾರಗಳಿವೆ. ದೇವನೊಬ್ಬನೆ ಎಂಬ ವಿಚಾರವಿದೆ ಜೊತೆ ಜೊತೆಯಲ್ಲೇ ಮಿತ್ರ, ಅಗ್ನಿ, ವರುಣ, ಇಂದ್ರ ಇತ್ಯಾದಿ ದೇವತೆಗಳ ಸ್ತುತಿ ಇದೆ. ನಿರೀಶ್ವರವಾದವೂ ಇದೆ; ಸೇಶ್ವರವಾದವೂ ಇದೆ. ಜ್ಞಾನಕಾಂಡವೂ ಇದೆ ಕರ್ಮಕಾಂಡವೂ ಇದೆ. ಯಜ್ಞ ಯಾಗಾದಿಗಳ ಆಚರಣೆ ಇದೆ, ಅದರ ಖಂಡನೆ ಕೂಡ ಇದೆ. ಬ್ರಹ್ಮ ಸೂತ್ರ, ಉಪನಿಷತ್‌ಗಳಿಗೆ ಭಾಷ್ಯವನ್ನು ಬರೆಯಲಾಗಿದೆಯಷ್ಟೆ. ಅದೇ ಶ್ಲೋಕಗಳಿಗೆ ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಪರ ಭಾಷ್ಯ ಬರೆಯಲಾಗಿದೆ. ದಯೆ ಅಹಿಂಸೆ ಮುಂತಾದ ನೀತಿಯನ್ನು ಬೋಧೆ ಮಾಡಿರುವುದೂ ಇದೆ. ಕ್ಷುದ್ರ ದೇವತೆಗಳಿಗೆ ಪ್ರಾಣಿ ಬಲಿ ಕೊಡುವುದೂ ಇದೆ. ಅತ್ಯಂತ ಸುಸಂಸ್ಕೃತ ವಾದ ಯೋಗ -ಧ್ಯಾನ ಮುಂತಾದ ಕ್ರಿಯೆಗಳು ಇವೆ. ಸ್ಟೇಚ್ಚಾಚಾರದ ತಾಂತ್ರಿಕ ಮಾರ್ಗಗಳೂ ಇವೆ. ಪರಸ್ಪರ ರಾಗದ್ವೇಷಗಳಿಂದ ಹೊಡೆದಾಡುವ ದೇವತೆಗಳ ಚರಿತ್ರೆಗಳನ್ನು ಪುಣ್ಯ ಕಥೆಗಳೆಂದು ಕೇಳುವ ಪರಿಪಾಠದ ಜೊತೆಗೆ ಬ್ರಹ್ಮಚರ್ಯ, ಪಾತಿವ್ರತ್ಯ, ಏಕಪತ್ನಿ ವ್ರತ ಮುಂತಾದ ಆದರ್ಶಗಳ ವೈಭವೀಕರಣವೂ ಇದೆ. ಹೀಗೆ ಹಿಂದು ಧರ್ಮವು ಅತ್ಯಂತ ಸಂಕೀರ್ಣ ವ್ಯವಸ್ಥೆಯಿಂದ ಕೂಡಿದ ಧರ್ಮವಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಏಕರೂಪದ ಸಿದ್ದಾಂತ, ನಂಬಿಕೆ, ಆಚಾರ -ವಿಚಾರ, ವಿಧಿ - ವಿಧಾನಗಳಿಂದ ಕೂಡಿದ ಜೈನ್, ಬೌದ್ದ, ಲಿಂಗಾಯತ, ಸಿಖ್ ಧರ್ಮಗಳು ಹಿಂದು ಧರ್ಮದಿಂದ ಬೇರೆಯೇ ಆಗಿ ನಿಲ್ಲುತ್ತವೆ.

ಶ್ರೀ ಬಾಲಗಂಗಾಧರ ತಿಲಕರು ಹೇಳುತ್ತಾರೆ, “Acceptance of theVedas with reverence, recognition of the fact that the means or ways to salvation are diverse; and the realization of the truth that the number of gods to be worshipped is large; that indeed is the distinguishing feature of Hinduism” (“ವೇದಗಳನ್ನು ಭಕ್ತಿಯಿಂದ ಮಾನ್ಯಮಾಡುವುದು, ಮೋಕ್ಷಸಾಧನೆಗೆ ಹಲವಾರು ಮಾರ್ಗಗಳಿವೆ ಎಂದು ಗುರುತಿಸುವುದು, ಪೂಜಾಯೋಗ್ಯವಾದ ದೈವಗಳ ಸಂಖ್ಯೆ ಅಪಾರವಾದುದು ಎಂಬ ಸತ್ಯವನ್ನು ಮನಗಾಣುವುದು -ಇದು ನಿಜವಾಗಿಯೂ ಹಿಂದೂತ್ವದ ಲಕ್ಷಣ.”

ವೇದಗಳನ್ನು (ಪ್ರಮಾಣ ಗ್ರಂಥಗಳೆಂದು ) ಮಾನ್ಯ ಮಾಡುವುದು, ಮೋಕ್ಷ ಮಾರ್ಗಕ್ಕೆ ಹಲವಾರು ಮಾರ್ಗಗಳಿವೆ ಎಂದು ಒಪ್ಪಿಕೊಳ್ಳುವುದು, ಪೂಜಿಸಲು ಅರ್ಹವಾದ ಅಸಂಖ್ಯಾತ ದೈವಗಳಿವೆ ಎಂದು ನಂಬುವುದು - ಇವೆಲ್ಲ ಹಿಂದೂ ಧರ್ಮದ ವಿಶೇಷ ಲಕ್ಷಣಗಳು.

ಗೋ ಸಂರಕ್ಷಣೆ ಹಿಂದು ಧರ್ಮದ ಮುಖ್ಯ ಕರ್ತವ್ಯ; ಅದನ್ನು ಮಹಾತ್ಮಾ ಗಾಂಧೀಜಿ ಹೀಗೆ ಹೇಳುತ್ತಾರೆ. "Cow protection is dearest possession of the Hindu sect. No one who does not believe in cow protection can possibly be a Hindu. It is a noble belief. Cow worship means to me worship of innocence"

"ಗೋರಕ್ಷಣೆ ಹಿಂದೂ ಪಂಥದ ಅತ್ಯಂತ ಆತ್ಮೀಯ ಆಸ್ತಿ, ಗೋರಕ್ಷಣೆಯಲ್ಲಿ ನಂಬಿಕೆಯಿಲ್ಲದವನು ಹಿಂದೂ ಆಗಲಾರ. ಅದೊಂದು ಉದಾತ್ತ ನಂಬಿಕೆ. ನನಗೇನೋ ಗೋಪೂಜೆಯೆಂದರೆ ಮುಗ್ಧತ್ವದ ಪೂಜೆ ಎನಿಸುತ್ತದೆ”.

ಶುದ್ಧ ಸಸ್ಯಾಹಾರಿ ಧರ್ಮವಾದ ಲಿಂಗಾಯತವು ಕೇವಲ ಗೋ ಮಾತ್ರವಲ್ಲ ಕುದುರೆ, ಕುರಿ, ಆಡು, ಆನೆ, ಕೋಳಿ ಇತ್ಯಾದಿ ಎಲ್ಲ ಜೀವಾತ್ಮರುಗಳ ಬದುಕುವ ಹಕ್ಕನ್ನು ಎತ್ತಿ ಹಿಡಿಯುತ್ತದೆ. ಪ್ರಾಣಿ ಪೂಜೆ ನಿಷಿದ್ಧವಾದ್ದರಿಂದ ಗೋವಿನ ಪೂಜೆ ಮಾಡುವುದಿಲ್ಲ. ಹಿಂದುವಿಗೆ ಗೋ, ಗಂಗಾ, ಗಾಯತ್ರಿ, ಗೀತೆ ಇವು ಪೂಜನೀಯ. ಆದರೆ ಲಿಂಗಾಯತದಲ್ಲಿ ಇವು ಇವೆಯೆ ಹೇಗೆ ? ಇದು ಹಿಂದು ಧರ್ಮದಿಂದ ಭಿನ್ನವೋ ಅಥವಾ ಅವಿಭಾಜ್ಯ ಅಂಗವೋ ಎಂಬುದನ್ನು ನೋಡೋಣ.

ಹಿಂದು ಧರ್ಮ ಲಿಂಗಾಯತ ಧರ್ಮ
01. ಒಬ್ಬಸ್ಥಾಪಕ ಗುರು ಇಲ್ಲ 01. 12ನೆಯ ಶತಮಾನದ ಬಸವಣ್ಣನವರು ಸ್ಥಾಪಕರು
02. ನಾಸ್ತಿಕರು, ನಿರೀಶ್ವರ ವಾದಿಗಳು, ಸೇಶ್ವರವಾದಿಗಳು 02. ಸೇಶ್ವರವಾದಿ ಧರ್ಮ - ಸೃಷ್ಟಿಕರ್ತನನ್ನು ಕಡ್ಡಾಯವಾಗಿ ನಂಬುತ್ತದೆ.
03. ವೇದ, ಆಗಮ ಪ್ರಮಾಣ ಮಾನ್ಯ 03. ವೇದಾಗಮ ಪುರಾಣ ಮಾನ್ಯವಲ್ಲ ವಚನ ಸಾಹಿತ್ಯ ಆಧಾರ
04. ಚತುರ್ವರ್ಣಗಳನ್ನು ನಂಬುತ್ತದೆ 04. ಜಾತಿ ವರ್ಣ ವಿಭಜನೆ ಒಪ್ಪುವುದಿಲ್ಲ
05. ದ್ವಿಜವರ್ಣದವರಿಗೆ ಉಪನಯನ 05. ಎಲ್ಲ ಮಾನವರಿಗೆ ಇಷ್ಟಲಿಂಗ ದೀಕ್ಷೆ
06. ಸ್ತ್ರೀಯರಿಗೆ ಉಪನಯನವಿಲ್ಲ 06. ಪುರುಷರಂತೆ ಸ್ತ್ರೀಯರಿಗೆ ದೀಕ್ಷೆ ಇದೆ
07. ಹಲವು ದೇವತೆಗಳಲ್ಲಿ ನಂಬಿಕೆ, ಬಹುದೇವತೋಪಾಸನೆ 07. ಸೃಷ್ಟಿಕರ್ತ ಲಿಂಗದೇವನಲ್ಲಿ ಮಾತ್ರ ನಂಬಿಕೆ -ಏಕದೇವೋಪಾಸನೆ
08. ತೀರ್ಥಕ್ಷೇತ್ರ ಯಾತ್ರೆಯಲ್ಲಿ ನಂಬಿಕೆ 08. ತೀರ್ಥಕ್ಷೇತ್ರ ಯಾತ್ರೆಯಲ್ಲಿನಂಬಿಕೆಯಿಲ್ಲ
09. ಜ್ಯೋತಿಷ್ಯ, ವಾಸ್ತು, ಮೂಹೂರ್ತಗಳಲ್ಲಿ ನಂಬಿಕೆ 09. ಈ ಯಾವುಗಳಲ್ಲಿಯೂ ನಂಬಿಕೆಯಿಲ್ಲ
10. ಶ್ರದ್ಧಾಕೇಂದ್ರ - ಮಂದಿರ 10. ಶ್ರದ್ಧಾಕೇಂದ್ರ ಅನುಭವ (ಬಸವ) ಮಂಟಪ
11. ಸಸ್ಯಾಹಾರ ಮಾಂಸಾಹಾರ ಎರಡೂ ಉಂಟು 11. ಕಡ್ಡಾಯ ಸಸ್ಯಾಹಾರ
12. ಹೋಮ -ಹವನ, ಯಜ್ಞ-ಯಾಗ, ಪ್ರಾಣಿ ಬಲಿ ಎಲ್ಲ ಉಂಟು 12. ಇವೆಲ್ಲವೂ ನಿಷಿದ್ಧ
13. ವಿವಾಹದಲ್ಲಿ ಅಗ್ನಿ ಸಾಕ್ಷಿ, ಸಪ್ತಪದಿ, ಪೌರೋಹಿತ್ಯ ಉಂಟು 13. ಅಗ್ನಿ ಸಾಕ್ಷಿ, ಸಪ್ತಪದಿ ಇಲ್ಲ. ಕೇವಲ ಗುರು- ಲಿಂಗ-ಜಂಗಮ ಸಾಕ್ಷಿಮಾತ್ರ
14. ದ್ವಿಜರ ಶವಗಳನ್ನು ಸುಡುವರು 14. ಲಿಂಗಾಯತರೆಲ್ಲರ ಶವಗಳನ್ನು ಹುಗಿಯುವರು
15. ಪುರೋಹಿತನ ಮೂಲಕ ಪೂಜೆ 15. ಭಕ್ತನಿಂದ ದೇವನ ನೇರವಾದ ಪೂಜೆ
16. ಹಿಂದು ಧರ್ಮಿಯರಲ್ಲಿ ಒಳಗಿನ ಜಾತಿಗಳವರಲ್ಲಿ ಪರಸ್ಪರ ವೈವಾಹಿಕ ಸಂಬಂಧವಿಲ್ಲ 16. ಲಿಂಗಾಯತರ ಒಳಪಂಗಡಗಳಲ್ಲಿ ಪರಸ್ಪರ ವೈವಾಹಿಕ ಸಂಬಂಧ ಸಹಜವಾಗಿ ಆಗುತ್ತದೆ
17. ಹಿಂದುಯೇತರರನ್ನು ದೀಕ್ಷೆಯ ಮೂಲಕ ಒಳಗೆ ಕರೆದುಕೊಳ್ಳಲಾಗುವುದಿಲ್ಲ 17. ದೀಕ್ಷೆಯ ಮೂಲಕ ಯಾರನ್ನು ಬೇಕಾದರೂ ಒಳಗೆ ತೆಗೆದುಕೊಳ್ಳಬಹುದು
18. ಜನನ, ಮರಣ, ಉಚ್ಛಿಷ್ಟ, ಜಾತಿ, ರಜೋ ಸೂತಕಗಳು ಆಚರಿಸಲ್ಪಡುತ್ತವೆ. 18. ಪಂಚ ಸೂತಕಗಳು ನಿಷೇಧಿಸಲ್ಪಟ್ಟಿವೆ.
19. ಪಾಪಕ್ಕೆ ಪ್ರಾಯಶ್ಚಿತ್ತವಿದೆ. 19. ಪ್ರಾಯಶ್ಚಿತ್ತವಿಲ್ಲ ಕೇವಲ ಪಶ್ಚಾತಾಪವಿದೆ.
20. ವ್ರತ ನೇಮ ಉಪವಾಸಗಳಿವೆ. 20. ಧಾರ್ಮಿಕ ಆಚರಣೆಯಾಗಿ ಇಲ್ಲ
21. ಉದ್ಯೋಗಗಳಲ್ಲಿ ಮೇಲು ಕೀಳು ಇದೆ. 21.ಎಲ್ಲಾ ಉದ್ಯೋಗಗಳು ಉದ್ಯೋಗಿಗಳು ಸಮ

ಗ್ರಂಥ ಋಣ:
1) ಲಿಂಗಾಯತರು ಹಿಂದುಗಳಲ್ಲ - A book written by Her Holiness Maha Jagadguru Mata Mahadevi, Published by: Vishwakalyana Mission 2035, II Block, chord Road, Rajajinagar, Bangalore-560010.

*
ಪರಿವಿಡಿ (index)
Previous ಲಿಂಗಾಯತರು ಹಿಂದುಗಳಲ್ಲ ಹಿಂದೂ, ಲಿಂಗಾಯತ ವ್ಯತ್ಯಾಸ Next