Previous ಜಗದ್ಗುರು ಪದ - ಒಂದು ಅವಲೋಕನ ಮಹಾಯೋಗಿ ಶ್ರೀ ವೇಮನ Next

ಬಸವಣ್ಣ ಮತ್ತು ಸಿದ್ಧಾಂತ_ಶಿಖಾಮಣಿ

*

ಬಸವಣ್ಣ ಮತ್ತು ಸಿದ್ಧಾಂತ_ಶಿಖಾಮಣಿ

ಸಂಶೋಧಕರ ಪ್ರಕಾರ ಆಗಮಗಳಲ್ಲಿ ಮುಖ್ಯವಾಗಿ ೩ ಪ್ರಕಾರಗಳಿವೆ.
೧) ವೈಷ್ಣವಾಗಮಗಳು
೨) ಶೈವಾಗಮಗಳು
೩) ಶಾಕ್ತಾಗಮಗಳು
ಇಲ್ಲಿ ವೀರಶೈವಾಗಮಗಳು ಎಂಬ ಮಾತೇ ಇಲ್ಲ. ಆದರೆ ಧೂರ್ತ ಜನಗಳು ಆ ೨೮ ಶೈವಾಗಮಗಳೇ ತಮ್ಮ ವೀರಶೈವಾಗಮಗಳೆಂದು ಸಾಧಿಸುತ್ತಿದ್ದಾರೆ. ಮೇಲಾಗಿ:

೧. ಆಗಮದ ಮೂಗು ಕೊಯ್ಯುವೆ (ಬಸವಣ್ಣ)
೨. ಆಗಮ ಅನೃತದ ನುಡಿ (ಬಸವಣ್ಣ)
೩. ಆಗಮಗಳೆಂಬುಬು ಋಷಿಮುನಿಗಳ ಮರುಳಾಟ (ಅಲ್ಲಮಪ್ರಭು)
೪. ಆಗಮವದು ಹೊರತೊಲಗಿತ್ತಯ್ಯ (ಬಸವಣ್ಣ)
೫. ಆಗಮಗಳ ಹಿಂದೆ ತೊಳಲದಿರು ತೊಳಲದಿರು ( ಅಲ್ಲಮಪ್ರಭು)
೬. ಆಗಮಗಳೆಲ್ಲವೂ ಕೊಟ್ಟಣ ಕುಟ್ಟಿದಂತೆ ನುಚ್ಚು ತೌಡು (ಅಕ್ಕಮಹಾದೇವಿ)
೭. ಆಗಮ ಅಗಮ್ಯ ಲಿಂಗವೆಂದು ಭೇದಿಸಲರಿಯದೇ ಹೋಯಿತು (ಬಸವಣ್ಣ)
೮. ಆಗಮವದು ಯೋಗದ ಘೋರವಯ್ಯ (ಸಿದ್ಧರಾಮ) -

ಹೀಗೆ ಬಸವಾದಿ ಪ್ರಮಥರು, ಇವರು ಹೇಳುವ ಆಗಮಗಳನ್ನೇ ಬುಡಮೇಲು ಮಾಡಿ, ತಮ್ಮದೇಯಾದ ಸ್ವತಂತ್ರ ಧರ್ಮವನ್ನು ಸ್ಥಾಪಿಸಿದ್ದಾರೆ. ಇನ್ನು ಇದೇ ಪ್ರಕಾರ ಇವರ ಸಿದ್ಧಾಂತ ಶಿಖಾಮಣಿ ಬಸವನ ತರುವಾಯ ಅಂದರೆ ೧೨ನೇ ಶತಮಾನದ ಈಚೆಗೆ ಬರೆದ, ಆಗುಂತಕ ಗ್ರಂಥವೆಂದು ಅನೇಕ ಜನ ವಿದ್ವಾಂಸರು ಅಭಿಪ್ರಾಯಿಸಿದ್ದಾರೆ. ಮೇಲಾಗಿ "ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲ ಒಂದೇ ಎಂಬೆ" ಮತ್ತು "ಹೊಲೆಯುಂಟೇ ಲಿಂಗವಿದ್ದೆಡೆಯಲ್ಲಿ ? ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?" - ಎಂದು ವೇದಾದಿ ಚಾತುರ್ವರ್ಣ ಜಾತಿಪದ್ಧತಿ ಭೇದ ಅಳಿಯಲಿಕ್ಕೇ ಹುಟ್ಟಿಬಂದ ಬಸವಣ್ಣ, ಇದರ ಇತ್ಯರ್ಥಕ್ಕಾಗಿ ಬ್ರಾಹ್ಮಣರಾದ ಮಧುವೈಯ್ಯನ ಪುತ್ರಿ #ಕಲಾವತಿಯನ್ನು ಅಂತ್ಯಜನಾದ ಹರಳಯ್ಯನ ಪುತ್ತ #ಶೀಲವಂತನೊಡನೆ ಅನುಭವ ಮಂಟಪದಲ್ಲಿ ಮದುವೆ ಮಾಡಿ "ಸಾಧಿಸಿತ್ತು ಮಾನವನ ಮಹಾಸಿದ್ಧಿ ಶರಣರಲ್ಲಿ" - ಎಂದು ಕಲ್ಯಾಣದಲ್ಲಿ ಮಹಾಕ್ರಾಂತಿಗೈದು ಅದಕ್ಕಾಗಿ ಪ್ರಾಣಾರ್ಪಣೆ ಮಾಡಿರುವಾಗ, ಈ ಪುರೋಹಿತಶಾಹಿಗಳ ಆಗುಂತುಕ ಸಿದ್ಧಾಂತ ಶಿಖಾಮಣಿ ತದ್ವಿರುದ್ಧ ಏನು ಹೇಳುತ್ತದೆ ಗೊತ್ತೇ ?

ವರ್ಣಾಶ್ರಮಾಧಿ ಧರ್ಮಣಾಂ ವ್ಯವಸ್ಥಾಯಿ ದ್ವಧಾಮತಾ |
ಏಕ ಶಿವೇನಾ ನಿರ್ದಿಷ್ಟಾ ಬ್ರಹ್ಮಣಾ ಕತಿಥಾ ಪರಾ || -(ಸಿ.ಶಿ. ೧೦/೩೫)

"ವರ್ಣಾಶ್ರಮ ಚಾತುರ್ವರ್ಣ ಜಾತಿಪದ್ಧತಿ ಧರ್ಮಗಳಲ್ಲಿ ಎರಡು ಪ್ರಕಾರಗಳು ಒಂದು ಶಿವನು ನಿರ್ಮಿಸಿದ್ದಾನೆ. ಇನ್ನೊಂದನ್ನು ಬ್ರಹ್ಮನು ನಿರ್ಮಿಸಿದ್ದಾನೆ. ಅರ್ಥಾತ್ ವೈಧಿಕ‌ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ನಾಲ್ಕು ಪ್ರಕಾರಗಳಿದ್ದರೆ ಇವರ ವೀರಶೈವ ಧರ್ಮದಲ್ಲಿಯೂ ಸಹ ವೀರಶೈವ ಬ್ರಾಹ್ಮಣ, ವೀರಶೈವಕ್ಷತ್ರಿಯ, ವೀರಶೈವವೈಶ್ಯ, ವೀರಶೈವಶೂದ್ರ ಹೀಗೆ ನಾಲ್ಕು ಭೇದಗಳು ಎಂದು ಇದರ ಅರ್ಥ."

ಚಕ್ರನೇ ಮಿಶ್ರಮೇಣೈವ ಭಮಂತಿ ಹೀ ಶರೀರಣಃ |
ಚಾತ್ಯಾಯುರ್ಭೋಗ ವೈಷಮ್ಯ ಕಾರಣಂ ಕರ್ಮಕೇವಲಂ |- (ಸಿ.ಶಿ. ೫/೩೭)

"ಪೂರ್ವಜನ್ಮದ ಕರ್ಮಕ್ಕನುಗುಣವಾಗಿ ಆಯಾ ಜೀವಾತ್ಮರು , ಆಯಾ ಚಕ್ರನೇಮಕ್ಕನುಗುಣವಾಗಿ, ಆಯಾ ಶರೀರಗಳನ್ನು ಧಾರುಣ ಮಾಡುವರು. ಜಾತಿ ಆಯುಷ್ಯ ಸುಖ ದುಃಖ ಶ್ರೇಷ್ಠರಾದ ವೀರಶೈವಬ್ರಾಹ್ಮಣ ಜಾತಿಯಲ್ಲಿ ಹುಟ್ಟುವುದಕ್ಕೂ, ಕನಿಷ್ಟರಾದ ವೀರಶೈವಶೂದ್ರ ಜಾತಿಯಲ್ಲಿ ಹುಟ್ಟುವುದಕ್ಕೂ ಅವರವರ ಪೂರ್ವಜನ್ಮದ ಕರ್ಮವೇ ಮುಖ್ಯ ಕಾರಣವು" ಎಂದು ಇರರ್ಥ.

ಸ್ವಮಾರ್ಗಾಚಾರನಿರತಾಃ ಸಜಾತಿಯಾ ದ್ವಿಜಾಸ್ತೂಯೇ |
ತೇಷಾಂ ಗೃಹೇಷು ಭುಂಜೇತ ನೇತರೇಷಾಂ ಕದಾಚನ || - (ಸಿ.ಶಿ. ೯/೩೯)

"ತಮ್ಮ ತಮ್ಮ ಜಾತಿ ಧರ್ಮಾನುಸಾರವಾಗಿ ಆಚಾರದಲ್ಲಿ ನಿಷ್ಠರಾದ ವೀರಶೈವ ದ್ವಿಜರು ಅಂದರೆ, ವೀರಶೈವಬ್ರಾಹ್ಮಣರು, ವೀರಶೈವಕ್ಷತ್ರಿಯರು, ವೀರಶೈವಶೈವರು, ವೀರಶೈವಶೂದ್ರರು ತಮ್ಮ ತಮ್ಮ ಜಾತಿಮತಗಳವರ ಮನೆಯಲ್ಲಿಯೇ ಭೋಜನವನ್ನು ಮಾಡಬೇಕು."

ಹೀಗೆ ಸಿದ್ಧಾಂತ ಶಿಖಾಮಣಿಯು ವಚನ ಸಾಹಿತ್ಯಕ್ಕೆ ವಿರುದ್ಧವಾಗಿ ಅದೇ ಚಾತುರ್ವರ್ಣ ಜಾತಿಪದ್ಧತಿಯನ್ನೇ ಸಮರ್ಥಿಸುತ್ತದೆ. ಈ ಬಗ್ಗೆ ಬಸವಣ್ಣ ಏನು ಹೇಳಿದ್ದಾರೆ:

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ|
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ |
ಪಾತಾಳದಿಂದತ್ತತ್ತ ನಿಮ್ಮ ಶ್ರೀಪಾದ |
ಅಗಮ್ಯ ಅಗೋಚರ ಅಪ್ರತಿಮ‌ ಲಿಂಗವೇ |
ಕೂಡಲಸಂಗಮದೇವಾ ಎನ್ನ ಕರಸ್ಥಳಕ್ಕೆ ಬಂದು | ಚುಳುಕಾದಿರೈಯ್ಯ ||


ಲಿಂಗಾಯತರ ಆ ಅಗೋಚರ, ಸರ್ವಸಮ್ಮತ, ಸರ್ವ ಸಮಾನ ಶಿವನ ಅಥವಾ ಲಿಂಗದ ಕಲ್ಪನೆಯೆಲ್ಲಿ ? ಈ ಸಿದ್ಧಾಂತ ಶಿಖಾಮಣಿಯ ಅದೇ ಜಾತಿಭೇದಗಳ ಅಸಮಾನ ಅಮಾನುಷವೆಲ್ಲಿ ? ಬಸವಣ್ಣನ ಶೋಷಣೆರಹಿತ ಕಲ್ಪನೆಗೆ ಸಿದ್ಧಾಂತ ಶಿಖಾಮಣಿ ತೀರಾ ವಿರುದ್ಧವಾಗಿದೆ. ಆಗುಂತಕ ಪುರೋಗಿತಶಾಹಿಗಳು ಬಸವಣ್ಣನ ಧರ್ಮಕ್ಕೂ ಹೊಕ್ಕಿ ಮತ್ತದೇ ಜಾತಿಪದ್ಧತಿಯನ್ನು ಸ್ಥಾಪಿಸಲು ಎಷ್ಟೊಂದು ತಿರುಚಲು ಹವಣಿಸುತ್ತಾರೆ ನೋಡಿ.

*
ಪರಿವಿಡಿ (index)
Previous ಜಗದ್ಗುರು ಪದ - ಒಂದು ಅವಲೋಕನ ಮಹಾಯೋಗಿ ಶ್ರೀ ವೇಮನ Next