Previous ವಿಶ್ಲೇಷಣೆ - ಶಿವದಾಸ ಗೀತಾಂಜಲಿ ವಿಶ್ಲೇಷಣೆ -ವೀರಶೈವ ಧರ್ಮ Next

ವಿಶ್ಲೇಷಣೆ - ವೀರಶೈವ ಚರಿತ್ರೆ

*

ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಡಾ. ಚಿದಾನಂದಮೂರ್ತಿ - ವೀರಶೈವ ಚರಿತ್ರೆ

ಡಾ. ಚಿದಾನಂದಮೂರ್ತಿ ಅವರು ಹಿರಿಯ ಸಂಶೋಧಕರಾಗಿ ಹೆಸರಾದವರು. ಅವರು ಅನೇಕ ಗ್ರಂಥಗಳ ಕರ್ತೃ. ಅವರ “ವೀರಶೈವ ಧರ್ಮ ಮತ್ತು ಭಾರತೀಯ ಸಂಸ್ಕೃತಿ” (ಮಿಂಚು ಪ್ರಕಾಶನ, ಬೆಂಗಳೂರು, ೨೦೦೦) ಹಾಗೂ “ಅಂತಿಮ ತೆರೆ” (೧ ಮತ್ತು ೨) (ಎರಡೂ “ಸಾಧನೆ”ಯಲ್ಲಿ ಪ್ರಕಟ) ಮತ್ತು ಇದಕ್ಕೆ ಸಂಬಂಧಿಸಿದಂತೆ ತಮ್ಮ ಅನೇಕ ಲೇಖನಗಳಲ್ಲಿ, ವೀರಶೈವವು ಬಸವಣ್ಣನವರಿಗಿಂತ ಪೂರ್ವದಲ್ಲಿ ೧೧ ಮತ್ತು ೧೨ನೆಯ ಶತಮಾನಗಳ ಮಧ್ಯೆ ಆಸ್ತಿತ್ವದಲ್ಲಿತ್ತೆಂದು ಧೃಡವಾಗಿ ಹೇಳುತ್ತಾರೆ.

ಅವರ ಆಧಾರ ಮೂಲಗಳಲ್ಲಿ ಕೊಂಡಗುಳಿ ಕೇಶಿರಾಜ (ಶೀಲ ಮಹತ್ವದ ಕಂಡ), ಜೇಡರ ದಾಸಿಮಯ್ಯ ಮತ್ತು ಏಕಾಂತ ರಾಮಯ್ಯನ ವಚನಗಳು ಸೇರಿವೆ, “ಸಾಮಾಜಿಕ ಸುಧಾರಣೆಯ ಕಾರ್ಯ ಬಸವಣ್ಣನವರಿಗೆ ಸ್ವಲ್ಪ ಮುನ್ನವೇ ಕಾಲಿಟ್ಟಿತ್ತು. ಬಸವಣ್ಣನವರು ಆ ಧೈಯ ಮತ್ತು ಚಳವಳಿಯನ್ನು ವಿಸ್ತರಿಸಿದರು” ಎಂದು ಡಾ. ಚಿದಾನಂದಮೂರ್ತಿ ಅವರು ತಿಳಿಸಲಿಚ್ಛಿಸುತ್ತಾರೆ. ಅವರು ಕೊಡುವ ಆಧಾರದ ಪ್ರತಿಯೊಂದು ಅಂಶವನ್ನು, ಅದರ ಅರ್ಹತೆಯನ್ನು ತಿಳಿದುಕೊಳ್ಳಲು ಇಲ್ಲಿ ಪರಾಮರ್ಶಿಸಲಾಗಿದೆ.

(ಅ) ದಾಸಿಮಯ್ಯ ಹೆಸರಿನ ಅನೇಕರಿರುವುದು ತಿಳಿದು ಬಂದಿದೆ : ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ, ಶಿವದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ. ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಒಂದೇ ಎಂಬ ವಾದವಿದೆ. ಇದಕ್ಕೆ ಸಂಬಂಧಿಸಿದಂತೆ, ೨೦೧೬ರಲ್ಲಿ ವಿಧಾನ ಸೌಧದ ಔತಣಾಂಗಣದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ ನಡೆದಾಗ, ಡಾ. ಚಿದಾನಂದಮೂರ್ತಿ ಅವರು, ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂದು ಘೋಷಿಸಿ ಗದ್ದಲಕ್ಕೆ ಕಾರಣವಾಗಿತ್ತು. ಜೇಡರ ದಾಸಿಮಯ್ಯ ಒಬ್ಬ ಹಿರಿಯ ಶರಣನಿದ್ದು ಅನೇಕ ವಚನಗಳನ್ನು ರಚಿಸಿದ್ದಾನೆ. ಬಸವಣ್ಣನವರು ಅವನ ಬಗೆಗೆ ಅತ್ಯಂತ ಹೆಚ್ಚಿನ ಗೌರವವಿಟ್ಟುಕೊಂಡಿದ್ದರೆಂಬಲ್ಲಿ ಸಂಶಯವೇ ಇಲ್ಲ. ಆದರೆ ಅವರ ಕಾಲವನ್ನು ನೂರು ವರ್ಷಗಳ ಹಿಂದಕ್ಕೆ ಒಯ್ದಿರುವುದು ಸರಿಯಲ್ಲ. ಏಕೆಂದರೆ, ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ ತನ್ನ ಒಂದು ವಚನದಲ್ಲಿ ಬಸವಣ್ಣನವರನ್ನು ಪ್ರಸ್ತಾಪಿಸುತ್ತಾಳೆ :

ಭಕ್ತನಾದರೆ ಬಸವಣ್ಣನಂತಾಗಬೇಕು
ಜಂಗಮನಾದರೆ ಪ್ರಭುದೇವರಂತಾಗಬೇಕು
ಯೋಗಿಯಾದಡೆ ಸಿದ್ದರಾಮಯ್ಯನಂತಾಗಬೇಕು
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು
ಐಕ್ಯವಾದರೆ ಅಜಗಣ್ಣನಂತಾಗಬೇಕು
ಇಂತಹ ಕಾರುಣ್ಯದ ಪ್ರಸಾದವ ಕೊಂಡು
ಸತ್ತ ಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ,
ದಾಸಯ್ಯಪ್ರಿಯ ರಾಮನಾಥಾ?

ದುಗ್ಗಳೆ ಮತ್ತು ಅವಳ ಪತಿ ಜೇಡರ ದಾಸಿಮಯ್ಯ ಬಸವಣ್ಣನವರಿಗಿಂತ ನೂರು ವರ್ಷ ಹಿಂದೆ ಇದ್ದವರಾದರೆ, ದುಗ್ಗಳೆ ಮುಂದೆ ಬರುವ ಶರಣರನ್ನು ಹೇಗೆ ಹೊಗಳಲು ಸಾಧ್ಯ? ಬಸವಾದಿ ಶರಣರ ಬರುವಿನ ಭವಿಷ್ಯ ಹೇಳಲು ಆಕೆಯೇನು ಜ್ಯೋತಿಷ್ಯಳೆ?

ಜೇಡರ ದಾಸಿಮಯ್ಯನ ಒಂದು ವಚನದಲ್ಲಿ -

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ ರಾಮನಾಥಾ!

ಎಂದಿದ್ದಾನೆ. ಈ ವಚನದಲ್ಲಿ ಬರುವ 'ಶರಣ' ಎಂಬ ಶಬ್ದ ಹನ್ನೆರಡನೆಯ ಶತಮಾನಕ್ಕಿಂತ ಮುಂಚೆ ಸಾಮಾನ್ಯ ಬಳಕೆಯಲ್ಲಿರಲಿಲ್ಲ.

ಹಾಗೆಯೇ ಡಾ. ಎಸ್‌.ಸಿ. ನಂದೀಮಠ ಅವರು ಜೇಡರ ದಾಸಿಮಯ್ಯನಿಗೆ ಸಂಬಂಧಿಸಿದಂತೆ ಎರಡು ಭಿನ್ನ ಕಾಲಗಳನ್ನು ಕೊಡುತ್ತಾರೆ. ಒಂದು, ಚಾಳುಕ್ಯ ಜಯಸಿಂಹ ಆಳುತ್ತಿದ್ದ ಕಾಲ (೧೦೧೮-೧೦೪೨). ಇದರ ಪ್ರಕಾರ, ಜೇಡರ ದಾಸಿಮಯ್ಯ ಬಸವಣ್ಣನವರಿಗಿಂತ ಒಂದು ನೂರು ವರ್ಷಗಳ ಹಿಂದೆ ಇದ್ದ. ಚಾಳುಕ್ಯ ರಾಣಿಯನ್ನು ಶೈವಧರ್ಮಕ್ಕೆ ಪರಿವರ್ತಿಸಿದ ದೇವರ ದಾಸಿಮಯ್ಯನು ವಚನಕಾರನಲ್ಲ ಎಂದು ವಿದ್ವಾಂಸರು ಹೇಳಿದ್ದಾರೆ. ಗೊಟ್ಟೂರು ಶಾಸನದಿಂದ ದೊರೆಯುವ ಇನ್ನೊಂದು ಕಾಲವೆಂದರೆ, ೧೧೪೮. ಈ ಶಾಸನವು ಜೇಡರ ದಾಸಿಮಯ್ಯನ ಹೆಸರನ್ನು ಉಲ್ಲೇಖಿಸುತ್ತದೆ. ಇದರ ಪ್ರಕಾರ, ಜೇಡರ ದಾಸಿಮಯ್ಯನು ಬಸವಣ್ಣನವರ ಹಿರಿಯ ಸಮಕಾಲೀನನಾಗುತ್ತಾನೆ. ಅವನ ಪತ್ನಿ ದುಗ್ಗಳೆ, ಮೇಲೆ ಉಲ್ಲೇಖಿಸಿದ ವಚನದಲ್ಲಿ ಬಸವಣ್ಣನವರನ್ನು ಪ್ರಶಂಸಿಸಿರುವುದನ್ನು ನೋಡಿದರೆ, ಜೇಡರ ದಾಸಿಮಯ್ಯ ದಂಪತಿ ಬಸವಣ್ಣನವರ ಕಾಲದಲ್ಲೇ ಇದ್ದರೆಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ, ಡಾ. ಚಿದಾನಂದಮೂರ್ತಿ ಅವರು ಬಸವಣ್ಣನವರ ಸಮಕಾಲೀನನಾದ ಜೇಡರ ದಾಸಿಮಯ್ಯನ ಕಾಲವನ್ನು ನೂರು ವರ್ಷ ಹಿಂದಕ್ಕೆ ಒಯ್ದಿರುವುದು ಸಮರ್ಥನೀಯವಲ್ಲ.

(ಆ) ಡಾ. ಚಿದಾನಂದಮೂರ್ತಿ ಅವರು ಕೊಡುವ ಎರಡನೆಯ ಆಧಾರ, ಕೊಂಡಗುಳಿ ಕೇಶಿರಾಜನಿಗೆ ಸಂಬಂಧಿಸಿದ್ದು, ಕೇಶಿರಾಜನ 'ಶೀಲಮಹತ್ವದ ಕಂದ'ವು ಬಸವಣ್ಣನವರಿಗಿಂತ ಮುಂಚೆ ವೀರಶೈವವು ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಒಂದು ಆಧಾರ ಎಂದು ಅವರು ಹೇಳುತ್ತಾರೆ. ಆದರೆ, ಪ್ರೊ. ಬಿ.ವಿ. ಮಲ್ಲಾಪುರ, ಪ್ರೊ. ವಿ.ವಿ. ಸಂಗಮದ ಮತ್ತು ಪ್ರೊ. ಎನ್.ಜಿ. ಮಹದೇವಪ್ಪ ಈ ಮೂವರು ಶ್ರೇಷ್ಠ ವಿದ್ವಾಂಸರೂ 'ಶೀಲಮಹತ್ವದ ಕಂದ ಒಂದು ಅಶುದ್ಧ ಕೃತಿಯಾಗಿದ್ದು, ಅನಾಮಧೇಯ ಗ್ರಂಥಕರ್ತನೊಬ್ಬ ಅದನ್ನು ಬರೆದು, ಕೊಂಡಗುಳಿ ಕೇಶಿರಾಜನ ಹೆಸರಿನಲ್ಲಿ ಹೊರ ತಂದಿದ್ದಾನೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದನ್ನು ಒಂದು ಕೀಳೆರಕೆಯ ಮತ್ತು ಕೇಶಿರಾಜನ ನಂತರದ ಕೃತಿ ಎಂಬುದಕ್ಕೆ ಅವರು ಮುಖ್ಯವಾದ ಏಳೆಂಟು ಬೇರೆ ಬೇರೆ ಕಾರಣಗಳನ್ನು ಕೊಡುತ್ತಾರೆ. (ಎನ್‌.ಜಿ. ಮಹಾದೇವಪ್ಪ - ಲಿಂಗಾಯತ ದರ್ಶನ, ಮಾರ್ಚ್, ೨೦೨೦, ಪು. ೨೦-೨೨)

“ಶೀಲಮಹತ್ವದ ಕಂದ'ದಲ್ಲಿ ಕಾಣಿಸಿರುವ ೬೪ ಶೀಲಗಳು ಹೆಚ್ಚಾಗಿ ವೀರವ್ರತಿಗಳು ಮತ್ತು ವೀರ ಮಾಹೇಶ್ವರರು ಪಾಲಿಸುತ್ತಿದ್ದ ಶೀಲಗಳನ್ನೇ ಧ್ವನಿಸುತ್ತವೆ. ಈ ಎರಡು ಭಿನ್ನ ಪಂಥಗಳು ಬಸವಯುಗಕ್ಕಿಂತ ಬಹಳಷ್ಟು ಮುಂಚೆಯೇ ಅಸ್ತಿತ್ವದಲ್ಲಿದ್ದವೆಂದು ನಂಬಲಾಗಿದೆ. ಕೊಂಡಗುಳಿ ಕೇಶಿರಾಜನೂ ಸಹ ಒಬ್ಬ ವೀರವ್ರತಿ ಅಥವಾ ವೀರಮಾಹೇಶ್ವರನಾಗಿರುವ ಎಲ್ಲ ಸಾಧ್ಯತೆಗಳೂ ಇವೆ. ಈ ಶಬ್ದಗಳು, ಅದರಲ್ಲೂ ವೀರಮಾಹೇಶ್ವರ ಶಬ್ದವು ಏಳನೆಯ ಶತಮಾನದಷ್ಟು ಮುಂಚೆ ಮತ್ತು ೧೧ನೆಯ ಶತಮಾನದ ನಂತರ ಅನೇಕ ಶಾಸನಗಳಲ್ಲಿ ಕಂಡುಬರುತ್ತದೆ. ಅದು ಉಗ್ರಸಂಪ್ರದಾಯಸ್ಥರಾದ ಮತ್ತು ಅದರಲ್ಲಿ ಹೇಳಿರುವ ಕಟ್ಟುನಿಟ್ಟಾದ ವ್ರತಗಳಿಗೆ ಅಂಟಿಕೊಂಡಿರುವ ಬ್ರಾಹ್ಮಣರಿಗೆ ಸಂಬಂಧಿಸಿದೆ.

ಡಾ. ಚಿದಾನಂದಮೂರ್ತಿ ಅವರು ಹೇಳುತ್ತಲೇ ಇದ್ದ ಮತ್ತೊಂದು ಸುಳ್ಳಿದೆ. ಅದೆಂದರೆ, ವೀರಶೈವರಂತೆ ವೀರವ್ರತಿ ಮತ್ತು ವೀರಮಾಹೇಶ್ವರ ಎರಡೂ ಒಂದೇ ಎನ್ನುವುದು. ಹೆಚ್. ಸದಾಶಿವಯ್ಯನವರು ತಮ್ಮ ಗ್ರಂಥದಲ್ಲಿ (ಎ.ಡಿಸ್‌ಕೋರ್ಸ್ ಆನ್ ವೀರಶೈವಿಸಮ್, ಭಾರತೀಯ ವಿದ್ಯಾಭವನ, ಪು.೨೯ರ ಅಡಿ ಟಿಪ್ಪಣಿ) ಶಂಕರ ಸಂಹಿತೆಯ ಒಂದು ಶ್ಲೋಕವನ್ನು ಉಲ್ಲೇಖಿಸುತ್ತಾರೆ : “ದ್ವಿತಲಿಂಗಮ್ ಸದಾಚಾರ್ಯ ನಿಯತ ದ್ವಿಜಪುಂಗವ, ವೀರಮಾಹೇಶ್ವರ ಸಮ್ಯಕ್ ಪುಜಿಮದ್ ಭಕ್ತಿಮನ್ನಾರಃ” ಇದು ವೀರಮಾಹೇಶ್ವರರು ಬ್ರಾಹ್ಮಣ (ದ್ವಿಜರು)ರೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಹಾಗೆಯೇ, ಅವರು ೮ನೆಯ ಶತಮಾನದಷ್ಟು ಮುಂಚೆಯೇ ಅಸ್ತಿತ್ವದಲ್ಲಿದ್ದರು ಎಂಬುದನ್ನೂ ತೋರಿಸುತ್ತದೆ. ಡಾ. ಚಿದಾನಂದಮೂರ್ತಿ ಅವರು ತಮ್ಮ ಪವಿತ್ರ ಗ್ರಂಥ “ಸಿದ್ಧಾಂತ ಶಿಖಾಮಣಿ'ಯನ್ನು ಓದಿರಲೂ ಬೇಕು. ಅದರ ಮೂರು ಶ್ಲೋಕಗಳು (೫-೧೫ ರಿಂದ ೫-೨೩) ವೀರಮಾಹೇಶ್ವರರಿಂದ ವೀರಶೈವವನ್ನು ಪ್ರತ್ಯೇಕಿಸುತ್ತವೆ. ಅದೇ ರೀತಿ, ವೀರವ್ರತಿಗಳು ಮತ್ತು ವೀರಮಾಹೇಶ್ವರರೂ ಬೇರೆ ಬೇರೆ. ಕೇವಲ ಈ ಮೂರು ಶಬ್ದಗಳ (ವೀರವ್ರತಿ, ವೀರಮಾಹೇಶ್ವರ ಮತ್ತು ವೀರಶೈವ) ಮೊದಲ ಅರ್ಧಭಾಗ 'ವೀರ ಒಂದೇ ಇರುವುದರಿಂದ ಅವರು ಅವೆಲ್ಲ ಒಂದೇ ಎಂದಿದ್ದಾರೆ.

ನಂತರದ ವೀರಶೈವರು ವೀರವ್ರತಿಗಳ ಕೆಲವು ಪದ್ಧತಿಗಳು ಮತ್ತು ಮತಾಚರಣೆಗಳನ್ನು ಪ್ರತಿಮಾಡಿಕೊಂಡಿದ್ದಾರೆ. ವೀರವ್ರತಿಗಳು ಮತ್ತು ವೀರಶೈವರನ್ನು ಸಮೀಕರಿಸುವುದು ವಸ್ತುನಿಷ್ಠತೆಯ ದೃಷ್ಟಿಯಿಂದ ಸರಿಯಲ್ಲ. ವೀರವ್ರತಿಗಳ ಪ್ರಾಚೀನತೆ -ಯನ್ನು ಸಾಧಿಸಿದರೆ, ವೀರಶೈವವು ಬಸವಣ್ಣನವರಿಗಿಂತ ಮುಂಚೆ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಪ್ರತಿಪಾದಿಸಲು ಅನುಕೂಲವಾಗುವಂತೆ ಕಾಣುತ್ತದೆ. ಆದ್ದರಿಂದ ಕೊಂಡಗುಳಿ ಕೇಶಿರಾಜನು ವೀರವ್ರತಿ ಅಥವಾ ವೀರಮಾಹೇಶ್ವರನಾಗಿ ಇರಬಲ್ಲನೇ ಹೊರತು, ಖಂಡಿತವಾಗಿ ವೀರಶೈವನಂತೂ ಅಲ್ಲ ಎನ್ನುವ ಸಾಧ್ಯತೆಯೇ ಹೆಚ್ಚಾಗಿದೆ.

(ಇ) ಡಾ. ಚಿದಾನಂದಮೂರ್ತಿ ಅವರು ಕೊಟ್ಟಿರುವ ಏಕಾಂತದ ರಾಮಯ್ಯನ ಮೂರನೆಯ ಸಾಕ್ಷಾಧಾರವು ಇನ್ನೂ ಹೆಚ್ಚು ವಿವಾದಾತ್ಮಕವಾಗಿದೆ. ಅವರು ಏಕಾಂತದ ರಾಮಯ್ಯ ಬಸವಣ್ಣನವರ ನಿಕಟಪೂರ್ವಿ ಎಂದು ಹೇಳುತ್ತಾರೆ. ಆದರೆ ಆಬಲೂರು ಶಾಸನದ ಪ್ರಕಾರ, ಏಕಾಂತದ ರಾಮಯ್ಯನು ಬಸವಣ್ಣನವರ ಸಮಕಾಲೀನ ಮತ್ತು ಮಹಾಶೈವ. ಅವನು ವೀರಶೈವನೂ ಅಲ್ಲ; ಲಿಂಗಾಯತನೂ ಅಲ್ಲ. ಅವನು ವಾದವೊಂದರಲ್ಲಿ ಭಾವೋದ್ರೇಕದಿಂದ ತಾನೇ ತನ್ನ ಶಿರಚ್ಛೇದನ ಮಾಡಿಕೊಳ್ಳುವ ಅತಿರೇಕದಿಂದ ಜೈನರನ್ನು ಸೋಲಿಸದನೆಂದೂ, ಕೆಲವು ದಿನಗಳ ನಂತರ, ದೇವರ ಕೃಪೆಯಿಂದ ಆ ಶಿರವು ಮತ್ತೆ ಅವನ ಮುಂಡವನ್ನು ಕೂಡಿಕೊಂಡಿತೆಂದೂ ಹೇಳಲಾಗಿದೆ. ಡಾ. ಚಿದಾನಂದಮೂರ್ತಿ ಅವರು ಪಂಚಾಚಾರ್ಯರನ್ನು ಕುರಿತ ತಮ್ಮ ಇನ್ನೊಂದು ಲೇಖನದಲ್ಲಿ (ಅಂತಿಮ ತೆರೆ' - ಸಾಧನೆ) ಏಕಾಂತದ ರಾಮಯ್ಯನು ಬಸವಣ್ಣನವರ ಸಮಕಾಲೀನನೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗೆ ಡಾ. ಚಿದಾನಂದಮೂರ್ತಿ ಅವರು, ವೀರಶೈವವು ಬಸವಣ್ಣನವರಿಗಿಂತ ಮುಂಚೆ ಅಸ್ತಿತ್ವದಲ್ಲಿತ್ತು ಎಂಬುದನ್ನು ಸಾಧಿಸಿತೋರುವ ಸಾಕ್ಷಾಧಾರದಲ್ಲಿ ಮೂರು ಗಣನೆಗಳಲ್ಲೂ ವಿಫಲರಾಗುತ್ತಾರೆ. ವಾಸ್ತವವಾಗಿ, ವೀರಶೈವವು ನಂತರ ಒಂದುದೆಂಬುದನ್ನು ಅದೇ ಸಾಕ್ಷಾಧಾರವು ದೃಢಪಡಿಸುತ್ತದೆ.
ಡಾ. ನಂದೀಮಠ ಅವರು ತಮ್ಮ ಒಂದು ಲೇಖನದಲ್ಲಿ (ಹಿಸ್ಟರಿ ಅಂಡ್ ರಿಲಿಜನ್ ಆಫ್ ವೀರಶೈವ, ಶಿವಾನುಭವ ಸಂಚಿಕೆ (೧೯೬೧) ೬.೩.೧೯೬೧) “೧೧ನೆಯ ಶತಮಾನಕ್ಕೆ ಮುಂಚೆ ವೀರಶೈವದ ಬಗೆಗೆ ಯಾವುದೇ ನಿರ್ದಿಷ್ಟ ದಾಖಲೆಗಳಿಲ್ಲ. ಮಲಕಾಪುರ ಶಾಸನವು ಮಾತ್ರ ವೀರಶೈವವನ್ನು ಹೆಸರಿಸುತ್ತದೆ. ಆದ್ದರಿಂದ ವೀರಶೈವ ಶಬ್ದವು ೧೨ನೆಯ ಶತಮಾನದ ನಂತರ ಬಂದಿರಬಹುದೆಂದು ನಾವು ಊಹಿಸಬಹುದು” ಎಂದಿದ್ದಾರೆ.

ಈ ಎಲ್ಲ ಕಾರಣಗಳಿಂದ, ವೀರಶೈವ ಧರ್ಮವು ಬಸವಣ್ಣನವರಿಗಿಂತ ಮುಂಚೆ ಆಸ್ತಿತ್ವದಲ್ಲಿತ್ತು ಎಂಬ ಡಾ. ಚಿದಾನಂದಮೂರ್ತಿ ಅವರ ವಾದ ಒಪ್ಪುವಂತೆಯೂ ಇಲ್ಲ; ಮೇಲೆ ವಿವರಿಸಿರುವಂತೆ ತೃಪ್ತಿಕರವಾಗಿಯೂ ಇಲ್ಲ. ಸಧ್ಯ, ಡಾ. ಎಲ್. ಬಸವರಾಜು ಅವರಂತೆ ಇವರೂ ವೀರಶೈವವನ್ನು ಅತ್ಯಂತ ಪ್ರಾಚೀನ ಕಾಲಕ್ಕೆ ಒಯ್ಯುವುದಿಲ್ಲ!

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವಿಶ್ಲೇಷಣೆ - ಶಿವದಾಸ ಗೀತಾಂಜಲಿ ವಿಶ್ಲೇಷಣೆ -ವೀರಶೈವ ಧರ್ಮ Next