Previous ವಿಶ್ಲೇಷಣೆ - ವೀರಶೈವ ಚರಿತ್ರೆ ವಿಶ್ಲೇಷಣೆ -ವೀರಶೈವ ಧರ್ಮ Next

ವಿಶ್ಲೇಷಣೆ -ವೀರಶೈವ ಧರ್ಮ

*

ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಡಾ. ಸವದತ್ತಿ ಮಠ- ವೀರಶೈವ ಧರ್ಮ

ಡಾ. ಸಂಗಮೇಶ ಸವದತ್ತಿ ಮಠ ಅವರು ೨೦೧೭ರಲ್ಲಿ ನಡೆದ ಲಿಂಗಾಯತ ಚಳವಳಿಯ ಹಕ್ಕು ಸಾಧನೆಗೆ ಅಡ್ಡಿಯೊಡ್ಡಲು ೮೨ ಪುಟಗಳ ಒಂದು 'ವಿಶೇಷ' ಪುಸ್ತಿಕೆಯನ್ನೇ ಬರೆದರು (ವೀರಶೈವ - ಲಿಂಗಾಯತ; ಇತಿಹಾಸ ಮತ್ತು ಸತ್ಯ ಸಂಗತಿಗಳು, ಜಗದ್ಗುರು ರಂಭಾಪುರೀಶ್ವರ ಗ್ರಂಥ ಪ್ರಕಾಶನ, ಹುಬ್ಬಳ್ಳಿ, ೨೦೧೭).

ಅವರ 'ಇತಿಹಾಸ' ಎಷ್ಟು ಸತ್ಯ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಮೊದಲನೆಯದಾಗಿ, ಪುಸ್ತಿಕೆಯು, ಲೇಖಕರು ತಮ್ಮ ಜಾತಿಯನ್ನು ಸಮರ್ಥಿಸಿಕೊಳ್ಳುವ ಸ್ವಹಿತ ಪ್ರಬುದ್ಧತೆಯಿಂದ ಪ್ರೇರಿತವಾಗಿದೆ. ಅದರ ಮೂಲಕ ಲೇಖಕರು ತಮ್ಮ ಉದ್ದೇಶಕ್ಕೆ ಅನುಗುಣವಾಗಿ ಲಿಂಗಾಯತ ಇತಿಹಾಸದ ಪ್ರತಿಯೊಂದು ಅಂಶವನ್ನೂ ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ 'ಸತ್ಯ ಸಂಗತಿಗಳನ್ನು ಸಂಕ್ಷಿಪ್ತವಾಗಿಯಾದರೂ ವಿಶ್ಲೇಷಿಸಬೇಕಾದ ಅಗತ್ಯವಿದೆ.

ವೀರಶೈವವನ್ನು ವಿಶ್ಲೇಷಿಸುವ ಅವರ ಎಲ್ಲ ಸತ್ಯ ಸಂಗತಿ'ಗಳೂ ಶೈವಧರ್ಮಕ್ಕೆ ಸಂಬಂಧಿಸುತ್ತವೆ. ಒಂದು ಕಡೆ, ಶೈವಧರ್ಮ ಮತ್ತು ವೀರಶೈವ ಧರ್ಮಗಳ ನಡುವಣ ವ್ಯತ್ಯಾಸವನ್ನು ಸ್ಪಷ್ಟಿಕರಿಸದೆ, ಮತ್ತೆ ಇನ್ನೊಂದು ಕಡೆ ವೀರಶೈವ ಧರ್ಮ ಮತ್ತು ಇತರ ಶೈವ ಪಂಥಗಳ (ಮುಖ್ಯವಾಗಿ ಪಾಶುಪತ, ಕಾಳಾಮುಖ, ಕಾಪಾಲಿಕ ಮತ್ತು ತಮಿಳು ಶೈವ) ನಡುವಣ ವ್ಯತ್ಯಾಸವನ್ನು ಗುರುತಿಸದೆ, ಉದ್ದೇಶಪೂರ್ವಕವಾಗಿ ಓದುಗರಲ್ಲಿ ಗೊಂದಲ ಉಂಟುಮಾಡಲು ಲೇಖಕರು ಪ್ರಯತ್ನಿಸುತ್ತಾರೆ. ಇತರ ಶೈವ ಪಂಥಗಳನ್ನು ಮತ್ತು ಸಾಮಾನ್ಯ ಶೈವವನ್ನು ವೀರಶೈವದೊಂದಿಗೆ ಬೆರೆಸುವ ಮೂಲಕ ಸಾಮಾನ್ಯ ಓದುಗರ ದಿಕ್ಕು ತಪ್ಪಿಸುತ್ತಾರೆ.

(ಅ) ಪ್ರಸ್ತಾಪಿತ ಪುಸ್ತಿಕೆಗೆ ಕೊಟ್ಟಿರುವ ಒಂದು ಪ್ರತ್ಯೇಕ ಅನುಬಂಧದಲ್ಲಿ ಡಾ. ಸವದತ್ತಿ ಮಠ ಅವರು ಹತ್ತು ಪ್ರಶ್ನೆಗಳನ್ನು ರೂಪಿಸಿಕೊಂಡು, ಅವರೇ ಅವನ್ನು ಉತ್ತರಿಸಿದ್ದಾರೆ. ಅವರ ಪ್ರತಿಯೊಂದು ಉತ್ತರವೂ ಅಪಾರ್ಥ ಮತ್ತು ಅಸತ್ಯಗಳ ಕಂತೆಯಾಗಿದೆ. “ಬಸವಣ್ಣ ಮೂರ್ತಿ ಪೂಜಕರಾಗಿದ್ದರು” ಎಂದಿದ್ದಾರೆ.

(ಆ) ಬ್ರಾಹ್ಮಣನಾಗಿ ಹುಟ್ಟಿದ ಬಸವಣ್ಣ ಹೊಸ ಧರ್ಮ ಸ್ಥಾಪಿಸುವುದಕ್ಕೆ ಎಷ್ಟೋ ವರ್ಷಗಳ ಹಿಂದೆ ಸ್ಥಾವರಲಿಂಗವನ್ನು ಪೂಜಿಸುತ್ತಿದ್ದುದು ನಿಜ. ಕೂಡಲ ಸಂಗಮದಲ್ಲಿ ಬಸವಣ್ಣ ವಿದ್ಯಾರ್ಥಿಯಾಗಿದ್ದಾಗ ಅರ್ಚಕರಾಗಿ ಸ್ಥಾವರಲಿಂಗವನ್ನು ಪೂಜಿಸುತ್ತಿದ್ದರು. ಅದೇ ರೀತಿ ಬಸವಣ್ಣನವರ ಬಹುತೇಕ ಅನುಯಾಯಿಗಳು ಲಿಂಗಾಯತ ಧರ್ಮದ ದೀಕ್ಷೆ ಪಡೆಯುವ ಮುನ್ನ ಸ್ಥಾವರಲಿಂಗವನ್ನೇ ನಂಬಿದವರಾಗಿದ್ದರು. “ಅನೇಕ ಶರಣರೂ ಮೂರ್ತಿ ಪೂಜಕರಾಗಿದ್ದರು” ಎನ್ನುತ್ತಾರೆ.

(ಇ) ವಾಸ್ತವವಾಗಿ, ಬಸವಣ್ಣನವರು ಮತ್ತು ಕೆಲವು ಶರಣರು, ಪೌರಾಣಿಕ ರೂಪದ ಸ್ಥಾವರಲಿಂಗವನ್ನು ವರ್ಣಿಸಿರುವ ಕೆಲವು ವಚನಗಳಿವೆ. ಆದರೆ, ಅವೆಲ್ಲ ಅವರು ಲಿಂಗಾಯತಕ್ಕೆ ಪರಿವರ್ತನೆಯಾಗುವ ಮೊದಲು ರಚಿತವಾದವು ಎಂದು ಬೇರೆ ಹೇಳಬೇಕಾಗಿಲ್ಲ. “ಶರಣಾರು ಪೂಜಿಸುವ ಮೂರ್ತಿಗಳ ಹೆಸರನ್ನೇ ಅಂಕಿತನಾಮವಾಗಿ ಬಳಸಿದ್ದಾರೆ” ಎನ್ನುತ್ತಾರೆ.

(ಈ) ಪ್ರತಿಯೊಬ್ಬ ಶರಣನೂ ತಾನು ಹಿಂದೆ ಪೂಜಿಸುತ್ತಿದ್ದ ದೇವರುಗಳ ಹೆಸರನ್ನೇ ತಮ್ಮ ವಚನಗಳಿಗೆ ಅಂಕಿತ ಮಾಡಿಕೊಂಡಿದ್ದಾರೆ. (ಕೂಡಲಸಂಗಮ ದೇವಾ, ಕೂಡಲಚೆನ್ನಸಂಗಯ್ಯ, ರಾಮನಾಥ, ಕಪಿಲಸಿದ್ಧ ಮಲ್ಲಿಕಾರ್ಜುನ, ಇತ್ಯಾದಿ). ಆದರೆ ಹೊಸ ಧರ್ಮ ಸ್ಥಾಪನೆಯಾದ ಮೇಲೆ ಕ್ರಿಶ. ೧೧೫೦- ೧೬೮೫) ಪೂಜಾರಿಕೆ ಮತ್ತು ಬಹುದೇವೋಪಾಸನೆಗಳ ವಾದವನ್ನು ಅವರು ಖಂಡಿಸಿದ್ದಾರೆ. ಅಂತಹ ಖಂಡನೆಯ ನೂರಾರು ವಚನಗಳಿದ್ದರೂ, ಡಾ. ಸವದತ್ತಿ ಮಠ ಅವರು ಅವುಗಳ ಬಗೆಗೆ ಚಕಾರವೆತ್ತುವುದಿಲ್ಲ. ಪೂರ್ಣ ಸ್ಪಷ್ಟತೆ ನೀಡದೆ ಅರೆಸತ್ಯಗಳನ್ನು ಮುಂದಿಟ್ಟು ಜನಮೆಚ್ಚುಗೆಗೆ ಮಾತನಾಡುತ್ತಾರೆ.

(ಉ) ಲಿಂಗಾಯತ ಚಳವಳಿಯಲ್ಲಿ ಪ್ರವರ್ತಕ ವಿದ್ವಾಂಸರುಗಳಾದ ಡಾ. ಫ.ಗು. ಹಳಕಟ್ಟಿ, ಡಾ. ಎಸ್.ಸಿ. ನಂದೀಮಠ, ಡಾ. ಆರ್.ಸಿ. ಹಿರೇಮಠ, ಡಾ. ಎಂ.ಎಸ್. ಸುಂಕಾಪುರ, ನ್ಯಾ. ಟಿ.ಎನ್. ಮಲ್ಲಪ್ಪ, ಪ್ರೊ. ಎಸ್.ಎಸ್. ಭೂಸನೂರಮಠ, ಡಾ. ಎಲ್. ಬಸವರಾಜು, ಡಾ. ಎಚ್. ತಿಪ್ಪೇರುದ್ರಸ್ವಾಮಿ, ಡಾ. ಜ.ಚ.ನಿ., ಡಾ. ಸಿದ್ಧರಾಮಪ್ಪ ಪಾವಟೆ, ಆರ್.ಆರ್. ದಿವಾಕರ, ಡಾ. ಎಂ.ಎಂ. ಕಲಬುರ್ಗಿ, ಡಾ. ಸಿದ್ಧಲಿಂಗ ಸ್ವಾಮೀಜಿ ಮೊದಲಾದವರು ತಮ್ಮ ಗ್ರಂಥಗಳಲ್ಲಿ 'ವೀರಶೈವ' ಶಬ್ದವನ್ನು ಬಳಸಿದ್ದಾರೆಂದೂ, 'ಲಿಂಗಾಯತ' ಶಬ್ದವನ್ನು ಬಳಸಿಲ್ಲವೆಂದೂ, ಡಾ. ಚಿದಾನಂದಮೂರ್ತಿ ಅವರಂತೆಯೇ ಡಾ. ಸವದತ್ತಿ ಮಠ ಅವರೂ ಹೇಳುತ್ತಾರೆ.

ಬಹುತೇಕ ಪ್ರಸಿದ್ಧ ಲೇಖಕರು ಮತ್ತು ವಿದೇಶಿ ವಿದ್ವಾಂಸರು 'ವೀರಶೈವ' ಶಬ್ದವನ್ನು 'ಲಿಂಗಾಯತ'ದ ಒಂದು ಸಮಾನಾರ್ಥ ಪದವಾಗಿ ಅಥವಾ ಅವೆರಡೂ ಪರಿವರ್ತನೀಯ ಪದಗಳೆಂದು ಇತ್ತೀಚಿನವರೆಗೂ ಬಳಸಿರುವುದು ನಿಜ. ಆದರೆ, ಅದರ ಹಿನ್ನೆಲೆಯ ವಿವರಣೆ ಅಗತ್ಯವಿದೆ. ಅತ್ಯಂತ ಈಚಿನವರೆಗೂ ಜನರಿಗೆ ಲಿಂಗಾಯತ ಮತ್ತು ವೀರಶೈವರ ನಡುವಣ ವ್ಯತ್ಯಾಸವೇ ತಿಳಿದಿರಲಿಲ್ಲ. ಇದುವರೆಗೆ ವೀರಶೈವ ಬರಹಗಾರರು ಜನರ ತಲೆಗೆ ತುಂಬಿದ್ದ 'ವೀರಶೈವ' ಶಬ್ದವೇ ಉಳಿದುಕೊಂಡಿತ್ತು.

(i) ೧೬ನೆಯ ಶತಮಾನದಿಂದ ಈಚೆಗೆ ಕನ್ನಡ ಮತ್ತು ಸಂಸ್ಕೃತ ಎರಡರಲ್ಲೂ ವೀರಶೈವ ಬರಹಗಾರರು ಧಾರ್ಮಿಕ ಸಾಹಿತ್ಯ ಕ್ಷೇತ್ರದಲ್ಲಿ ಮೇಲಗೈ ಸಾಧಿಸಿದ್ದರು. ೧೬ ಮತ್ತು ೧೭ನೆಯ ಶತಮಾನಗಳಲ್ಲಿ ವಚನಗಳಿಗೆ ಸಂಬಂಧಿಸಿದ ಸಾಕಷ್ಟು ಸಾಹಿತ್ಯವನ್ನು ಹೊರಗಿಡಲಾಯಿತು ಅಥವಾ ಹತ್ತಿಕ್ಕಲಾಯಿತು. ಶೂನ್ಯಸಂಪಾದನೆ, ಪ್ರಭುಲಿಂಗಲೀಲೆ, ಬಸವಣ್ಣ, ಸಿದ್ಧರಾಮ, ಚೆನ್ನಬಸವಣ್ಣ, ಅಕ್ಕಮಹಾದೇವಿಯರನ್ನು ಕುರಿತ ಪುರಾಣಗಳು ಮಾತ್ರ ಇದಕ್ಕೆ ಅಪವಾದವಾಗಿವೆ. ಆಗ ಕನ್ನಡಕ್ಕಿಂತ ಸಂಸ್ಕೃತದ್ದೇ ಮೇಲುಗೈಯಾಗಿದ್ದುದೂ ನಿಜ.

(ii) ಅದೇ ಕಾಲಾವಧಿಯಲ್ಲಿ, ವೀರಶೈವ ಧರ್ಮಸ್ಥಾಪಕನೆಂದು ಕಲ್ಪಿಸಿಕೊಂಡಿರುವ ರೇವಣಸಿದ್ಧನನ್ನು ಕುರಿತು ಹತ್ತಕ್ಕೂ ಹೆಚ್ಚು ಪುರಾಣಗಳು ಸೃಷ್ಟಿಯಾದವು. ಅನೇಕ ವೀರಶೈವ ಬೃಹತ್ ಗ್ರಂಥಗಳ ಬಗೆಗೂ ಸಾಕಷ್ಟು ಸಾಹಿತ್ಯ ಹೊರಬಂದಿತು. ಅವುಗಳಲ್ಲಿ

೧. ಸಿದ್ಧನಂಜೇಶನ ಗುರುರಾಜ ಚರಿತ್ರ (೧೬ನೆಯ ಶತಮಾನ),
೨. ಲಕ್ಕಣ ದಂಡೇಶನ 'ಶಿವತತ್ವ ಚಿಂತಾಮಣಿ' (೧೫ನೆಯ ಶತಮಾನ),
೩. ಗುಬ್ಬಿ ಮಲ್ಲಣಾರ್ಯನ 'ಗಣಭಾಷಿತ ರತ್ನಾಮಾಲೆ' ಮತ್ತು 'ವೀರಶೈವಾಮೃತ ಪುರಾಣ' (ಕ್ರಿ.ಶ.೧೪೫೦),
೪. ಸಿಂಗಿರಾಜನ 'ಅಮಲ ಬಸವರಾಜು ಚರಿತ್ರ' (೧೫ನೆಯ ಶತಮಾನ),
೫. ನೀಲಕಂಠ ನಾಗನಾಥಾಚಾರ್ಯನ ವೀರಮಾಹೇಶ್ವರ ಸಂಗ್ರಹ' (೧೪ನೆಯ ಶತಮಾನ),
೬. ಕೆಳದಿರಾಜ ಬಸವಪ್ಪ ಭೂಪಾಲನ 'ಶಿವತತ್ತ್ವರತ್ನಾಕರ' (೧೭ನೆಯ ಶತಮಾನ),
೭. ಜ್ಯೋತಿನಾಥನ 'ಶೈವರತ್ನಾಕರ' (೧೭ನೆಯ ಶತಮಾನ),
೮. ಜಗದಾರಾಧ್ಯ ನಾಗೇಶನ 'ಶಿವಜ್ಞಾನ ಸಮುಚ್ಚಯ',
೯. ತೋಂಟದ ಸಿದ್ಧಲಿಂಗಯತಿಗಳ ಕೃತಿಗಳು (ಕ್ರಿ.ಶ.೧೪೭೦),
೧೦. ಪುಲಿಗೆರೆ ಮಹಾಲಿಂಗದೇವನ ಏಕೋತ್ತರ ಶತಸ್ಥಲ' (೧೫ನೆಯ ಶತಮಾನ),
೧೧. ನೀಲಕಂಠಾಚಾರ್ಯನ 'ಮಲ್ಲಿಕಾರ್ಜುನ ಪಂಡಿತಾರಾಧ್ಯ' (ಕ್ರಿ.ಶ. ೧೪೮೫),
೧೨. ಮಲ್ಲಿಕಾರ್ಜುನ ಪಂಡಿತಾರಾಧ್ಯನ 'ಶಿವತತ್ತ್ವಸಾರ' (೧೭ನೆಯ ಶತಮಾನ),
೧೩. ನಂದಿಕೇಶ್ವರನ 'ಲಿಂಗಧಾರಣ ಚಂದ್ರಿಕೆ' (೧೭ನೆಯ ಶತಮಾನ),
೧೪, ಮಲ್ಲಣ್ಣನ 'ರೇವಣಸಿದ್ದ ಕಾವ್ಯ',
೧೫. ಬೊಮ್ಮರಸನ 'ರೇವಣಸಿದ್ದ ಪುರಾಣ',
೧೬. ಬಸವಾಂಕನ ರೇವಣಸಿದ್ದ ಸಾಂಗತ್ಯ,
೧೭. ಷಡಕ್ಷರ ದೇವನ 'ರಾಜಶೇಖರ ವಿಳಾಸ',
೧೮. ಪರ್ವತೇಶನ 'ಚತುರಾಚಾರ್ಯ ಚರಿತ್ರೆ' (೧೭ನೆಯ ಶತಮಾನ),
೧೯. ನಂಜನಾರ್ಯನ 'ರಾಮನಾಥವಿಳಾಸ',
೨೦. ಗುರುರಾಜನ 'ಪಂಡಿತಾರಾಧ್ಯ ಚರಿತ್ರೆ',
೨೧. ನೀಲಕಂಠಾರಾಧ್ಯನ 'ಆರಾಧ್ಯಚರಿತ್ರೆ,
೨೨. ರೇಣುಕಾರಾಧ್ಯನ 'ಶ್ರೀಗುರು ರೇಣುಕ ಲೀಲಾವಿಲಾಸ',
೨೩, 'ವೀರಶೈವ ಕೌಸ್ತುಭ',
೨೪. 'ವೀರಶೈವ ಧರ್ಮ ಶಿರೋಮಣಿ',
೨೫. 'ಪಂಚಬ್ರಹ್ಮದಯ ಭಾಷ್ಯ' (೧೪೫೦),
೨೬. 'ವೀರಶೈವ ಧರ್ಮಸಿಂಧು',
೨೭. 'ಶೈವರತ್ನಾಕರ',
೨೮. 'ನಿರಂಜನ ವಂಶ ರತ್ನಾಕರ',
೨೯. 'ಅನಾದಿ ವೀರಶೈವ ಸಂಗ್ರಹ',
೩೦. ರೇವಣಾರಾಧ್ಯನ 'ರೇಣುಕಲೀಲಾ ವಿಲಾಸ' (೧೬ನೆಯ ಶತಮಾನ),
೩೧. ಸದ್ದರ್ಮ ದೀಪಿಕೆ,
೩೨. ಚೆಟ್ಟರು ಗಂಗಾಧರಸ್ವಾಮಿಯ 'ಕೊಲ್ಲಿಪಾಕಿ ಮಹಾತ್ಮ... ಇತ್ಯಾದಿ.

(iii) ಮೇಲೆ ಹೇಳಿದ ಗ್ರಂಥಗಳೇ ಅಲ್ಲದೆ ೧೯ನೆಯ ಶತಮಾನದಲ್ಲಿ ಅತ್ಯನೇಕ ಗ್ರಂಥಗಳು ಪ್ರಕಟವಾಗಿವೆ. ೧೮೭೦ ರಿಂದ ೧೯೧೦ರ ಅವಧಿಯಲ್ಲಿ ಸೊಲ್ಲಾಪುರದ 'ಲಿಂಗಿಬ್ರಾಹ್ಮಣ ಗ್ರಂಥಮಾಲೆಯು ಒಟ್ಟು ೬೨ ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನು ೩೦ ಗ್ರಂಥಗಳನ್ನು ಪಿ.ಆರ್. ಕರಿಬಸವಶಾಸ್ತ್ರಿ ಅವರು ಮೈಸೂರಿನ ತಮ್ಮ “ವೀರಶೈವ ಮತ ಪ್ರಕಾಶಿಕಾ” ಪ್ರಕಾಶನದಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ “ವೀರಶೈವ ಗ್ರಂಥ ಪ್ರಕಾಶಿಕಾ”ದಿಂದ ಎನ್.ಆರ್. ಕರಿಬಸವಶಾಸ್ತ್ರಿಗಳು ೨೦ಕ್ಕೂ ಹೆಚ್ಚ ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಗ್ರಂಥಗಳ ಜೊತೆಗೆ, ಗ್ರಂಥಭಂಡಾರ ತಜ್ಞರಾದ ಡಾ. ಎಸ್.ಆರ್. ಗುಂಜಾಳ ಅವರು ೧೮೬೦ ರಿಂದ ೧೮೯೯ರ ವರೆಗಿನ ಅವಧಿಯಲ್ಲಿ ಪ್ರಕಟವಾದ ಇನ್ನೂ ೨೮ ಗ್ರಂಥಗಳ ಪಟ್ಟಿಮಾಡಿದ್ದಾರೆ.

(iv) ಹರಿಹರ, ರಾಘವಾಂಕ, ಸಕಲೇಶ ಮಾದರಸ, ಪಾಲ್ಕುರಿಕೆ ಸೋಮನಾಥ, ಪಂಡಿತಾರಾಧ್ಯ, ಕೆರೆಯ ಪದ್ಮರಸ, ಕುಮಾರ ಪದ್ಮರಸ ಇವರೆಲ್ಲ ಸೇರಿದಂತೆ, ಬಹುತೇಕ ವೀರಶೈವ ಗ್ರಂಥಕರ್ತರು ಶುದ್ಧಸಿದ್ಧ ಶೈವ ಬ್ರಾಹ್ಮಣರಾಗಿದ್ದಾರೆ. ಇಲ್ಲವೇ ಆರಾಧ್ಯ ಬ್ರಾಹ್ಮಣರಾಗಿದ್ದಾರೆ. ಮೇಲೆ ಕಾಣಿಸಿದ ಗ್ರಂಥಕರ್ತರ ನಂತರದ ಬಹುತೇಕ ಲೇಖಕರೂ ಸಹ ವೀರಶೈವರು ಅಥವಾ ಆರಾಧ್ಯ . ವೀರಶೈವರಾಗಿದ್ದಾರೆ. ಈ ಗ್ರಂಥಕರ್ತರೆಲ್ಲ ಬಸವಣ್ಣನವರ ಮತ್ತು ಶರಣರ ವಚನ ಸಾಹಿತ್ಯವನ್ನು ವೈದಿಕ ಮತ್ತು ಆಗಮಿಕ ಭಾಷೆಯಲ್ಲೇ ವ್ಯಾಖ್ಯಾನಿಸುವಲ್ಲಿ ಆಸಕ್ತರಾಗಿದ್ದವರು. ಇದರ ಪರಿಣಾಮವಾಗಿ ಕ್ರಿ.ಶ. ೧೪೫೦ ರಿಂದ ೧೯ನೆಯ ಶತಮಾನದ ಅಂತ್ಯದವರೆಗಿನ ಅವಧಿಯಲ್ಲಿ ರಚನೆಗೊಂಡ ೩೦೦ಕ್ಕೂ ಹೆಚ್ಚು ಗ್ರಂಥಗಳ ಮೂಲಕ ಶರಣಧರ್ಮವು ಬ್ರಾಹ್ಮಣೀಕರಣದ ವೀರಶೈವೀಕರಣವಾಯಿತು. (ಲಕ್ಷ್ಮಣ ಕೌಂಟೆ, ೨೦೧೭, ಪು.೧೪೨-೧೬೨)

(v) ಹತ್ತೊಂಬತ್ತನೆಯ ಶತಮಾನದ ವೇಳೆಗೆ ಲಿಂಗಾಯತರ ಮೇಲೆ ವೀರಶೈವ ಲೇಖಕರ ಪ್ರಾಮುಖ್ಯತೆಯ ಮೋಡ ಕವಿಯಿತು. ವಚನ ಸಾಹಿತ್ಯವನ್ನು ಅದುಮಿ ಇಟ್ಟಿದ್ದಷ್ಟೇ ಅಲ್ಲದೆ, ಅದನ್ನು ಕಣ್ಮರೆಗೆ ತಳ್ಳಲಾಯಿತು.

(vi) ಬಸವ (ಲಿಂಗಾಯತ) ಧರ್ಮದ ಬಗೆಗೆ ಗೊಂದಲ ಸೃಷ್ಟಿಸುವಲ್ಲಿ ಪಂಚಾಚಾರ್ಯರು (ಅಷ್ಟರಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಿಕೊಂಡಿದ್ದರು) ಯಶಸ್ವಿ ಆಗಿದ್ದರು. ಆ ಕಾರಣದಿಂದಾಗಿಯೇ ನಂತರ ೧೯ನೆಯ ಶತಮಾನದ ಉತ್ತರಾರ್ಧ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಪಿ.ಸಿ. ಬ್ರೌನ್, ಸಿ.ಆರ್.ಆರ್. ಕರ್, ಅಬ್ಬೆ ದುಬಾಯ್, ಇ.ಆರ್. ಎಂಥೊವಿನ್, ಎಡ್ಗರ್‌ ಥರ್ಸ್ಟನ್ ಅವರಂಥ ಯೂರೋಪಿನ ವಿದ್ವಾಂಸರು 'ಲಿಂಗಾಯತ'ದ ಪರ್ಯಾಯವಾಗಿ 'ವೀರಶೈವ'ವನ್ನು ಬಳಸಬೇಕಾಯಿತು. ಅವರು ಲಿಂಗಾಯತರನ್ನು 'ಹಿಂದೂ ಶುದ್ಧ ಸುಧಾರಕರ ಒಂದು ಶಾಂತಿಶೀಲ ಸಮುದಾಯ'ವೆಂದು ಕರೆದರು. ಅವರಲ್ಲಿ ಪ್ರತಿಯೊಬ್ಬರೂ “ಲಿಂಗಾಯತವನ್ನು ವೀರಶೈವ ಎಂದೂ ಕರೆಯಲಾಗಿದೆ” ಎಂದಿದ್ದಾರೆ. ಅಷ್ಟೇ ಅಲ್ಲ, “ಲಿಂಗಾಯತರು, ಕರ್ಮಕಾಂಡ ಮತ್ತು ಬ್ರಾಹ್ಮಣರು ಅವಲಂಬಿಸಿರುವ ನಂತರದ ಪ್ರಕರಣ ಗ್ರಂಥಗಳನ್ನು ನಿರಾಕರಿಸಿದರೂ, ವೇದಗಳನ್ನು ಗೌರವಿಸುತ್ತಾರೆ' ಎಂದೂ ಹೇಳಬೇಕಾಯಿತು.

(vii) ಆದಾಗ್ಯೂ ಚತುರಾಚಾರ್ಯರ ಬಗೆಗೆ ಪ್ರಥಮವಾಗಿ ಸಂಶಯ ವ್ಯಕ್ತಪಡಿಸಿದವರೆಂದರೆ ಪಿ.ಸಿ. ಬ್ರೌನ್ ಅವರು, ಚತುರಾಚಾರ್ಯರ ಪ್ರಾಚೀನತೆ ಮತ್ತು ಅವರು ಲಿಂಗಾಯತರಿಂದ ಗೌರವಿಸಲ್ಪಟ್ಟದ್ದು ಹೇಗೆ ಎಂಬುದನ್ನು ಸ್ಪಷ್ಟವಾಗಿ ಪ್ರಶ್ನಿಸಿದ್ದಾರೆ. ಹಾಗೂ ಇದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ ಎಂದಿದ್ದಾರೆ. ಬ್ರೌನ್ ಅವರು, ಆರಾಧ್ಯರು ಮತ್ತು ಬ್ರಾಹ್ಮಣರು ಹಾಗೂ ಆರಾಧ್ಯರು ಮತ್ತು ಲಿಂಗಾಯತರು (ಜಂಗಮರು) ಇವುಗಳ ಮಧ್ಯೆ ಇರುವ ವ್ಯತ್ಯಾಸಗಳ ಕಡೆ ನಮ್ಮ ಗಮನವನ್ನು ಸೆಳೆದಿದ್ದಾರೆ. ಎಂಥೊವೆನ್ ಮತ್ತು ಥರ್ಸ್ಟನ್ ಅವರುಗಳೂ ಲಿಂಗಾಯತರಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಅಂದಿನ ಮೈಸೂರಿನ ವೀರಶೈವರು ಹೀಗೆ ವಿಫಲ ಪ್ರಯತ್ನಗಳನ್ನು ನಡೆಸಿದರು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.

(viii) ೧೮೮೦ ಮತ್ತು ೧೮೯೦ರಲ್ಲಿ ಮೈಸೂರಿನ ವೀರಶೈವರು ತಮ್ಮನ್ನು ತಾವು 'ವೀರಮಾಹೇಶ್ವರ ಬ್ರಾಹ್ಮಣರು' ಅಥವಾ 'ವೀರಶೈವ ಬ್ರಾಹ್ಮಣರು' ಎಂದು ಹೇಳಿಕೊಂಡು, ಅದಕ್ಕಾಗಿ ಒಂದು ಚಳವಳಿಯನ್ನೇ ನಡೆಸಿ, ಮೈಸೂರಿನಲ್ಲಿ (೧೮೯೧) 'ವೀರಶೈವ ಬ್ರಾಹ್ಮಣರು' ಎಂದೂ, ನಂತರ ಹೈದರಾಬಾದ್ ನಿಜಾಮ್ ಪ್ರಾಂತ್ಯದಲ್ಲಿ (೧೯೨೮) ಮತ್ತು ಬೊಂಬಾಯಿ ಪ್ರಾಂತ್ಯದಲ್ಲಿ (೧೯೨೧) “ಲಿಂಗಿ ಬ್ರಾಹ್ಮಣರು' ಎಂದೂ ಕರೆದುಕೊಳ್ಳಲು ಆಗಿನ ಸರ್ಕಾರಗಳಿಂದ ಮನ್ನಣೆ ಪಡೆದುಕೊಂಡರು. (ಬೋರಟ್ಟಿ - ೨೦೦೦)

(ix) ಅಂತಹ ಸನ್ನಿವೇಶದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ (೧೯೦೪) ಸ್ಥಾಪನೆಗೊಂಡಿತು. ಶರಣಧರ್ಮದ ಬಗೆಗೆ ಆಗ ಇದ್ದ ವ್ಯಾಪಕ ಅಜ್ಞಾನದಿಂದಾಗಿ, ಅಖಿಲ ಭಾರತ ವೀರಶೈವ ಮಹಾಸಭಾ ೧೯೦೪ರಲ್ಲಿ ನಡೆದ ಅದರ ಪ್ರಥಮ ಸಮ್ಮೇಳನದಲ್ಲಿ “ವೀರಶೈವರು ಹಿಂದೂಗಳು. ಅವರು ವೇದಗಳನ್ನು ಒಪ್ಪಿಗೊಂಡು ಗೌರವಿಸುತ್ತಾರೆ. ಮತ್ತು ಲಿಂಗಾಯತ ಮಠಗಳಿಗೆ ಜಂಗಮರನ್ನು ಮಾತ್ರ ನೇಮಕ ಮಾಡಬೇಕು” ಎಂಬ ನಿರ್ಣಯವನ್ನು ಕೈಗೊಂಡಿತು. ಇದು ಅಂದಿದ್ದ ಹಾಸ್ಯಾಸ್ಪದ ಸ್ಥಿತಿ. ಆ ನಿರ್ಣಯಕ್ಕೆ ಸಭೆಯಲ್ಲಿ ಪಾಲುಗೊಂಡಿದ್ದ ಎಂ. ಬಸವಯ್ಯ, ಪಂಡಿತಪ್ಪ ಚಿಕ್ಕೋಡಿ ಮತ್ತಿತರ ಅನೇಕ ಲಿಂಗಾಯತ ಪ್ರಮುಖರು ವಿರೋಧ ವ್ಯಕ್ತಪಡಿಸಿದರು. ಆದರೆ, ವೀರಶೈವರ ಸ್ವಾರ್ಥದಿಂದಾಗಿ ವಿರೋಧವನ್ನು ತಿರಸ್ಕರಿಸಿ ಅದು ಅಂಗೀಕಾರವಾಯಿತು. (ಅಖಿಲ ಭಾರತ - ಪ್ರಥಮ ಅಧಿವೇಶನದ ವರದಿ ೧೯೦೪)

(x) ಅಖಿಲ ಭಾರತ ವೀರಶೈವ ಮಹಾ ಸಭಾ ಸ್ಥಾಪನೆಯಾದ ಆರು ವರ್ಷಗಳೊಳಗೆ, ಲಿಂಗಾಯತ ಮಠಗಳ ಭವಿಷ್ಯದ ಸ್ವಾಮಿಗಳಿಗಾಗಿ 'ಶಿವಯೋಗ ಮಂದಿರ'ದಲ್ಲಿ ವೀರಶೈವ ತರಬೇತಿ ಕೇಂದ್ರವೊಂದು ಆರಂಭವಾಯಿತು. ೧೯೦೪ರಲ್ಲಿ ನಡೆದ ಮೊಟ್ಟಮೊದಲ ವೀರಶೈವ ಸಮ್ಮೇಳನವು ಲಿಂಗಾಯತರು ಮತ್ತು ವೀರಶೈವರು ಒಂದೇ ಎಂಬ ಭಾವನೆ(ತಪ್ಪು)ಯನ್ನು ಬಲಪಡಿಸಿತು. ಆ ತಪ್ಪು ಭಾವನೆಯೇ ಲಿಂಗಾಯತ ಸಮುದಾಯದ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿತು.

(xi) ಹಿಂದಿನ ಎಲ್ಲ ಸಂಗತಿಗಳೂ ಒಟ್ಟುಗೂಡಿದ ಪರಿಣಾಮವಾಗಿ ಬಹುತೇಕ ವಿದ್ವಾಂಸರು 'ವೀರಶೈವ' ಪದವನ್ನೇ ಬಳಸುತ್ತಾ ಬಂದರು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿ, ನಿಷ್ಠುರ ನಿಷ್ಠೆಯ ವಚನ ಸಾಹಿತ್ಯದ ವಿಷಯದಲ್ಲಿಯೂ ಅದನ್ನು ಬೆರೆಸಿದರು. ಹಾಗಾಗಿ 'ಲಿಂಗಾಯತ'ದ ಬದಲು 'ವೀರಶೈವ' ಪದದ ಬಳಕೆ ಒಂದು ರೂಢಿಯಾಯಿತು.

(xii) ಆದರೆ ಸರ್ಕಾರದ ಬಹುತೇಕ ಪ್ರಕಟಣೆಗಳಲ್ಲಿ 'ಲಿಂಗಾಯತ' ಪದವನ್ನೇ ಬಳಸಲಾಗಿದೆ. (ಜನಗಣತಿ ವರದಿಗಳು, ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳು, ಜಿಲ್ಲಾ ಗೆಜೆಟಿಯರುಗಳು, ಸರ್ಕಾರಿ ಆದೇಶಗಳು ಇತ್ಯಾದಿ (೧೮೯೧).

(xiii) ಈಗ ದೊರಕಿರುವ ಸುಮಾರು ೨೧,೦೦೦ ವಚನಗಳಲ್ಲಿ ಶೇ.೯೦ರಷ್ಟು ಭಾಗ ೧೯೦೪ರ ವೇಳೆಗೆ ಶೋಧನೆಯೇ ಆಗಿರಲಿಲ್ಲ. ಆಗ ೧೫ ಮತ್ತು ೧೬ನೆಯ ಶತಮಾನಗಳ ನಾಲ್ಕು 'ಶೂನ್ಯ ಸಂಪಾದನೆ'ಗಳೂ ಸೇರಿದಂತೆ ಕೇವಲ ಸುಮಾರು ೨೦೦೦ದಷ್ಟು ವಚನಗಳು ಮಾತ್ರ (ಅವುಗಳಲ್ಲೂ ಬಹುತೇಕ ಪ್ರಕ್ಷಿಪ್ತಗಳು) ಬೆಳಕು ಕಂಡಿದ್ದವು. (ಕಲಬುರ್ಗಿ ಮತ್ತು ರಾಜೂರ ೨೦೧೬)

ಮೇಲೆ ವಿವರಿಸಿದ ಸಂಗತಿಗಳಿಂದಾಗಿ, ನಂತರ ಪೂರ್ಣ ಬದಲಾವಣೆ ಹೊಂದಿದ್ದವರೂ ಸೇರಿದಂತೆ ಬಹುತೇಕ ಗ್ರಂಥಕರ್ತರು ವೀರಶೈವ ಮತ್ತು ಲಿಂಗಾಯತ ಪದಗಳನ್ನು ಅದಲು ಬದಲಾಗಿ ಬಳಸತೊಡಗಿದರು. ಈ ಸತ್ಯ ಸಂಗತಿಗಳನ್ನು ನಿರೂಪಿಸದೆ, ಡಾ. ಸವದತ್ತಿ ಮಠ ಅವರು ತಮ್ಮ ಅರೆಸತ್ಯಗಳನ್ನೇ 'ಸತ್ಯಸಂಗತಿ'ಗಳೆಂದು ಅಡ್ಡ ಹೆಸರಿಟ್ಟು ಸಾರ್ವಜನಿಕರನ್ನು ವೃಥಾ ತಪ್ಪುದಾರಿಗೆ ಎಳೆದಿದ್ದಾರೆ.

ಉಲ್ಟಾ-ಪಲ್ಟಾ ಆದದ್ದು :

೧೯೨೦ರ ಆರಂಭದಿಂದಷ್ಟೇ ಸಹಸ್ರಾರು ವಚನಗಳು ಶೋಧವಾಗಿ ಪ್ರಕಟವಾಗತೊಡಗಿದವು. ಇದರ ಪ್ರವರ್ತಕರಾಗಿ, ಶ್ರಮ, ಶ್ರದ್ಧೆಯ ಪ್ರಯತ್ನ ನಡೆಸಿದವರೆಂದರೆ ಫ.ಗು. ಹಳಕಟ್ಟಿ, ಶಿ.ಶಿ. ಬಸವನಾಳ, ಬಿ.ಎಸ್. ಜೀರಗೆ, ಡಾ. ಆರ್.ಸಿ. ಹಿರೇಮಠ ಮತ್ತು ಈಚೆಗೆ ಡಾ. ಎಂ.ಎಂ. ಕಲಬುರ್ಗಿ, ಡಾ. ವೀರಣ್ಣ ರಾಜೂರ ಮತ್ತಿತರ ವಿದ್ವಾಂಸರು. (ವಚನ ಮಹಾಸಂಪುಟ ೨೦೧೬)

(i) ವೀರಶೈವ ಮಠಗಳು ಮತ್ತು ಪ್ರಮುಖ ಲಿಂಗಾಯತ ಕುಟುಂಬಗಳ ಕತ್ತಲ ಕೋಣೆಗಳಲ್ಲಿ ಮುಚ್ಚಿಡಲ್ಪಟ್ಟಿದ್ದ ಓಲೆಗರಿ, ತಾಮ್ರದ ತಗಡು ಮತ್ತು ಶಾಸನಗಳಲ್ಲಿದ್ದ ಬೃಹತ್‌ ಸಂಖ್ಯೆಯ ವಚನಗಳನ್ನು ಶೋಧಿಸಿ ೧೯೨೦ ರಿಂದ ೧೯೯೦ರ ವರೆಗೆ ಪ್ರಕಟಿಸುತ್ತ ಬರಲಾಗಿದೆ. ವಚನಗಳು ಭಾರಿ ಈ ಪ್ರಮಾಣದಲ್ಲಿ ಜನಮೆಚ್ಚುಗೆ ಮತ್ತು ಪ್ರಚಾರವನ್ನು ಪಡೆದಿವೆ. ಸಾಹಿತ್ಯ ಕ್ಷೇತ್ರಕ್ಕಂತೂ ದೊಡ್ಡ ನಿಧಿಯೇ ಸಿಕ್ಕಿದಂತಾಗಿದೆ.

(ii) ಇದೇ ಅವಧಿಯಲ್ಲಿ ಲಿಂಗಾಯತರಲ್ಲಿ (೧೯೨೦-೧೯೬೦) ಶಿಕ್ಷಣದ ಮಟ್ಟ ಬೆಳೆಯಿತು. ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಯ ಆದರ್ಶ ವಿಚಾರಗಳ ಬಗೆಗೆ ಜಾಗೃತಿ ಉಂಟಾಯಿತು. ಬಸವತತ್ವಗಳು ಪ್ರಜಾಸತ್ತಾತ್ಮಕ ಆದರ್ಶಗಳು ಮತ್ತು ಮಾನವನ ಮೂಲಭೂತ ಹಕ್ಕುಗಳನ್ನು ತುಂಬಿಕೊಂಡಿವೆ. ಇದರಿಂದಾಗಿ ವಚನಗಳು ಬೆಳಕಿಗೆ ಬಂದದ್ದು ಲಿಂಗಾಯತರಲ್ಲಿ ಅನನ್ಯತೆಯ ಪ್ರಜ್ಞೆ ಉಂಟಾಗಲು ಸಹಾಯವಾಯಿತು.

ಸಾರ್ವಜನಿಕರಿಗೆ ಈಗ ಆಗಿರುವ ಮತ್ತು ಆಗುತ್ತಿರುವ ತಮ್ಮ ಧರ್ಮದ ಬಗೆಗಿನ ಅರಿವು ವೀರಶೈವರಲ್ಲೇ ನಡುಕ ಹುಟ್ಟಿಸಿವೆ. ಈ ಬೆಳವಣಿಗೆಗಳ ಹಿನ್ನೆಲೆಯ ಪೂರ್ಣವಾದ ಮತ್ತು ವಸ್ತುನಿಷ್ಠವಾದ ಮಾಹಿತಿಯನ್ನು ಕೊಡದೆ, ಡಾ. ಸಂಗಮೇಶ ಸವದತ್ತಿಮಠ, ಡಾ. ಚಿದಾನಂದಮೂರ್ತಿ, ಡಾ. ಎಂ. ಶಿವಕುಮಾರಸ್ವಾಮಿ, ಡಾ. ಸಿ. ಶಿವಕುಮಾರಸ್ವಾಮಿ ಅವರಂತಹ ವೀರಶೈವ ಲೇಖಕರು ಮತ್ತು ಅವರ ಪಂಚಪೀಠಗಳು ಸತ್ಯ ಸಂಗತಿಗಳನ್ನು ವಿಕೃತಿಗೊಳಿಸುತ್ತ, ತಮ್ಮ ವೈಯಕ್ತಿಕ ಪ್ರತಿಷ್ಠೆ ಮತ್ತು ತಮ್ಮ ಪಂಥದ ಹಿತರಕ್ಷಣೆಗಾಗಿ ಮುಗ್ಧ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ.

(iii) “ಲಿಂಗಾಯತ / ವೀರಶೈವರಿಗೆ ಪವಿತ್ರ ಧರ್ಮಗ್ರಂಥ 'ಸಿದ್ಧಾಂತ ಶಿಖಾಮಣಿ'ಯೇ ಹೊರತು ವಚನಗಳಲ್ಲ' ಎಂದು ಡಾ. ಸವದತ್ತಿಮಠ ಹೇಳುತ್ತಾರೆ. 'ಸಿದ್ಧಾಂತ ಶಿಖಾಮಣಿ'ಯ ಶ್ರೇಷ್ಠತೆಯನ್ನು ಅದಕ್ಕೆ ವ್ಯಾಖ್ಯಾನ ಬರೆದಿರುವ ಶ್ರೀ ಸಿದ್ದೇಶ್ವರಸ್ವಾಮಿಗಳಿಗೆ ಸಲ್ಲಿಸುತ್ತಾರೆ. ಈ ವ್ಯಾಖ್ಯೆಯನ್ನು ಬರೆದವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಹಿಂದಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳೆಂದು ಕಾಣುತ್ತದೆ. ಆದರೆ ಸಿದ್ದಾಂತ ಶಿಖಾಮಣಿಯ ಬಗೆಗೆ ಅವರು ಎಷ್ಟೆಲ್ಲ ಹೇಳಿದರೂ, ಅದು ಮೂಲ ಗ್ರಂಥವಲ್ಲ; ಪ್ರಾಚೀನ ಗ್ರಂಥವೂ ಅಲ್ಲ. ಅದು ಕೇವಲ ಸುಳ್ಳುಗಳ ಕಂತೆಗಳಿಂದ ತುಂಬಿದೆ ಎಂಬುದನ್ನು ಹಿರಿಯ ಸಂಶೋಧಕರೇ ತಿಳಿಸಿದ್ದಾರೆ. ಆ ಬಗ್ಗೆ ಪ್ರೊ. ಎಂ.ಆರ್. ಸಾಖರೆ ಅವರ 'ಹಿಸ್ಟರಿ ಅಂಡ್ ಫಿಲಾಸಫಿ ಆಫ್ ಲಿಂಗಾಯತ್ ರಿಲಿಜನ್', - ೧೯೪೨; (ಇದರ ಕನ್ನಡ ಅನುವಾದವನ್ನು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಪ್ರಕಟಿಸಿದೆ); ಕುಂದೂರು ಮಠದ ಡಾ. ಇಮ್ಮಡಿ ಶಿವಬಸವ ಸ್ವಾಮಿಗಳ 'ಸಿದ್ಧಾಂತ ಶಿಖಾಮಣಿ ಮತ್ತು ಶ್ರೀಕರಭಾಷ್ಯಗಳ ನಿಜ ನಿಲುವು, ೨೦೦೪; ಬಿಜ್ಜರಗಿ ಅವರ ರೇವಣಸಿದ್ಧ-೨೦೦೯ ಮತ್ತು ಡಾ. ಎಂ.ಎಂ. ಕಲಬುರ್ಗಿ ಅವರ “ಸಿದ್ಧಾಂತ ಶಿಖಾಮಣಿ ಮತ್ತು ಪಂಚಾಚಾರ್ಯರು” (ಮಾರ್ಗ ೪-೭) ಈ ಮುಂತಾದ ಗ್ರಂಥಗಳನ್ನು ಓದುಗರು ನೋಡಬಹುದು.

(iv) 'ವೀರಶೈವರು ಏಕದೇವೋಪಾಸಕರು' ಎಂದು ಡಾ. ಸವದತ್ತಿ ಮಠ ಹೇಳುತ್ತಾರೆ. ಹಾಗೆಯೇ ಅವರು ಹಿಂದೂಗಳೆಂದೂ ಹೇಳುತ್ತಾರೆ. ಹಿಂದೂಗಳಾದರೆ ಅವರು ಏಕದೇವೋಪಾಸಕರು ಹೇಗಾಗುತ್ತಾರೆ? ವೀರಶೈವರೇ ಪೂಜಿಸುವ ನಂದಿ, ಶೃಂಗಿ, ಗಣೇಶ, ವೀರಭದ್ರ, ಕಾಳಿ, ಪಾರ್ವತಿ, ಗಂಗಾ, ಕಾರ್ತಿಕೇಯ ಇವರೆಲ್ಲ ಯಾರು? ಬಹು ದೇವರಲ್ಲವೆ? ಡಾ. ಸವದತ್ತಿ ಮಠ ಅವರು ವೀರಶೈವರು ಯಜ್ಞ ಮತ್ತು ಹೋಮಗಳನ್ನು ಆಚರಿಸುವುದಿಲ್ಲ ಎನ್ನುತ್ತಾರೆ. ಪಾರಮೇಶ್ವರಾಗಮದ ೮ನೆಯ ಭಾಗದಲ್ಲಿ ವೀರಶೈವ ದೀಕ್ಷೆಗೆ ಹೋಮ, ಯಜ್ಞ ಇತ್ಯಾದಿಗಳನ್ನು ಆಚರಿಸುವುದು ಕಡ್ಡಾಯ ಎಂದಿರುವುದು ಮತ್ತು ಪಂಚಾಚಾರ್ಯರು ಈಗಲೂ ಕ್ರಮತಪ್ಪದೆ ಹೋಮಗಳನ್ನು ನಡೆಸುವುದನ್ನು ಬಹುಶಃ ಅವರು ಮರೆತಿರುವಂತೆ ಕಾಣುತ್ತದೆ. ಪಾರಮೇಶ್ವರಾಗಮವು ಗೃಹಪ್ರವೇಶ, ಉದ್ಯಮಗಳ ಆರಂಭ, ಕೃಷಿ ಕಾರ್ಯ ಇತ್ಯಾದಿ ನಾನಾ ಸಂದರ್ಭಗಳಲ್ಲಿ ನಡೆಸಬೇಕಾದ ಹೋಮದ ವಿಸ್ತ್ರತ ಶಾಸ್ತ್ರ ಕ್ರಮಗಳನ್ನು ಸೂಚಿಸುತ್ತದೆ. (ನಂದೀಮಠ - ಪಾರಮೇಶ್ವರ ತಂತ್ರ - ೧೯೬೮)

(vi) ಡಾ. ಸವದತ್ತಿ ಮಠ ಅವರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವವನ್ನು ಸಮರ್ಥಿಸಲು ಪ್ರಯತ್ನ ನಡೆಸಿದ್ದಾರೆ. ಮಠಗಳ ಮುಖ್ಯಸ್ಥರಾಗಲು ಜಂಗಮರೇ ಹಕ್ಕುಳ್ಳ ವ್ಯಕ್ತಿಗಳು ಎಂದು ಹೇಳಿ, ಕೆಲವು ಜಂಗಮೇತರರಿಗೂ ಅವಕಾಶ ಕಲ್ಪಿಸಲಾಗಿದೆ (೨೦೦೦ ಮಠಗಳಲ್ಲಿಲ್ಲ; ಕೇವಲ ನಾಲ್ಕು ಎಂದೂ, ಲಿಂಗಾಯತವು ಪ್ರತ್ಯೇಕ ಧರ್ಮವಾಗಲು ಸಾಧ್ಯವಿಲ್ಲ ಎಂದೂ ಹೇಳುತ್ತಾರೆ. ಈ ವಾದವು 'ಬ್ರಾಹ್ಮಣನು ಜನ್ಮತಃ ಶ್ರೇಷ್ಠ ಮತ್ತು ಜಗತ್ತಿನ ಒಳಿತೆಲ್ಲವನ್ನೂ ಅನುಭವಿಸಲು ಅವನಿಗೆ ಮಾತ್ರ ಅಧಿಕಾರವಿದೆ' ಎಂದಿರುವ ಮನುಸ್ಮೃತಿಯ ಶ್ಲೋಕವನ್ನು ಹೋಲುತ್ತದೆ. ಇದು ಡಾ. ಸವದತ್ತಿ ಮಠ ಅವರ ಜಂಗಮ ಜಾತಿಯ ಆಡಂಬರದ ಅಭಿಮಾನವಲ್ಲದೆ ಮತ್ತೇನೂ ಅಲ್ಲ.

(vii) ಒಂದು ಕಡೆ ಅವರು 'ವೀರಶೈವರಲ್ಲಿ ಯಾವುದೇ ಶ್ರೇಣಿ ವ್ಯವಸ್ಥೆ ಅಥವಾ ವರ್ಗಭೇದವಿಲ್ಲ. ಎಲ್ಲರೂ ಸರಿಸಮಾನ' ಎಂದು ಹೇಳುತ್ತಲೇ, ಇನ್ನೊಂದು ಕಡೆ, ಪಂಚಾಚಾರ್ಯರ ವೈಭವ, ವಿಲಾಸ ಮತ್ತು ಉನ್ನತ ಸ್ಥಾನಗಳನ್ನು ಸಮರ್ಥಿಸುತ್ತಾರೆ. ಈ ಎರಡೂ ಪರಸ್ಪರ ವಿರೋಧಗಳು ಒಟ್ಟಿಗೆ ಇರಲು ಸಾಧ್ಯವೆ? ಅವರ ಇತರ ವಾದಗಳು ಮತ್ತು ನೀರಸ ಸಂಗತಿಗಳು ಎಷ್ಟು ಕ್ಷುಲ್ಲಕವಾಗಿವೆ ಎಂದರೆ, ಅವುಗಳ ಬಗೆಗೆ ವಿಚಾರಮಾಡಲು ಸಮಯ ವ್ಯರ್ಥಮಾಡುವುದೇ ನಿಷ್ಟ್ರಯೋಜಕವಾಗುತ್ತದೆ.

(vii) ಅವರು ಒಂದು ಋಗ್ವೇದದ ಶ್ಲೋಕವನ್ನು ಉಲ್ಲೇಖಿಸುತ್ತಾರೆ. ಒಂದು ಹಸ್ತದಲ್ಲಿನ ಲಿಂಗಕ್ಕೆ (ಋಗ್ವೇದ ೧೦.೪.೬) ಮತ್ತೊಂದು ಪ್ರಣವ ಓಂಕಾರ ಮಂತ್ರಕ್ಕೆ ಸಂಬಂಧಿಸಿದ್ದು, 'ಓಂ ನಮಃ ಶಿವಾಯ' ಕೃಷ್ಣ ಯಜುರ್ವೇದದ್ದು. ಶೈವ ಧರ್ಮವೆಂದರೆ ವೀರಶೈವವೇ ಎನ್ನುವುದು ಅವರ ಕಲ್ಪನೆಯಾಗಿದೆ. ಇದು ಈಗಾಗಲೇ ವಿವರಿಸಿರುವಂತೆ ಅತ್ಯಂತ ಗೊಂದಲವನ್ನು ಸೃಷ್ಟಿಸುತ್ತದೆ.

ಲಿಂಗಾಯತರು ಅವರ ದೇವರಾದ 'ಶಿವ'ನ ಹೆಸರನ್ನು ಎರವಲು ಪಡೆದಿರುವುದು ನಿಜ. ನಂತರದ ವೈದಿಕ ಆಗಮಿಕ ಮೂಲದಿಂದ ಆದರೆ ಈ ನಿಬಂಧದಲ್ಲಿ ತಿಳಿಸಿರುವಂತೆ ಸಿದ್ಧಾಂತ ಮತ್ತು ಆಚರಣೆಯಲ್ಲಿ ಶಿವನ ಕಲ್ಪನೆಯನ್ನು ಪೂರ್ಣ ಬದಲಾಯಿಸಿದ್ದಾರೆ. ಕೇವಲ ಒಂದೆರಡು ಶಬ್ದಗಳಿದ್ದ ಮಾತ್ರಕ್ಕೆ ಲಿಂಗಾಯತರು ಹಿಂದೂ ಧರ್ಮದ ಭಾಗವಾಗುವುದಿಲ್ಲ. ಹೇಗೆಂದರೆ, ಸಿಖ್‌ಧರ್ಮದಲ್ಲೂ ಅದೇ ಶಬ್ದಗಳಿವೆ. ಹಿಂದೂ ಪರಿಕಲ್ಪನೆಯ 'ಓಂ' ಸಿಬ್ಬರ ಚಿಹ್ನೆ; ಓಂಕಾರ್ ಸಾಮ ಅವರ ಮಂತ್ರ; 'ಶಿವ'ನ ಸ್ಥಾನದಲ್ಲಿ ಅವರು 'ಹರ' ಎನ್ನುತ್ತಾರೆ. ಹರ್‌ನಾಮ್, ಹರ್‌ಭಜನ್, ಹರ್‌ನಾಮ್‌ಸಿಂಗ್, ಹರ್ ಮಂದಿರ್ (ಗೋಲ್ಡನ್ ಟೆಂಪಲ್ ಸುವರ್ಣ ಮಂದಿರ) ಇಂತಹ ಹೆಸರುಗಳು ಸಿಬ್ಬರಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿವೆ. ಆದರೆ ಸಿಖ್ ಧರ್ಮ ಒಂದು ಪ್ರತ್ಯೇಕ ಧರ್ಮವಾಗಿದೆಯೇ ವಿನಃ ಹಿಂದೂ ಧರ್ಮದ ಭಾಗವಾಗಿಲ್ಲ. (ಮ್ಯಾಕಲಾಯಿಡ್‌ ೧೯೪೦).

ಅದೇ ರೀತಿ, ಹಿಂದೂ ಧರ್ಮದ ಕರ್ಮಸಿದ್ಧಾಂತ ಮತ್ತು ಪುನರ್ಜನ್ಮ ಸಿದ್ಧಾಂತಗಳನ್ನು ಜೈನ ಮತ್ತು ಬೌದ್ಧ ಧರ್ಮಗಳು ಸಮಾನವಾಗಿ ಹಂಚಿಕೊಳ್ಳುತ್ತವೆ. ಆದಾಗ್ಯೂ ಜೈನ ಮತ್ತು ಬೌದ್ಧ ಧರ್ಮಗಳು ಪ್ರತ್ಯೇಕ ಧರ್ಮಗಳಾಗೇ ಉಳಿದಿವೆ. ಆದರೆ ಲಿಂಗಾಯತ ಧರ್ಮ ಹಿಂದೂ ಸಿದ್ದಾಂತಗಳನ್ನು ಒಪ್ಪುವುದೇ ಇಲ್ಲ. ಇಡೀ ಜ್ಯೂಯಿಷರು, ಕ್ರೈಸ್ತರು ಮತ್ತು ಇಸ್ಲಾಮೀಯರ ವಿಶ್ವ ಸೃಷ್ಟಿಶಾಸ್ತ್ರ ಮತ್ತು ಪ್ರಾಚೀನ ಚರಿತ್ರೆ ಒಂದೇ ಆಗಿವೆ. ಅವೆಲ್ಲವೂ ಹಳೆಯ ಒಡಂಬಡಿಕೆಯಿಂದ ಹುಟ್ಟಿಕೊಂಡಂಥವು. ಆದಾಗ್ಯೂ ಆ ಮೂರೂ ಧರ್ಮಗಳು ಪ್ರತ್ಯೇಕ ಧರ್ಮಗಳಾಗೇ ಇವೆ.

ಯಾವುದು ಏನೇ ಇದ್ದರೂ, ಹೇಗೇ ಇದ್ದರೂ, ಡಾ. ಸವದತ್ತಿ ಮಠ ಅವರಂಥವರ ಸಂಕುಚಿತ ದೃಷ್ಟಿಯ ಅಂಧಾಭಿಮಾನಕ್ಕೆ ಚಿಕಿತ್ಸೆಯಿಲ್ಲ.

ಡಾ. ಸವದತ್ತಿ ಮಠ ಅವರು ಆಗಮಗಳ ಬಗೆಗೆ (ವೀರಾಗಮ, ಪಾರಮೇಶ್ವರಾಗಮ, ವಾತುಲಾಗಮ, ಕಾಮಿಕಾಗಮ, ಸೂಕ್ಷ್ಮಾಗಮ) ಪ್ರಸ್ತಾಪಿಸುತ್ತಾರೆ. ಹಾಗೆಯೇ, ಆಗಮಗಳ ಬಗೆಗೆ ಒತ್ತಿ ಹೇಳುವ ಡಾ. ಆರ್.ಸಿ. ಹಿರೇಮಠ ಅವರ 'ಮಹಾಯಾತ್ರೆ'ಯನ್ನು ಹೆಸರಿಸುತ್ತಾರೆ. ಆಕಸ್ಮಿಕವೆಂಬಂತೆ ಡಾ. ಆರ್.ಸಿ. ಹಿರೇಮಠ ಅವರೂ ಜಂಗಮರಾಗಿದ್ದು, ವೀರಶೈವ ಧರ್ಮವನ್ನು ಬೆಂಬಲಿಸುವ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. (ಉದಾಹರಣೆಗೆ ಶಿವಯೋಗ ಮಂದಿರದ ಯಾರೋ ಕೆಲವು ಕಲ್ಪಿತನಾಮದ ವೀರಶೈವರು ರಚಿಸಿದ ವಚನಗಳನ್ನು 'ಮುಕ್ತಿಕಂಠಾಭರಣ' ಶೀರ್ಷಿಕೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಿಸಿದಾಗ ಸಾರ್ವಜನಿಕರ ಭಾರಿ ಪ್ರತಿಭಟನೆಯಿಂದಾಗಿ, ಆ ಪ್ರಕಟಣೆಯನ್ನು ಹಿಂಪಡೆದುದು ಸರ್ವವಿದಿತ ಸಂಗತಿ. ನಂತರ ಬಂದ ಇನ್ನೊಂದು ಗ್ರಂಥ - 'ಲಿಂಗಚಿದಾಮೃತ ಬೋಧೆ' ಸಂದರ್ಭದಲ್ಲಿ ಡಾ. ಆರ್.ಸಿ. ಹಿರೇಮಠ ಅವರು ಆ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಕ್ಕಾಗಿ ಕ್ಷಮೆ ಕೋರಿದರು.

ಡಾ. ಎಲ್. ಬಸವರಾಜು ಅವರಂತೆಯೇ ಡಾ. ಸವದತ್ತಿ ಮಠ ಅವರೂ ಸಹ ಪಾಶುಪತವೇ ವೀರಶೈವ ಎಂದಿರುವ ಬಗೆಗೆ ಈಗಾಗಲೇ ಸಾಕಷ್ಟು ಹೇಳಲಾಗಿದೆ. ಮೇಲೆ ವಿವರಿಸಿದಂತೆ ಡಾ. ಸವದತ್ತಿ ಮಠ ಅವರ ವಾದಗಳು ನಿಶ್ಚಿತಾಭಿಪ್ರಾಯದ ಬದ್ಧತೆಯಿಂದ ಕೂಡಿಲ್ಲ ಎಂದು ಹೇಳಿದರೆ ಸಾಕೆಂದು ಕಾಣುತ್ತದೆ.

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವಿಶ್ಲೇಷಣೆ - ವೀರಶೈವ ಚರಿತ್ರೆ ವಿಶ್ಲೇಷಣೆ -ವೀರಶೈವ ಧರ್ಮ Next