Previous ವಿಶ್ಲೇಷಣೆ -ವೀರಶೈವ ಧರ್ಮ ಸತ್ಯವನ್ನು ಒಪ್ಪಿಕೊಳ್ಳದ ಭಂಡತನ Next

ವಿಶ್ಲೇಷಣೆ -ವೀರಶೈವ ಧರ್ಮ

*

ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಟಿ.ಎನ್. ಮಲ್ಲಪ್ಪ - ವೀರಶೈವ ಧರ್ಮ

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಟಿ.ಎನ್. ಮಲ್ಲಪ್ಪನವರು ತಮ್ಮ ಓರಿಜಿನ್ ಅಂಡ್ ಡೆವಲಪ್‌ಮೆಂಟ್ ಆಫ್ ವೀರಶೈವ' (೧೯೬೯) ಗ್ರಂಥದಲ್ಲಿ ವೀರಶೈವವನ್ನು ಲಿಂಗಾಯತದ ಸಮಾನಾರ್ಥದಲ್ಲಿ ಪರಿಗಣಿಸಿದ್ದಾರೆ. ಆ ಕಾಲದಲ್ಲಿ ಜನರ ತಿಳಿವಳಿಕೆಯೂ ಹಾಗೇ ಇತ್ತು. ಏನಿದ್ದರೂ ವಿಚಿತ್ರ ಮೂಲಗಳನ್ನು ಉಲ್ಲೇಖಿಸಿ, ವೀರಶೈವ ಧರ್ಮವನ್ನು ಅನಗತ್ಯವಾಗಿ ಪ್ರವೇಶಿಸುವಂತೆ ಮಾಡಿ, ಅದನ್ನು ಒಂದು ವೈದಿಕ ಶ್ರದ್ಧೆಯ (ಪು. ೪೫-೪೮) ಧರ್ಮ ಎಂದು ಸಾಧಿಸಿ ತೋರುವಲ್ಲಿ ವಿಫಲರಾಗಿದ್ದಾರೆ. ಗಮನಿಸಬೇಕಾದುದೆಂದರೆ, “ಅಲ್ಲಮನ ವಿಶ್ವದಲ್ಲಿ ಬಸವಣ್ಣನ ಆಗಸದಲ್ಲಿ ವೀರಶೈವವು ಬೆಳಗಿತು. ಈ ಆಗಸದಲ್ಲಿ ಚೆನ್ನಬಸವೇಶ್ವರನು ಗುರುವಾಗಿರಬಹುದು. ಅಕ್ಕಮಹಾದೇವಿ ಅರುಂಧತಿಯಂತೆ ಸೇರಿರಬಹುದು. ಅವರೆಲ್ಲರ ಪ್ರಭಾವ ವಲಯದಿಂದ ವೀರಶೈವವು ವಿಶ್ವಧರ್ಮವಾಯಿತು” ಎಂಬ ರಾನಡೆಯವರ ಮಾತನ್ನು ಉಲ್ಲೇಖಿಸಿದ್ದಾರೆ. (ಪು.೪೮). ಅವರ ಉಲ್ಲೇಖ ಲಿಂಗಾಯತ ಧರ್ಮದ ಅಂತಃಸತ್ವವನ್ನು ಸೂಚಿಸುತ್ತದೆಯೇ ವಿನಃ ವೀರಶೈವದ್ದಲ್ಲ.

ಹೆಚ್. ಸದಾಶಿವಯ್ಯ - ವೀರಶೈವ ಧರ್ಮ

ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಹೆಚ್. ಸದಾಶಿವಯ್ಯನವರು “ಎ ಡಿಸ್ಕೋರ್ಸ್ ಆನ್ ವೀರಶೈವಿಸಮ್ - ಎನ್ ಅನ್‌ರಿಟನ್ ಚಾಪ್ಟರ್‌ ಇನ್ ದಿ ರಿಲಿಜಿಯಸ್ ಹಿಸ್ಟರಿ ಆಫ್ ಇಂಡಿಯಾ” ಎಂಬ ಶೀರ್ಷಿಕೆಯ ಒಂದು ಗ್ರಂಥ ರಚಿಸಿದ್ದಾರೆ. ಅದನ್ನು ಬಾಂಬೆ ಭಾರತೀಯ ವಿದ್ಯಾಭವನ ಪ್ರಕಟಿಸಿದೆ. ಅದರಲ್ಲಿ “ವೀರಶೈವವು ಆದಿಕಾಲದ ಧರ್ಮವಾಗಿದ್ದು, ಅದರ ಚರಿತ್ರೆಯನ್ನು ಬುಡಮುಟ್ಟಿ ಶೋಧಿಸಲಾಗುವುದಿಲ್ಲ” ಎಂದಿದ್ದಾರೆ. ಅದು ಗಂಭೀರವಾದ ಯಾರೇ ವಿದ್ವಾಂಸರು ಒಪ್ಪಲಾಗದ ಒಂದು ಅಲಸಿಗರ ವಾದವಾಗಿದೆ. ಮೊದಲೇ ಹೇಳಿರುವಂತೆ ಡಾ. ಬಸವರಾಜು ಅವರೇ ಈ ವಾದವನ್ನು ತಳ್ಳಿಹಾಕಿದ್ದಾರೆ.

ಮುಂದುವರೆದು ಸದಾಶಿವಯ್ಯನವರು “ವೀರಶೈವವು ಮೊದಲು ಶಿವನಿಂದಲೇ ತನ್ನ ಸತಿ ಪಾರ್ವತಿ ಮತ್ತು ಕಾರ್ತಿಕೇಯರಿಗೆ ಭೋದಿಸಲ್ಪಟ್ಟ ಧರ್ಮ” ಎಂದಿದ್ದಾರೆ. ಇದು ಕೇವಲ ಕಲ್ಪನೆಯ ಕಥೆಯೇ ವಿನಃ ಚರಿತ್ರೆಯಲ್ಲ. ಅಷ್ಟೇ ಅಲ್ಲದೆ, ಅವರು ಬಸವಣ್ಣನವರು ಮತ್ತು ಲಿಂಗಾಯತದ ಪರವಾದ ಅಭಿಪ್ರಾಯಗಳಿಗಾಗಿ ಸಿ.ಪಿ. ಬ್ರೌನ್ ಮತ್ತು ಪಾಶ್ಚಿಮಾತ್ಯ ವಿದ್ವಾಂಸರನ್ನು ದೂಷಿಸುತ್ತಾರೆ. ಸದಾಶಿವಯ್ಯನವರ ವಾದ ವ್ಯಾಖ್ಯಾನಕ್ಕೆ ಅರ್ಹವಾಗಿಲ್ಲ. ಏಕೆಂದರೆ, ಅದು ಕಾಲ್ಪನಿಕ ಪೌರಾಣಿಕ ಕಥೆಗಳನ್ನು ಆಧರಿಸಿದ್ದು, ವಸ್ತುನಿಷ್ಠ ಪರಿಶೀಲನೆಗೆ ಸಲ್ಲುವುದಿಲ್ಲ.

ವಾಸ್ತವವಾಗಿ, ಇಂದಿನ ವೀರಶೈವ ಪಂಚಾಚಾರ್ಯರು ಮತ್ತು ಈ ಸದಾಶಿವಯ್ಯನವರಂಥವರು ಸಾಮಾನ್ಯ ಜನರನ್ನು ಮೂರ್ಖರನ್ನಾಗಿಸಲು ಹೇಳಿದುದನ್ನೇ ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ. ಸದಾಶಿವಯ್ಯನವರ ಗ್ರಂಥದ ಶೀರ್ಷಿಕೆಯಲ್ಲಿರುವ 'ಎನ್ ಅನ್‌ರಿಟನ್ ಚಾಪ್ಟರ್ ಇನ್ ದಿ ರಿಲಿಜಿಯಸ್ ಹಿಸ್ಟರಿ ಆಫ್ ಇಂಡಿಯಾ' ಎನ್ನುವುದೇ ಭಾರತೀಯ ಚರಿತ್ರೆಯಲ್ಲಿ ವೀರಶೈವ ಧರ್ಮದ ಸ್ಥಾನವನ್ನು ತುಂಬ ಯುಕ್ತವಾಗಿ ವಿವರಿಸುತ್ತದೆ. ವೀರಶೈವವು ಒಂದು ಅಲಿಖಿತ ಅಧ್ಯಾಯವೇ!

ಸದಾಶಿವಯ್ಯನವರಂತಹ ಬಹುತೇಕ ವಿದ್ವಾಂಸರು, ಇದುವರೆಗೆ ವಸ್ತುನಿಷ್ಠ ನೆಲೆಯಲ್ಲಿ ಬರೆಯದಿರುವ ವೀರಶೈವ ಧರ್ಮದ ಇತಿಹಾಸದ ಬಗೆಗೆ ಬರೆಯುವ ಆಶಯ ಹೊಂದಿರುವುದೇನೋ ಸರಿ. ಆದರೆ ಅವರು ಈಚಿನ ಮೂಲಗಳಿಂದ ಪಡೆದ ಅತ್ಯಲ್ಪ ಮಾಹಿತಿಯ ಚೂರುಪಾರುಗಳನ್ನು ಜೋಡಿಸಲು ಪ್ರಯತ್ನಿಸಿದ್ದಾರೆ.

ವಿಮರ್ಶೆ

ವೀರಶೈವರ 'ಮಹಾ' ಪ್ರಾಚೀನತೆಯನ್ನು ಹೇಳುವ ಅನೇಕ ಗ್ರಂಥಗಳಲ್ಲಿ ಕೇವಲ ಐದಾರು ಗ್ರಂಥಗಳನ್ನು (ಪ್ರಾತಿನಿಧಿಕವಾಗಿ ಮಾತ್ರ ಇಲ್ಲಿ ಪರಾಮರ್ಶಿಸಲಾಗಿದೆ. ಇಲ್ಲಿ ವೀರಶೈವದ ನಂಬಿಕೆಯ ಪ್ರಾಚೀನತೆಯನ್ನು ಕುರಿತಂತೆ ವೀರಶೈವದ ವಾದದ ಕೆಲವೊಂದು ಸ್ಕೂಲ ಪ್ರವೃತ್ತಿ ಇರುವ ಗ್ರಂಥಗಳನ್ನು ಕೇವಲ ಉದಾಹರಣೆಗಾಗಿ ಆರಿಸಿಕೊಳ್ಳಲಾಗಿದೆ. ಈ ಪರಾಮರ್ಶೆಯಲ್ಲಿ ಗುರುತಿಸಲಾಗಿರುವ ಮೂರು ಸ್ಕೂಲ ಪ್ರವೃತ್ತಿಗಳನ್ನು ಈ ಮುಂದೆ ಸಾರಗೊಳಿಸಲಾಗಿದೆ :

೧. ಎಚ್.ಎಮ್. ಸದಾಶಿವಯ್ಯ, ಜ.ಚ.ನಿ., ಭಾಗಶಃ ಟಿ.ಎನ್. ಮಲ್ಲಪ್ಪ ಇವರುಗಳು ವೀರಶೈವದ ಬೇರುಗಳನ್ನು ಆಗಮಗಳು, ವೇದಗಳು ಮತ್ತು ಪುರಾಣಗಳಿಗೆ ಒಯ್ಯಲು ಪ್ರಯತ್ನಿಸುತ್ತಾರೆ. ಏಕೆಂದರೆ, ಅದರಿಂದ ವೀರಶೈವದ ಪ್ರಾಚೀನತೆಯನ್ನು ಯುಗಗಳು ಮತ್ತು ಯುಗಪ್ರವರ್ತಕಗಳಿಗೆ ಕೊಂಡೊಯ್ಯಬಹುದೆಂಬ ಭ್ರಮೆ ಅವರದ್ದು. ಹಾಗೆ ಮಾಡಹೋಗಿ, ವೀರಶೈವವನ್ನು ಶೈವರ, ವಸ್ತುತಃ ಹಿಂದೂಧರ್ಮದ ಒಂದು ಶಾಖೆಯನ್ನಾಗಿಸಿದ್ದಾರೆ. ಅವರು ವೀರಶೈವವನ್ನು ಪಾಶುಪತದ ಶಾಖೆಯಾಗಿ ಅಷ್ಟೇ ಅಲ್ಲ, ತಮಿಳು ಶೈವದ ಒಂದು ಕವಲಾಗಿಯೂ ಕಾಣುತ್ತಾರೆ. ಇಲ್ಲಿ ಒಂದು ಕಡೆ, ಎಲ್ಲ ಹಿಂದೂ ಧರ್ಮ ಗ್ರಂಥಗಳನ್ನೂ (ವೇದಗಳು, ಶಾಸ್ತ್ರಗಳು, ಪುರಾಣಗಳು ಮತ್ತು ಆಗಮಗಳು) ಶರಣರು ವಿರೋಧಿಸಿದ್ದಾರೆಂಬ ಮೂಲ ( ಅಂಶದ ಕಡೆ ಅವರು ಗಮನವನ್ನೇ ಕೊಟ್ಟಿಲ್ಲ. ಇನ್ನೊಂದು ಕಡೆ, ಶರಣ ಧರ್ಮವು ಪಾಶುಪತ್ಯ ಮತ್ತು ತಮಿಳು ಶೈವ ಪಂಥಗಳ ವಿರುದ್ಧ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆ ಪಂಥಗಳ ವಿರೋಧದಲ್ಲಿ ಅವರು ಯಾವುದೇ ಸಮಸ್ಯೆಯನ್ನು ಕಾಣುವುದಿಲ್ಲ. ಇದಕ್ಕೆ ಕಾರಣ. ಅವರಿಗೆ ವಚನ ಸಾಹಿತ್ಯದ ಬಗೆಗೆ ಸಾಕಷ್ಟು ಜ್ಞಾನವಿಲ್ಲದಿರುವುದು. ಇಲ್ಲವೇ ಉದ್ದೇಶಪೂರ್ವಕವಾಗಿ ಅಲಕ್ಷಿಸಿರುವುದು. ಹೀಗೆ ಶರಣರು ನಿರಾಕರಿಸಿದ ವೈದಿಕ, ಪೌರಾಣಿಕ ಮತ್ತು ಆಗಮಿಕ ಕೆಸರಿನತ್ತಲೇ ಓದುಗರನ್ನು ಕೊಂಡೊಯ್ಯುವ, ದಾರಿತಪ್ಪಿಸುವ ಕೆಲಸಮಾಡುತ್ತಿದ್ದಾರೆ. ಆದಾಗ್ಯೂ ಅವರು ಸಂದರ್ಭಕ್ಕೆ ಸೂಕ್ತವೆನಿಸಿದಾಗ ತಮ್ಮ ವಿಚಾರಗಳ ಬೆಂಬಲಕ್ಕಾಗಿ ಬಿಡಿ ವಚನಗಳನ್ನು ಉಲ್ಲೇಖಿಸುವುದನ್ನು ಮರೆಯುವುದಿಲ್ಲ.

೨. ಎರಡನೆಯ ಪ್ರವೃತ್ತಿಯನ್ನು ಡಾ. ಬಸವರಾಜು ಅವರ ವಾದಗಳಲ್ಲಿ ಕಾಣಬಹುದು. ಅವರೂ ಸಹ ವೀರಶೈವವನ್ನು ಪಾಶುಪತ್ಯ ಮತ್ತು ತಮಿಳು ಶೈವ ಪಂಥಗಳಲ್ಲಿ ಬೆರೆಸುತ್ತಾರೆ. ಆದರೆ. ಪ್ರಾಸಂಗಿಕವಾಗಿ ವಿನಃ, ಅವರು ವೇದಗಳು ಅಥವಾ ಆಗಮಗಳನ್ನು ಅಷ್ಟಾಗಿ ಪ್ರಸ್ತಾಪಿಸುವುದಿಲ್ಲ. ಬಸವಣ್ಣನವರ ನಂತರ, ಎಂದರೆ ೧೫ನೆಯ ಶತಮಾನದ ನಂತರದ ಶತಮಾನಗಳಲ್ಲಿ ಸೃಷ್ಟಿಯಾದ ಸಾಹಿತ್ಯವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಶರಣರ ಚಿಂತನೆಗಳು ಮತ್ತು ಪಾಶುಪತ್ಯ ಹಾಗೂ ತಮಿಳು ಶೈವ ಇವುಗಳ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ವಿವರಿಸುವಲ್ಲಿ ಡಾ. ಬಸವರಾಜು ಅವರೂ ವಿಫಲರಾಗಿದ್ದಾರೆ. ಏಕೆಂದರೆ, ಪಂಚಾಚಾರ್ಯರನ್ನು ಕುರಿತಿರುವ ಹದಿನೈದು ಪುರಾಣಗಳ ಹೊರತಾಗಿ, ಉಳಿದ ಬಹುತೇಕ ಗ್ರಂಥಗಳ ವೀರಶೈವ ಗ್ರಂಥಕರ್ತರು ಏಕರೂಪವಾಗಿ, ಬಸವಣ್ಣನವರು ಮತ್ತು ಇತರ ಶರಣರು ಅಥವಾ ಅವರ ವಚನಗಳನ್ನು ತಮ್ಮ ಗ್ರಂಥಗಳಲ್ಲಿ ತರದೆ ಬಿಟ್ಟಿಲ್ಲ. ವಚನ ಮತ್ತು ಬಸವಣ್ಣನ ವಿಚಾರಗಳನ್ನೇ ಆಧಾರವಾಗಿ ಬಳಸಿಕೊಂಡಿದ್ದಾರೆ.

ಡಾ. ಬಸವರಾಜು ಅವರು ಶರಣ ಧರ್ಮ ಮತ್ತು ವೀರಶೈವ ಎರಡೂ ಒಂದೇ ಎಂದು ತಿಳಿದಿರುವಂತೆ ಕಾಣುತ್ತದೆ. ಅವರು ತಮ್ಮ ನಿರೂಪಣೆಗೆ ಬೆಂಬಲವಾಗುವಂತೆ ಕಾಣುವ ಕೆಲವು ಅಪರೂಪದ ವಚನಗಳನ್ನು ಮಾತ್ರ ಉಲ್ಲೇಖಿಸುತ್ತಾರೆ. ಕುಂದೂರು ಮಠದ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ವಚನಗಳಲ್ಲಿ ೬೪೮ ಸಂಸ್ಕೃತ ಶ್ಲೋಕಗಳನ್ನು ಗುರುತಿಸಿದ್ದಾರೆ. (ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು “ವಚನಗಳಲ್ಲಿ ಸಂಸ್ಕೃತ ಶ್ಲೋಕಗಳು” ಎಂಬ ಶೀರ್ಷಿಕೆಯಲ್ಲಿ ಆ ಗ್ರಂಥವನ್ನೇ (೨೦೦೦) ಪ್ರಕಟಿಸಿದೆ) ಆ ಶ್ಲೋಕಗಳನ್ನು ವಚನಗಳಲ್ಲಿ ಸೇರಿಸದಿದ್ದರೂ ಅಥವಾ ಕೈಬಿಟ್ಟರೂ ವಚನಗಳ ಅರ್ಥದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಬಹಳ ಜನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಪ್ರಯೋಗಕ್ಕೆ ತಂದು, ಅದೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಕೃತ ಶ್ಲೋಕಗಳನ್ನು ಕೈಬಿಟ್ಟು 'ಪರ್ಯಾಯ ಸಂಸ್ಕೃತಿಯ ವಚನಗಳು' ಶೀರ್ಷಿಕೆಯಲ್ಲಿ ಒಂದು ಸಂಗ್ರಹವನ್ನೇ ಪ್ರಕಟಿಸಿದೆ.

ವಚನಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಸೇರಿಸುವ ಕೆಲಸ ೧೫ನೆಯ ಶತಮಾನದ ನಂತರ ವೀರಶೈವ ಸಂಪಾದಕರಿಂದ ನಡೆಯಿತೆಂದು ದೃಢವಾಗಿ ನಂಬಲಾಗಿದೆ. ಆದೇನಿದ್ದರೂ ಇಲ್ಲಿ ಪ್ರಸ್ತುತವಾದ ಅಂಶವೆಂದರೆ, ಆ ನಂತರದ ವೀರಶೈವ ಗ್ರಂಥಗಳು ವೀರಶೈವ ಧರ್ಮದ ಪ್ರಾಚೀನತೆಗೆ ಸಾಕ್ಷಾಧಾರವಾಗುವುದು ಸಾಧ್ಯವಿಲ್ಲ ಎನ್ನುವುದು. ಏಕೆಂದರೆ, ಇವೆಲ್ಲವೂ ಹೇಗಾದರೂ ಮಾಡಿ ವೀರಶೈವದ ಚರಿತ್ರೆಯನ್ನು ೧೨ನೆಯ ಶತಮಾನದ ಹಿಂದಕ್ಕೆ, ಅದರಲ್ಲೂ ವೇದ ಮತ್ತು ಆಗಮಗಳ ಕಾಲಕ್ಕೆ, ಒಯ್ಯಬೇಕೆಂದು ಪ್ರಯತ್ನಿಸಿವೆ.

೩. ಮೂರನೆಯ ಪ್ರವೃತ್ತಿ ಎಂದರೆ, ಉದ್ದೇಶಪೂರ್ವಕವಾಗಿ ಕೇವಲ ಪ್ರಚಾರಕರಂತೆ ಬರೆಯುವ ಡಾ. ಸವದತ್ತಿ ಮಠ ಅವರಂತಹ ಲೇಖಕರದ್ದು. ಅವರು ಮತ್ತು ಅವರಂಥವರ ವಾದಗಳು ಅರೆಸತ್ಯಗಳಾಗಿವೆ; ಅತಿರೇಕಗಳಾಗಿವೆ ಮತ್ತು ಅವರ ಪ್ರತಿಯೊಂದು ವಿಚಾರವೂ ತರ್ಕಬದ್ಧತೆ ಮತ್ತು ಪ್ರಾಮಾಣಿಕತೆಗಳ ದೃಷ್ಟಿಯಿಂದ ಪ್ರಶ್ನಾರ್ಹವಾಗಿವೆ. ಅವರು ವೀರಶೈವದೊಡನೆ ಸಾಮಾನ್ಯ ಶೈವವನ್ನು ಬೆರೆಸುತ್ತಾರೆ. ಜೊತೆಗೆ ತಮಿಳು ಭಕ್ತಿಪಂಥವನ್ನು ತರುತ್ತಾರೆ. ವೈದಿಕ ರುದ್ರನನ್ನು, ಪೌರಾಣಿಕ ವೀರಭದ್ರನನ್ನು ಎಳೆತರುತ್ತಾರೆ. ಶೈವಪುರಾಣಗಳಿಂದ ಉಲ್ಲೇಖಿಸಿ ಪ್ರಣವ ಓಂಕಾರವನ್ನು ಬರಮಾಡಿಕೊಳ್ಳುತ್ತಾರೆ.

೧೮೭೦ ರಿಂದ ೧೯೫೦ರ ವರೆಗಿನ ಪಿ.ಆರ್. ಕರಿಬಸವಶಾಸ್ತ್ರಿ, ವೀರಸಂಗಪ್ಪ, ಕಾಶೀನಾಥಶಾಸ್ತ್ರಿ, ಚಂದ್ರಶೇಖರಶಾಸ್ತ್ರಿ ಮತ್ತು ಕಾಶೀ ಪೀಠದ ಮುಖ್ಯಸ್ಥರಂತಹ ಗ್ರಂಥಕರ್ತರು ರಚಿಸಿದ ವೀರಶೈವ ಗ್ರಂಥಗಳು ಖೋಟಾ ಸೃಷ್ಟಿಯನ್ನು ಮಾಡಿವೆ. ಅವರ ಎಲ್ಲ ಉಲ್ಲೇಖಗಳ ವಿಶ್ಲೇಷಣೆಯೂ ಸುಳ್ಳುಗಳಿಂದ ತುಂಬಿಕೊಂಡಿದೆ. ಅವರು ವಾಸ್ತವ ಸಂದರ್ಭ ಸನ್ನಿವೇಶಗಳ ಯಾವುದೇ ಪ್ರಸ್ತಾಪವನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಾರೆ. ಅಂತಹ ಪ್ರಚಾರೋದ್ದೇಶದ ಪುಸ್ತಕಗಳಿಗೆ ಸಾರ್ವಜನಿಕರು ಹೆಚ್ಚು ಪ್ರಾಯುಖ್ಯತೆ ಕೊಡಬೇಕಾಗಿಲ್ಲ.

೪. ಮೇಲೆ ಚರ್ಚಿಸಲಾಗಿರುವ ಮೂರು ಪ್ರವೃತ್ತಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಅಂಶವೆಂದರೆ, ಪಾಶುಪತ್ಯ, ತಮಿಳು ಶೈವ ಮತ್ತು ಶರಣ ಧರ್ಮ ಇವುಗಳನ್ನು ಬಿಟ್ಟರೆ ವೀರಶೈವ ಧರ್ಮದ ಅಸ್ತಿತ್ವವೇ ಸಾಧ್ಯವಾಗುವುದಿಲ್ಲ ಎನ್ನುವುದು ಹಾಗೂ ವೀರಶೈವ ಧರ್ಮವು ಒಂದು ಪ್ರತ್ಯೇಕ ಧರ್ಮವೂ ಅಲ್ಲ; ಸ್ವತಂತ್ರ ಧಾರ್ಮಿಕ ವ್ಯವಸ್ಥೆಯೂ ಅಲ್ಲ ಎನ್ನುವುದು. ಅದು ಹನ್ನೆರಡನೆಯ ಶತಮಾನದ ಶರಣಧರ್ಮವನ್ನು ಮತ್ತು ಕ್ರಿಶ. ಎರಡನೆಯ ಶತಮಾನದ ಪಾಶುಪತ್ಯ ಮತ್ತು ಏಳರಿಂದ ಹನ್ನೆರಡನೆಯ ಶತಮಾನಗಳ ಭಕ್ತಿಶ್ರದ್ಧೆಯ ತಮಿಳು ಶೈವವನ್ನು ತನ್ನಲ್ಲಿ ಹೆಣೆದುಕೊಂಡಿದೆ. ಹಾಗಾಗಿ ಅದರ ಪ್ರಾಚೀನತೆ ೧೨ನೆಯ ಶತಮಾನದ ನಂತರಕ್ಕಿಂತ ಹಿಂದಿನದಾಗಲು ಸಾಧ್ಯವಿಲ್ಲ.

೫. ವೀರಶೈವವನ್ನು ಹೆಚ್ಚೆಂದರೆ, ಅದರ ದ್ವೈತ ನಿಲುವಿನಲ್ಲಿ ಪಾಶುಪತ್ಯದ ಒಂದು ಶಾಖೆಯಾಗಿ ಪರಿಗಣಿಸಬಹುದು. ಅದರ ವಿಗ್ರಹಾರಾಧನೆಯ ಪ್ರಾಶಸ್ತ್ರ ಮತ್ತು ಶಿವನ ಬಳಿಗೆ ಹೋಗುವ ನಾಲ್ಕು ಹಂತಗಳ ದೃಷ್ಟಿಯಲ್ಲಿ ಅದನ್ನು ತಮಿಳು ಶೈವದ ಒಂದು ಕವಲಾಗಿಯೂ ನೋಡಬಹುದು. ಹಾಗೆಯೇ ಅಷ್ಟಾವರಣ, ಇಷ್ಟಲಿಂಗ ಮತ್ತು ಷಟ್‌ಸ್ಥಲ ಸಿದ್ಧಾಂತಗಳನ್ನು ಶರಣಧರ್ಮ ಅಥವಾ ಲಿಂಗಾಯತ ಧರ್ಮದಿಂದ ಎರವಲು ಪಡೆದಿರುವುದರಿಂದ ಅದು ಲಿಂಗಾಯತ ಧರ್ಮದ ಒಂದು ಶಾಖೆಯೂ ಆಗಬಹುದು. ವೀರಶೈವವು ಪಾಶುಪತ್ಯ ಮತ್ತು ತಮಿಳು ಶೈವಪಂಥಗಳನ್ನು ಅಂಗೀಕರಿಸಿರುವುದರಿಂದ ಅದು ಹಿಂದೂ ಧರ್ಮ ಅಥವಾ ವೈದಿಕ ಧರ್ಮದ ಒಂದು ಪಂಥವೇ ಆಗಿದೆ. ಅದೇ ಲಿಂಗಾಯತ ಧರ್ಮವು ಪಾಶುಪತ್ಯದ ದ್ವೈತ ಸಿದ್ಧಾಂತ ಮತ್ತು ವಿಗ್ರಹಾರಾಧನೆ ಹಾಗೂ ತಮಿಳು ಶೈವರ ನಾಲ್ಕು ಮಾರ್ಗಗಳನ್ನು ನಿರಾಕರಿಸುವುದರಿಂದ ಅದು ೧೨ನೆಯ ಶತಮಾನದ ಶರಣಕ್ರಾಂತಿಯಿಂದ ಹುಟ್ಟಿದ ಒಂದು ಪ್ರತ್ಯೇಕ ಮತ್ತು ಸ್ವತಂತ್ರ ಧರ್ಮವೆನ್ನುವುದು ಸ್ಪಷ್ಟವಾಗುತ್ತದೆ.

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವಿಶ್ಲೇಷಣೆ -ವೀರಶೈವ ಧರ್ಮ ಸತ್ಯವನ್ನು ಒಪ್ಪಿಕೊಳ್ಳದ ಭಂಡತನ Next