ಸತ್ಯವನ್ನು ಒಪ್ಪಿಕೊಳ್ಳದ ಭಂಡತನ | ವೀರಶೈವದ ಪ್ರಾಚೀನತೆ ಇತರ ಕೆಲವು ವಾದಗಳು |
ವಚನಗಳ ಆವಿಷ್ಕಾರದ ಪ್ರಭಾವ |
ಡಾ. ಎಸ್. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)
ಲಿಂಗಾಯತ ಸಮುದಾಯದ ಮೇಲೆ ಆಗಿರುವ ವಚನಗಳು ಮತ್ತು ಶರಣರ ಪ್ರಭಾವ ಅತ್ಯಂತ ಮಹತ್ವಪೂರ್ಣವಾದದ್ದು. ಅವರ ಶಾಖೋಪಶಾಖೆಗಳು ಅನೇಕವಿರಬಹುದು. ಆದರೆ ಅವರೆಲ್ಲರನ್ನೂ ಒಂದು ಭಾವಬಂಧನದಲ್ಲಿ ಒಂದುಗೂಡಿಸಿರುವ ಒಂದ ಮಹಾ ಚೇತನವೆಂದರೆ, ಎಲ್ಲ ಕಾಲಕ್ಕೂ ಸಲ್ಲುವ ಬಸವಣ್ಣನವರ ವಿಚಾರಧಾರೆ!
ವಚನಗಳ ಶೋಧದಿಂದ ೧೯೨೦ ರಿಂದ ಲಿಂಗಾಯತ ಸಮುದಾಯದ ಮೇಲೆ ಕಳೆದ ಎಂಟು ದಶಕಗಳಲ್ಲಿ ಆಗಿರುವ ಪ್ರಮುಖ ಬೆಳವಣಿಗೆಗಳು ಕೆಳಗೆ ಕಂಡಂತಿವೆ :
೧. ಡಾ. ಎಲ್. ಬಸವರಾಜು ಮತ್ತು ಡಾ. ಸಂಗಮೇಶ ಸದವತ್ತಿಮಠ ಅವರು ಉಲ್ಲೇಖಿಸಿರುವ ವೀರಶೈವ ಬರಹಗಾರರು ಸೃಷ್ಟಿಸಿದ ಹುಸಿಕಲ್ಪನೆಗಳನ್ನು ವಿದ್ವಾಂಸರು, ವಿಚಾರವಂತರು, ಲಿಂಗಾಯತ ಮಠಗಳು ಮತ್ತು ಜನಸಮುದಾಯ ಅರ್ಥಮಾಡಿಕೊಳ್ಳತೊಡಗಿವೆ. ಇದರಿಂದ ೧೯೮೦ ರಿಂದ ವಿದ್ವಾಂಸರು 'ವೀರಶೈವ'ಕ್ಕೆ ಬದಲಾಗಿ 'ಲಿಂಗಾಯತ' ಪದದ ಯಥೇಚ್ಛ ಬಳಕೆಗೆ ದಾರಿಯಾಯಿತು.
೨. ವಚನ ಸಾಹಿತ್ಯದ ಸಂಶೋಧನೆ ಮತ್ತು ಪ್ರಸರಣ ಈಗ ಶರವೇಗದಲ್ಲಿ ಬೆಳೆದಿವೆ. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತುಸಾವಿರಕ್ಕೂ ಹೆಚ್ಚು ಗ್ರಂಥಗಳು ಮತ್ತು ೫೦ ನಿಯತಕಾಲಿಕೆಗಳು ಪ್ರಸಾರದಲ್ಲಿವೆ. ಇದೇ ಸಮಯದಲ್ಲಿ ಹಿಂದಿನ ಶತಮಾನಗಳ ವೀರಶೈವ ಸಾಹಿತ್ಯವು ಗತಪ್ರಾಯವಾಗಿ ಮುಚ್ಚಿಹೋಗಿದೆ.
೩. ಬಹುತೇಕ ಸೇವಾ ಸಂಸ್ಥೆಗಳು ವೀರಶೈವ ಬೋರ್ಡಿಂಗ್, ವೀರಶೈವ ಹೋಟೆಲ್, ವೀರಶೈವ ಬ್ಯಾಂಕ್, ವೀರಶೈವ ಸಂಶೋಧನ ಸಂಸ್ಥೆ ಇತ್ಯಾದಿಗಳ ಹೆಸರನ್ನು ಬದಲಾಯಿಸಿ, ಲಿಂಗಾಯತ ಬೋರ್ಡಿಂಗ್, ಲಿಂಗಾಯತ ಎಜುಕೇಶನ್ ಸೊಸೈಟಿ, ಲಿಂಗಾಯತ ಹೋಟೆಲ್, ಬಸವೇಶ್ವರ ಬ್ಯಾಂಕ್, ಬಸವೇಶ್ವರ ಶಾಲೆ ಇತ್ಯಾದಿಯಾಗಿ ಪುನರ್ನಾಮಕರಣಗೊಂಡಿವೆ.
೪. ಉತ್ತರ ಮತ್ತು ಮಧ್ಯ ಕರ್ನಾಟಕದ ಶೇ.೯೦ ಭಾಗದಷ್ಟು ಜನರಿಗೆ ಲಿಂಗಾಯತದ ಅರಿವು ಮತ್ತು ಬಳಕೆ ಇದ್ದಂತೆ ವೀರಶೈವದ ಬಗೆಗಿಲ್ಲ.
೫. ೧೯೬೫ ರಿಂದ ಈಚೆಗೆ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಹುಮಟ್ಟಿನ ದೊಡ್ಡ ಗ್ರಾಮ, ಪಟ್ಟಣ ಮತ್ತು ನಗರಗಳ ಕೇಂದ್ರ ಸ್ಥಳಗಳಲ್ಲಿ ಸುಮಾರು ೩೦೦೦ಕ್ಕೂ ಹೆಚ್ಚು ಅಶ್ವಾರೋಹಿ ಬಸವಣ್ಣನವರ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.
೬. ಗದಗ ನಗರ ಮತ್ತು ಬಸವಕಲ್ಯಾಣದಲ್ಲಿ ೧೦೦ ಅಡಿ ಎತ್ತರದ ಬಸವಣ್ಣನವರ ಬೃಹತ್ ಪ್ರತಿಮೆಗಳು ಸ್ಥಾಪನೆಯಾಗಿದ್ದು, ಅವುಗಳ ಎರಡರಷ್ಟು ಎತ್ತರದ ಪುತ್ಥಳಿಯೊಂದನ್ನು ಈಗ ಚಿತ್ರದುರ್ಗದಲ್ಲಿ ಸ್ಥಾಪಿಸಲಾಗುತ್ತಿದೆ.
೭. ಬಸವಣ್ಣನವರು ಪ್ರಜಾಸತ್ತಾತ್ಮಕ ಸಾಮಾಜಿಕ ವ್ಯವಸ್ಥೆಯ ಪ್ರವರ್ತಕನೆಂದು ಪರಿಗಣಿಸಿ, ಭಾರತ ಸರ್ಕಾರವು ದೆಹಲಿಯಲ್ಲಿರುವ ಸಂಸದ್ ಭವನದ ಆವರಣದಲ್ಲಿ ಅಶ್ವಾರೂಢ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದೆ.
೮. ಬಸವಣ್ಣನವರ ಎದೆಯಳತೆಯ ಪ್ರತಿಮೆಯನ್ನು ಬ್ರಿಟಿಷ್ ಸರ್ಕಾರದ ಅನುಮತಿಯಿಂದ ಲಂಡನ್ನಿನ ಲ್ಯಾಂಬೆತ್ ಬರೋದಲ್ಲಿ ಥೇಮ್ಸ್ ನದಿಯ ದಂಡೆಯಲ್ಲಿ ಸ್ಥಾಪಿಸಲಾಗಿದೆ. ಅದನ್ನು ಭಾರತದ ಪ್ರಧಾನಿಗಳೇ ಅನಾವರಣಗೊಳಿಸಿದ್ದಾರೆ.
೯. ಕರ್ನಾಟಕ, ಗುಲಬರ್ಗಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಬಸವತತ್ತ್ವಜ್ಞಾನ ಮತ್ತು ವಚನ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ.
೧೦. ೧೯೬೮ರಲ್ಲಿ ಕರ್ನಾಟಕ ಸರ್ಕಾರವು ಬಸವಣ್ಣನವರ ೮೦೦ನೆಯ ಜನ್ಮ ದಿನೋತ್ಸವವನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ಆಚರಿಸಿದೆ. ಆ ಆಚರಣೆ ಲಿಂಗಾಯತ ಧರ್ಮದ ಬಗೆಗೆ ಸಾರ್ವಜನಿಕ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. (ಆರ್.ಸಿ. ಹಿರೇಮಠ-೧೯೬೮)
೧೧. ೧೯೧೩ ರಿಂದ ಪ್ರತಿವರ್ಷ (ವೈಶಾಖ ಶುದ್ಧ ಅಕ್ಷಯ ತೃತೀಯದ ದಿನ) ಬಸವಣ್ಣನವರ ಜನ್ಮಜಯಂತಿಯನ್ನು ಆಚರಿಸಿಕೊಂಡು ಬಂದಿದ್ದು ೨೦೧೩ರಲ್ಲಿ ಅದರ ಶತಮಾನೋತ್ಸವದ ಸಂದರ್ಭವನ್ನು ಶರಣರ ವಿಚಾರಧಾರೆ ಮತ್ತು ಜೀವನ ಸಂಸ್ಕೃತಿಗಳ ಬಗೆಗೆ ಹೆಚ್ಚಿನ ಜಾಗೃತಿಗೆ ಬಳಸಿಕೊಳ್ಳಲಾಗಿದೆ.
೧೨. ಈಗ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಬಸವ ಜಯಂತಿಯನ್ನು ಅಧಿಕೃತವಾಗಿ ಆಚರಿಸುತ್ತಿದ್ದು, 'ಬಸವ ಜಯಂತಿ' ದಿನವನ್ನು ಸಾರ್ವತ್ರಿಕ ರಜಾ ದಿನವನ್ನಾಗಿ ೨೦೦೨ ರಿಂದ ಘೋಷಿಸಿವೆ.
೧೩. ಸಾರ್ವಕಾಲಿಕ ಮೌಲ್ಯವುಳ್ಳ ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಸಾರಕ್ಕೆ ಮೀಸಲಾದ ಅಖಿಲ ಭಾರತ ವ್ಯಾಪ್ತಿಯ ಶರಣ ಸಾಹಿತ್ಯ ಪರಿಷತ್ತು ಕಳೆದ ಮೂರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದೆ.
೧೪. ಲಿಂಗಾಯತ ಧರ್ಮದ ಮತ್ತು ಬಸವ ತತ್ತ್ವಜ್ಞಾನದ ಜಾಗತಿಕ ಅನ್ವಯವನ್ನು, ಅವುಗಳ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಸ್ವರೂಪದ ಪ್ರಸ್ತುತತೆ ಮತ್ತು ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡು ಕರ್ನಾಟಕ ಸರ್ಕಾರವು ಇದುವರೆಗೆ ಶೋಧಗೊಂಡಿರುವ ೧೨ನೆಯ ಶತಮಾನದ ಎಲ್ಲ ವಚನಗಳನ್ನು (ಸುಮಾರು ೨೧೦೦೦ಕ್ಕೂ ಹೆಚ್ಚು ಮೊದಲ ಬಾರಿಗೆ ೧೪ ಬೃಹತ್ ಸಂಪುಟಗಳಲ್ಲಿ ೧೯೮೩ರಲ್ಲಿ ಪ್ರಕಟಿಸಿದೆ. ಆ ಸಂಪುಟಗಳ ಬೇಡಿಕೆಯನ್ನು ಗಮನಿಸಿ ೨೦೧೧ ಮತ್ತು ೨೦೦೧೬ರಲ್ಲಿ ಕ್ರಮವಾಗಿ ಎರಡು-ಮೂರನೆಯ ಆವೃತ್ತಿಗಳನ್ನು ಪ್ರಕಟಿಸಲಾಗಿದೆ.
೧೫. ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾದವರ ಬೇಡಿಕೆಯನ್ನು ಮನ್ನಿಸಿ, ಭಾರತ ಸರ್ಕಾರವು ಬಸವಣ್ಣನವರ ಸ್ಮರಣಾರ್ಥ ೫ ರೂ. ಮೌಲ್ಯದ ಬೆಳ್ಳಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ೨೦೦೬ರಲ್ಲಿ ಬಿಡುಗಡೆ ಮಾಡಿದೆ.
೧೬. ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಎಲ್ಲ ಸಾರ್ವಜನಿಕ ಕಛೇರಿಗಳಲ್ಲೂ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ೨೦೧೭ರಲ್ಲಿ ಆದೇಶ ನೀಡಿವೆ. ಅದರಂತೆ ಆ ಆದೇಶ ಅನುಷ್ಠಾನಕ್ಕೆ ಬಂದಿದೆ.
೧೭. ಬಸವಣ್ಣನವರ ವಿಚಾರಧಾರೆಯ ಪ್ರಸಾರ ಮತ್ತು ರಚನಾತ್ಮಕ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಒಬ್ಬ ವ್ಯಕ್ತಿಗೆ ಪ್ರತಿವರ್ಷ ಕರ್ನಾಟಕ ಸರ್ಕಾರವು ಹತ್ತು ಲಕ್ಷ ರೂ.ಗಳ ಗೌರವಧನದೊಂದಿಗೆ 'ಬಸವ ರಾಷ್ಟ್ರೀಯ ಪುರಸ್ಕಾರ'ವನ್ನು ೨೦೦೪ ರಿಂದ ನೀಡುತ್ತಿದೆ. (ಈ ಗೌರವಧನದ ಮೊತ್ತ ಸುಪ್ರಸಿದ್ಧ ಜ್ಞಾನಪೀಠ ಪ್ರಶಸ್ತಿಯ ಮೊತ್ತಕ್ಕಿಂತಲೂ ಹೆಚ್ಚು.)
೧೮. ಬಸವಣ್ಣನವರ ತತ್ತ್ವಜ್ಞಾನ ಪ್ರಸಾರ ಮತ್ತು ಸಮಾಜ ಸೇವೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಅನೇಕ ಲಿಂಗಾಯತ ಮಠಗಳು ಮತ್ತು ಸೇವಾ ಸಂಸ್ಥೆಗಳು ಬಸವಣ್ಣನವರ ಹೆಸರಿನ ಪ್ರಶಸ್ತಿ ನೀಡುತ್ತಿವೆ. ಉದಾಹರಣೆಗೆ : (ಗದಗ ತೋಂಟದಾರ್ಯ ಮಠ, ಚಿತ್ರದುರ್ಗದ ಮುರುಘಾ ಮಠ, ಅಥಣಿಯ ಮೋಟಗಿ ಮಠ, ಭಾಲ್ಕಿಯ ಹಿರೇಮಠ)
೧೯. ವಿಶ್ವದಲ್ಲೇ ವಿಶಿಷ್ಟವೆನಿಸಿದ ಧಾರ್ಮಿಕ ಸಂಸತ್ತು ಎಂದೇ ಹೆಸರಾಗಿರುವ ೧೨ನೆಯ ಶತಮಾನದ 'ಅನುಭವ ಮಂಟಪ'ದ ಮಾದರಿಯಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವೆನಿಸುವಂತೆ ಬಸವಕಲ್ಯಾಣದಲ್ಲಿ 'ನೂತನ ಅನುಭವ ಮಂಟಪ' ನಿರ್ಮಾಣ ಯೋಜನೆಯನ್ನು (೬೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ) ಕರ್ನಾಟಕ ಸರ್ಕಾರ ಕೈಗೊಂಡಿದೆ.
೨೦. ಬಸವಣ್ಣನವರ ವಿಚಾರಧಾರೆಯ ಪ್ರಚಾರಕ್ಕೆ ಮೀಸಲಾದ 'ಬಸವ ಸಮಿತಿ'ಯು ಜಾಗತಿಕಮಟ್ಟದಲ್ಲಿ ಕೆಲಸಮಾಡುತ್ತಿದೆ. ಮತ್ತು ನಾಲ್ಕು ಭಾಷೆಗಳಲ್ಲಿ ಮಾಸಿಕ ಪತ್ರಿಕೆ “ಬಸವ ಪಥ”, “ಬಸವ ಜರ್ನಲ್ ಪ್ರಕಟಿಸುತ್ತಿದೆ.
ಮೇಲ್ಕಂಡ ಮತ್ತು ಇನ್ನೂ ಕೆಲವು ಬೆಳವಣಿಗೆಗಳು ಆಗಲು ಬಸವ ಭಕ್ತರಾದ ಲಿಂಗಾಯತರ ಸಂಘಟಿತ ಪ್ರಯತ್ನಗಳೇ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ.
ಇನ್ನು ಲಿಂಗಾಯತ ಚಳವಳಿಗೆ ಸಂಬಂಧಿಸಿದಂತೆ, ವಿಶೇಷವಾಗಿ ಲಿಂಗಾಯತ ಸಮುದಾಯಕ್ಕೆ ತಿಳಿಸಬೇಕಾದ ಕೆಲವು ಮುಖ್ಯ ಸಂಗತಿಗಳು :
೧. ೧೯೦೪ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಕೈಗೊಂಡಿದ್ದ ನಿರ್ಣಯವನ್ನು ರದ್ದುಮಾಡಬೇಕೆಂದು ಬ್ಯಾರಿಸ್ಟರ್ ಎಂ.ಎನ್. ಸರ್ದಾರ್ ಅವರ ಅಧ್ಯಕ್ಷತೆಯಲ್ಲಿ ೧೯೪೦ರಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಹಳವಾಗಿ ಪ್ರಯತ್ನಿಸಿದರೂ ವೀರಶೈವವಾದಿ ಶಕ್ತಿಗಳು ಅದಕ್ಕೆ ಅವಕಾಶಕೊಡಲಿಲ್ಲ.
೨. ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ೯ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ೫ ಅವಧಿಗಳ ಕಲುಪತಿಗಳಾಗಿದ್ದ ಮತ್ತು ನಂತರ ಪಂಜಾಬಿನ ರಾಜ್ಯಪಾಲರಾಗಿದ್ದ ಡಾ. ಡಿ.ಸಿ. ಪಾವಟೆ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ (೨೩.೧೨.೧೯೭೩) ಬರೆದಿದ್ದ ಲೇಖನದಲ್ಲಿ 'ಬದಲಾವಣೆಯನ್ನು ವಿರೋಧಿಸುತ್ತಿರುವ ವೀರಶೈವರ ಉದ್ವಿಗ್ನ ಮನೋಭಾವ ಮತ್ತು ಹುಚ್ಚು ಧೈರ್ಯ'ವನ್ನು ಬಲವಾಗಿ ಖಂಡಿಸಿದ್ದರು.
೩. ೧೯೭೦ ರಿಂದ ಈಚೆಗೆ ತನ್ನ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನದ ಮನ್ನಣೆ ನೀಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭೆಯು ಕೇಂದ್ರ ಸರ್ಕಾರದಲ್ಲಿ ಮನವಿ ಮಾಡಿಕೊಳ್ಳುತ್ತಾ ಬಂದಿದೆ. ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಾಂಕಿತವನ್ನು ಬದಲಾಯಿಸಿದಾಗ, ಮಹಾಸಭೆಯು ಅದರ ವಿರುದ್ಧ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು.
೪. ಅಖಿಲ ಭಾರತ ಮಹಾಸಭೆಯು ಲಿಂಗಾಯತವು ಹಿಂದೂ ಧರ್ಮದ ಭಾಗ ಅಥವಾ ಒಂದು ಪಂಥವಲ್ಲವೆಂದು ಸ್ಪಷ್ಟವಾಗಿ ಹೇಳುತ್ತದೆ. ಅದರ ವೆಬ್‌ಸೈಟಿನಲ್ಲಿ ಈ ಧರ್ಮದ ಸ್ಥಾಪಕ ಬಸವಣ್ಣನವರು ಎಂದೂ ಹೇಳುತ್ತದೆ. ✿
ಈ ನಿಬಂಧದಲ್ಲಿ ಚರ್ಚಿಸಲಾಗಿರುವ ಗ್ರಂಥಗಳು ಮೊದಲೇ ಹೇಳಿರುವಂತೆ, ವೀರಶೈವವು ಬಸವಣ್ಣನವರಿಗಿಂತ ಹಿಂದೆ ಆಸ್ತಿತ್ವದಲ್ಲಿತ್ತು ಎಂಬುದನ್ನು ಸಾಧಿಸಲು ಪ್ರಯತ್ನಿಸಿವೆ. ಆದರೆ ವಿಶ್ವಾಸಾರ್ಹ ಆಧಾರಗಳಿಲ್ಲದೆ ವಿಕಾರಗೊಂಡಿವೆ. ಅರ್ಧಸತ್ಯಗಳ ಮೇಲೆ ಒತ್ತುಕೊಟ್ಟು ಸಾರ್ವಜನಿಕರ ದಿಕ್ಕು ತಪ್ಪಿಸುತ್ತವೆ.
ಡಾ. ಬಸವರಾಜು ಅವರು ವೀರಶೈವ ಪ್ರಾಚೀನತೆಯನ್ನು ೧೨ನೆಯ ಶತಮಾನಕ್ಕಿಂತ ಹಿಂದಕ್ಕೆ ಒಯ್ಯುವ ಸಲುವಾಗಿ, ವೀರಶೈವದೊಡನೆ ಪಾಶುಪತ ಮತ್ತು ಕಾಳಾಮುಖ ಪಂಥಗಳನ್ನು ಸಂಬಂಧಿಸಲು ಪ್ರಯತ್ನಿಸಿದ್ದಾರೆ. ಅವರ ಇಡೀ ನಿರೂಪಣೆ ಮತ್ತು ವಾದಗಳು ಆಂತರಿಕ ವಿರೋಧಗಳಿಂದಾಗಿ ಸೊರಗಿಬಿಟ್ಟಿವೆ. ಆದರೆ, ಅವರ ಪ್ರಯತ್ನ ವೀರಶೈವವು ಪಾಶುಪತ ಅಥವಾ ಕಾಳಾಮುಖದ ಶಾಖೆಯಾಗದೆ ಅದೊಂದು ಸ್ವತಂತ್ರ ಪಂಥ ಎನ್ನುವ ಮೂಲಭೂತ ಅಂಶವನ್ನು ಸಾಧಿಸುವುದೇ ಇಲ್ಲ. ಡಾ. ಬಸವರಾಜು ಅವರು, ಒಂದು ಕಡೆ ೧೨ನೆಯ ಶತಮಾನದಲ್ಲಿ ವೀರಶೈವವು ಅಸ್ತಿತ್ವದಲ್ಲೇ ಇರಲಿಲ್ಲ ಎನ್ನುತ್ತಾರೆ; ಮತ್ತೊಂದು ಕಡೆ ಅಸ್ತಿತ್ವದಲ್ಲಿತ್ತು ಎನ್ನುತ್ತಾರೆ. ತಮಿಳು ಪುರಾತನರ ಬಗೆಗಿನ ಅವರ ಪ್ರತಿಪಾದನೆಯು ಚರಿತ್ರೆಯ ಬಗೆಗಿನ ಅವರ ಅಜ್ಞಾನದಿಂದ ನರಳುತ್ತದೆ. ವೀರಶೈವರು ಸದ್ಯೋಜಾತ ಶೈವವನ್ನು ಅನುಸರಿಸಿದರು ಎಂಬ ಅವರ ಹೇಳಿಕೆ ಸದ್ಯೋಜಾತ ವೀರಶೈವವಲ್ಲ ಎಂಬುದನ್ನು ತಿಳಿಸುತ್ತದೆ.
೧೪ನೆಯ ಶತಮಾನದ ಮಾಧವನ 'ಸರ್ವಧರ್ಮ ದರ್ಶನ' ಸಂಗ್ರಹದಲ್ಲಿ ವೀರಶೈವದ ಪ್ರಸ್ತಾಪವಿಲ್ಲದಿರುವ ಬಗೆಗೆ ಡಾ. ಬಸವರಾಜು ಅವರು ಕೊಟ್ಟಿರುವ ಸಮಜಾಯಿಷಿ ತೃಪ್ತಿಕರವಾಗಿಯೂ ಇಲ್ಲ; ಮನವರಿಕೆಯಾಗುವಂತೆಯೂ ಇಲ್ಲ. ಅವರು ೧೨ನೆಯ ಶತಮಾನದ ನಂತರದ ಮೂರು ನಾಲ್ಕು ಶತಮಾನಗಳಾದ ಮೇಲೆ ಸೃಷ್ಟಿಯಾದ ಪುರಾಣ (೧೯ ಪುರಾಣಗಳಲ್ಲದ)ಗಳ ನೆರವು ಪಡೆಯುತ್ತಾರೆ. ಹಾಗೆಯೇ ೧೪ನೆಯ ಶತಮಾನದ ನಂತರದ ಅನೇಕ ಗ್ರಂಥಗಳನ್ನು ಬಳಸಿಕೊಳ್ಳುತ್ತಾರೆ. ಭೂತಕಾಲವನ್ನು ಭವಿಷ್ಯದಿಂದ ಸಾಧಿಸುವ ಈ ಭ್ರಮೆಯಿಂದಾಗಿ ಅವರ ವಾದಗಳು ಸೊರಗುತ್ತವೆ. ಅವರು ಉಲ್ಲೇಖಿಸಿರುವ ಬಹುತೇಕ ಗ್ರಂಥಗಳು ಬಸವಣ್ಣನವರ ನಂತರ ಮೂರು-ನಾಲ್ಕು ನೂರು ವರ್ಷಗಳಾದ ಮೇಲೆ ರಚಿತವಾದವು. ಅವಕ್ಕೆ ಅಧಿಕೃತತೆಯ ಕೊರತೆಯಿದೆ. ಒಟ್ಟಾರೆ, ಬಸವಣ್ಣನವರಿಗಿಂತ ಮುಂಚೆ ವೀರಶೈವ ಅಸ್ತಿತ್ವದಲ್ಲಿತ್ತು ಎಂಬ ಅವರ ಊಹೆ ಅವರದ್ದೇ ಸಾಕ್ಷಾಧಾರಗಳ ಪ್ರಕಾರವೂ ಸಾಧಿತವಾಗಿಲ್ಲ.
ಡಾ. ಚಿದಾನಂದಮೂರ್ತಿ ಅವರ ಅಭಿಪ್ರಾಯಗಳು ಸಹ ಡಾ. ಬಸವರಾಜು ಅವರ ಅಭಿಪ್ರಾಯಗಳಂತೇ ಇವೆ. ಆದರೆ ವೀರಶೈವವು ಬಸವಣ್ಣನವರಿಗಿಂತ ಮುಂಚೆ ಕನಿಷ್ಠ ಒಂದು ನೂರು ವರ್ಷಗಳ ಹಿಂದೆ ಅಂದರೆ ೧೧ನೆಯ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಹೇಳುವ ಮೂಲಕ ತಮ್ಮ ಹಕ್ಕು ಬೇಡಿಕೆಯನ್ನು ಮಿತಿಗೊಳಿಸುತ್ತಾರೆ. ಈಗಾಗಲೇ ವಿವರವಾಗಿ ಪರಿಶೀಲಿಸಿರುವ ಪ್ರಕಾರ ಡಾ. ಚಿದಾನಂದಮೂರ್ತಿ ಅವರು ೧೨ನೆಯ ಶತಮಾನಕ್ಕಿಂತ ಹಿಂದಿನ ವೀರಶೈವದ ಪ್ರಾಚೀನತೆ ಒಪ್ಪುವಂತಹುದಲ್ಲ.
ಕೇವಲ ಈ ನಾಲೈದು ಜನ ಗ್ರಂಥಕರ್ತರ ಕೆಲವು ಅಭಿಪ್ರಾಯಗಳು ಬಸವಣ್ಣನವರ ಅಭಿಪ್ರಾಯಗಳಂತಿವೆ ಎಂಬ ಕಾರಣಕ್ಕೆ ವೀರಶೈವದ ಅಸ್ತಿತ್ವದ ಕಾಲವನ್ನು ನಿರ್ಣಯಿಸಲು ಅಗುವುದಿಲ್ಲ. ಜೇಡರ ದಾಸಿಮಯ್ಯನ ವಿಷಯವನ್ನು ವೀರಶೈವ ಗ್ರಂಥಗಳು ಎಲ್ಲೂ ಪ್ರಸ್ತಾಪಿಸಿಲ್ಲ. ದಾಸಿಮಯ್ಯನವರ ವಿಚಾರಗಳು ಬಸವಣ್ಣನವರನ್ನು ಪ್ರಭಾವಿಸಿವೆ. ಬಸವಣ್ಣನವರು ದಾಸಿಮಯ್ಯನ ಅಂತರ್‌ದೃಷ್ಟಿ ಮತ್ತು ಹಿರಿಮೆಯನ್ನು ಬಹಿರಂಗವಾಗಿಯೇ ಸ್ಮರಿಸಿದ್ದಾರೆ. ಅದೇ ರೀತಿ, ಅಬಲೂರು ಶಾಸನದ ಪ್ರಕಾರ, ಏಕಾಂತದ ರಾಮಯ್ಯನು ಬಸವಣ್ಣನವರ ಸಮಕಾಲೀನ. ಅವನು ವೀರಶೈವನಲ್ಲ; ಪಾಶುಪತ ಪಂಥದ ಪ್ರಬಲ ಶೈವಬ್ರಾಹ್ಮಣ, ಹಾಗೆಯೇ ಕೊಂಡಗುಳಿ ಕೇಶಿರಾಜನೂ ಸಹ ಸಂಪ್ರದಾಯದ ಕಟ್ಟಾ ವೀರವ್ರತಿ ಶೈವ. ಅವನು ತನ್ನ ಶೀಲಮಹತ್ವದ ಕಂದದಲ್ಲಿ ಕಟ್ಟುನಿಟ್ಟಿನ ಮಡಿವಂತಿಕೆಯ ಶೈವಧರ್ಮವನ್ನು ಪ್ರಚಾರಮಾಡಿದವನು.
ಕೊಂಡಗುಳಿ ಕೇಶಿರಾಜನ ಶೀಲಗಳು ಅಥವಾ ವ್ರತಗಳು ವೀರವ್ರತಿಗಳ ವ್ರತಗಳೇ ಆಗಿವೆ. ಕಟ್ಟುನಿಟ್ಟಿನ ಮಡಿವಂತಿಕೆಯ ಪದ್ಧತಿಯ ವೀರವ್ರತಿಗಳು ಬಸವಣ್ಣನವರಿಗಿಂತ ಮುಂಚೆ ಇದ್ದವರು, ಅವರು ವೀರಶೈವರೆಂದು ಎಲ್ಲೂ ಹೇಳಿಲ್ಲ. ಆದರೆ ವೀರಶೈವರು ತಾವು ವೀರವತಿಗಳೆಂದು ಹೇಳಿಕೊಳ್ಳುತ್ತಾರೆ. ಮತ್ತು ಅವರ ಕೆಲವು ವ್ರತಗಳನ್ನು ಪಾಲಿಸುತ್ತಾರೆ. ಬಹುಮಟ್ಟಿಗೆ ಕೊಂಡಗುಳಿ ಕೇಶಿರಾಜನೂ ಒಬ್ಬ ವೀರವ್ರತಿಯಾಗಿರಬಹುದು. ಈ ಸಂಗತಿಯು ಅವನನ್ನು ಒಬ್ಬ ವೀರಶೈವ ಎಂದು ಹೇಳಲು ಡಾ. ಚಿದಾನಂದಮೂರ್ತಿ ಅವರನ್ನು ಪ್ರೇರೇಪಿಸಿರಬೇಕು. ಏನಿದ್ದರೂ, ವೀರಶೈವರು ಮತ್ತು ವೀರವ್ರತಿಗಳು ಒಂದೇ ಅಲ್ಲ. ಅವರು ಬೇರೆ ಬೇರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವೀರವ್ರತಿಗಳು ವೀರಶೈವದ ಹಿಂದಿನವರಾದ ಕಾರಣ, ಸಹಜವಾಗಿಯೇ ವೀರಶೈವರು ಅವರ ಕೆಲವು ನಂಬಿಕೆ ಮತ್ತು ಆಚರಣೆಗಳನ್ನು ಅನುಸರಿಸಿದ್ದಾರೆ. ಅಲ್ಲದೆ “ಶೀಲಮಹತ್ವದ ಕಂದ ಕೇಶಿರಾಜ ಕೃತಿಯೇ ಅಲ್ಲ ಎಂಬುದನ್ನು ಮೂರು ಜನ ವಿದ್ವಾಂಸರು ಹೇಳಿದ್ದಾರೆ.
ಸದಾಶಿವಯ್ಯನವರ ಅಭಿಪ್ರಾಯಗಳು ಪುರಾಣಗಳನ್ನು ಆಧರಿಸಿರುವುದರಿಂದ ಶಿಸ್ತಿನ ಅಧ್ಯಯನದ ಪರಿಶೀಲನೆಗೆ ಅರ್ಹವಾಗಿಲ್ಲ. ಪುರಾಣಗಳು ಇತಿಹಾಸವಾಗಲು ಸಾಧ್ಯವಿಲ್ಲ. ಅವು ಚರಿತ್ರೆಯ ಕೆಲವು ಅಂಶಗಳನ್ನು ಸೂಚಿಸಬಹುದು ಅಷ್ಟೇ. ಆದರೆ ಇತರ ಚಾರಿತ್ರಿತ ಸಾಕ್ಷ್ಯಧಾರಗಳೊಡನೆ ತಾಳೆನೋಡಿದ ಹೊರತು ಪುರಾಣಗಳನ್ನು ಒಪ್ಪಲಾಗುವುದಿಲ್ಲ. ಸದಾಶಿವಯ್ಯನವರ ನಿರೂಪಣೆಯಲ್ಲಿ ಚಾರಿತ್ರಿಕ ಎನ್ನುವ ಯಾವುದೇ ಆಧಾರಾಂಶವಿಲ್ಲ. ವಿಚಿತ್ರವಾಗಿ, ಅವರು ಶಿವ, ಪಾರ್ವತಿ, ಸ್ಕಂದ ಮತ್ತು ದಾರುಕ, ಧೇನುಕರಂತಹ ಶುದ್ಧ ಪೌರಾಣಿಕ ವ್ಯಕ್ತಿಗಳನ್ನು ಮಾನವರನ್ನಾಗಿ ಕಾಣುತ್ತಾರೆ. ವೇದ ಮತ್ತು ಆಗಮಗಳ ಅವರ ಪ್ರತಿಪಾದನೆಯಂತೂ ಅತ್ಯಂತ ಹೆಚ್ಚು ಪ್ರಶ್ನಾರ್ಹವಾಗಿದೆ. ಅವರೇ ಸ್ವತಃ ಹೇಳುವಂತೆ ಮತ್ತು ಅವರ ಗ್ರಂಥದ ಶೀರ್ಷಿಕೆಯೇ ತಿಳಿಸುವಂತೆ, ವೀರಶೈವ ಚರಿತ್ರೆ ಅಲಿಖಿತ, ನಿಜ. ಅದೇ ಪುರಾಣಗಳ ಪುನರಾವರ್ತನೆಯ ಪ್ರತಿಪಾದನೆಗಳನ್ನು ಬಿಟ್ಟರೆ ವೀರಶೈವಕ್ಕೆ ಚಾರಿತ್ರಿಕ ಎನ್ನುವುದು ಏನೂ ಇಲ್ಲ.
ಡಾ. ಸಂಗಮೇಶ ಸವದತ್ತಿ ಮಠ ಅವರ ವಾದಗಳು ಸ್ವಹಿತದ ಪ್ರಬುದ್ಧತೆಯಿಂದ ಪೇರಿತವಾಗಿದ್ದರೂ, ಅತಿರೇಕವೆನಿಸಿದರೂ ಹೆಚ್ಚಿನ ಚರ್ಚೆಗೆ ಅರ್ಹವಾಗಿವೆ. ಏಕೆಂದರೆ, ಅವುಗಳನ್ನು ನಿರಾಕರಿಸದೆ ಇರುವುದು ಅವರು ಕೊಟ್ಟಿರುವ ನಿಜ ಸಂಗತಿಗಳನ್ನು ಒಪ್ಪಿಕೊಂಡಂತಾಗುವುದು. ಆದ್ದರಿಂದ ಅವುಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ.
ಡಾ. ಸವದತ್ತಿ ಮಠ ಅವರು ಎತ್ತಿರುವ ಒಂದು ಅಂಶವೆಂದರೆ, ಶಿವ, ಓಂ ಮತ್ತು ಲಿಂಗ ಈ ಮೂರೂ ಆಗಮಿಕ ಮೂಲಗಳಿಂದ ಹುಟ್ಟಿಕೊಂಡಿವೆ ಎನ್ನುವುದು. ಇದು ನಿಜವಿರಬಹುದು. ಅಷ್ಟು ಹೇಳಿದರೆ ಮುಗಿಯಿತೆ? 'ಶಿವ' ಎನ್ನುವ ಶಬ್ದ ಒಂದೇ ಆದರೂ, ಲಿಂಗಾಯತರು ಮತ್ತು ವೀರಶೈವರ ದೃಷ್ಟಿಯಲ್ಲಿ 'ಶಿವ'ದ ಅರ್ಥ ಮತ್ತು ಪರಿಕಲ್ಪನಗಳು ಪೂರ್ಣವಾಗಿ ಭಿನ್ನವಾಗಿವೆ. ಲಿಂಗಾಯತ ಶಿವನು ನಿರ್ಗುಣ ಮತ್ತು ನಿರಾಕಾರ, ಅದೇ ವೀರಶೈವ ಶಿವನು ಸಗುಣ ಮತ್ತು ಸಾಕಾರ. ಪೌರಾಣಿಕ ಶಿವ, ಅವನ ಸಹಸ್ರ ನಾಮ, ಪವಾಡಗಳು, ಸಾಹಸಗಳು, ಹೆಂಡತಿ ಮತ್ತು ಮಕ್ಕಳು, ಅವನ ಪ್ರಮಥರು - ಇವುಗಳ ವೀರಶೈವ ನಿರೂಪಣೆಯನ್ನು ಲಿಂಗಾಯತರು ಒಪ್ಪುವುದೇ ಇಲ್ಲ.
ಅದೇ ರೀತಿ, ಡಾ. ಸವದತ್ತಿ ಮಠ ಅವರು, ಈ ಹಿಂದೆ ಬಹುತೇಕ ಗ್ರಂಥಕರ್ತರು 'ವೀರಶೈವ' ಶಬ್ದವನ್ನು 'ಲಿಂಗಾಯತ' ಶಬ್ದಕ್ಕೆ ಸಮಾನಾರ್ಥದಲ್ಲಿ ಬಳಸಿದ್ದಾರೆ ಎಂದಿರುವ ಮಾತು ನಿಜ. ಆದರೆ ಅದು ಅರ್ಧಸತ್ಯವನ್ನು ಮಾತ್ರ ಹೇಳುತ್ತದೆ. ಅವರ ಇಂತಹ ಅರ್ಧಸತ್ಯಗಳೇನು ಎಂಬ ಬಗೆಗೆ ಕೂಲಂಕಶವಾಗಿ ವಿವರಿಸಲಾಗಿದೆ. ಈ ಅರ್ಧಸತ್ಯಗಳ ಪರಿಣಾಮಗಳನ್ನು ಮತ್ತು ವಚನಸಾಹಿತ್ಯದ ಬಗೆಗೆ ಬೆಳೆಯುತ್ತಿರುವ ಜನಪ್ರಿಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಡಾ. ಸವದತ್ತಿ ಮಠ ಅವರು ತಮ್ಮ ಗ್ರಂಥದ ಮೂಲಕ ಮೂಡಿಸಲು ಪ್ರಯತ್ನಿಸಿರುವ ತಪ್ಪು ಅಭಿಪ್ರಾಯಗಳನ್ನು ನಿವಾರಿಸುವ ಸಲುವಾಗಿ ವಿವರವಾಗಿಯೇ ಚರ್ಚಿಸಲಾಗಿದೆ.
ಅಂತಿಮವಾಗಿ, ಕೆಲವು ವಚನಗಳಲ್ಲಿ ವೈದಿಕ, ಉಪನಿಷತ್ತು, ಆಗಮಿಕ ಮತ್ತು ಪೌರಾಣಿಕ ಶ್ಲೋಕಗಳಿವೆ ಎನ್ನುವುದು ನಿಜ. ವಾಸ್ತವವಾಗಿ ಅವು ೧೫ ಮತ್ತು ೧೬ನೆಯ ಶತಮಾನದ ವೀರಶೈವ ಸಂಪಾದಕರ ಮಾಡಿರುವ ಸೇರ್ಪಡೆಗಳಾಗಿವೆ. ಅವು ಪೂರ್ಣವಾಗಿ ಅನಗತ್ಯವಾದವು. ಮತ್ತು ಆ ಶ್ಲೋಕಗಳನ್ನು ಸಂಬಂಧಿಸಿದ ವಚನಗಳಿಂದ ಹೊರ ತೆಗೆದರೂ ವಚನಗಳ ಅರ್ಥ, ಒಳನೋಟ ಮತ್ತು ಮಹತ್ವಗಳಿಗೆ ಯಾವುದೇ ಭಂಗವುಂಟಾಗುವುದಿಲ್ಲ.
ಬೇರೆ ಬೇರೆ ಗ್ರಂಥಕರ್ತರ ಆರು ಗ್ರಂಥಗಳನ್ನು ಕುರಿತಂತೆ ವಿಮರ್ಶಾತ್ಮಕವಾಗಿ ಈ ನಿಬಂಧದಲ್ಲಿ ವಿವರಿಸಲಾಗಿದೆ. ಆ ಪ್ರತಿಯೊಂದು ಗ್ರಂಥವೂ ಮೂಲಭೂತ ಕೊರತೆಯಿಂದ ನರಳುತ್ತದೆ. ಈ ಎಲ್ಲ ಗ್ರಂಥಕರ್ತರೂ ವೀರಶೈವರೇ. ಆದರೆ ಅವರೇ ಪಕ್ಷಪಾತಿಗಳಾಗಿರುವುದು ಒಂದು ವಿಪರ್ಯಾಸ. ಈ ಪಕ್ಷಪಾತ ಮನೋಭಾವ ಅಥವಾ ಪೂರ್ವಗ್ರಹ ದೃಷ್ಟಿ ಏನು ತೋರಿಸುತ್ತದೆ ಎನ್ನುವುದನ್ನು ಈ ನಿಬಂಧದಲ್ಲಿ ಹೇಳಲಾಗಿದೆ.
ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.
ಸತ್ಯವನ್ನು ಒಪ್ಪಿಕೊಳ್ಳದ ಭಂಡತನ | ವೀರಶೈವದ ಪ್ರಾಚೀನತೆ ಇತರ ಕೆಲವು ವಾದಗಳು |