| ಬಸವತತ್ತ್ವ : ಬೆರಗಾದ ಬ್ರಿಟಿಷರು :👈 | 👉:ನಾವು ಲಿಂಗಾಯತರು |
೨೦ನೆ ಶತಮಾನದಲ್ಲಿ ಬಸವಕಲ್ಯಾಣ ಅಭಿವೃದ್ಧಿಯ ಮೊದಲ ಹರಿಕಾರ ಚನ್ನಬಸಪ್ಪ ವಾರದ |
✍ -ಶ್ರೀ ಮಲ್ಲಿಕಾರ್ಜುನ ವಾಂಜರಖೇಡೆ ಚಿಂತಕರು ಬಸವಕಲ್ಯಾಣ
೨೦ನೆ ಶತಮಾನದಲ್ಲಿ ಬಸವಕಲ್ಯಾಣ ಅಭಿವೃದ್ಧಿಯ ಮೊದಲ ಹರಿಕಾರ ಚನ್ನಬಸಪ್ಪ ವಾರದ
12 ನೇ ಶತಮಾನ ಜಾಗತಿಕ ಇತಿಹಾಸದಲ್ಲಿ ಎಂದೂ ಕಂಡು ಕೇಳರಿಯದ ವಿನೂತನ ಕ್ರಾಂತಿ ಕಲ್ಯಾಣದಲ್ಲಿ ನಡೆದದ್ದು ಇತಿಹಾಸ, ಬೀದರ ಜಿಲ್ಲೆಯ ಬಸವಕಲ್ಯಾಣ ಶಿವಶರಣರ ನಾಡು, ಅವಿಮುಕ್ತ ಕ್ಷೇತ್ರ ಕಾಯಕದ ನೆಲ ಇಂತಹ ಪವಿತ್ರ ನಾಡಿನಲ್ಲಿ ಬಸವಾದಿ ಶಿವಶರಣರು ಭಕ್ತಿ, ದಾಸೋಹ, ಕಾಯಕಗಳ ಮೂಲಕ ಇಲ್ಲದವರಿಗಾಗಿ ಮತ್ತು ಕೆಳವರ್ಗದವರಿಗಾಗಿ ಮಾಡಿದ ಜಗತ್ತಿನ ಮೊದಲ ಕ್ರಾಂತಿ ನಡೆದದ್ದು ಇದೆ ಕಲ್ಯಾಣದಲ್ಲಿ ಕಾಲನ ತೆಕ್ಕೆಗೆ ಸಿಲುಕಿ "ಶರಣರ ಕಲ್ಯಾಣ", "ಕಿಲ್ಲಾ ಕಲ್ಯಾಣ" ವಾದದ್ದು ದುರಂತವೇ ಸರಿ.
ಕಿಲ್ಲಾ ಕಲ್ಯಾಣ ವನ್ನು ಮತ್ತೆ "ಬಸವಕಲ್ಯಾಣ" ಮಾಡಬೇಕಾದರೆ, ಹಾಗೂ ಬಸವಕಲ್ಯಾಣದಲ್ಲಿ ಶರಣರ ಸ್ಮಾರಕಗಳನ್ನು ರಕ್ಷಿಸ ಬೇಕಾದರೆ ಒಬ್ಬ ನಾಯಕನ ಅವಶ್ಯಕತೆ ಇತ್ತು. ಅತಂಹ ಸಮಯದಲ್ಲಿ 1947 ಕ್ಕೆ ಮಹಾರಾಷ್ಟ್ರದ ಸೋಲ್ಲಾಪೂರದಿಂದ ಕಿಲ್ಲಾ ಕಲ್ಯಾಣಕ್ಕೆ ಬಂದವರೇ (ಬಾಬಾಸಾಹೇಬ) ಚನ್ನಬಸಪ್ಪ ಮಲ್ಲಪ್ಪಾ ವಾರದ, ಕಿಲ್ಲಾ ಕಲ್ಯಾಣವನ್ನು ಬಸವಕಲ್ಯಾಣವನ್ನಾಗಿಸಿದ ಮಹಾನುಭಾವರು.
ಚನ್ನಬಸಪ್ಪ ವಾರದ ಇವರು ಸೋಲ್ಲಾಪೂರದ ಪ್ರಖ್ಯಾತ ವಾರದ ಮನೆತನದವರು. ಇವರ ತಂದೆ ಮಲ್ಲಪ್ಪಾ ವಾರದ, ತಾಯಿ ಗೌರಮ್ಮ ವಾರದ ಆಥಣಿಯ ಪೂಜ್ಯರಾದ ಶ್ರೀ ಮುರುಘೇಂದ್ರ ಶಿವಯೋಗಿಗಳ ಆಶಿರ್ವಾದಿಂದ 10 ಅಕ್ಟೋಬರ್ 1909 ರಲ್ಲಿ ಜನಿಸಿದವರು. ಚನ್ನಬಸಪ್ಪಾ ವಾರದ 13 ತಿಂಗಳ ಮಗುವಿದ್ದಾಗಲೆ ತಮ್ಮ ತಂದೆಯವರನ್ನು ಕಳೆದುಕೊಳ್ಳುತ್ತಾರೆ. ಇವರ ತಂದೆ ಮಲ್ಲಪ್ಪಾ ವಾರದ ಬ್ರಿಟೀಷ ಆಳ್ವಿಕೆಯ ಭಾರತದ 12 ನೇ ಶ್ರೀಮಂತ ವ್ಯಾಪಾರಿಗಳಾಗಿದ್ದರು. ಇವರಿಗೆ 5300 ಎಕರೆ ಭೂಮಿ. 35 ಆಡತಿ ಕಲ್ಬುರ್ಗಿಯಲ್ಲಿ ಜಿನ್ನಿಂಗ್ ಫ್ಯಾಕ್ಟಿರಿ, ಬೆಳ್ಳಿ, ಬಂಗಾರ ವಜ್ರ ವೈಡೂರ‍್ಯಕ್ಕೆ ಲೆಕ್ಕವೇ ಇರಲಿಲ್ಲ. ಇಂತಹ ಶ್ರೀಮಂತಿಕೆಯಲ್ಲಿ ಬೆಳೆದ ಚನ್ನಬಸಪ್ಪಾ ವಾರದ ಶಿವಶರಣರ ಬಗ್ಗೆ ತಿಳಿದುಕೊಂಡು ಕಿಲ್ಲಾ ಕಲ್ಯಾಣದ ದುರಂತ ಸ್ಥಿತಿ ಕೇಳಿ, ತಾಯಿಯ ಪರವಾನಗಿ ಕೇಳಿ ಸೋಲ್ಲಾಪೂರದಿಂದ ಕಲ್ಯಾಣಕ್ಕೆ ಬರುತ್ತಾರೆ.
ಅಳಿದುಳಿದ ಶರಣರ ಗವಿಗಳು ರಜಾಕಾರರ ಹಿಡಿತದಲ್ಲಿದ ಪರುಷಕಟ್ಟೆ ಕಂಡು ಕಣ್ಣೀರು ತರುತ್ತಾರೆ. ಇವುಗಳ ರಕ್ಷಣೆಯ ಕಾರ್ಯ ಮಾಡಬೇಕೆಂದು ಪಣತೊಟ್ಟು ಶರಣರ 50 ಸ್ಥಳಗಳನ್ನು ಗುರುತಿಸಿ ಜೀರ್ಣೋದ್ಧಾರ ಕಾರ್ಯ ಆರಂಭ ಮಾಡುತ್ತಾರೆ. ಅದರ ನಿಮಿತ್ಯ 1948 ರಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯನ್ನು ಸ್ಥಾಪಿಸಿ ಶರಣರ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಸುತ್ತಾರೆ. ಮುಂದೆ ಎರಡು ವರ್ಷಗಳ ನಂತರ ಅಂದರೆ 1950 ಏಪ್ರಿಲ್ 20 ಗುರುವಾರದಂದು ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ವತಿಯಿಂದ ಮೊದಲ ಬಸವ ಜಯಂತಿ ಆರಂಭಿಸಿದ ಕೀರ್ತಿ ಕೂಡಾ ಚನ್ನಬಸಪ್ಪಾ ವಾರದ ರವರಿಗೆ ಸಲ್ಲುತ್ತದೆ.
ಸೋಲ್ಲಾಪೂರದ ನಂದಿ ಕೋಲು ಹಿಡಿಯುವ ತಂಡವನ್ನು ಕರೆಸಿ ಧಾರವಾಡದ ಮೃತ್ಯಂಜಯ ಸ್ವಾಮಿಗಳಿಗೆ ಕರೆಯಿಸಿ ಜಾತ್ರೆಗೆ ಚಾಲನೆ ಕೊಡಿಸುತ್ತಾರೆ. ಮತ್ತು ಮೊದಲ ಜಾತ್ರೆಗೆ 1 ಲಕ್ಷ ಜನರನ್ನು ಸೇರಿಸಿದ ದಾಖಲೆ ಅವರಿಗೆ ಸಲ್ಲುತ್ತದೆ. ಮೊದಲನೆ ಜಾತ್ರೆಗೆ ಆದ ಒಟ್ಟಾರೆ ಖರ್ಚನ್ನು ಧಾರವಾಡದ ಮೃತ್ಯಂಜಯ ಸ್ವಾಮಿಗಳು ಭರಿಸುತ್ತಾರೆ. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿಯ ಮೊದಲ ಅಧ್ಯಕ್ಷರಾಗಿ ಬಹುದೊಡ್ಡ ಕಾರ್ಯ ಮಾಡಿರುವುದು ಶ್ಲಾಘನೀಯವಾಗಿದೆ. ಕಿಲ್ಲಾಕಲ್ಯಾಣವನ್ನು ಬಸವಕಲ್ಯಾಣ ಮಾಡಬೇಕೆಂದು ಕರ್ನಾಟಕ ಸರ್ಕಾರದ ಮುಂದೆ ವಾದ ಮಂಡಿಸಿ ಗೆಲುವು ಸಾಧಿಸಿದಲ್ಲದೆ. ನೂತನ ಬಸವಕಲ್ಯಾಣದ ಅಭಿವೃದ್ಧಿಯ ಪಿತಾಮಹ ಎನಿಸಿಕೊಂಡಿದ್ದಾರೆ. ಬಸವಕಲ್ಯಾಣದ ಅಭಿವೃದ್ಧಿಯೇ ಅವರ ಗುರಿಯಾಗಿತ್ತು 1955 ರಿಂದ 1965 ವರೆಗೆ 10 ವರ್ಷಗಳ ಕಾಲ ಚನ್ನಬಸಪ್ಪಾ ವಾರದ ಕಲ್ಯಾಣದಲ್ಲಿ ಇದ್ದುಕೊಂಡು ಬಸವಕಲ್ಯಾಣದ ಅಭಿವೃದ್ಧಿಗಾಗಿ 47 ಯೋಜನೆಗಳನ್ನು ಸಿದ್ಧಪಡಿಸಿ 06/07/1959 ರಂದು ಮೈಸೂರು ರಾಜ್ಯದ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದರು. ಈ ಯೋಜನೆಗಳನ್ನು ಕಂಡು ಅಂದಿನ ಮುಖ್ಯಮಂತ್ರಿಗಳು ಸಂತೋಷಗೊಂಡು ಪ್ರತ್ಯುತ್ತರ ಬರೆದು ಅಭಿನಂದಿಸಿದರು ಆ 47 ಯೋಜನೆಗಳು ಇಂದು ಬಹುತೇಕ ಪೂರ್ಣಗೊಂಡಿದ್ದು ಕೆಲವು ಯೋಜನೆಗಳು ಮಾತ್ರ ಆಗ ಬೇಕಿದೆ ಇಂದು ವಿಶ್ವಕ್ಕೆ ಮಾದರಿಯಾದ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ ಕಲ್ಯಾಣದಲ್ಲಿ ನಿರ್ಮಾಣವಾಗಿ ಶರಣರ ತತ್ವಗಳನ್ನು ಜಗತ್ತಿನ ತುಂಬ ಪಸರಿಸಬೇಕಾದರೆ ಅದರ ಹಿಂದೆ (ಬಾಬಾಸಾಹೇಬ) ಚನ್ನಬಸಪ್ಪಾ ವಾರದ ಅವರ ಕಾರ್ಯ ನಾವು ಸದಾ ಸ್ಮರಿಸಬೇಕಾಗಿದೆ. ಹೊಸ ಕಲ್ಯಾಣದ ರುವಾರಿಯಾಗಿ ವಾರದ ರವರು ಮಾಡಿದ ಕೆಲಸ ಶರಣ ತತ್ವ ಚಿಂತಕರು ಮರೆಯಬಾರದಾಗಿದೆ.
| ಬಸವತತ್ತ್ವ : ಬೆರಗಾದ ಬ್ರಿಟಿಷರು :👈 | 👉:ನಾವು ಲಿಂಗಾಯತರು |