ಬಿದ್ದುಹೋಗಿದ್ದು ವೀರಶೈವ ಮಹಾಸಭೆಯ ಅರ್ಜಿ! ಶಿಕ್ಷೆ ಮಾತ್ರ ಲಿಂಗಾಯತರಿಗಾ?
ಕಳೆದ ವರ್ಷ ಜಾತಿ ಸಮೀಕ್ಷೆಯವರು ಮನೆಗೆ ಬಂದು "ನಿಮ್ಮ ಧರ್ಮ?" ಅಂತ ಕೇಳಿದಾಗ ಅವರ ಪಟ್ಟಿಯಲ್ಲಿ ಲಿಂಗಾಯತ ಅನ್ನೋ ಪದವೇ ಇರಲಿಲ್ಲ, ನೆನಪಿದೆಯಾ? ಆ ಪದಕ್ಕೆ ಸರ್ಕಾರಿ ಕಾಗದದಲ್ಲಿ ಜಾಗ ಸಿಗೋ ಬಾಗಿಲು 2018ರಲ್ಲೇ ಅರ್ಧ ತೆರೆದಿತ್ತು. ದೆಹಲಿ ಅದನ್ನ ಯಾಕೆ ಮುಚ್ಚಿತು ಅನ್ನೋ ಕಡತ ಈಗ ಪುಸ್ತಕವಾಗಿ ನಮ್ಮ ಕೈಗೆ ಬಂದಿದೆ.
ಪುಸ್ತಕ ಸಂಪಾದಿಸಿದವರು ವಿಶ್ರಾಂತ ನ್ಯಾಯಾಧೀಶರಾದ ನ್ಯಾ. ಸಿದ್ದಪ್ಪ ಎನ್. ಕೆಂಪಗೌಡರ. ಹೆಸರು "ಲಿಂಗಾಯತ ಸ್ವತಂತ್ರ ಧರ್ಮವಲ್ಲವೇ?" ಬೆಂಗಳೂರಿನ ಹಳ್ಳೂರ ಪ್ರಕಾಶನದವರು ಹೊರತಂದಿದ್ದಾರೆ. ಒಳಗೆ ಇರೋದು ನಾಗಮೋಹನ ದಾಸ್ ತಜ್ಞರ ಸಮಿತಿಯ ವರದಿ ಮತ್ತು ಬೆಂಗಳೂರು, ದೆಹಲಿ ನಡುವೆ ಓಡಾಡಿದ ಸರ್ಕಾರಿ ಪತ್ರಗಳು. ಒಳಪುಟದಲ್ಲೇ "ಕೃಪೆ: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ" ಅಂತ ಹಾಕಿದ್ದಾರೆ. ಸಂಪಾದಕರು ಕೇಳೋದು ಇಷ್ಟೇ: "...ಈ ವರದಿಯಲ್ಲಿ ಏನು ಲೋಪಗಳಿವೆ? ಯಾಕೆ?" ಲೋಪ ಇದ್ರೆ ದೆಹಲಿ ಬಿಡಿಸಿ ಹೇಳಬೇಕಿತ್ತಲ್ವಾ?"
2018ರ ಮಾರ್ಚ್ನಲ್ಲಿ ಆ ವರದಿ ಒಪ್ಪಿ ರಾಜ್ಯ ಸರ್ಕಾರ ಲಿಂಗಾಯತರನ್ನ ಧಾರ್ಮಿಕ ಅಲ್ಪಸಂಖ್ಯಾತರು ಅಂತ ಅಧಿಸೂಚನೆ ಹೊರಡಿಸಿತು. ಆದರೆ ಅದು ಜಾರಿಗೆ ಬರೋಕೆ ಕೇಂದ್ರದ ಒಪ್ಪಿಗೆ ಬೇಕಿತ್ತು. ವರದಿಯ ತಿರುಳನ್ನ ಸಂಪಾದಕರು ಒಂದೇ ಸಾಲಲ್ಲಿ ಹೇಳ್ತಾರೆ:
"ವೈದಿಕತೆಯ ವಿರುದ್ಧದ ಬುದ್ಧ, ಜೈನ, ಸಿಖ್, ಧರ್ಮಗಳಂತೆ ಲಿಂಗಾಯತವೂ ಭಾರತ ದೇಶದಲ್ಲಿ ಉಗಮವಾದ ಸ್ವತಂತ್ರ ಧರ್ಮ..."
ಎಂಟು ತಿಂಗಳು ಕಾಯಿಸಿ ನವೆಂಬರ್ನಲ್ಲಿ ದೆಹಲಿಯಿಂದ ಪತ್ರ ಬಂತು. ಒಪ್ಪೋದು "ಸಾಧ್ಯವಾಗದೇ ಇರಬಹುದು" ಅಂತ. ಕಾರಣ ಏನಂತೆ ಗೊತ್ತಾ? ಇಂಥ ಬೇಡಿಕೆಯನ್ನ ಹಿಂದೆಯೇ ತಿರಸ್ಕರಿಸಿದ್ದೀವಿ, 1871ರ ಗಣತಿಯಿಂದಲೂ ಲಿಂಗಾಯತರು ಹಿಂದೂಗಳ ಒಂದು ಪಂಥ, ಬೇರೆ ಧರ್ಮ ಕೊಟ್ರೆ ಒಳಗಿರೋ ಪರಿಶಿಷ್ಟ ಜಾತಿಯವರ ಮೀಸಲಾತಿ ಹೋಗುತ್ತೆ.
ಹಿಂದೆ ತಿರಸ್ಕಾರ ಆಗಿದ್ದು ಯಾರ ಅರ್ಜಿ ಅಂತ ಕೆದಕಿದ್ರೆ ಸ್ವಾರಸ್ಯ ಹೊರಗೆ ಬರುತ್ತೆ. 2013ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ "ವೀರಶೈವ ಲಿಂಗಾಯತ"ಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೇಳಿ ಅರ್ಜಿ ಹಾಕಿತ್ತು. ದೆಹಲಿಯ ಜನಗಣತಿ ಕಚೇರಿ ಅದಕ್ಕೆ, ಮೇಲ್ನೋಟಕ್ಕೇ ಇದು ತರ್ಕಕ್ಕೆ ಸರಿ ಬರಲ್ಲ, ವೀರಶೈವ ಲಿಂಗಾಯತ ಹಿಂದೂ ಧರ್ಮದ ಒಂದು ಪಂಥ ಅಷ್ಟೇ ಅಂತ ಷರಾ ಬರೆದಿತ್ತು. ಸಂಪಾದಕರ ಮಾತಲ್ಲೇ ಹೇಳೋದಾದ್ರೆ, "ಆ ಮನವಿ ವೀರಶೈವರ ಖಾಸಗಿ ಮನವಿಯಾಗಿತ್ತು. ಅದಕ್ಕೆ ಸರ್ಕಾರದ ಅಥವಾ ತಜ್ಞರ ಅಭಿಪ್ರಾಯದ ಬೆಂಬಲವಿರಲಿಲ್ಲ." ಲಿಂಗಾಯತರ ಕಡತ ಹೋಗಿದ್ದು ತಜ್ಞರ ವರದಿ ಮತ್ತು ರಾಜ್ಯ ಸರ್ಕಾರದ ಮುದ್ರೆ ಜೊತೆ. ಎರಡನ್ನೂ ಒಂದೇ ತಕ್ಕಡಿಗೆ ಹಾಕಿ ತೂಗಿದ್ದು ಸರಿಯಲ್ಲ ಅಂತ ಸಂಪಾದಕರು ಖಡಾಖಂಡಿತವಾಗಿ ಹೇಳ್ತಾರೆ.
ಮಾಡಿದ್ದುಣ್ಣೋ ಮಹರಾಯ ಅಂತ ಗಾದೆ ಇದೆ. ಇಲ್ಲಿ ಮಾಡಿದ್ದು ಅವರು, ಉಣ್ಣುತ್ತಿರೋದು ನಾವು! ಬೋರ್ಡಿನ ಮೇಲೆ ದಪ್ಪಕ್ಷರದಲ್ಲಿ "ಶೈವ" ಅಂತ ಬರೆಸಿಕೊಂಡು "ನಮ್ದು ಬೇರೆ ಅಂಗಡಿ" ಅಂದ್ರೆ ದೆಹಲಿ ಹೇಗೆ ನಂಬುತ್ತೆ ಹೇಳಿ?
ಇನ್ನು 1871ರ ವಿಚಾರ. ದೆಹಲಿ ತೋರಿಸೋ ಅದೇ ವರ್ಷದ ಮೈಸೂರು ಗಣತಿ ವರದಿಯಲ್ಲಿ ಬ್ರಿಟಿಷ್ ಅಧಿಕಾರಿ ಲಿಂಡ್ಸೆ ಬರೆದಿರೋದು ಏನು ಗೊತ್ತಾ? ಲಿಂಗಾಯತವನ್ನ ಜಾತಿ ಅನ್ನೋಕಾಗಲ್ಲ, ಅದು ಅನೇಕ ಜಾತಿಗಳು ಸೇರಿರೋ ಒಂದು ಧರ್ಮ ಅಂತ. ಹತ್ತು ವರ್ಷ ತಿರುಗೋದ್ರಲ್ಲಿ 1881ರ ಗಣತಿಯಲ್ಲಿ ನಮ್ಮ ಹಿರಿಯರನ್ನ ಶೂದ್ರರ ಸಾಲಿಗೆ ತಳ್ಳಿದ್ರು. ಆಗ ಗಣತಿಯ ಹೊಣೆ ಹೊತ್ತಿದ್ದ ರಂಗಾಚಾರ್ಲು ಅವರ "ಕೈ ಚಳಕ" ಇದು ಅಂತಾರೆ ಸಂಪಾದಕರು. ನಮ್ಮವರು ಸುಮ್ಮನೆ ಕೂರಲಿಲ್ಲ. ಮಠಗಳು ತಿರುಗಿಬಿದ್ದವು, ಎಷ್ಟೋ ಜನ ಗಣತಿಗೆ ಹೆಸರೇ ಕೊಡಲಿಲ್ಲ. ಕೊನೆಗೆ 1891ರ ಗಣತಿಗೂ ಮುಂಚೆ ಮೈಸೂರು ಸರ್ಕಾರವೇ "ಶೂದ್ರ" ಪದ ಹೊಡೆದುಹಾಕಿ ಅಂತ ಸುತ್ತೋಲೆ ಹೊರಡಿಸಬೇಕಾಯ್ತು. ಅಜ್ಜಂದಿರು ಹೋರಾಡಿ ಕಿತ್ತೆಸೆದ ಹಣೆಪಟ್ಟಿಯ ಚೌಕಟ್ಟಿಗೇ ಮತ್ತೆ ಹೋಗಿ ಕೂರೋಕೆ ಕೆಲವರಿಗೆ ಯಾಕಿಷ್ಟು ಆತುರ?
ಈಗ ಮೀಸಲಾತಿಯ ಗುಮ್ಮ. ನಿಮ್ಮ ಮಗನ ಅಥವಾ ಮಗಳ ಸರ್ಟಿಫಿಕೇಟ್ನಲ್ಲಿ 3ಬಿ ಅಂತ ಇದ್ರೆ ಆ ಪ್ರವರ್ಗದ ಪಟ್ಟಿಯನ್ನ ಒಮ್ಮೆ ತೆಗೆದು ನೋಡಿ. ವೀರಶೈವ ಲಿಂಗಾಯತರ ಜೊತೆಗೇ ಕ್ರೈಸ್ತರು, ದಿಗಂಬರ ಜೈನರು ಅಲ್ಲಿದ್ದಾರೆ. ಧರ್ಮ ಬೇರೆ ಆದ್ರೆ ಮೀಸಲಾತಿ ಹೋಗುತ್ತೆ ಅನ್ನೋದು ನಿಜ ಆಗಿದ್ರೆ ಅವರು ಆ ಪಟ್ಟಿಗೆ ಹೇಗೆ ಬಂದ್ರು? ಪರಿಶಿಷ್ಟ ಜಾತಿಯ ಮಾತು ಎತ್ತೋರಿಗೂ ಉತ್ತರ ಇದೆ. ಸಿಖ್ಖರಿಗಾಗಿ 1956ರಲ್ಲಿ, ಬೌದ್ಧರಿಗಾಗಿ 1990ರಲ್ಲಿ ಸಂಸತ್ತು ಪರಿಶಿಷ್ಟ ಜಾತಿ ಆದೇಶವನ್ನೇ ತಿದ್ದಿದೆ. ಲಿಂಗಾಯತರ ಸರದಿ ಬಂದಾಗ ಮಾತ್ರ ಕೈ ಯಾಕೆ ನಡುಗುತ್ತೆ?
ಸಂಪಾದಕರು ಇಲ್ಲಿ ನಮ್ಮನ್ನೇ ಕೂಗಿ ಕೇಳ್ತಾರೆ, "ಹಲೋ ಲಿಂಗಾಯತರೇ..." ಇಷ್ಟಲಿಂಗ ಹಿಡಿದು ಗುಡಿ ಗುಂಡಾರಕ್ಕೆ ಬರದಿದ್ರೆ ಸರ್ಕಾರಿ ಸೌಲಭ್ಯ ಇಲ್ಲ ಅನ್ನೋದು "...ಲಿಂಗಾಯತರ ಧಾರ್ಮಿಕ ಹಕ್ಕಿನ ಬೇಡಿಕೆಗೆ ಬೇಡಿಹಾಕಿದಂತಲ್ಲವೇ?"
ಬಸವಣ್ಣ ಹೇಳಿದ್ದು ನೆನಪು ಮಾಡಿಕೊಳ್ಳಿ.
"ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಸವಯ್ಯಾ..."
ಗುಡಿ ಕಟ್ಟೋ ಶಕ್ತಿ ಇಲ್ಲದ ಬಡವನಿಗೆ ಬಸವಣ್ಣ ಅವನ ದೇಹವನ್ನೇ ದೇಗುಲ ಮಾಡಿಕೊಟ್ರು. ಎಂಟುನೂರು ವರ್ಷದ ಮೇಲೆ ಅದೇ ಬಡವನನ್ನ ಮೀಸಲಾತಿ ಹೆಸರಲ್ಲಿ ಹೆದರಿಸಿ ಮತ್ತೆ ಗುಡಿಯ ಕಡೆ ತಳ್ತಿದ್ದಾರೆ.
ಅಳುವ ಮಗುವಿಗೆ ಹಾಲು ಅಂತಾರೆ. ಸಂಪಾದಕರು ಇದಕ್ಕೆ ಇನ್ನೂ ಇಬ್ಬರು ತಾಯಂದಿರನ್ನ ಸೇರಿಸ್ತಾರೆ: "ಮಗು ಅತ್ತರೆ ಹಾಲು ಕುಡಿಸುವ ತಾಯಿ ಒಬ್ಬರಾದರೇ, ಮಗು ಅಳದೇ ಇದ್ದರೂ ಕಾಲ ಕಾಲಕ್ಕೆ ಮಗುವಿನ ಅಗತ್ಯಗಳನ್ನು ಪೂರೈಸುವ ತಾಯಿ, ಮಗು ಅತ್ತರೂ ಕಾಳಜಿವಹಿಸದ ತಾಯಿ." ಅಲ್ಪಸಂಖ್ಯಾತರನ್ನ ಕಾಪಾಡೋ ಹೊಣೆ ಹೊತ್ತ ಕೇಂದ್ರ ಎರಡನೇ ತಾಯಿ ಆಗಬೇಕಿತ್ತು ಅಂತ ಅವರು ಹೇಳ್ತಾರೆ. ನಾವಂತೂ ತಜ್ಞರ ವರದಿ, ಸರ್ಕಾರದ ಮುದ್ರೆ ಹಿಡಿದುಕೊಂಡೇ ಅತ್ತಿದ್ದೀವಿ. ಹಾಲು ಮಾತ್ರ ಇನ್ನೂ ಬಂದಿಲ್ಲ.
ಕಾಮೆಂಟ್ನಲ್ಲಿ ಹೇಳಿ.
- ಕೇಂದ್ರ ಸರ್ಕಾರ ಈ ಮೂವರಲ್ಲಿ ಯಾವ ತಾಯಿ? 1, 2 ಅಥವಾ 3?
- 2027ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ನೀವು ಏನು ಬರೆಸ್ತೀರಿ? ಒಂದೇ ಪದ.
ಮುಂದಿನ ಭಾಗದಲ್ಲಿ...
ತಜ್ಞರು ಯಾವ ಆಧಾರದ ಮೇಲೆ ಲಿಂಗಾಯತ ಸ್ವತಂತ್ರ ಧರ್ಮ ಅಂದರು? ವಚನಗಳ ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪುಗಳು, ಹಳೆಯ ಗೆಜೆಟಿಯರ್ಗಳು, ವಿದೇಶಿ ಪ್ರವಾಸಿಗರು ಬರೆದಿಟ್ಟದ್ದು ಏನು ಹೇಳುತ್ತೆ ನೋಡೋಣ.
ಪುಸ್ತಕದ ವಿವರ
- ಪುಸ್ತಕ: ಲಿಂಗಾಯತ ಸ್ವತಂತ್ರ ಧರ್ಮವಲ್ಲವೇ? ತಜ್ಞರ ಸಮಿತಿ ವರದಿ
- ಸಂಪಾದಕರು ✍️: ನ್ಯಾ. ಸಿದ್ದಪ್ಪ ಎನ್ ಕೆಂಪಗೌಡರ
- ಕ್ರಪೆ: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆ
#ಲಿಂಗಾಯತ_ಧರ್ಮ #ಬಸವಣ್ಣ #ತಜ್ಞರ_ಸಮಿತಿ_ವರದಿ
ಸಕಲಜೀವಾತ್ಮರಿಗೆ ಲೇಸಾಗಲೆಂದು, ಅನ್ನದಾತನಿಗೆ/ಕಾಯಕ ಜೀವಿಗಳಿಗೆ ಜಯವಾಗಲೆಂದು ಪ್ರಾಥಿ೯ಸುತ್ತ, ಬಸವಾದಿ ಶರಣರಿಗೆ ಶರಣಾರ್ಥಿ ಹೇಳುವೆ.
ವಿನಯ ಶಿರಹಟ್ಟಿಮಠಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ
097422 67547