Previous ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ತೊಡರಿ ಬಿಡದಂಡೆಲೆವ ಮಾಯೆಯ Next

ಅಕ್ಕಮಹಾದೇವಿ ಸ್ವರ ವಚನಗಳು

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಬೇನೆಯಿಂ ಬೇವ ಬೇವದಸದಳ

ಬೇನೆಯಿಂ ಬೇವ ಬೇವದಸದಳ ಬಲ್ಲರೆ
ಬೇನೆಯಿಲ್ಲದರಂತೆ ನೀವೆಂತರಿವಿರೆನ್ನ
ಬೇನೆಯ ಬಗೆಯವನ್ನಗಳಿರಾ ಮಚ್ಚೆನ್ನ ಮಲ್ಲೇಶನಿರಿದಲಗು ಮುರಿದ
ಬೇನೆಯಿಂ ಬೇವಳಾನೇ ಬಲ್ಲೆನೀ ನೋವು
ಬೇನೆ ಮಚ್ಚಿತ್ತದೆರೆಯನ ತಾಗದಿರದು


ವಿಷಯಸುಖ ವಿಷವೆಂದು ತಿಳಿಯದಜ್ಞಾನಿ

ವಿಷಯಸುಖ ವಿಷವೆಂದು ತಿಳಿಯದಜ್ಞಾನಿ ಬಿಡು
ವಿಷಯಸುಖ ನಿರವಯವೆಂದರಿಯದರಿಮರುಳೆ ಬಿಡು
ವಿಷಯಸುಖ ಭವದ ಬಿತ್ತೆಂದು ಭಾವಿಸದಧಮಜೀವಿ ಬಿಡು ಬಿಡು ಸೆರಗನು
ವಿಷಯದಣು ಮಾತ್ರ ಬಿಂದುಗಳಲ್ ಭೂಧರದೊ
ಲೆಸೆವುದೆಂದೋದುವಾಗಮವ ಕೇಳ್ದೆಚ್ಚರದ
ಪಶುವೆ ಕೇಳ್ದರಿಯ ವಿಷಯದೊಳು ಮುಂಗೆಟ್ಟ ನರಸುರರ ವಿಧಿಗಳ |೧|

ಪುಲ್ಲಶರನೆಸುಗೆಗಳವಳಿದಳುಪಿದಂಗನೆಯ
ನೊಲ್ಲದೊಲ್ಲದ ಪೆಣ್ಣನೊಲಿಸುವವನತ್ಯಧಮ
ನಲ್ಲವೆ? ಪೆರತೊರ್ವಗೊಲ್ದವಳನಪ್ಪಲಳ್ತಿಯೆ ಮನಕ್ಕಾನು ಚೆನ್ನ
ಮಲ್ಲಿಕಾರ್ಜುನಗೊಲ್ದಳೆನ್ನನಪ್ಪಿದಡೆ ಕ
ಗ್ಗಲ್ಲನಪ್ಪಿದ ಮಾಳ್ಕೆಯಂತಿರದೆ ಹೋಗೆಲವೊ ಖುಲ್ಲ |೨|


ತನುವು ಕಟ್ಟನೆ ಕರಗೆರೆದು

ತನುವು ಕಟ್ಟನೆ ಕರಗೆರೆದು ಮ
ಜ್ಜನವ, ನಿಜಮನವಲರ್ದು ಕುಸುಮವ,
ವಿನುತ ಹದುಳಿಗತನದಿ ಗಂಧಾಕ್ಷತೆಯನರು ಹಿಂದೆ
ಮಿನುಗುವಾರ್ತಿಯ, ನೆನಹುಶುದ್ಧದಿ
ಘನಸುಧೂಪವ, ಹರುಷರಸ ಸಂ
ಜನಿತ ನೈವೇದ್ಯವ ಸಮರ್ಪಿಸಿ, ಜ್ಞಾನಸತ್ಕ್ರಿಯದಿ |೧|

ತಾಂ ಬೆಳೆರ್ವೆತ್ತಲೆಯನಿತ್ತು ಕ-
ರಾಂಜುಜದ ಬೊಮ್ಮವನು ನಿಜ ಹರು
ಷಾಂಬುಕಣ ಸಂಪಾತದೊಡನಿಟ್ಟಿಸುತೆ ಕ್ರಿಯೆಗಳವು
ಬೆಂಬಳಿಯೊಳಿರ್ದರಿಯದರ್ಚಿಪೆ
ನೆಂಬೆನೆಂತಾ ನಾದ ಬಿಂದುಗ
ಳೆಂಬರಿಯವು ನಿಮ್ಮ ನುತಿಸುವೆನೆಂತು ಶಶಿಮೌಳಿ |೨|


ಅನುಭವವೆ ಭವಬಂಧಮೋಚನ

ಅನುಭವವೆ ಭವಬಂಧಮೋಚನ
ವನುಭವವೆ ದುರಿತಾಚಲಶನಿ
ಯನುಭವವೆ ತನುಗುಣಾಭ್ರ ಪ್ರಕರಪವಮಾನ
ಅನುಭವವೆ ಭಕ್ತಿಯೆ ಸುಧಾನಿಧಿ
ಅನುಭವವೆ ಮುಕ್ತಿಯ ತವರ್ಮನೆ ಶರಣಸಂತತಿಯ |೧|


ಭಾಷೆಯ ಮೀಸಲ್ಗೆಡಿಸಿ ಬಳಿಯಲಿ

ಭಾಷೆಯ ಮೀಸಲ್ಗೆಡಿಸಿ ಬಳಿಯಲಿ
ನ್ನೇಸೊಂದಾಚರಣೆಯನಾಚರಿಸಲ್
ದೋಷಂ ಪರಿಯದವಂಗವನೊಳ್ ಪುದುವಾಳ್ವರ್ ತದ್ದೋಷಾ
ವಾಸಿಗಳೆನಿಪರ್, ತೊಲತೊಲಗಿನ್ನೆ
ನ್ನಾಸೆಯನುಳಿದು


ಪೂತ ಶ್ರೀಗುರುವರ ಪೇಳ್ದೊಲ್ ದು

ಪೂತ ಶ್ರೀಗುರುವರ ಪೇಳ್ದೊಲ್ ದು
ರ್ನೀತಿಯ, ಭೀತರ ಕಾಯ್ವಂ ತಾನೆ

ಬೂತಾದೊಲ್, ಪತಿಪತ್ನೀತ್ವವನರಹುವಳಭಿಸಾರಿಕೆಯ
ರೀತಿಯನೊರೆವೊಲ್, ಪೇಳ್ದಿರಿ ನೀವೆ
ನ್ನಾತುಮದಜ್ಞನತೆಯಂ ತೆವರದೆ ದು
ರ್ನೀತಿಯನಾ ಶಿವಭಕ್ತರ್ ಸಹಭವಗುರುತಂದೆಗಳೆನಗೆ |೧|

ಮದ್ಗುರು ತಂದೆ ಮಹಾವೈಭವದೊಳ್
ಚಿದ್ಘನಲಿಂಗಕ್ಕೊಲಿದೆನ್ನುವನೆಸೆ
ದುದ್ಗಮ ಶರನೆಸೆಯದ ಬಳಿಕುದ್ವಾಹವೆನೆಸಗಿದ ಬಳಿಕ
ತದ್ ಘನಲಿಂಗದ ಸತಿಯಂ ಪಡೆದು ವಿ
ಯದ್ ಗಂಗಾಮೌಲಿಯ ಭಕ್ತಂಗಿ
ತ್ತುದ್ಗಮ ಶರನ ವಿಕಾರದೋಳಿಹುದಂ ನೋಳ್ದಪೆವೆಂಬರಕೆ |೨|

ಈ ಪಾಪವನೊಂದಿಸಲೆಳಸುವರೇಂ
ಕೂಪರೆ ಪೆರದೊಲಗು


ಕ್ಷಿತಿಯ ಚರಿತ್ರವನತಿಗಳೆದೆನ್ನುವನೆಳಸಿದಿರೆಂತೆನಲು

ಕ್ಷಿತಿಯ ಚರಿತ್ರವನತಿಗಳೆದೆನ್ನುವನೆಳಸಿದಿರೆಂತೆನಲು
ಹುತಹವನುಂಡ ಹಿಮಂ ಬೆರೆವುದೆ? ಸ
ನ್ನುತ ಸೌರಭ್ಯಕದಂಬವನಂಬರ
ಗತಿವೇಗದಿನಡರಿದ ಹೊಗೆ ಮನೆಗಳ್ತಪ್ಪುದೆ ಮಡಮುರಿದು?
ಓಡೊಡೆ ಗಾಜುಗಳುಂ ಮೃತ್ತಿಕೆಯೊಳ್
ಮೂಡಿ ಗಡಾ ಮೃತ್ತಿಕೆಯೊಳ್ ಮಗುಳೊಡ
ಗೂಡವೆನಲ್ಕವರಿಂದಿಳಿಕೆಯೆ ಶಿವಶರಣರ ಚಾರಿತ್ರ?
ರೂಢಿಯೊಳೆಗೆದಾ ರೂಢಿಯೆ ಜಡದೊಳ್
ಕೂಡದ ವೃಷಭಾರೂಢನೊಳೊಡನೊಡ
ಗೂಡಿದ ಶರಣರ ಕೂಡಿದಳಾನೆನ್ನಾಸೆಯ ಮಾಣು


ಲಾಲಿಸೆನ್ನೊಡೆಯ

.....ಲಾಲಿಸೆನ್ನೊಡೆಯ ಬಸವೇಶನರ್ಧಾಂಗಿ ಸನ್ನುತ ಕೃಪಾಂಗಿ ಸರ್ವಾಂಗಲಿಂಗಿ ನೀನು
ಮೃಡಶರಣರಾದವರ ಮನೆಯ ದಾಸಿಯು ಮೆಟ್ಟು
ವಡಿಗೆರ್ಪನಾಂತವಳ್ಗೊರೆಯಲ್ಲವಾನೆನ್ನ
ನಡಿಗಡಿಗೆ ನೀವಿಂತು ಬಣ್ಣಿಸಲ್ ತಕ್ಕಳಲ್ಲದಳ ನುತಿಗೆ |೧|

ಚಿರಭಕ್ತಿ ಭಿಕ್ಷಮಂ ನಿಮ್ಮಲ್ಲಿ, ಸತತ ಸ
ದ್ಗುರುಭಕ್ತಿ ಭಿಕ್ಷಮಂ ವೀರಮ್ಮನಲಿ, ಲಿಂಗ
ದುರುಭಕ್ತಿ ಭಿಕ್ಷಮಂ ಕಮಳವ್ವೆಯಲಿ, ಶಿವಧ್ಯಾನದಮಂತ್ರದ ಭಿಕ್ಷವ
ಪರಮಗುರುತಾಯಿ ಶಿವನಮ್ಮನಲಿ, ಸುಜ್ಞಾನ
ದರುಹಿನ ಸುಭಿಕ್ಷಮಂ ವಿಮಳವ್ವೆಯಲ್ಲೆಲ್ಲ
ಶರಣ ಸತಿಯರೊಳು ವೈರಾಗ್ಯಭಿಕ್ಷವ ಬೇಡಿ ಬಂದ ಭಿಕ್ಷಾಂದೇಹಿಯಾಂ |೨|

ಕಾರುಣ್ಯದಿಂದೆನ್ನ ಮನದರಕೆಯನ್ನಿತ್ತು
ಪಾರವೈದಿಸುವುದು.......


ಇಕ್ಕದಿರ್ ತಂದೆ ಮನ್ನಣೆಯ ಬಸಿಶೂಲಕ್ಕೆ

ಇಕ್ಕದಿರ್ ತಂದೆ ಬ[=ಮ]ನ್ನಣೆಯ ಬಸಿಶೂಲಕ್ಕೆ,
ತಕ್ಕಳಲ್ಲಾ ನುತಿಗೆ; ಗುರುಶಿಷ್ಯರಂ, ಪೆತ್ತ
ಮಕ್ಕಳಂ ಪೆತ್ತರೊರೆದೊರೆದು ನೋಡದೆ ನೋಳ್ಪರಾರ್?
ಕುಂದೆಯವರು ನೋಡೆ? |೧|

ತೂಕದಿಂದೊರೆಯಿಂದೆ ನೋಟದಿಂ ಚೆಂಬೊನ್ನ
ಜೋಕೆಗೈದರಮನೆಗೆ ಸಲಿಸುವನೊಲೆನ್ನುವಂ
ನೀ ಕರುಣದಿಂ ನೋಡಿ ರುದ್ರಂಗೆ ಸಲ್ವೊಲೆಸಗಿರ್ದು ಸಂದೆಯವದೇಕೆ
ಮೇಕೆಯೊಂದರ ದೆಸೆಯೊಳಳಿದ ಭಟನಸುವ ಧರ
ಣೀಕಾಂತ ಪ್ರಮುಖ ಭೂಭುಜರ ಹರಣವ ಹರನ
ವಾಕಿನಿಂ ಮುನ್ನ ಉಳುಹಿದ ದುಷ್ಟನಿಗ್ರಹ ಶಿಷ್ಟಪ್ರತಿಷ್ಠೆಯೆಂದೆ |೨|

ಎನ್ನ ಸೋದರವೆ ಎನ್ನ ತಂದೆ ಮದ್ಗುರುವೆ
ಕಿನ್ನರಿಯ ಬ್ರಹ್ಮಯ್ಯ ಬಿಡು ಮನದ
ಖಿನ್ನತೆಯ ಬಿಡದೊಡಾಂ ನಿನ್ನ ಸೋದರಿಯಲ್ಲ |೩|


ಪರಮಗುರು ತಂದೆ ಕಿನ್ನರಿಯ ಬ್ರಹ್ಮಯ್ಯ

ಪರಮಗುರು ತಂದೆ ಕಿನ್ನರಿಯ ಬ್ರಹ್ಮಯ್ಯ, ತವ
ಕರುಣಾಂಜನದಿ ಬಗ್ಗನಗ್ಗಳದ ಬಗ್ಗೆನಿಪ
ಶರಣಾಳಿಯಂ ಕಂಡು ಗೆಲುವಾದೆ, ಬಲವಾದೆ,
ಛಲವಂತೆಯಾದೆ ಮದದ
ಕರುವಾದೆ, ಕರುಣಗುಣಕಾರಿಯಾದೆ, ಭವವಲ್ಲರಿ
ಗರಿಗಿತ್ತಿಯಾದೆ, ಸನ್ಮೂರ್ತಿ ಸಾಮ್ರಾಜ್ಯಕ್ಕೆ
ಸಿರಿದೇವಿಯಾದೆ, ನನ್ನೊಲು ಧನ್ಯರಾರ್


ಹಂಬುಹರಿದುರುಳ್ವ ನರಗಿರದೆ ತಿಂಥಿಣಿಯ

ಹಂಬುಹರಿದುರುಳ್ವ ನರಗಿರದೆ ತಿಂಥಿಣಿಯ ಪೆ
ರ್ಗೊಂಬು ಕೈಬಸಮಾದೊಲಂಬುಧಿಯೊಳಾಳ್ವಗೊದ
ಗಿಂ ಬೈತುರಂ ಬಂದೊಲರಿಗಳರೆಯುಟ್ಟಿ ಬಪ್ಪಡೆಗಭಯಕರದೊಳೆಸೆವ
ಬೆಂಬಲಂಗೂಡಿದೊಲ್, ದಿಕ್ಕಿಲ್ಲದಳುವೆಳಕ
ಗಂ ಬೆಸಲೆಯಾದಳಳ್ತಂದೆತ್ತಿದಂದಾದು
ದಂಬಕತ್ರಯ ನಿಮ್ಮ ಶರಣರಡಿಗಾಣುತೆನಗೆ |೧|

ಇನ್ನು ನೋಡೆದೆನ್ನಧಟ ಕಾಮಾದಿವರ್ಗಗಳ
ಬೆನ್ನ ಬಾರಂಗಳೆವೆನೆಂಟು ಮದಗಳ ಗಂಟ
ಲಂ ನಿಟಿಲೆನಲ್ ಮುರಿವೆಕರಣೇಂದ್ರಿಯಗಳ ಕಲಕುವೆನುಳಿದ ದುಃಖಕರ್ಮವ
ಛಿನ್ನ ಭಿನ್ನಂಗಡಿವೆ |೨|


ತಂದೆತಾಯೆನಗೆ ಶ್ರೀಗುರುನಾಥ

ತಂದೆತಾಯೆನಗೆ ಶ್ರೀಗುರುನಾಥ, ತೆತ್ತಿಗರ್
ಕಂದುಗೊರಲನ ಶರಣಸಂದೋಹ, ಗಂಡನಾ
ನಂಡಿವಾಹನ ಚೆನ್ನಮಲ್ಲಿಕಾರ್ಜುನನಿದಕ್ಕಿಲ್ಲ ಸಂದೆಯ ತಿಲಾಂಶ
ಎಂದೆಂದು ಪ್ರಭುವೆ ನಿಮ್ಮಯ ಮನೆಯೊಳೆನ್ನ ನಡೆ
ವಂದಮಂ ನೆಗಳಿದನುಮತದಿಂದ ಮುಳಿಯಲೇಕೆ? |೧|


ಅಯ್ಯ ತನು-ಜೀವ-ಭಾವಂಗೆಳೆನಗಿರ್ದೊಡೇಂ

....ಅಯ್ಯ ತನು-ಜೀವ-ಭಾವಂಗೆಳೆನಗಿರ್ದೊಡೇಂ
ತತ್ತ್ರಿವಿಧವು |
ಇಲ್ಲದಾ ಘನವೆ ಮನವಾದ ದೂಸರ್ನೀವೆ
ಬಲ್ಲಿರಲ್ಲದೆಯಿತರಾರ್ ಬಲ್ಲರಹುದು ಮರ
ಹಿಲ್ಲದಿರ್ಪೆನ್ನನುವನು...


ಬಸವಬ್ಬ ನಿಮ್ಮೊಲ್ಮೆಯಿಂ ಕಾಮಾರಿಯ

...ಬಸವಬ್ಬ ನಿಮ್ಮೊಲ್ಮೆಯಿಂ ಕಾಮಾರಿಯ |
ಅಪ್ಪಿ ಪೆರತರಿಯೆ | ನೋಟಕ್ಕೆ ನಾಮದಲ್ಲಿ ಪೆ
ಣ್ಣಪ್ಪೆನಲ್ಲದೆ ಭಾವಿಸಲ್ಗಂಡುರೂಪು ಬಿಡ
ದರ್ಪಿರ್ಪುನ್ನನೆಂಬುದ ನಿಮ್ಮ ಲಿಂಗವೆ ಬಲ್ಲುದು


ಎನ್ನ ಭಕ್ತಿಯು ನಿಮ್ಮ ಧರ್ಮ ಪ್ರಭುವಿನ ಧರ್ಮ

ಎನ್ನ ಭಕ್ತಿಯು ನಿಮ್ಮ ಧರ್ಮ ಪ್ರಭುವಿನ ಧರ್ಮ
ವೆನ್ನ ಸುಜ್ಞಾನವೆನ್ನ ಪರಿಣಾಮವೇ
ಚೆನ್ನಬಸವೇಶ್ವರನ ಧರ್ಮವೆಲ್ಲಾ ಪುರಾತನರ ಧರ್ಮವೆನ್ನ ವಿರತಿ |
ಎನ್ನಳವದೇಂ ದೇವ ನಿಮ್ಮ ಸೊಮ್ಮ ನಿಮ್ಮ
ಪನ್ನಳಿನಕಪ್ಪೈಸಿ ಪರಿಶುದ್ಧಳಪ್ಪವ
ಳ್ಗಿಂನ್ನುಂಟೆ ಪರಮಸ್ವತಂತ್ರತ್ವ

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ತೊಡರಿ ಬಿಡದಂಡೆಲೆವ ಮಾಯೆಯ Next