Previous ತೂಗಿದೆನು ನಿಜದುಯ್ಯಾಲೆ ಅಂಗಸಂಗಿಯಾಗಿ ಸಂಬಂಧಿಯಲ್ಲ Next

ಅರುಹಿಂದ ಆಚರಿಸಬೇಕು

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಅರುಹಿಂದ ಆಚರಿಸಬೇಕು
ಮರಹಿಲ್ಲದೆ ತಾನಿರಬೇಕು
ರೆತೆಯ ಮರೆಯ ಕುರುಹರಿಯಬೇಕು
ಪರಬ್ರಹ್ಮದೊಳಗೆ ತಾ ನೆರೆಯಬೇಕು |ಪಲ್ಲವಿ|

ಪಟ್ಟಣವನೆಲ್ಲ ಸುಟ್ಟು ಮಡಿಯಬೇಕು | ದೊಡ್ಡ
ಸೆಟ್ಟಿಕಾತಿಯ ಪಟ್ಟವಳಿಯಬೇಕು
ಪಟ್ಟದ ರಾಣೀಯೊಳು ನುಡಿಯಬೇಕು | ಅಲ್ಲಿ
ಬಿಟ್ಟ ಮಂಡೆಯೊಳು ತಾ ನಡೆಯಬೇಕು |೧|

ಚಿಕ್ಕತಂಗಿಯೊಳೊಪ್ಪಿಯಾಡಬೇಕು | ತ
ಮ್ಮಕ್ಕನ ಬಿಗಿಬಿಗಿದಪ್ಪಬೇಕು
ಕುಕ್ಕುಟ ದನಿದೋರಿ ಕೂಗಬೇಕು | ನೆರೆ
ಸೊಕ್ಕಿದವರು ಮುರಿದೋಡಬೇಕು |೨|

ಚಿಕ್ಕುಟು ಕಣ್ಣೆರೆದುಕ್ಕಬೇಕು |
ಬೆಕ್ಕಿನ ದೃಕ್ಕನು ಕುಕ್ಕಬೇಕು
ಹಕ್ಕಿಯ ಪಕ್ಕವ ಹಿಕ್ಕಬೇಕು | ಬಹು
ರಕ್ಕಸರುಗಳೊಕ್ಕಲಿಕ್ಕಬೇಕು |೩|

ತಂದೆಯಂಗನೆಯೊಳಗಾಡಬೇಕು | ತನ್ನ
ಕಂದನ ತಾ ಬಂದು ಕೂಡಬೇಕು
ಹಿಂದುಮುಂದಾಗಿ ಮತ್ತೆ ನಡೆಯಬೇಕು | ನಿಜ
ಮಂದಿರದಿಂದುವ ಸುಡಬೇಕು |೪|

ಹರಿಯ ಮನೆಯ ಮೆಟ್ಟಿ ಮರೆಯಬೇಕು
ಕರಿಗಳೆಲ್ಲವ ಕೊಂದುರಿಯಬೇಕು
ಕರಿಯ ಬೇದನ ಶಿರವನರಿಯಬೇಕು | ತನ್ನ
ಬರಿಯ ಮನೆಯ ಹೊಕ್ಕು ನೆರೆಯಬೇಕು |೫|

ಮಂಜಿನ ಕೊಡನೊಡೆರೆದರಿಯಬೇಕು | ಅದ
ರಂಜಿಪ ಬಂಜೆಯು ಪರಿಯಬೇಕು
ಮುಂಜೂರಲಮೃತ ಕರೆಯಬೇಕು | ಬೇಗ
ನಂಜದೆ ಸುರಿದು ಮೈಮರೆಯಬೇಕು |೬|

ಹುಲ್ಲೆಯ ತಲ್ಲಣವಡಗಬೇಕು | ಅಲ್ಲಿ
ಮೆಲ್ಲನೆ ಬಿಲ್ಲುಗಾರ ಸೋಲಬೇಕು
ಸೊ(ಬಿ?)ಲ್ಲುಗಾರನ ಬಿಲ್ಲು ಮೆಲ್ಲಬೇಕು | ಚೆನ್ನ
ಮಲ್ಲಿಕಾರ್ಜುನನಲ್ಲಿ ನಿಲ್ಲಬೇಕು |೭|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ತೂಗಿದೆನು ನಿಜದುಯ್ಯಾಲೆ ಅಂಗಸಂಗಿಯಾಗಿ ಸಂಬಂಧಿಯಲ್ಲ Next