Previous ಡಿಂಭದೊಳಗೆ ಒಂದು ಪ್ರಾಣ ದೇಹಗುಣಗಳಳಿದು... Next

ಎನಗೆ ಭೋಗಭಾಗ್ಯ ಬೇಡ

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಎನಗೆ ಭೋಗಭಾಗ್ಯ ಬೇಡ
ಎನಗೆ ಜಪವು ತಪವು ಬೇಡ
ಎನಗೆ ನಿಮ್ಮ ತೊತ್ತು ಸೇವೆ ನಿತ್ಯವಾಗಲೈ || ಪ ||

ಎನ್ನ ಕಂದಿಸುತ್ತ ಬಹಳ
ಎನ್ನ ಬಾಧಿಸುತ್ತ ಬಿಡದೆ
ಎನ್ನನೊಂದು ನೆವಗಳಿಂದ ಕಾಡಿದವರಿಗೆ
ಎನ್ನ ಕೊಂದಡವರಿಗೆಲ್ಲ
ಎನ್ನ ಪೂಜೆ ಫಲಗಳೆಲ್ಲ
ಉನ್ನತದೊಳಗವರಿಗಾಗಿ ಸುಖದಿ ಬಾಳಲಿ || ೧ ||

ಹಿಂದೆಯನ್ನ ಬೈದವರಿಗೆ
ಮುಂದೆಯೆನ್ನ ಬೈದವರಿಗೆ
ಕುಂದದೆಲ್ಲ ಜನರ ನಡುವೆ ಬೈದಡವರಿಗೆ
ಇಂದುಧರನ ಕರುಣದಿಂದೆ
ಅಂದಣವನು ಏರುವಂತೆ
ಕುಂದುದೊಲೆದು ಅವರಿಗೆಲ್ಲ ಭೋಗವಾಗಲಿ || ೨ ||

ಹಿಂಗದೆನ್ನ ನಿಂದಿಸಿದ ಜ
ನಂಗಳೆಲ್ಲ ಸುಖದೊಳಿರುವ
ಹಾಂಗೆ ಶಿವನು ಅವೆಲ್ಲ ಭಾಗ್ಯವೀಯಲಿ
ಮಂಗಳಾತ್ಮ ಷಡಕ್ಷರಿಯ
ಲಿಂಗ ನಿನ್ನ ತೊತ್ತು ಸೇವೆ
ಸಾಂಗವಾಗಿ ಧರೆಯೊಳೆನಗೆ ನಿತ್ಯವಾಗಲಿ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಡಿಂಭದೊಳಗೆ ಒಂದು ಪ್ರಾಣ ದೇಹಗುಣಗಳಳಿದು... Next