Previous ಅಡವಿಯ ಶಿವನೆ... ಶಿವ ಜೀವರು ಎಂದೆರಡಿಲ್ಲಾ Next

ಪರಮಾತ್ಮ ನಿಶ್ಚಯನಿರುವ

*

ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ || ಪ ||

ರಂಗುರಂಗಿನ ಹೂಗಳು ಇರಲು
ಪೂಜೆಗೆ ರಂಗುಗಳಿವೆಯೇನು?
ರಂಗಿನ ಹೂವೆ ನಿನ್ನಾತ್ಮ
ಪೂಜೆ ಎಂಬುದೆ ಪರಮಾತ್ಮ || ೧ ||

ಬಣ್ಣ ಬಣ್ಣದ ಹಸುಗಳು ಇರಲು
ಹಾಲಿಗೆ ಬಣ್ಣವು ಇದೆಯೇನು?
ಬಣ್ಣದ ಹಸುವೆ ನಿನ್ನಾತ್ಮ
ಬಿಳಿನೊರೆ ಹಾಲೇ ಪರಮಾತ್ಮ || ೨ ||

ಅಂಕುಡೊಂಕುಗಳು ಕಬ್ಬಿಗೆ ಇರಲು
ಒಳಗಿನ ಸಿಹಿಯು ಡೊಂಕೇನು?
ಡೊಂಕಿನ ಕಟ್ಟೆ ನಿನ್ನಾತ್ಮ
ಸಮನಾದ ಸಿಹಿಯೇ ಪರಮಾತ್ಮ || ೩ ||

ಏರಿಳಿತಗಳು ಅಲೆಗಳಿಗಿರಲು
ನೀರಿಗೆ ತಗ್ಗುಳಿವೆಯೇನು?
ಅಲೆಗಳೆಂಬುದೆ ನಿನ್ನಾತ್ಮ
ನೀರು ಎಂಬುದೆ ಪರಮಾತ್ಮ || ೪ ||

ಭಜನೆಗೆ ನಾನಾ ರಾಗಗಳಿರಲು
ಭಕ್ತಿಗೆ ರಾಗವು ಇದೆಯೇನು?
ಭಜನೆ ಎಂಬುದೆ ನಿನ್ನಾತ್ಮ
ಭಕ್ತಿ ಎಂಬುದೆ ಪರಮಾತ್ಮ || ೫ ||

ಸೃಷ್ಟಿಗೆ ಕಮಾನು ಕಂಗಳು ಇರಲು
ದೃಷ್ಟಿಗೆ ದೋಷವು ಇದೆಯೇನು?
ಕಮಾನುಕಂಗಳೆ ನಿನ್ನಾತ್ಮ
ನೇರ ದೃಷ್ಟಿಯೇ ಪರಮಾತ್ಮ || ೬ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಅಡವಿಯ ಶಿವನೆ... ಶಿವ ಜೀವರು ಎಂದೆರಡಿಲ್ಲಾ Next