Previous ಒಲ್ಲೆನೊಕತನವ ಒಲ್ಲೆ, ನಾನಾರೆ ಮುಕುತಿ ಹೋಯಿತು Next

ನಿಬ್ಬಣಕ್ಕೆ ಹೋಗುತೈದೇನೆ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ನಿಬ್ಬಣಕ್ಕೆ ಹೋಗುತೈದೇನೆ, ನೋಡಕ್ಕಯ್ಯ!
ನಿಬ್ಬಣಕೆ ಹೋದಡೆ, ಮರಳಿ ಬಾರನಕ್ಕಯ್ಯ! |ಪಲ್ಲವಿ|

ಧನವು ಧಾನ್ಯ ಮನೆಯೊಳುಂಟು;
ಘನವು ಎನ್ನ ಮನೆಯೊಳಿಲ್ಲ
ಮನೆಯ ಗಂಡ ಮುನಿಯಲೆನ್ನ ಮಂಡೆ ಬೋಳಾಗದು |೧|

ಮಂಡೆದುರುಬ-ಮಿಂಡತನದಿ
ದಿಬ್ಬಣಕ್ಕೆ ನಾ ಹೋದಡೆ
ಮಂಡೆ ಬೋಳಾಗದನಕವಪ್ಪುದೆನಗೆ ನಿಬ್ಬಣ? |೨|

ಗಂಡನುಳ್ಳ ಗರತಿ ನಾನು
ರಂಡೆಯಾದನಯ್ಯೊ; ಇನ್ನು
ಕೊಂಡೊಯ್ಯೊ, ಶಿವನೆ, ಎನ್ನ ಹುಟ್ಟಿದೈವರು ಮಕ್ಕಳ |೩|

ಕಾಮವೆಂಬ ಹೊಲನ ದಾಂಟಿ
ಸೀಮೆಯೆಂಬ ಹೊಲಬನರಿದು
ಹೇಮಗಿರಿಯ ಹೊಕ್ಕ ಬಳಿಕ ಮರಳಿ ಬಾರೆನಕ್ಕಯ್ಯ |೪|

ಸಾಗಿ ಬೇಗದಿಂದ
ಹೋಗಿ ನೆರೆಯದಿದ್ದರೆ,
ಚೆನ್ನಮಲ್ಲಿಕಾರ್ಜುನಯ್ಯ ಮುನಿವ ಕಾಣಕ್ಕಯ್ಯ |೫|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಒಲ್ಲೆನೊಕತನವ ಒಲ್ಲೆ, ನಾನಾರೆ ಮುಕುತಿ ಹೋಯಿತು Next