Previous ಇಷ್ಟಲಿಂಗ ದೀಕ್ಷಾ ಯಾರು ... ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ? Next

ವಚನಕಾರರ ದೃಷ್ಟಿಯಲ್ಲಿ ಶಿವರಾತ್ರಿ .

ಮುಕ್ತಾಯಕ್ಕನವರ ವಚನ

ಸುಮ್ಮನೇಕೆ ದಿನಕಳೆವಿರಿ,
ಸುಮ್ಮನೇಕೆ ಹೊತ್ತುಗಳೆವಿರಿ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ?
ಮಾಡ ಬನ್ನಿ ದಿನ ಶಿವರಾತ್ರಿ ಯ,
ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ. / ಸಮಗ್ರ ವಚನ ಸಂಪುಟ: 5

ವಿವರಣೆ:- ನಿರಾಕಾರ ದೇವನನ್ನು ಪೂಜಿಸಲು ಯಾವುದೇ ಶುಭ ಘಳಿಗೆ ಬೇಕೇ ಆಗಿಲ್ಲ ಎನ್ನುತ್ತಾರೆ ಬಸವಾದಿ ಪ್ರಮಥರೂ. ಆ ನಿರಂಜನನು (ನಿರಾಕಾರ) ನಮಗೆ ಕೊಟ್ಟ ಪ್ರತಿ ದಿನ, ಪ್ರತಿ ಕ್ಷಣವೂ ಅಮೃತ ಘಳಿಗೆಯೆ ಶುಭ ಅಶುಭ ಎನ್ನುವ ದಿನ, ಘಳಿಗೆಗಳು ಇಲ್ಲ ಅನ್ನೋದು ಮುಕ್ತಾಯಕ್ಕನವರ ಈ ವಚನದಲ್ಲಿ ಹೇಳುತ್ತಾರೆ ಮತ್ತು ಎಲ್ಲ ವಚನಕಾರರ ಅಭಿಮತವು ಇದೆ ಆಗಿದೆ.

ಧರ್ಮಗುರು ಬಸವಣ್ಣನವರ ವಚನ

ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿ ಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು. /173 - ಗುರು ಬಸವಣ್ಣ

ಅಚ್ಚಿಗ = ಮೋಡಿ, ಅಂದ.

ಅಚ್ಚಿಗ ಅಂದರೆ ಅತಿಯಾದ ಪ್ರೀತಿ, ಸಂಸಾರದೊಳಗೆ ಸಲ್ಲದು. ಕರ್ತವ್ಯ ಪ್ರಜ್ಞೆಯಿಂದ ಹೆಂಡತಿ ಮಕ್ಕಳನ್ನು, ಬಂಧು ಬಳಗವನ್ನು, ತನ್ನ ವ್ಯಾಪಾರ-ವ್ಯವಹಾರವನ್ನು ಪ್ರೀತಿಸಬೇಕು. ಆದರೆ ಅದರಲ್ಲೇ ತಲ್ಲೀನರಾಗಬಾರದು. ನಿಚ್ಚ ನಿಚ್ಚ ಶಿವರಾತ್ರಿ ಯ ಮಾಡಬೇಕು. ಶಿವರಾತ್ರಿ ಯ ಆಚರಣೆಯೆಂದರೆ ಉಪವಾಸ ಮತ್ತು ಜಾಗರಣೆ. ವರ್ಷಕ್ಕೊಮ್ಮೆ ಹಗಲು ಉಪವಾಸ ರಾತ್ರಿ ಜಾಗರಣೆ ಮಾಡಿದರೆ ಸಾಲದು. ದಿನನಿತ್ಯದ ಜೀವನದಲ್ಲಿಯೂ ಮಿತಾಹಾರವನ್ನು ಅಳವಡಿಸಿಕೊಳ್ಳಬೇಕು ಮತ್ತು ಇಂದ್ರಿಯ ಗಳನ್ನು ನಿಯಂತ್ರಿಸಿಕೊಳ್ಳಬೇಕು. ಮಂತ್ರ ಜಪವನ್ನು ಅಳವಡಿಸಿಕೊಂಡು ನಿದ್ರಾವಶವಾಗುವುದರಿಂದ ಜೀವನವು ದೈವೀಕರಣಗೊಳ್ಳುವುದು. ಇದು ಒಂದು ರೀತಿಯ ಶಿವರಾತ್ರಿ ಜಾಗರಣೆ!

ನಿಚ್ಚ ನಿಚ್ಚ ಶಿವರಾತ್ರಿ ಯ ಮಾಡುವುದರ ಮರ್ಮವೇನೆಂದರೆ ಧರ್ಮವನ್ನು ಎಲ್ಲ ಕ್ರಿಯೆಗಳಲ್ಲೂ ಅಳವಡಿಸಿಕೊಂಡು ಮುನ್ನಡೆಯುವುದು, ಸುಪ್ರಭಾತದಲ್ಲಿ ಇಷ್ಟಲಿಂಗಾರ್ಚನೆಯನ್ನು ಮಾಡುವುದು. ಮಧ್ಯಾಹ್ನ ಕಾಯಕ-ದಾಸೋಹ ಮಾಡುವುದು. ವಯಸ್ಸು ಕಳೆದು ನಿಸ್ಸಹಾಯಕರಾಗುವ ಮೊದಲೇ ಲಿಂಗದೇವನನ್ನು ಕೂಡುವುದು.

ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿ ಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ. /280 - ಗುರು ಬಸವಣ್ಣ

ಕೆಲವರ ನಾಲಿಗೆ ಬಲು ಮೃದು, ಬೆಲ್ಲದಂತಹ ಸವಿ ಮಾತು, ವಿನಯಪೂರ್ಣ ವರ್ತನೆಯಿಂದ ಕೂಡಿರುತ್ತದೆ. ಆದರೆ ಹೃದಯ ಮಾತ್ರ ಕತ್ತರಿಯಂತೆ, ಸದಾ ಎದುರಾಳಿಯ ಕೆಡುಕು ಬಯಸುತ್ತದೆ. ಇಂಥಹವರು ಧರ್ಮಿಗಳೊಡನೆ ಆಡುವುದೇನು? ಹಾಡುವುದೇನು? ದಿನ ನಿತ್ಯ ಪೂಜೆಯ ಮಾಡಿದಡೇನು? ಜಪ ಮಾಡಿದಡೇನು? ಮನಸ್ಸು ಎಳ್ಳಷ್ಟು ಶುದ್ಧೀಕರಣಗೊಂಡಿರುವುದಿಲ್ಲ. ಅಂಥವರ ಮೇಲೆ ಲಿಂಗದೇವನು ಕೃಪಾ ದೃಷ್ಟಿ ಬೀರದೆ ನಿರ್ಲಿಪ್ತನಾಗಿರುವನು.

ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು.
ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು.
ನಿಚ್ಚ ನಿಚ್ಚ ಶಿವರಾತ್ರಿ ಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನೇ!
ಎನ್ನಲ್ಲಿ ನಡೆಯಿಲ್ಲಾಗಿ, ನಾನು ಭಕ್ತನೆಂತಹೆನಯ್ಯಾ,
ಕೂಡಲಸಂಗಮದೇವಾ / 292 - ಗುರು ಬಸವಣ್ಣ

ಹೊಲ್ಲ = ಕೆಟ್ಟ(ದ್ದು), ಅಯೋಗ್ಯ
ಕಾಬು = ಕಾಣು

ಮಾನವ ಜನ್ಮ ಸಂಸಾರ ಬಲು ಕಷ್ಟದಾಯಕ; ಕಟ್ಟದು (ಹೊಲ್ಲ) ಇದನ್ನು ನಾನು ಒಲ್ಲೆ ಎನ್ನೋಣವೇ ಇದನ್ನು ಬಿಡಲಾರೆನು. ಎಕೆಂದರೆ ದೇವರನ್ನು ಒಲಿಸಲು ಮಾನವ ಜನ್ಮವೇ ಒಂದು ಶ್ರೇಷ್ಠ ಸಾಧನ. ಭಕ್ತರ, ಶರಣರ ಸಾಂಗತ್ಯ, ಒಡನಾಟ ಪಡೆದರೆ ಮಾತ್ರ ನಾನು ಭಕ್ತಿಯ ಪಥವನ್ನು ಅರಿಯಲು ಸಾಧ್ಯ, ಲಿಂಗದ ಸ್ವರೂಪ ಜ್ಞಾನ ಉಂಟಾದರೆ ಮಾತ್ರ ನಮಗೆ ನಿರಾಕಾರ ದೇವನ ಸಾಕಾರ ಮುಖವಾದ ಜಂಗಮವನ್ನು ದರ್ಶಿಸಲು ಸಾಧ್ಯ. ವರ್ಷಕ್ಕೊಂದು ಶಿವರಾತ್ರಿ ಮಾಡುವುದಲ್ಲ. ನಿತ್ಯವೂ ಶಿವರಾತ್ರಿ ಮಾಡಬೇಕು. ಏಕೆಂದರೆ ಅಜ್ಞಾನಿ ಜನರು ಅಂದು ತಪ್ಪದೆ ಸ್ನಾನ ಮಾಡಿ, ಲಿಂಗದರ್ಶನ ಪಡೆಯುವರು. ರಾತ್ರಿ ಜಾಗರಣೆ ಮಾಡಿ ಶಿವಧ್ಯಾನದಲ್ಲಿ ಕಾಲ ಕಳೆಯುತ್ತಾರೆ ಇದು ನಿತ್ಯವೂ ಸಾಗಬೇಕು. ಪ್ರತಿ ರಾತ್ರಿಯನ್ನು ಪವಿತ್ರವಾಗಿ ದೇವಧ್ಯಾನದಲ್ಲಿ ಕಳೆಯಬೇಕು. ಶಿವರಾತ್ರಿ ಯಂದು ಮಿತಾಹಾರವನ್ನು ಮಾಡುವಂತೆ ನಿತ್ಯವೂ ಮಿತಾಹಾರವನ್ನು ಮಾಡಬೇಕು ಹೀಗೆ ನಿತ್ಯವೂ ಶಿವರಾತ್ರಿ ಮಾಡಿದರೆ ಕೈಲಾಸವನ್ನು ನಾವು ಎಲ್ಲಿಯೂ ಹುಡುಕಬೇಕಾಗಿಲ್ಲ. ನಮ್ಮ ಮನದಲ್ಲೇ ಕೈಲಾಸವು ನಿರ್ಮಾಣವಾಗುವುದು. ಕೈಲಾಸವು ಸ್ಥಾನ ವಿಶೇಷವಲ್ಲ, ತತ್ವ ವಿಶೇಷ. ಏನು ಮಾಡುವುದು ನನ್ನಲ್ಲಿ ಈ ಎಲ್ಲ ಆಚರಣೆ ಇಲ್ಲದ ಕಾರಣ ನಾನು ಭಕ್ತನು ಹೇಗಾಗುತ್ತೇನೆ? ದೇವನ ಒಲುಮೆಯನ್ನು ಹೇಗೆ ಪಡೆಯಬಲ್ಲವನಾಗುತ್ತೇನೆ?!

ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿ ಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ, ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ. / 342 - ಗುರು ಬಸವಣ್ಣ

ಕಪ್ಪಡಿ = ಸನ್ಯಾಸಿ ವೇಷ, ಶಿವನ ವೇಷ
ಪಂಗುಳ = ಹೆಳವ, ಕುಂಟ, ಮೂಗ, ಸೇವಕ

ನಿಜವಾದ ಲಿಂಗಾಯತ ಧರ್ಮಾನುಯಾಯಿಯು ನಿತ್ಯವೂ ಅರ್ಚನೆಯನ್ನು ಮಾಡಬೇಕು. ಇಷ್ಟಲಿಂಗದ ಪೂಜೆ ಮಾಡಿ, ಸೃಷ್ಟಿಕರ್ತನ ಪ್ರಾರ್ಥನೆ, ಧ್ಯಾನಗಳನ್ನು ಮಾಡಬೇಕು. ಉಳಿದ ಜನರಂತೆ ವರ್ಷಕ್ಕೊಂದೇ ದಿನ ಶಿವರಾತ್ರಿ ಆಚರಿಸದೆ ನಿಚ್ಚ ನಿಚ್ಚ ಶಿವರಾತ್ರಿ ಯ ಮಾಡಬೇಕು. ಇದನ್ನೇನೂ ಮಾಡದೆ ಕೆಲವರು ಹೊಟ್ಟೆಯ ಪಾಡಿಗಾಗಿ ಶಿವನ ವೇಷವನ್ನು ಧರಿಸಿ ಕೈಯಲ್ಲಿ ತ್ರಿಶೂಲ ಹಿಡಿದು ಅಲಂಕರಿಸಿದ ಎತ್ತಿನ ಮೇಲೆ ಬರುವರು. ಶಿವನಂತಹ ಮಹಾನುಭಾವನ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಈ ವೇಷಧಾರಣೆ ಕೇವಲ ಉದರ ಪೋಷಣೆಗಾಗಿ, ಬಸವಣ್ಣನವರು ಬೇಡುತ್ತಾರೆ, 'ದೇವಾ, ನನಗೆ ಇಂಥ ವೇಷಧಾರಣೆ ಬೇಡ. ನಾನು ಸದಕ್ತರ ಮನೆಯ ಸೇವಕನಾಗಿ ಇರಬಯಸುತ್ತೇನೆ'. ಧರ್ಮಪಿತ ಬಸವಣ್ಣನವರು ಅತ್ಯಂತ ವೈಚಾರಿಕ, ಪ್ರಗತಿಪರ ಧರ್ಮವನ್ನು ಕೊಟ್ಟರಾದರೂ ಅದರೊಳಕ್ಕೆ ಹಲವು ಬಗೆಯ ಜನರು ಸೇರಿಕೊಳ್ಳತೊಡಗಿದರು. ಕಪ್ಪಡಿಯ ವೇಷ ಧರಿಸಿ ತೋರಿಕೆಗೊಂದು ಇಷ್ಟಲಿಂಗ ಲಾಂಛನವ ಧರಿಸಿಕೊಂಡು ಜನರ ಬಳಿಗೆ ಬರುವುದನ್ನು ಕಂಡು ಗುರು ಬಸವಣ್ಣನವರು ವಿಷಾದವನ್ನು ವ್ಯಕ್ತಪಡಿಸುತ್ತಾರೆ.


ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ!
ಕೂಡಲಸಂಗನ ಶರಣನ
ಕಾಯಕವೆ ಕೈಲಾಸ ಕಾಣಿರೊ. - ಗುರು ಬಸವಣ್ಣ

ದೇವನ ಧ್ಯಾನವನ್ನೆ ಹಾಸು ಹೊಕ್ಕಾಗಿ ಮಾಡಿಕೊಂಡ ಶರಣನು, ನಿದ್ರೆಗೆ ಹೋದರೆ ಅದು ಜಪಯೋಗವಾಗುತ್ತದೆ. ಏಕೆಂದರೆ ನಿದ್ರಾ(ಸ್ವಪ್ನಾ)ವಸ್ಥೆಯಲ್ಲಿ ಸಹ ಅವನ ಅಂತರ್ಮನವು ಲಿಂಗದೇವನ ಧ್ಯಾನದಲ್ಲಿ ತೊಡಗಿರುತ್ತದೆ. ಶರಣನು ಎದ್ದು ಕುಳಿತರೆ ಅದು ಶಿವರಾತ್ರಿ ಯ ಜಾಗರಣೆಯಾಗಿರುತ್ತದೆ. ಶರಣನು ಸದಾ ಜಾಗೃತ ಸ್ಥಿತಿಯಲ್ಲಿರುತ್ತಾನೆ. ಅವನ ಜೀವನ ಹಾಗೂ ನಡೆ ಬಹಳ ಪವಿತ್ರವಾದುದು ; ಅವನು ಮಾತನಾಡಿದರೆ ಅದು ಶಿವತತ್ತ್ವ ಎನಿಸಿಕೊಳ್ಳುತ್ತದೆ. ಹೀಗಾಗಿ ಲಿಂಗದೇವನ ಶರಣರು ಮಾಡುವ ಕಾಯಕವು “ಬರಿ ದುಡಿಮೆಯಲ್ಲ. ಸಾಕ್ಷಾತ್ ಕೈಲಾಸ.” ಇಲ್ಲಿ ಕೈಲಾಸವೆಂಬುದು ಸ್ಥಾನವಿಶೇಷವಲ್ಲ. ತತ್ತ್ವವಿಶೇಷ, ಕೈಲಾಸ ಎಂಬ ಪದ ಸಮೃದ್ಧಿ ಹಾಗೂ ಸಂತೃಪ್ತಿಯ ಸಂಕೇತ. ಇದು ಒಂದು ಮನಸ್ಥಿತಿ.

ಚೆನ್ನಬಸವಣ್ಣನವರ ವಚನ

ಸೋಮವಾರ ಮಂಗಳವಾರ ಶಿವರಾತ್ರಿ ಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ?
ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ?
ದಿನ ಶ್ರೇಷ್ಠವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು. /೧೭೫ - ಚೆನ್ನಬಸವಣ್ಣ

ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ? ಲಿಂಗ ಶ್ರೇಷ್ಠವೊ? ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ
ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು
ಮಾಡುವನಾಗಿ
ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ
ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ ನಾಯಕನರಕದಲ್ಲಿಕ್ಕುವನು /ಸಮಗ್ರ ವಚನ ಸಂಪುಟ: 3

ಈ ವಚನಕ್ಕೆ ವಿವರಣೆ ಬೇಕಾಗಿಲ್ಲ ಓದುತ್ತ ಹೋದಂತೆ ಅರ್ಥ ಆಗಿಬಿಡುತ್ತೆ. ದಿನ ಶ್ರೇಷ್ಠವೊ? ಲಿಂಗ ಶ್ರೇಷ್ಠವೊ? ದಿನ ಶ್ರೇಷ್ಠವೆಂದು ಮಾಡುವ ದುರಾಚಾರಿಯ ಮುಖವ ನೋಡಲಾಗದು ಅನ್ನುತ್ತಾರೆ ಚೆನ್ನಬಸವಣ್ಣ ನವರು, ಯಾಕೆ ಅನ್ನುವದಕ್ಕೆ ಮುಂದಿನ ಸಾಲಿನಲ್ಲಿ ಉತ್ತರ ಕೊಡ್ತಾರೆ. ನೋಡಲಾಗದು, ಅದೆಂತೆಂದಡೆ: ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ, ಅವನು ದಿನದ ಭಕ್ತನು. ಆತ ಕೇವಲ ಆ ದಿನಕ್ಕೆ ಭಕ್ತನಾದ ಹೊರತು ಆ ನಿರಾಕಾರ ದೇವನ ಭಕ್ತ ಆಗಲ್ಲ ಅನ್ನುತ್ತಾರೆ ಚೆನ್ನಬಸವಣ್ಣ ನವರು.

ಇನ್ನು ಸದ್ಭಕ್ತ ಯಾರು ಎನ್ನುವದನ್ನು ಹೀಗೆ ಹೇಳ್ತಾರೆ.

'ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ ಆತ ಲಿಂಗಭಕ್ತನು'

ಕೈಯಲ್ಲಿರುವ ಲಿಂಗವೇ ಘನ, ಜಂಗಮ (ಜಂಗಮ = ಚಲನಶೀಲ) ಸಮಾಜವೇ ಶ್ರೇಷ್ಠ ಅನ್ನುವವನೆ ಸದ್ಭಕ್ತ ಅಥವಾ ಲಿಂಗಭಕ್ತ .

ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿ ಯ ಮಾಡು ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಲಿಂಗಕ್ಕೆ. / ೧೪೩೪ -ಸಿದ್ಧರಾಮೇಶ್ವರ

ಒಬ್ಬ ಶಿವಶರಣನು ಶಿವರಾತ್ರಿ ಯಲ್ಲಿ
ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ.
ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ,
ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ,
ಸುಜ್ಞಾನವೆಂಬ ರಂಗವಾಲಿಯ ತುಂಬಿ,
ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ,
ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿಭರ್ಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ. / 1086 - ಜಕ್ಕಣ್ಣಯ್ಯ

ಕಾಡಸಿದ್ಧೇಶ್ವರರ ವಚನ

ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿ ದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ,
ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./ಸಮಗ್ರ ವಚನ ಸಂಪುಟ: 10

ವಿವರಣೆ:-
'ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,

ವಚನಕಾರ ಕಾಡಸಿದ್ಧೆಶ್ವರರು ಕೂಡ ದಿನ (ಶಿವರಾತ್ರಿ ದಿನ) ಶ್ರೇಷ್ಠ ಅನ್ನವವರನ್ನು ಅಧಮ ಅನ್ನುತ್ತಿದ್ದಾರೆ. ಪ್ರತಿ ದಿನ, ಪ್ರತಿ ಕ್ಷಣವೂ ಶ್ರೇಷ್ಠ ಅನ್ನುವದು ಎಲ್ಲ ಬಸವಾದಿ ಪ್ರಮಥರ ಭಾವ.
-ಶರಣು ಶರಣಾರ್ಥಿಗಳು

*
Previous ಇಷ್ಟಲಿಂಗ ದೀಕ್ಷಾ ಯಾರು ... ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ? Next