Previous ಅರಿವು (ಆರುಹು) ಆಚಾರ ಪ್ರಭೇದ Next

ಆಚಾರ

ಆಚಾರ

ವಚನಗಳಲ್ಲಿ ಆಚಾರ" ಎಂಬ ಪದಕ್ಕೆ ಪರ್ಯಾಯವಾಗಿ, ಕ್ರೀ, ಕ್ರಿಯೆ, ಕರ್ಮ, ಕ್ರಿಯಾಕರ್ಮ, ಮಾಟ, ಮುಂತಾದ ಪದಗಳು ಪ್ರಯೋಗವಾಗಿವೆಯಾದರೂ, ಎಲ್ಲ ಕ್ರಿಯೆ, ಅಥವಾ ಕರ್ಮಗಳೂ ಆಚಾರವೆನಿಸಿಕೊಳ್ಳಲಾರವು. ಏಕೆಂದರೆ, ಕರ್ಮ ಅಥವಾ ಕ್ರಿಯೆ ಎಂಬ ಪದದಲ್ಲಿ ಐಚ್ಛಿಕ ಕ್ರಿಯೆ ಮತ್ತು ಅನೈಚ್ಛಿಕ ಕ್ರಿಯೆ ಎಂಬ ಎರಡು ಅರ್ಥಗಳೂ ಸೇರಿದ್ದರೆ, ಆಚಾರಕ್ಕೆ ಐಚ್ಛಿಕ ಕ್ರಿಯೆ ಎಂಬ ಒಂದೇ ಅರ್ಥವಿದೆ. ಉದಾಹರಣೆಗೆ, ಸಹಾಯ ಮಾಡುವುದು, ಕೊಲ್ಲುವುದು ಮುಂತಾದ ಐಚ್ಛಿಕ ಕ್ರಿಯೆಗಳು ಹೇಗೆ ಕ್ರಿಯೆಗಳೋ ಹಾಗೆಯೇ ಉಸಿರಾಡುವುದು, ಯಾಂತ್ರಿಕವಾಗಿ ಕಣ್ಣುರೆಪ್ಪೆ ಬಡಿಯುವುದು ಮುಂತಾದ ಅನೈಚ್ಛಿಕ ಕ್ರಿಯೆಗಳೂ ಕ್ರಿಯೆಗಳೇ. ಅಲ್ಲದೆ, ಕೆಲವು ಐಚ್ಛಿಕ ಕ್ರಿಯೆಗಳು ಧಾರ್ಮಿಕವಾಗಲಿ, ನೈತಿಕವಾಗಲಿ ಇರುವುದಿಲ್ಲ. ಉದಾಹರಣೆಗೆ ನೆಲದ ಮೇಲೆ ಬಿದ್ದಿರುವ ಪುಸ್ತಕಗಳನ್ನು ತೆಗೆದು, ಅವುಗಳನ್ನು ಮೇಜಿನ ಮೇಲೆ ಸರಿಯಾಗಿ ಜೋಡಿಸುವುದು ಒಂದು ಐಚ್ಛಿಕ ಕ್ರಿಯೆಯಾದರೂ ಅದು ಪೂಜೆಯಂತಹ ಧಾರ್ಮಿಕ ಕ್ರಿಯೆಯೂ ಅಲ್ಲ, ದಾನದಂತಹ ನೈತಿಕ ಕ್ರಿಯೆಯೂ ಅಲ್ಲ. ಆದರೆ ಆಚಾರ ಎಂಬ ಪದಕ್ಕೆ ಒಂದು ನಿಯಮಕ್ಕೆ ಬದ್ಧವಾದ ರೀತಿಯಲ್ಲಿ ಮಾಡುವ ನೈತಿಕ ಅಥವಾ ಧಾರ್ಮಿಕ ಕ್ರಿಯೆ ಎಂಬ ಅರ್ಥವಿದ್ದು, ಅನೈಚ್ಛಿಕವಾಗಿ ಉಸಿರಾಡುವುದಾಗಲಿ, ನೆಲದ ಮೇಲೆ ಬಿದ್ದಿರುವ ಪುಸ್ತಕಗಳನ್ನು ಮೇಜಿನ ಮೇಲೆ ಸರಿಯಾಗಿ ಜೋಡಿಸುವಂಥ ಐಚ್ಛಿಕ ಕ್ರಿಯೆಯಾಗಲಿ ಅದರ ಅರ್ಥದ ಪರಿಧಿಯಲ್ಲಿ ಬರುವುದಿಲ್ಲ. ಏಕೆಂದರೆ, ಉಸಿರಾಡಬೇಕೆಂಬ ನಿಯಮವನ್ನಾಗಲಿ, ಪುಸ್ತಕಗಳನ್ನು ಜೋಡಿಸಬೇಕೆಂಬ ನಿಯಮವನ್ನಾಗಲಿ ಯಾರೂ ಮಾಡಿಲ್ಲ, ಆದರೆ ಕಳಬೇಡ, ಕೊಲಬೇಡ, ಲಿಂಗಪೂಜೆ ಮಾಡು ಮುಂತಾದ ನಿಯಮಗಳನ್ನು ಮಾಡಿದ್ದಾರೆ.

ಆಚಾರವು ನಿಯಮಕ್ಕೆ ಸಂಬಂಧಿಸಿದೆಯಾದುದರಿಂದ ಅದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗೆ ಇದೆ ಎಂದರ್ಥ. ಅಂದರೆ ಒಂದು ನಿಯಮವನ್ನು ಇಚ್ಛಾಪೂರ್ವಕವಾಗಿ ಒಪ್ಪಿಕೊಂಡರೆ, ನಾವು ಅದರಂತೆ ಮಾಡುವುದು ಆಚಾರ ಅಥವಾ ಸದಾಚಾರವಾಗುತ್ತದೆ. ಆ ನಿಯಮವನ್ನು ಒಪ್ಪಿಕೊಳ್ಳದೆ, ಅವಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಆ ನಮ್ಮ ನಡವಳಿಕೆ ಅನಾಚಾರ ಅಥವಾ ದುರಾಚಾರ ಎನಿಸಿಕೊಳ್ಳುತ್ತದೆ. ಹೀಗೆ ನಿಯಮವಿಲ್ಲದೆ ಹಾಗೂ ಆಯ್ದುಕೊಳ್ಳುವ ಸ್ವಾತಂತ್ರವಿಲ್ಲದೆ ಮಾಡುವ ಕ್ರಿಯೆಗಳು ಆಚಾರವಲ್ಲ.

ಆದರೆ ನಿಯಮಗಳಿಗನುಸಾರವಾಗಿ ಮಾಡಿದ ಕ್ರಿಯೆಗಳೆಲ್ಲಾ ಆಚಾರಗಳಲ್ಲ. ಉದಾಹರಣೆಗೆ, ಒಬ್ಬ ಕ್ರಿಕೆಟ್ ಆಟಗಾರ, ನಿಯಮಗಳಿಗನುಸಾರವಾಗಿ ಚೆಂಡನ್ನು ಹೊಡೆಯುತ್ತಾನೆ: ಒಬ್ಬ ಬೌಲರ್ ನಿಯಮವೊಂದರ ವಿರುದ್ದವಾಗಿ ಬೌಲ್ ಮಾಡುತ್ತಾನೆ. ಆದರೆ ಇದರ ಅರ್ಥ ಮೊದಲನೆಯವನ ಕ್ರಿಯೆ ಆಚಾರ, ಎರಡನೆಯವನ ಕ್ರಿಯೆ ದುರಾಚಾರ, ಎಂದಲ್ಲ. ಆದುದರಿಂದ, ಆಚಾರ ಎಂಬ ಪದವನ್ನು ವಚನಕಾರರು ಧಾರ್ಮಿಕ ಮತ್ತು ನೈತಿಕ ಕ್ರಿಯೆಗಳಿಗೆ ಮಾತ್ರ ಅನ್ವಯಿಸುವಂತೆ ಬಳಸಿದ್ದಾರೆ, ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಆಚಾರಗಳು ಒಂದು ತುದಿಯಲ್ಲಿ ನಿಯಮಗಳಿಗೆ ಸಂಬಂಧಿಸಿದ್ದರೆ, ಮತ್ತೊಂದು ತುದಿಯಲ್ಲಿ ಪ್ರತಿಫಲಗಳಿಗೆ ಸಂಬಂಧಿಸಿವೆ. ಉದಾಹರಣೆಗೆ, ನಿತ್ಯ ಮೂರು ಹೊತ್ತು ಇಷ್ಟಲಿಂಗ ಪೂಜೆ ಮಾಡುವುದರಿಂದ ಶಿವಾನುಗ್ರಹ ಲಭಿಸುತ್ತದೆ. ಕಾಯಕ ದಾಸೋಹ ಮಾಡುವುದರಿಂದ ನಮ್ಮ ಮನಸ್ಸು ಶುದ್ಧವಾಗುತ್ತದೆ, ಎಂಬ ವಾಕ್ಯಗಳು ಇಂಥಿಂಥ ಆಚಾರಗಳಿಗೆ ಇಂಥಿಂಥ ಫಲಗಳುಂಟು ಎಂಬುದನ್ನು ತಿಳಿಸುತ್ತದೆ. ಬಹಳ ಪ್ರಸಿದ್ಧವಾದ ಬಸವ ವಚನವನ್ನು ನೋಡಿ : “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲಸಂಗಮದೇವರ ಒಲಿಸುವ ಪರಿ". ೧. ಈ ವಚನದಲ್ಲಿ ಕಳಬೇಡ, ಕೊಲಬೇಡ ಎಂಬ ನೈತಿಕ ನಿಯಮಗಳಿವೆ: ೨. ಈ ನಿಯಮಗಳನ್ನು ಆಚರಿಸಿದರೆ, ನಮ್ಮ ಅಂತರಂಗವೂ, ಬಹಿರಂಗವೂ ಶುದ್ದಿಯಾಗುತ್ತದೆ. ಮತ್ತು ೩. ದೇವರು ನಮ್ಮ ಅಂತರಂಗ ಶುದ್ಧಿಯನ್ನು ಮೆಚ್ಚಿಕೊಂಡು, ನಮಗೆ ಲಿಂಗಾಂಗ ಸಾಮರಸ್ಯವನ್ನು ಅನುಗ್ರಹಿಸುತ್ತಾನೆ. ಅಂದರೆ, ಲಿಂಗಾಂಗ ಸಾಮರಸ್ಯ ಎಂಬ ಫಲವನ್ನು ಬಯಸುವವನು ಬಸವವಚನದಲ್ಲಿ ಉಕ್ತವಾಗಿರುವ ಹಾಗೂ ಇತರ ನಿಯಮಗಳನ್ನು ಆಚರಿಸಬೇಕು, ಅದನ್ನು ಬಯಸದವನು ಆಚರಿಸಬೇಕಿಲ್ಲ ಎಂಬುದು ಇದರ ಅರ್ಥ. ಅದೇ ರೀತಿ, ಸಾಮರಸ್ಯವನ್ನು ಬಯಸಿಯೂ ಮೇಲಿನಂತೆ ಆಚರಿಸದಿದ್ದರೆ, ಅಂಥವನಿಗೂ ಸಾಮರಸ್ಯ ಲಭ್ಯವಿಲ್ಲ, ಎಂಬುದೂ ಇದರ ಅರ್ಥ.

ವಚನಕಾರರು ಲಿಂಗಾಂಗ ಸಾಮರಸ್ಯವನ್ನು ಗುರಿಯಾಗಿಟ್ಟುಕೊಂಡು, ಅನೇಕ ನಿಯಮಗಳನ್ನು ರೂಪಿಸಿದ್ದಾರೆ. ಆ ನಿಯಮಗಳಿಗೆ ತಕ್ಕಂತೆ ಮಾಡುವ ಆಚಾರಗಳನ್ನು ನಾವು ಸ್ಕೂಲವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು.

೧. ಕೇವಲ ಧಾರ್ಮಿಕ ಆಚಾರಗಳು, ಮತ್ತು ೨. ಕೇವಲ ನೈತಿಕ ಆಚಾರಗಳು,

೧. ಅಷ್ಟಾವರಣಗಳ ಆಚಾರಗಳೆಲ್ಲವೂ ಕೇವಲ ಧಾರ್ಮಿಕ ಆಚಾರಗಳು. ಮೋಕ್ಷಾರ್ಥಿಯು ಗುರುವಿನ ಬಳಿ ಹೋಗಿ ಅವನಿಂದ ಲಿಂಗದೀಕ್ಷೆ ಪಡೆಯಬೇಕು; ಲಿಂಗವನ್ನು ನಿತ್ಯ ಮೂರು ಹೊತ್ತು ಪೂಜಿಸಬೇಕು, ಜಂಗಮರಿಗೆ ಕಾಣಿಕೆ ಕೊಡಬೇಕು. ಪಾದೋದಕ, ಪ್ರಸಾದ ಸೇವಿಸಬೇಕು, ವಿಭೂತಿ ಮತ್ತು ರುದ್ರಾಕ್ಷಿ ಧರಿಸಬೇಕು ಮತ್ತು ಲಿಂಗಾಯ ನಮಃ ಎಂಬ ಮಂತ್ರವನ್ನು ಜಪಿಸಬೇಕು.

೨. ಸತ್ಯವನ್ನು ಹೇಳಬೇಕು, ಸಕಲ ಪ್ರಾಣಿಗಳಿಗೆ ದಯ ತೋರಿಸಬೇಕು, ಕಾಯಾವಾಚಾಮನಸಾ ಹಿಂಸೆಯನ್ನು ಮಾಡಬಾರದು, ಕಳ್ಳತನ ಮಾಡಬಾರದು, ಬೇರೆಯವರು ಕೊಟ್ಟಿದುದನ್ನು ಅನಾವಶ್ಯಕವಾಗಿ ಸ್ವೀಕರಿಸಬಾರದು, ಸುಳ್ಳು ಹೇಳಬಾರದು, ಇತ್ಯಾದಿ ನಿಯಮಗಳೆಲ್ಲಾ ನೈತಿಕ ಆಚಾರಗಳನ್ನು ಮಾಡಿ, ಅನೈತಿಕ ಆಚಾರಗಳನ್ನು ಬಿಡಿ ಎಂದು ಹೇಳುತ್ತವೆ.

ಪರಮಾತ್ಮನಲ್ಲಿ ನಂಬಿಕೆಯಿಲ್ಲದ ಕೆಲವರು, ಧಾರ್ಮಿಕ ಆಚಾರಗಳಿಲ್ಲದೆಯೆ, ಕೇವಲ ನೈತಿಕ ಆಚಾರಗಳನ್ನು ಮಾಡಬಹುದು ಎಂದು ಹೇಳುತ್ತಾರೆ. ಒಂದರ್ಥದಲ್ಲಿ ಇದು ಸತ್ಯವಾದರೂ, ನೈತಿಕ ಆಚರಣೆಗಳಿಲ್ಲದೆಯೆ ಧರ್ಮವನ್ನು ಆಚರಿಸಬಹುದು ಹಾಗೂ ಧಾರ್ಮಿಕ ಗುರಿಯನ್ನು ಸಾಧಿಸಬಹುದು ಎಂಬ ಮಾತು ಮಾತ್ರ ಅಸತ್ಯ. ಇಲ್ಲಿ ಧರ್ಮ ಅಥವಾ ಧಾರ್ಮಿಕ ಆಚಾರ ಎಂಬ ಪದವು ಲಿಂಗಪೂಜೆ, ವಿಭೂತಿ ಧಾರಣೆ ಮುಂತಾದ ಕ್ರಿಯೆಗಳಿಗಷ್ಟೇ ಅಲ್ಲ, ನೈತಿಕ ಕ್ರಿಯೆಗಳಿಗೂ ಅನ್ವಯಿಸುತ್ತದೆ ಎಂಬ ಮಾತನ್ನು ಒಪ್ಪಿಕೊಂಡರೆ ನೀತಿಯಿಲ್ಲದ ಧರ್ಮ ಧರ್ಮವೇ ಅಲ್ಲ ಎಂಬ ಮಾತು ನಿರ್ವಿವಾದವಾಗುತ್ತದೆ. ಅದಕ್ಕೆ ಬಸವಣ್ಣನವರು ದಯವಿಲ್ಲದ ಧರ್ಮ ಧರ್ಮವೇ ಅಲ್ಲ ಎಂದಿದ್ದಾರೆ. ಅದೇ ರೀತಿ ತೊರೆವ ಮೀವ ಅಣ್ಣಗಳಿರಾ.... ತೊರೆಯಿಂಭೋ ಪರನಾರಿ ಸಂಗವ.... ಪರಧನದಾಮಿಷವ, ಇವ ತೊರೆಯದೆ ಹೋಗಿ ತೊರೆಯ ಮಿಂದರೆ ಅದು ಧರ್ಮವಾಗುವದಿಲ್ಲ ಹಾಗೂ ಅಂಥ ಬಾಹ್ಯ ಕ್ರಿಯೆಗಳೆಲ್ಲಾ ವ್ಯರ್ಥ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆಚಾರಗಳು ಒಂದೇ ತೆರನಾಗಿರುವದಿಲ್ಲ. ವಚನಕಾರರು ಆಧ್ಯಾತ್ಮ ಸಾಧನೆಯಲ್ಲಿ ಆರು ಹಂತಗಳನ್ನು ಗುರುತಿಸಿ, ಅವನ್ನು ಸ್ವಲವೆಂದು ಕರೆದಿದ್ದಾರೆ. ಈ ಆರು ಸೈಲಗಳಲ್ಲಿ ಸಾಧಕನು ತನ್ನ ಸಿದ್ಧಾಂತಗಳನ್ನು ವಿಕಾಸಗೊಳಿಸಿಕೊಂಡಂತೆ, ಅದಕ್ಕೆ ತಕ್ಕಂತೆ ಆಚಾರಗಳನ್ನೂ ವಿಕಾಸಗೊಳಿಸಿಕೊಳ್ಳುತ್ತಾನೆ. ಉದಾಹರಣೆಗೆ, ಅವನು ಮೊದಲು ಶಿವನು ಲಿಂಗವೆಂದು ತಿಳಿದು ಅದಕ್ಕೆ ಪೂಜೆ, ಅರ್ಪಣೆ ಮಾಡುತ್ತಾನೆ. ಮುಂದಿನ ಹಂತದಲ್ಲಿ ಲಿಂಗವು ಕೇವಲ ಪರಶಿವನ ಕುರುಹೆಂದು ತಿಳಿದು, ಇಷ್ಟಲಿಂಗಕ್ಕೆ ಪ್ರಾಮುಖ್ಯತೆ ಕೊಡುವುದನ್ನು ಕಡಿಮೆ ಮಾಡಿ ಪರಶಿವನಿಗೆ ಪ್ರಾಮುಖ್ಯತೆ ಕೊಡಲು ಪ್ರಾರಂಭಿಸುತ್ತಾನೆ. ಇನ್ನೂ ಮುಂದಿನ ಹಂತದಲ್ಲಿ, ಪರಶಿವನು (ಲಿಂಗವು) ನಮ್ಮ ಪ್ರತಿ ಅಂಗದಲ್ಲಿಯೂ ಇದ್ದಾನೆ ಎಂದು ಭಾವಿಸುತ್ತಾನೆ. ಕೊನೆಯಲ್ಲಿ ಸಾಮರಸ್ಯದ ಮೂಲಕ ತಾನೆ ಲಿಂಗ ಎಂಬದನ್ನೂ ಅರಿಯುತ್ತಾನೆ. ಅದೆ ರೀತಿಯಲ್ಲಿ ಅವನ ಆಚಾರದಲ್ಲಿಯೂ ಒಂದು ವಿಕಾಸವನ್ನು ಕಾಣಬಹುದು, ಸಾಧಕನು ಪ್ರಥಮ ಹಂತದಲ್ಲಿ ಲಿಂಗಕ್ಕೆ ಆಹಾರವನ್ನು ಅರ್ಪಿಸಿ, ಅದು ಪ್ರಸಾದವಾದಾಗ, ಅದನ್ನು ಸ್ವೀಕರಿಸುತ್ತಾನೆ. ಆದರೆ ಇನ್ನೂ ಮುಂದಿನ ಸ್ಥಲಕ್ಕೆ ಬಂದಾಗ, ಅವನು ಆಹಾರವನ್ನಷ್ಟೇ ಅಲ್ಲ, ತಾನು ಸೇವಿಸುವ ಗಾಳಿ, ಕುಡಿಯುವ ನೀರು, ಕೇಳುವ ಶಬ್ದ, ಇವೆಲ್ಲವನ್ನೂ ಶಿವನಿಗೆ ಅರ್ಪಿಸಿ ಅನಂತರ ಅವುಗಳನ್ನು ಪ್ರಸಾದವೆಂಬಂತೆ ಅನುಭವಿಸುತ್ತಾನೆ. ಇನ್ನೂ ಮುಂದಿನ ಹಂತದಲ್ಲಿ ಅವನು, ತನ್ನ ಕರ್ಮೇಂದ್ರಿಯ, ಜ್ಞಾನೇಂದ್ರಿಯ ಇತ್ಯಾದಿಗಳನ್ನೆಲ್ಲಾ ಶಿವನಿಗೆ ಅರ್ಪಿಸಿ, ಅನಂತರ ಅವುಗಳ ಮೂಲಕ ಬರುವ ಪ್ರಸಾದವನ್ನು ಸ್ವೀಕರಿಸುತ್ತಾನೆ. ಕೊನೆಗೆ ಶರಣ ಸ್ಥಲದಲ್ಲಿ ತನ್ನ ಆತ್ಮವನ್ನೇ ಅರ್ಪಿಸಿಕೊಳ್ಳುತ್ತಾನೆ. ಆಗ ಅವನು ತಾನೇ ಪ್ರಸಾದ, ತಾನೇ ಪ್ರಸಾದಿ. ಅದೇ ರೀತಿ ಇತರ ಆಚಾರಗಳಲ್ಲಿಯೂ ವಿಕಾಸವಾಗಿರುತ್ತದೆ.

ವಾಸ್ತವವಾಗಿ, ಆಚಾರದಲ್ಲಿ ವಿಕಾಸವಾಗುತ್ತದೆ, ಎಂಬ ಮಾತು ಅಸ್ಪಷ್ಟವಾಗಿದೆ. ಏಕೆಂದರೆ ಆಚಾರದಲ್ಲಿ ವಿಕಾಸವಿರಲಾರದು. ಎಲ್ಲ ಆಚಾರಗಳೂ ಮೇಲೆ ಹೇಳಿದಂತೆ ನಿಯಮಕ್ಕೆ ಒಳಪಟ್ಟಿರುವದರಿಂದ, ಹಾಗೂ ಆ ನಿಯಮಗಳು ಕೆಲವು ಸಿದ್ಧಾಂತಗಳನ್ನು ಆಶ್ರಯಿಸಿರುವುದರಿಂದ, ಸಿದ್ಧಾಂತದಲ್ಲಿ ವಿಕಾಸವಾದರೆ, ಅದಕ್ಕನುಗುಣವಾದ ಆಚಾರಗಳಲ್ಲಿಯೂ ವಿಕಾಸವಾಗುತ್ತದೆ.

ವಚನಕಾರರು ವಿಧಿಸಿರುವ ಆಚಾರಗಳೇ ನಮಗೆ ಲಿಂಗಾಂಗ ಸಾಮರಸ್ಯ ನೀಡುವುದಿಲ್ಲ. ನಾವು ಅನೇಕ ಜನ್ಮಾಂತರಗಳಲ್ಲಿ ಅನೇಕ ಸಾವಿರ ವರ್ಷ ಇಷ್ಟಲಿಂಗ ಪೂಜೆ ಮಾಡಬಹುದು, ಆದರೆ ಇದರಿಂದಾಗಿ ಸಾಮರಸ್ಯ ಲಭ್ಯವಾಗದಿರಬಹುದು. ಏಕೆಂದರೆ, ಇಷ್ಟಲಿಂಗ ಪೂಜೆಯು ಯಾಂತ್ರಿಕವಾಗಿರಬಹುದು. ಪೂಜೆ, ಜಪ, ಮುಂತಾದ ಧಾರ್ಮಿಕ ಕ್ರಿಯೆಗಳ ಜೊತೆಗೆ, ಅನೇಕ ಸಾವಿರ ಸಾರಿ ದಾನ ಧರ್ಮಗಳನ್ನೂ ಮಾಡಿರಬಹುದು. ಅದರಿಂದಲೂ ಸಾಮರಸ್ಯ ಸಿದ್ಧಿಸದಿರಬಹುದು. ಏಕೆಂದರೆ, ಅವುಗಳನ್ನೂ ನಾವು ಪ್ರತಿಫಲಾಪೇಕ್ಷೆಯಿಂದ ಮಾಡಿರಬಹುದು. ಆದರೆ ಅವುಗಳನ್ನು ಮಾಡದೆಯೇ ಲಿಂಗಾಂಗ ಸಾಮರಸ್ಯ ಸಾಧ್ಯವಿಲ್ಲ. ಹಾಗಾದರೆ, ಆಚಾರಗಳ ಪ್ರಯೋಜನವೇನು? ಅಥವಾ ಅವುಗಳನ್ನು ಹೇಗೆ ಆಚರಿಸಿದರೆ ಪರಿಣಾಮಕಾರಿಯಾಗುತ್ತವೆ?

ಆಚಾರಗಳ ಕೆಲಸ ಕೇವಲ ಮನಸ್ಸನ್ನು ಅಥವಾ ಆತ್ಮವನ್ನು ಶುದ್ದಿ ಮಾಡುವುದು. ಶುದ್ಧವಾದ ಮನಸ್ಸು (ಅಂದರೆ ಕಾಮ ಕ್ರೋಧಾದಿಗಳಿಲ್ಲದ ಮನಸ್ಸು), ಲಿಂಗಧ್ಯಾನದಲ್ಲಿ ಸುಲಭವಾಗಿ ತೊಡಗಬಲ್ಲುದು. ಲಿಂಗಧ್ಯಾನದ ಮೂಲಕ ಮಾತ್ರ ಲಿಂಗಾಂಗ ಸಾಮರಸ್ಯ ಸಾಧ್ಯ.

ಈ ಕಾರಣಗಳಿಂದಲೇ, ಆಚಾರಗಳನ್ನು ಆತ್ಮಶುದ್ಧಿಗಾಗಿ ಮಾಡಬೇಕೇ ಹೊರತು, ಸಾಮರಸ್ಯ ಅಥವಾ ಮೋಕ್ಷ ಲಭಿಸಲಿ ಎಂಬ ಉದ್ದೇಶದಿಂದ ಅಲ್ಲ, ಎಂದು ವಚನಕಾರರು ಹೇಳಿರುವುದು. (ನೋಡಿ : ಆಚಾರ ಪ್ರಭೇದಗಳು)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅರಿವು (ಆರುಹು) ಆಚಾರ ಪ್ರಭೇದ Next