ಹದಿನಾಲ್ಕು ತೆರನ ಭಕ್ತಿ | ಸೃಷ್ಟಿಯ ಕ್ರಮ |
ಸ್ವಸ್ತಿಕಾರೋಹಣ ದೀಕ್ಷೆ |
ಸಂಸಾರವನ್ನು ಹೇಯವಾಗಿ ಕಂಡು, ಲಿಂಗಾಂಗ ಸಾಮರಸ್ಯವನ್ನು ಪಡೆಯಬೇಕೆಂಬ ಇಚ್ಛೆಯಿಂದ ಬಂದ ಶಿಷ್ಯನಿಗೆ ಗುರುವು ಕೊಡುವ ಅನೇಕ ವಿಧದ ದೀಕ್ಷೆಗಳಲ್ಲಿ ಇದು ಮೊದಲನೆಯದು. ಮೊದಲು ಹಾಲು, ತುಪ್ಪ, ಬಾಳೆಹಣ್ಣು, ಕಬ್ಬು ಮತ್ತು ಜೇನುತುಪ್ಪ ಇವುಗಳನ್ನೊಳಗೊಂಡ ಪಂಚಾಮೃತದಿಂದ ಶಿಷ್ಯನಿಗೆ ಅಭಿಷೇಕ ಮಾಡಿಸಿ, ಶರಣ ಗಣಗಳು ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ ಮತ್ತು ಪುಷ್ಪದಕ ಎಂಬ ಪಂಚೋದಕಗಳಿಂದ ಅವನಿಗೆ ಸ್ನಾನಮಾಡಿಸುತ್ತಾರೆ. ಮೂರಂಗುಲ ಉದ್ದವಾದ ದರ್ಭೆಯನ್ನು ತೋರಿಸಿ, ತ್ರಿವಿಧ ಮಂತ್ರ ಸ್ಮರಣೆಯಿಂದ, ಅದನ್ನು ಅವನ ಸೊಂಟಕ್ಕೆ ಕಟ್ಟುತ್ತಾರೆ, ಅರಿಷಡ್ವರ್ಗಗಳನ್ನು ಗೆಲ್ಲು ಎಂದು ಬೋಧಿಸಿ, ಬಾಳೆ ಗಿಡದ ಪಟ್ಟೆಯನ್ನು ಕೌಪೀನದಂತೆ (ಷಡಕ್ಷರ ಮಂತ್ರ ಹೇಳುತ್ತಾ) ಕಟ್ಟುತ್ತಾರೆ. ಸುಳ್ಳು ಹೇಳಬೇಡ, ಸತ್ಯವನ್ನೇ ನುಡಿ, ಕೊಡುವ ತೆಗೆದುಕೊಳ್ಳುವ ವಿಚಾರದಲ್ಲಿ ಆಪ್ತತ್ವದಿಂದ ನಡೆದುಕೊ, ಎಂದು ಹೇಳಿ ಗುರುವು, ಅಲ್ಲಿರುವ ಶರಣಗಣಗಳ ಒಪ್ಪಿಗೆ ಪಡೆದು, ಶಿಷ್ಯನ ಮಸ್ತಕದ ಮೇಲೆ ಹಸ್ತವನ್ನಿಡುತ್ತಾನೆ, ಹಾಗೂ ಅಲ್ಲಿ ಗುರು ಶಿಷ್ಯ ಭೇದಭಾವಳಿದು ಗುರುವು ಶಿಷ್ಯನ ಸೂತ್ರವನ್ನೂ, ಶಿಷ್ಯನು ಗುರುವಿನ ಸೂತ್ರವನ್ನೂ ಹಿಡಿಯುತ್ತಾರೆ. ಅಲ್ಲಿರುವ ನೃತ್ಯರಿಂದ ಕಳಸಾರ್ಚನೆ ರಚಿಸಿ, ಪ್ರಮಥಗಣ, ಆರಾಧ್ಯ, ಭಕ್ತ, ಮಾಹೇಶ್ವರರೊಡಗೂಡಿ, ನವರತ್ನಖಚಿತವಾದ ಶೂನ್ಯ ಸಿಂಹಾಸನದ ಮೇಲೆ, ಮಂತ್ರವೇ ಮೂರ್ತಿಗೊಂಡಿರುವಂತೆ ಕುಳಿತಿರುವ ನಿರಂಜನ ಜಂಗಮಕ್ಕೆ ವಿಭೂತಿ, ವೀಳ್ಯ, ಸುವರ್ಣ, ದಶಾಂಘನಸಾರ, ಪುಷ್ಪಮಾಲೆ, ವಸ್ತ್ರಾಭರಣ ಎಂಬ ಸಪ್ತಪದಾರ್ಥಗಳನ್ನು ಕೊಡುವಂತಹುದೇ ಸ್ವಸ್ತಿಕಾರೋಹಣ ದೀಕ್ಷೆ (೧೦:೬೮೭).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಹದಿನಾಲ್ಕು ತೆರನ ಭಕ್ತಿ | ಸೃಷ್ಟಿಯ ಕ್ರಮ |