Previous ಅಂಗಸ್ಥಲ ಗುರುಲಿಂಗ Next

ಅನಾದಿ

ಅನಾದಿ

೧.ಅಕ್ಷರಶ: ಈ ಪದಕ್ಕೆ "ಆದಿ ಇಲ್ಲದ" ಎಂಬ ಅರ್ಥವನ್ನು ಕೊಡಬಹುದು. ಆಗ ಅದು ಪರಶಿವನಿಗೂ, ಆತ್ಮನಿಗೂ ಅನ್ವಯಿಸುತ್ತದೆ.

೨. ಮತ್ತೊಂದರ್ಥದಲ್ಲಿ ಅನಾದಿ" ಎಂದರೆ ಒಳ್ಳೆಯ ಮೂಲ (ಆದಿ) ಇಲ್ಲದವಳು/ ನು" ಎಂಬ ಅರ್ಥವಿದೆ. ಅಕ್ರಮ ಸಂಬಂಧದಿಂದ ಹುಟ್ಟಿದವನನ್ನು ನೀನು ಯಾರ ಮಗು ಎಂದು ಕೇಳಿದರೆ, ಮತ್ತು ಅವನು ಸತ್ಯವನ್ನು ಹೇಳದಿದ್ದರೆ, ತಾನು ಅನಾದಿ ಎಂಬ ಸೂಕ್ಷ್ಮ ಉತ್ತರ ಕೊಡುತ್ತಾನೆ.

೩. ಮೊದಲಿಲ್ಲದುದು ; ಪ್ರಾರಂಭವಿಲ್ಲದುದು ; ಚಂದ್ರಸೂರ್ಯರೊಂದಾದುದು ಧರೆ ಆಕಾಶ ಒಂದಾದದು ಗುಹೇಶ್ವರಲಿಂಗನು ನಿರಾಳನು (ಅಲ್ಲಮ. ಸಮವ. ೨-೮೮-೩೦೯) ;

೨. ಅನಾದಿ ಜಂಗಮತತ್ವ; ಆದಿಲಿಂಗ ಅನಾದಿ ಜಂಗಮವೆಂಬ ಭೇದವ ವಿವರಿಸಿ ತೋರಿದನಯ್ಯ ಬಸವಣ್ಣನು (ಅಲ್ಲಮ. ಸಮವ. ೨-೨೫೭-೮೭೬).

೩. ಪರಬ್ರಹ್ಮ; ಪರಮತತ್ವ ; ಮನದ ಕೊನೆಯ ಮೊನೆಯ ಮೇಲೆ ಮನೆಯ ಮಾಡಿಕೊಂಡಿಪ್ಪನೊಬ್ಬ ದಾಸೋಹಿ. ಆದಿವಿಡಿದು ಬಂದಾತನೆ ಭಕ್ತ. ಆನಾದಿವಿಡಿದು ಬಂದಾತನೆ ಜಂಗಮ (ಬಸವ. ಸಮವ. ೧-೨೦೬-೮೦೪);

೪. ಪರಶಿವನ ತೇಜೋಮಯಲಿಂಗವು ಪ್ರಕಟಗೊಳ್ಳುವ ಐದು ಬಗೆಯ ಸಂಜ್ಞೆಗಳಲ್ಲಿ ಒಂದು;

ಸಂಜ್ಞೆಗಳು ; ಇವು ಐದು ಇವೆ. ಅವು ೧.ಪರ, ೨.ಗೂಢ, ೩.ಶರೀರಸ್ಥ, ೪.ಲಿಂಗಕ್ಷೇತ್ರ, ೫.ಅನಾದಿ ಈ ಪ್ರಕಾರ ಇರುತ್ತವೆ.

ಲಯಭೋಗಾಧಿಕಾರವನುಳ್ಳ ಪರಶಿವನು ತಾನೆ ತತ್ವಪ್ರಭಾವಮೂರ್ತಿಯೆನಿಸಿದ-ವ್ಯಯ ಅಪ್ರಮಾಣ ಅಸಾಧ್ಯ ನಿಷ್ಕಲತ್ವವೆ ಪಂಚಸಂಜ್ಞೆಯಿಂದಿಪ್ಪುದ್ದು. ಅದೆಂತೆಂದಡೆ;

ಜಗತ್‌ ಸೃಷ್ಟಿಗಾಗಿ, ಅಷ್ಟತನುಗಳಿಗಾದಿ, ತ್ರಿಮೂರ್ತಿಗಳಿಗಾದಿ, ಷಟ್ತ್ರಿಂಶತತ್ವಕ್ಕಾದಿ, ಈಶ್ವರ ಸದಾಶಿವಗಾದಿಯಾಗಿಪ್ಪ, ಮೇಲಣ ಪರತತ್ವವೆ ಪರ; ಅನಂತಕೋಟಿ ಬ್ರಹ್ಮಾಂಡ ಗಳೊಳಗೆಡವಿಡದೆ ಚರಾಚರವೆನಿಸುವ ಪ್ರಾಣಿಗಳೊಳಗೆ ಸೂಕ್ಷ್ಮ ವಾಗಿ, ವಟವೃಕ್ಷದೊಳಡಗಿಪ್ಪ ಬೀಜದಂತೆ ಗೂಢವಾಗಿ, ಆರಿಗೂ ಹಡೆಯಬಾರದೆ ವಿಶ್ವಕ್ಕೆ ಕಾರಣವಾಗಿಹುದೆ ಗೂಢ;

ತನ್ನೊಳಗೆ ಶಿವಶಕ್ತಿಗಳ ಶರೀರ ಘಟಿಸಿ ಚರಾಚರಂಗಳು ಸ್ತ್ರೀ ಪುಂ ನಪುಂಹಸಕವೆಂಬ ಮುದ್ರೆಯಿಂದ ಬಹುನಾಮಂಗಳಿಂದ ತನ್ನೊಳಗಿಪ್ಪ ಕಾರಣ ಶರೀರಸ್ಥ ;

ತನ್ನೊಳಗಿಹ ಮಾಯೆಯಿಂದ ಜಗತ್‌ಸೃಷ್ಟಿ ಮೊದಲಾದ ಸಕಲಪ್ರಪಂಚ ತೋರಿ ಆ ಪ್ರಪಂಚಿಗೆ ತಾನೆ ಭೂಮಿಯಾಗಿ ಎಲ್ಲವ ತನ್ನೊಳಗಿಂಬಿಟ್ಟ ತಾನೆನ್ನದ ಅಭಿನ್ನದಿಂದಿಹುದೆ ಲಿಂಗಕ್ಷೇತ್ರ;

ಈಶ್ವರ ಸದಾಶಿವರು ಮೊದಲಾದ ಅನಂತ ದೇವಾತ್ಮಮೂರ್ತಿಗಳ ಜನನಂಗಳಾದಿಯಿಂದತ್ತತ್ತಲಿಪ್ಪುದೆ ಅನಾದಿ.

ಇಂತಪ್ಪ ಪಂಚಸಂಜ್ಞೆಯನುಳ್ಳ ಲಿಂಗವನರಿತ ಲಿಂಗೈಕ್ಯಂಗೆ ನಮೋ ನಮೋ ಎಂಬೆನಯ್ಯಾ (ಆದವ. ಸಮವ. ೬-೩೪೫-೧೦೮೫);

ಪರಮಾತ್ಮನ ಇರವು ಹೇಗಿರುತ್ತದೆಂಬುದನ್ನು ಇವುಗಳು ವಿವರಿಸುತ್ತವೆ. ೧. ಪರಮಾತ್ಮನು "ಪರ ಎಂದರೆ ಸೃಷ್ಟಿಸಲ್ಪಟ್ಟ ಎಲ್ಲ ವಸ್ತುಗಳಿಗೆ ಮೀರಿದವನು ...ಪರಮಾತ್ಮನು ಅನಾದಿಯಾಗಿದ್ದಾನೆ. ಅಂದರೆ ಅವನಿಗೆ ಆದಿ ಎಂದರೆ ಹುಟ್ಟು ಎಂಬುದಿಲ್ಲ. ಹುಟ್ಟು ಇಲ್ಲದ್ದರಿಂದ ಅವನಿಗೆ ಅಂತ್ಯ ಎಂದರೆ ಮರಣವೂ ಇಲ್ಲ. ಹೀಗೆ ಈ ಐದು ಗುಣಗಳಿಂದ ಅವನನ್ನು ನಾವು ಗುರುತಿಸಬೇಕು.

೫. ನಾದ, ಬಿಂದು ಮತ್ತು ಕಳೆಗಳು ಒಟ್ಟುಗೂಡಿ ಆದ ಗೋಳಕಾಕಾರವಾದ ಲಿಂಗ; ಚಿಲ್ಲಿಂಗ ;

ಸಹಜದಿಂದ ನಿರಾಲಂಬವಾಯಿತ್ತು
ನಿರಾಲಂಬದಿಂದ ನಿರಾಳವಾಯಿತ್ತು
ನಿರಾಳದಿಂದ ನಿರವಯವಾಯಿತ್ತು
ನಿರವಯದಿಂದ ಅನಾದಿಯಾಯಿತ್ತು
ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ (ಅಲ್ಲಮ. ಸಮವ. ೨-೪೭೧-೧೫೮೪).

೬. ಪರಮೇಶ್ವರನ ಕಲೆಗಳಲ್ಲಿ ಒಂದು; ನಿವೃತ್ತಿ, ಪ್ರತಿಷ್ಠಾ, ವಿದ್ಯಾ, ಶಾಂತಿ, ಶಾಂತ್ಯಾತೀತ, ಶಾಂತ್ಯಾತೀತೋತ್ತರ, ಅನಾದಿ ನಿರ್ಮಾಯ, ಅನಿರ್ವಾಚ್ಯ ಇವು ಕಲೆಗಳು .

೭. ಆತ್ಮ ; ಆದಿ ಅನಾದಿ ಆತ್ಮವಿವೇಕ ಅನುಭಾವಸಂಬಂಧ ಎಂತಿಪ್ಪುದೆಂದಡೆ ಆದಿಯ ದೇಹ ಅನಾದಿಯೆ ಆತ್ಮ ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ (ಚೆನ್ನಬ. ಸಮವ. ೩-೩೩೪-೧೦೦೩);

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಂಗಸ್ಥಲ ಗುರುಲಿಂಗ Next