ಲಿಂಗಪ್ರಸಾದ | ಇನ್ನೂರ ಹದಿನಾರುಸ್ಥಲ |
ಚತುರ್ವಿಧ ಸಂಬಂಧಿ |
ಲಿಂಗಸಂಬಂಧಿ, ಜ್ಞಾನಸಂಬಂಧಿ, ಪ್ರಸಾದ ಸಂಬಂಧಿ ಮತ್ತು ನಿಜಲಿಂಗ ಸಂಬಂಧಿ, ತನುವಿಗೆ ಹಸಿವು, ತೃಷೆ, ಮೈಥುನ ಮುಂತಾದ ಸಹಜ ಬಯಕೆಗಳಿರುತ್ತವೆ. ಇವು ತನುವಿನ ಧರ್ಮವೇ ಹೊರತು, ಹೊಸದಾಗಿ ಕಲಿತುಕೊಂಡ ಅಭ್ಯಾಸಗಳಲ್ಲ. ತನುವಿನ ಈ ತನ್ನ ಸಹಜ ಗುಣಗಳನ್ನು ಕಳೆದುಕೊಂಡವನು ಲಿಂಗಸಂಬಂಧಿಯಾಗುತ್ತಾನೆ.
ಮನಸ್ಸು ತನ್ನ ಸಹಜ ಅಜ್ಞಾನದಿಂದಾಗಿ ತನ್ನ ಬಗೆಗೆ, ಪ್ರಪಂಚದ ಬಗೆಗೆ ಹಾಗೂ ಪರಶಿವನ ಬಗೆಗೆ ಅನೇಕ ತಪ್ಪು ಕಲ್ಪನೆಗಳನ್ನು ಬೆಳೆಸಿಕೊಂಡಿರುತ್ತದೆ. ಆದರೆ ಅದು ತನ್ನ ಈ ಸಹಜ ಗುಣವನ್ನು ಕಳೆದುಕೊಂಡರೆ ಜ್ಞಾನ ಸಂಬಂಧಿಯಾಗುತ್ತದೆ. ಇದರಿಂದಾಗಿ ಅದಕ್ಕೆ ಸಮ್ಯಗ್‌ಜ್ಞಾನ ಉಂಟಾಗುತ್ತದೆ.
ಪ್ರಾಣಕ್ಕೆ ತಾನು ಉಳಿದುಕೊಳ್ಳಬೇಕು, ತಾನು ಅಭಿವೃದ್ಧಿ ಹೊಂದಬೇಕು ಮುಂತಾದ ಅನೇಕ ಸಹಜವಾದ ಸ್ವಾರ್ಥ ಆಸೆಗಳನ್ನಿಟ್ಟುಕೊಂಡಿರುತ್ತದೆ. ಆದರೆ ಅದು ತನ್ನ ಈ ಸಹಜಗುಣವನ್ನು ಕಳೆದುಕೊಂಡರೆ, ಅಂದರೆ, ತಾನು ಮಾಡುವುದೆಲ್ಲವೂ ತನಗಾಗಿ ಅಲ್ಲ, ಲಿಂಗಕ್ಕಾಗಿ ಎಂದು ತಿಳಿದುಕೊಂಡರೆ, ತನ್ನ ಕರಣೇಂದ್ರಿಯಾದಿಗಳು ತನ್ನವಲ್ಲ, ಲಿಂಗಕ್ಕೆ ಸೇರಿದವು ಎಂದು ಭಾವಿಸಿದರೆ, ಆಗ ಅದು ಪ್ರಸಾದ ಸಂಬಂಧಿಯಾಗುತ್ತದೆ. ಅಂದರೆ, ತನ್ನ ಕರಣೇಂದ್ರಿಯಗಳೂ ಅಲ್ಲದೆ ಇಡೀ ಪ್ರಪಂಚವೇ ಶಿವನ ಪ್ರಸಾದವೆಂದು ಅದು ಬಲವಾಗಿ ನಂಬುತ್ತದೆ.
ಭಾವ (ಜೀವ)ಕ್ಕೆ ತಾನು ಬೇರೆ, ಶಿವಬೇರೆ, ಪ್ರಪಂಚ ಬೇರೆ ಎಂಬ ಸಹಜವಾದ ಭ್ರಮೆಗಳಿರುತ್ತವೆ. ಈ ಭ್ರಮೆಯಳಿದರೆ, ಅದಕ್ಕೆ ನಿಜಲಿಂಗಸಂಬಂಧ ಉಂಟಾಗುತ್ತದೆ ಅಂದರೆ ತನ್ನಲ್ಲಿರುವ ಲಿಂಗವು (ಚೈತನ್ಯವು ವ್ಯಕ್ತವಾಗುತ್ತದೆ. ಅಥವಾ ಆ ಚೈತನ್ಯವು ಪರಶಿವನಲ್ಲದೆ ಬೇರೆಯಲ್ಲ ಎಂಬ ಅರಿವು ಮೂಡುತ್ತದೆ. (೮:೬೧೬)
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಲಿಂಗಪ್ರಸಾದ | ಇನ್ನೂರ ಹದಿನಾರುಸ್ಥಲ |