Previous ಚರ ಪ್ರಮಥ ಗಣರು Next

ದೀಕ್ಷಾತ್ರಯ

ದೀಕ್ಷಾತ್ರಯ

೧. ಗುರುವು ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ತನುತ್ರಯ- ಗಳಲ್ಲಿರುವ ಆಣವ, ಮಾಯಾ, ಕಾರ್ಮಿಕಮಲಗಳನ್ನು ನಾಶಗೊಳಿಸುವುದಕ್ಕಾಗಿ, ಶಿಷ್ಯನ ತ್ರಿವಿಧಾಂಗಗಳಲ್ಲಿ ತ್ರಿವಿಧಲಿಂಗಗಳನ್ನು ನೆಲೆಗೊಳಿಸಿದ ನಂತರ ನೀಡುವ ವೇಧೆ, ಮಂತ್ರ ಮತ್ತು ಕ್ರಿಯೆಗಳೆಂಬ ಮೂರು ಬಗೆಯ ದೀಕ್ಷೆಗಳು : ದೀಕ್ಷಾತ್ರಯದಲ್ಲಿ ಸಂಪನ್ನರಾಗಿ ಪ್ರಸಾದದಲ್ಲಿ ಲೋಲುಪ್ತರಾಗಿ ಜಂಗಮವೆ ಲಿಂಗವೆಂಬವರ ಎನಗೊಮ್ಮೆ ತೋಜಿಸಯ್ಯ (ಸಿದ್ಧರಾ, ಸಮವ. ೪-೧೭-೫೩); ಗುರುವು ಶಿಷ್ಯನ ಶರೀರತ್ರಯದಲ್ಲಿರುವ ಮಲತ್ರಯಗಳನ್ನು ದೀಕ್ಷಾತ್ರಯದಿಂದ ಸುಟ್ಟು ಆ ಶರೀರತ್ರಯದಲ್ಲಿ ಲಿಂಗತ್ರಯಗಳ ಸಂಯೋಗವನ್ನುಂಟುಮಾಡುವನು

೨. ತ್ರಿವಿಧಗುರುಲಿಂಗದಲ್ಲಿಯ ದೀಕ್ಷೆ, ಶಿಕ್ಷೆ ಮತ್ತು ಸ್ವಾನುಭಾವ ಎಂಬ ಮೂರು ಪ್ರಭೇದಗಳು; ಕಲಿಯುವುದು, ಕಲಿತುದನ್ನು ಮನನಮಾಡುವುದು, ಮನನದಿಂದ ಜ್ಞಾನವೃದ್ಧಿ ಮಾಡಿಕೊಳ್ಳುವುದು -ಎಂಬ ಮೂರು ಬಗೆಯ ದೀಕ್ಷೆಗಳು.

ಕ್ರಿಯಾದೀಕ್ಷೆ, ಮಂತ್ರದೀಕ್ಷೆ ಮತ್ತು ವೇಧಾದೀಕ್ಷೆ ಎಂಬುದು ಈ ಪದದ ಅರ್ಥವಾದರೂ, ವೇಧಾದೀಕ್ಷೆ ಎಂಬುದಕ್ಕೆ ಮಾತ್ರ ಬೇರೆ ಬೇರೆ ಅರ್ಥಗಳಿರುವಂತೆ ಕಾಣುತ್ತದೆ. ಹಸ್ತ ಮಸ್ತಕ ಸಂಯೋಗದ ಮೂಲಕ ಇಷ್ಟಲಿಂಗ ಪ್ರದಾನ ಮಾಡುವ ಗುರುವಿನ ಕ್ರಿಯೆಯೇ ಕ್ರಿಯಾದೀಕ್ಷೆ; ಆ ಸಮಯದಲ್ಲಿ ಗುರು ದೀಕ್ಷಿತನಿಗೆ ಪ್ರಣವವನ್ನು ಬೋಧಿಸುವುದೇ ಮಂತ್ರದೀಕ್ಷೆ, ಮರೆವನ್ನು ಹೇಗೆ ವೇಧಿಸಬೇಕು ಅಥವಾ ಪರಶಿವನ ಬಗೆಗಿನ ರಹಸ್ಯವನ್ನು ಹೇಗೆ ವೇಧಿಸಬೇಕು ಎಂಬುದನ್ನು ಗುರು ತಿಳಿಸಿಕೊಡುವುದೇ ವೇಧಾದೀಕ್ಷೆ, ಮತ್ತೆ ಕೆಲವು ವಚನಕಾರರ ಪ್ರಕಾರ, ಇವು ಮೂರು ಏಕಕಾಲದಲ್ಲಿ ನಡೆಯುವುದರಿಂದ, ಗುರುವು ಶಿಷ್ಯನ ಮಸ್ತಕಕ್ಕೆ ತನ್ನ ಹಸ್ತವನ್ನು ಸಂಬಂಧಿಸಿ, ಆ ಮೂಲಕ ಅವನಲ್ಲಿರುವ ಚೈತನ್ಯವನ್ನು ವೇಧೆಯ ಮೂಲಕ ಹೊರತಂದು ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸುವುದು ವೇಧಾ ದೀಕ್ಷೆ, ಅನಂತರ ಇಷ್ಟಲಿಂಗ ಪ್ರದಾನ ಮತ್ತು ಮಂತ್ರ ಬೋಧನೆ ಮಾಡುವುದು ಕ್ರಿಯಾದೀಕ್ಷೆ ಮತ್ತು ಮಂತ್ರದೀಕ್ಷೆ. ಅಂತೂ ಈ ದೀಕ್ಷೆ ಒಂದು ಸಾಂಕೇತಿಕ ಕ್ರಿಯೆಯಾಗಿದ್ದು, ಕ್ರಿಯಾದೀಕ್ಷೆಯು ಸ್ಥೂಲತನುವಿನ ಶುದ್ದೀಕರಣವನ್ನೂ, ಮಂತ್ರದೀಕ್ಷೆಯು ಮನಸ್ಸು, ಬುದ್ಧಿ, ಮುಂತಾದ ಅಂತ:ಕರಣಗಳ ಶುದ್ದೀಕರಣವನ್ನೂ ವೇಧಾದೀಕ್ಷೆಯು ಆತ್ಮದ ಶುದ್ದೀಕರಣವನ್ನೂ ಸೂಚಿಸುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಚರ ಪ್ರಮಥ ಗಣರು Next