Previous ತ್ರಿವಿಧ ಪ್ರಸಾದ ದಶವಾಯುಗಳು Next

ತ್ರಿವಿಧ ಸ್ಥಲ

ತ್ರಿವಿಧ ಸ್ಥಲ

(೧) ಭಕ್ತಸ್ಥಲ, ಮಹೇಶ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿ ಸ್ಥಲ, ಶರಣಸ್ಥಲ, ಮತ್ತು ಐಕ್ಯಸ್ಥಲ ಇವುಗಳನ್ನು ಕೆಲವು ವಚನಕಾರರು ಮೂರು ಗಂಪುಗಳಾಗಿ ಮಾಡುತ್ತಾರೆ. ಭಕ್ತ ಮತ್ತು ಮಹೇಶ ಸ್ಥಲಗಳು ಮೊದಲನೆಯ ಗುಂಪಿಗೂ, ಪ್ರಸಾದಿ ಮತ್ತು ಪ್ರಾಣಲಿಂಗಿ ಸ್ಥಲಗಳು ಎರಡನೆಯ ಗುಂಪಿಗೂ ಶರಣ ಮತ್ತು ಐಕ್ಯಸ್ಥಲಗಳು ಮೂರನೆಯ ಗುಂಪಿಗೂ ಸೇರುತ್ತವೆ. (೯ : ೯೨)

(೨) ಮತ್ತೆ ಕೆಲವು ವಚನಕಾರರ ಪ್ರಕಾರ ತ್ರಿವಿಧ ಸ್ಥಲವೆಂದರೆ, ಅಂಗಸ್ಥಲ, ಪ್ರಾಣಸ್ಥಲ ಮತ್ತು ಭಾವಸ್ಥಲ. ಅಂದರೆ, ಅಂಗಸ್ಥಲದಲ್ಲಿ ಸಾಧಕನು ತನ್ನ ಅಂಗದ ಮೇಲೆ ಲಿಂಗವನ್ನೂ ಧರಿಸುತ್ತಾನೆ ಹಾಗೂ ಪೂಜಾ ಸಮಯದಲ್ಲಿ ಅದನ್ನು ಕರಸ್ಥಲದಲ್ಲಿ ಪ್ರತಿಷ್ಠಾಪಿಸುತ್ತಾನೆ. ಆಧ್ಯಾತ್ಮದಲ್ಲಿ ಇನ್ನೂ ಮುಂದುವರಿದ ಸಾಧಕನು ಲಿಂಗವನ್ನು ಪೂಜಾ ಸಮಯದಲ್ಲಷ್ಟೇ ಧ್ಯಾನಿಸದೆ ಇತರ ಸಮಯದಲ್ಲೂ ಧ್ಯಾನಿಸುತ್ತಾನೆ. ಇದಕ್ಕೆ ಮಂತ್ರ ಮುಂತಾದವುಗಳು ಸಹಾಯಕವಾಗುತ್ತವೆ. ಕೊನೆಯದಾಗಿ ಸಾಧಕನು ತನ್ನ ಭಾವಸ್ಥಲದಲ್ಲಿಯೂ ಲಿಂಗವನ್ನು ಪ್ರತಿಷ್ಠಾಪಿಸಿ ತಾನು ಲಿಂಗದಿಂದ ಪ್ರತ್ಯೇಕವಲ್ಲ ಎಂಬ ಅರಿವನ್ನು ಪಡೆಯುತ್ತಾನೆ (೧:೧೦೩೨). ಕೆಲವು ವೇಳೆ ಈ ತ್ರಿವಿಧ ಸ್ಥಲಗಳಿಗೆ ಕರಸ್ಥಲ, ಮನಸ್ಥಲ ಮತ್ತು ಭಾವಸ್ಥಲ ಎಂಬ ಹೆಸರುಗಳನ್ನು ವಚನಕಾರರು ಕೊಟ್ಟಿದ್ದಾರೆ. (೧ : ೧೦೬೨)

ತ್ವಕ್ಕುಲಿಂಗ ಸಮರಸ : ಸಾಮರಸ್ಯ ಸಾಧಿಸಿದವನ ಆತ್ಮವನ್ನು ಪರಶಿವನು ಸ್ವಾಧೀನ ಪಡಿಸಿಕೊಂಡಿರುವಂತೆ, ಅವನ ತ್ವಕ್ಕನ್ನೂ (ಚರ್ಮವನ್ನೂ) ಸ್ವಾಧೀನ ಪಡಿಸಿಕೊಂಡಿದ್ದಾನಾದುದರಿಂದ, ಅವನ ತ್ವಕ್ಕು ಮತ್ತು ಲಿಂಗಗಳಲ್ಲಿ ತಾಮರಸ್ಯ ಇದೆ ಎನ್ನಬಹುದು. (೧೦ : ೧೫೯೪).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತ್ರಿವಿಧ ಪ್ರಸಾದ ದಶವಾಯುಗಳು Next