Previous ಪಾರಿಭಾಷಿಕ ಪದಕೋಶ ಅಂಗಲಿಂಗ ಸಂಬಂಧ Next

ಅಂಗ

ಅಂಗ

ಇದಕ್ಕೆ ಕನಿಷ್ಠ ಏಳು ಅರ್ಥಗಳಿವೆ.

(೧) ದೇಹ, (ಅಂಗದ ಮೇಲೆ ಶಿವಲಿಂಗವಿಲ್ಲದವರ ..." ಎಂಬಲ್ಲಿ ದೇಹದ ಮೇಲೆ ಇಷ್ಟಲಿಂಗವಿಲ್ಲದವರ ಎಂಬರ್ಥವಿದೆ).

(೨) ದೇಹದ ಒಂದು ಭಾಗ (ಉದಾ: ಉತ್ತಮಾಂಗ).

(೩) ಆತ್ಮ (ಲಿಂಗಾಂಗ ಸಾಮರಸ್ಯ ಎಂಬ ಪದವು ಪರಶಿವ ಮತ್ತು ಆತ್ಮ ಇವುಗಳ ಸಾಮರಸ್ಯಕ್ಕೆ ಅನ್ವಯಿಸುತ್ತದೆ).

(೪) ಲಿಂಗಾಂಗ ಸಾಮರಸ್ಯ ಪಡೆದವನ ಆತ್ಮ ಮತ್ತು ದೇಹ ಎರಡೂ ಪರಶಿವನ ಅಂಗ. ಪರಶಿವನು ಭಕ್ತದೇಹಿಕ ದೇವ ಎಂಬಲ್ಲಿ, "ಐಕ್ಯಸ್ಥಲದವನೇ ಪರಶಿವನ ದೇಹ ಎಂಬರ್ಥವಿದೆ. ಭಕ್ತನು ವಿವಿಧ ಅಂಗಗಳ ಮೂಲಕ ವಿಷಯಗಳನ್ನು ಅನುಭವಿಸುವಂತೆ, ಪರಶಿವನು ಆ ಅಂಗಗಳ ಮೂಲಕ ಅನುಭವಿಸುತ್ತಾನೆ - ಎಂಬುದು ಈ ಪರಿಕಲ್ಪನೆಯ ಅರ್ಥ. ಯೋಗಾಂಗದ ಅರ್ಥವೂ ಈ ಪರಿಕಲ್ಪನೆಯ ಹತ್ತಿರಕ್ಕೆ ಬರುತ್ತದೆ. ಈ ಅರ್ಥವನ್ನು ಇನ್ನೂ ಸ್ವಲ್ಪ ಹಿಗ್ಗಿಸಿದರೆ, ಸಾಮರಸ್ಯ ಪಡೆದವನ ದೇಹ ಮತ್ತು ಆತ್ಮವಷ್ಟೇ ಅಲ್ಲ, ಪ್ರಪಂಚದಲ್ಲಿರುವುದೆಲ್ಲ ಪರಶಿವನ ಅಂಗ ಎಂದಾಗುತ್ತದೆ. ಇದನ್ನೇ ಕೆಲವರು "ಅಷ್ಟತನು" ಎಂಬ ಪದದ ಮೂಲಕ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಜೀವಾತ್ಮನಿಗೆ ಹೇಗೆ ಪಂಚಭೂತಗಳಿಂದಾದ ಒಂದು ದೇಹವಿದೆಯೋ ಹಾಗೆ, ಪರಶಿವನಿಗೆ ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಆತ್ಮ, ಸೂರ್ಯ ಮತ್ತು ಚಂದ್ರ ಎಂಬ ಎಂಟು ತತ್ವಗಳ ದೇಹವಿದೆ. ಆದರೆ, ನಮಗಿರುವಂತೆ ಅವನಿಗೂ ಕೈಕಾಲು ಇತ್ಯಾದಿಗಳಿವೆ ಎಂಬುದು ಇದರ ಅರ್ಥವಲ್ಲ.

(೫) ಸ್ವರೂಪ ["ನಿಮ್ಮಂಗವ ತೋರಿ...." (೯:೮೭) ಎಂಬಲ್ಲಿಯೂ ನಿಮ್ಮ ನಿಜದಂಗವ ತೋರಿ..." (೯:೯೫) ಎಂಬಲ್ಲಿಯೂ "ಅಂಗ" ಎಂಬ ಪದವು "ಸ್ವರೂಪ" ಎಂಬುದಕ್ಕೆ ಅನ್ವಯವಾಗುವಂತೆ ಬಳಕೆಯಾಗಿದೆ].

(೬) ತ್ವಕ್ಕು ಅಥವಾ ಚರ್ಮ ["ಅಂಗದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಸಂಗವ ಮಾಡನಾ ಶರಣನು" (೩:೩೦೭) ಎಂಬಲ್ಲಿ ಅಂಗ ಎಂಬುದು ಚರ್ಮಕ್ಕೆ ಅನ್ವಯಿಸುತ್ತದೆ. ಚೆನ್ನಬಸವಣ್ಣನವರು ಉಳಿದ ನಾಲ್ಕು ಜ್ಞಾನೇಂದ್ರಿಯಗಳ ಹೆಸರುಗಳನ್ನು ಹೇಳಿ, ಚರ್ಮಕ್ಕೆ ಅಂಗ" ಎಂಬ ಪದವನ್ನು ಬಳಸಿದ್ದಾರೆ].

(೭) ಬುದ್ದಿ [ಅವರು ಕಾಣಬೇಕು, ಇವರು ಕಾಣಬೇಕೆಂಬ ಭ್ರಮೆಯ ಭ್ರಮಿತರು ಅಂಗಹೀನರು” ಎಂದು ಚೆನ್ನಬಸವಣ್ಣನವರು ಹೇಳುವಾಗ (೩:೩೩೭), ಅವರ ಪ್ರಕಾರ, ಅಂಗಹೀನರೆಂದರೆ ಅಜ್ಞಾನಿಗಳು ಅಥವಾ ಬುದ್ಧಿಹೀನರು]

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಾರಿಭಾಷಿಕ ಪದಕೋಶ ಅಂಗಲಿಂಗ ಸಂಬಂಧ Next