Previous ಅಂಗ ಅಂಗಸ್ಥಲ-ಲಿಂಗಸ್ಥಲ ಸಂಬಂಧ Next

ಅಂಗಲಿಂಗ ಸಂಬಂಧ

ಅಂಗಲಿಂಗ ಸಂಬಂಧ

ವಚನಕಾರರು ಅಂಗ ಮತ್ತು ಲಿಂಗಗಳಿಗಿರುವ ಸಂಬಂಧವನ್ನು ಮೂರು ರೀತಿಯಾಗಿ ಕಂಡಿದ್ದಾರೆ.

(೧) ಗುರುವು ಲಿಂಗದೀಕ್ಷೆಯ ಮೂಲಕ ಇಷ್ಟಲಿಂಗವನ್ನು ಕೊಟ್ಟನಂತರ, ಪಡೆದ ಶಿಷ್ಯನು ಅದನ್ನು ಯಾವಾಗಲೂ ತನ್ನ ಸೊಂಟದ ಮೇಲಿನ ಯಾವುದಾದರೊಂದು ಭಾಗದ ಮೇಲೆ ಧರಿಸಬೇಕು. ಇಲ್ಲಿ ಲಿಂಗವೆಂದರೆ ಇಷ್ಟಲಿಂಗ, ಅಂಗವೆಂದರೆ ಸ್ಕೂಲಶರೀರ. ಹೀಗೆ ಇಷ್ಟಲಿಂಗವನ್ನು ಶಿಷ್ಯನು ತನ್ನ ದೇಹದಲ್ಲಿ ಧರಿಸುವುದರಿಂದ ಅವನಲ್ಲಿ ಅಂಗಲಿಂಗ ಸಂಬಂಧ ಏರ್ಪಟ್ಟಂತಾಯಿತು.

(೨) ಅಂಗವೆಂದರೆ ಶುದ್ಧನಾದ ಆತ್ಮನೆಂದೂ, ಲಿಂಗವೆಂದರೆ ಚಿದ್ವಸ್ತುವಾದ ಪರಶಿವನೆಂದೂ ಅರ್ಥ ಮಾಡಿದರೆ, ಆಗ ಪರಿಮಿತಿಯುಳ್ಳ ಅಂಗನು ಅಪರಿಮಿತನಾದ ಪರಶಿವನೊಂದಿಗೆ ಸಂಬಂಧ ಪಡೆದಿದ್ದಾನೆಂದು ಅರ್ಥವಾಗುತ್ತದೆ. ಇಲ್ಲಿ ಸಂಬಂಧ” ಎಂಬ ಪದಕ್ಕೆ "ಐಕ್ಯತೆ" ಅಥವಾ "ಸಾಮರಸ್ಯ" ಎಂಬ ಅರ್ಥವಿದೆ. ಅಂಗಲಿಂಗಸಂಬಂಧದಲ್ಲಿ (ಐಕ್ಯತೆಯಲ್ಲಿ) ಅಂಗನಿಗೆ ತಾನು ಬೇರೆ, ಪರಶಿವ ಬೇರೆ ಎಂಬ ದೈತ ಭಾವ ಇರುವುದಿಲ್ಲ. ಇಂತಹ ಐಕ್ಯ ಸ್ಥಿತಿಯನ್ನು ವಚನಕಾರರು ಅನೇಕ ಉಪಮೆಗಳ ಮೂಲಕ ವಿವರಿಸಿದ್ದಾರೆ. ನದಿ ಸಮುದ್ರವನ್ನು ಸೇರಿ ಒಂದಾದಂತೆ, ಹಾಲು ಹಾಲು ಬೆರೆತಂತೆ, ಆಲಿಕಲ್ಲು ಸಮುದ್ರದಲ್ಲಿ ಬಿದ್ದಂತೆ, ಕರ್ಪೂರ ಬೆಂಕಿಯಲ್ಲಿ ಬೆರೆತಂತೆ, ಅಂಗನು ಲಿಂಗದಲ್ಲಿ ಐಕ್ಯನಾಗುತ್ತಾನೆ. ಈ ರೀತಿಯ ಸಂಬಂಧಕ್ಕೆ ಅಂಗ ಮತ್ತು ಲಿಂಗಗಳು ಸಾರದಲ್ಲಿ ಒಂದೇ ಆಗಿರಬೇಕಾದುದು ಆವಶ್ಯಕ. ಕಲ್ಲು ಮತ್ತು ನೀರು ಬೇರೆ ಬೇರೆ ರೀತಿಯ ವಸ್ತುಗಳಾದುದರಿಂದ, ಕಲ್ಲು ಎಷ್ಟು ವರ್ಷ ನೀರಿನಲ್ಲಿದ್ದರೂ ಅದು ನೀರಿನಲ್ಲಿ ಬೆರೆತು ಒಂದಾಗಲು ಸಾಧ್ಯವಿಲ್ಲ. ಆದರೆ ಅಂಗ ಮತ್ತು ಲಿಂಗ ಎರಡು ಚಿದ್ವಸ್ತುಗಳೇ ಆದುದರಿಂದ ಸಮಾಧಿ ಸ್ಥಿತಿಯಲ್ಲಿರುವ ಸಾಧಕನ ಅಂಗವು ಪರಶಿವನಲ್ಲಿ ಸಂದಿಲ್ಲದಂತೆ ಒಂದಾಗುತ್ತದೆ.

(೩) ಅಂಗವು ಸಂಸಾರ ಬಂಧನದಲ್ಲಿದ್ದಾಗಲೂ ಅದಕ್ಕೆ ಲಿಂಗದೊಡನೆ ಸಂಬಂಧವಿದ್ದೇ ಇರುತ್ತದೆ. ಅದು ಯಾವಾಗಲೂ ಲಿಂಗದ ಅಂಗವೇ (ಭಾಗವೇ). ಆದರೆ ಅದಕ್ಕೆ ಮರೆವಿನಿಂದಾಗಿ (ಅಜ್ಞಾನದಿಂದಾಗಿ) ಈ ಸಂಬಂಧವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮರೆವಿನಿಂದಾಗಿ ದೈಹಿಕ ಸುಖವೇ ಹೆಚ್ಚೆಂದು ತಿಳಿದು, ನಾನಾ ರೀತಿಯ ಕರ್ಮಗಳನ್ನು ಮಾಡಿ, ತನ್ನ ಸಂಸಾರಬಂಧನವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತದೆ. ಇದೊಂದು ಬಂಧನವೆಂಬ ಅರಿವಾದವನು, ಸಂಸಾರವನ್ನು ತಿಳಿದು, ಅದರಿಂದ ತಪ್ಪಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಗುರುವಿನ ಬಳಿ ಬರುತ್ತಾನೆ. ಭಕ್ತಿ, ಜ್ಞಾನ, ಕ್ರಿಯಾ ಮತ್ತು ವೈರಾಗ್ಯಗಳನ್ನು ಒಳಗೊಂಡ ಲಿಂಗಾಂಗಯೋಗವನ್ನು ಗುರುವು ಬೋಧಿಸಿದಾಗ, ಅವನಿಗೆ ಅವುಗಳ ಅರಿವಾಗುತ್ತದೆ. ಐಕ್ಯಸ್ಥಿತಿಯಲ್ಲಿರುವವನ ಅಂಗಲಿಂಗ ಸಂಬಂಧಕ್ಕೂ ಸಂಸಾರಬಂಧನದಲ್ಲಿರುವವನ ಅಂಗಲಿಂಗ ಸಂಬಂಧಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ

ಕಲ್ಲಿನಲ್ಲಿ ಬೆಂಕಿಯಿದ್ದರೂ, ಅದು ಪ್ರಕಟವಾಗಲು ಹೇಗೆ ಒಂದು ಕಾರಣ ಬೇಕೋ, ಹಾಗೆಯೇ ಸಂಸಾರಬಂಧನದಲ್ಲಿರುವವನ ಅಂಗಲಿಂಗ ಸಂಬಂಧವು ಗೋಚರವಾಗಬೇಕಾದರೆ, ಅದಕ್ಕೆ ಲಿಂಗಾಗಯೋಗ ಸಾಧನೆಯೆಂಬ ಕಾರಣ ಬೇಕು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಂಗ ಅಂಗಸ್ಥಲ-ಲಿಂಗಸ್ಥಲ ಸಂಬಂಧ Next