ಕೈಲಾಸ | ಚಿತ್ತು (ಚಿತ್) |
ಲಿಂಗಾಯತ ಧರ್ಮದಲ್ಲಿ ಗುರು |
ಲಿಂಗಾಯತ ಧರ್ಮದಲ್ಲಿ ಗುರುವೂ ಒಂದು ಮಹತ್ವದ ಪಾತ್ರವಹಿಸುತ್ತಾನೆ. ಮನುಷ್ಯನು ತಾನು ಪರಶಿವನ ಭಾಗ (ಅಂಗ)ವೆಂದು ತಿಳಿಯದೇ ತಾನೊಬ್ಬ ಪ್ರತ್ಯೇಕ ವ್ಯಕ್ತಿ, ಪರಶಿವ ಮತ್ತೊಬ್ಬ ವ್ಯಕ್ತಿ ಎಂದು ತಿಳಿದು, ಅವಿದ್ಯೆಯಿಂದಾಗಿ ನಾನಾರೀತಿಯ ಕೃತ್ಯಗಳನ್ನೆಸಗಿ ಅವುಗಳ ಫಲಗಳನ್ನು ಅನುಭವಿಸಲು ಅನೇಕ ಜನ್ಮಗಳನ್ನೆತ್ತುತ್ತಾನೆ. ಈ ಅನೇಕ ಜನ್ಮಗಳನಂತರ ಸಂಸಾರವು ಹೇಯವೆನಿಸಿದಾಗ, ಅವನ ಮನಸ್ಸು ಆಧ್ಯಾತ್ಮದ ಕಡೆಗೆ ತಿರುಗುತ್ತವೆ. ಆದರೆ ಆಧ್ಯಾತ್ಮದ ಹಾದಿ ಅವನಿಗೆ ಅಪರಿಚಿತ. ಆಗ ಅವನು ಮಾರ್ಗದರ್ಶನಕ್ಕೆ ಗರುವಿನ ಬಳಿ ಬರುತ್ತಾನೆ. ಅಲ್ಲಿಂದ ಮುಂದೆ ಸಾಧಕನ ಜೀವನದಲ್ಲಿ ಗುರುವು ಒಂದು ಪ್ರಮುಖ ಪಾತ್ರ ವಹಿಸುತ್ತಾನೆ.
ಮೊಟ್ಟ ಮೊದಲನೆಯದಾಗಿ ಅವನು ಮೋಕ್ಷಾರ್ಥಿಯಾಗಿ ಬಂದವನಿಗೆ ಕರುಣೆಯಿಂದ, ದೀಕ್ಷೆಯ ಮೂಲಕ, ಇಷ್ಟಲಿಂಗವನ್ನು ಕೊಡುತ್ತಾನೆ. ಅಷ್ಟೇ ಮುಖ್ಯವಾದ ಅವನ ಮತ್ತೊಂದು ಕೆಲಸವೆಂದರೆ, ಮಾನವನ ಆತ್ಮವು ಮೂಲತಃ ದೇವಾಂಶಿಕವೆಂದೂ, ತಾನು ದೇವಾಂಶಿಕನೆಂಬುದನ್ನು ಅನುಭಾವದ ಮೂಲಕ ತಿಳಿಯುವುದೇ ಜೀವನ ಪರಮಗುರಿ ಎಂದೂ ಅವನು ಮೋಕ್ಷಾರ್ಥಿಗೆ ತಿಳಿಸಿಕೊಡುತ್ತಾನೆ. ಗುರುವು ತಾನೇ ಈ ಗುರಿಯನ್ನು ಸಾಧಿಸಿದವನಾದುದರಿಂದ, ಅದನ್ನು ಹೇಗೆ ಸಾಧಿಸಬೇಕೆಂಬುದರ ತಂತ್ರವು ಅವನಿಗೆ ಗೊತ್ತು. ಅವನು ಶಿಷ್ಯನಿಗೆ ಕೇವಲ ಸಿದ್ಧಾಂತವನ್ನಷ್ಟೇ ಬೋಧಿಸದೇ, ಮೋಕ್ಷ ಪಡೆಯುವ ಮಾರ್ಗವನ್ನೂ, ಅನುಸರಿಸಬೇಕಾದ ವಿಧಿ ವಿಧಾನಗಳನ್ನೂ ತಿಳಿಸಿಕೊಡುತ್ತಾನೆ. ಶಿಷ್ಯನ ಆಧ್ಯಾತ್ಮಿಕ ಜೀವನದಲ್ಲಿ ಇಷ್ಟೊಂದು ಹಾಸು ಹೊಕ್ಕಾಗಿರುವ ಗುರುವನ್ನು ವಚನಕಾರರು ಅತಿಯಾಗಿ ಶ್ಲಾಘಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಗುರುವಿನ ಆವಶ್ಯಕತೆ ಎಷ್ಟಿದೆ ಎಂಬುದನ್ನು ತಿಳಿಯಬೇಕಾದರೆ, ಗುರುವಿಲ್ಲದ ಶಿಷ್ಯನ ಆಧ್ಯಾತ್ಮಿಕ ಜೀವನವನ್ನು ಊಹಿಸಿಕೊಂಡರೆ ಸಾಕು. ಬೌದ್ಧ ಧರ್ಮದಲ್ಲಿ ಮೋಕ್ಷ ಸಾಧನೆ ಬಹಳ ಕಷ್ಟವೆನಿಸುವುದು, ಬೌದ್ಧ ಪಥವು ಬಹಳ ಕಠಿಣವೆಂಬ ಕಾರಣಕ್ಕಲ್ಲ, ಅದು ಕಠಿಣವಾಗಿರುವುದು ಅದರಲ್ಲಿ ಗುರುವಿಲ್ಲದಿರುವುದರಿಂದ ಇಲ್ಲಿ ಅಷ್ಟೇ ಮುಖ್ಯವಾದ ಅಂಶವೆಂದರೆ . ಲಿಂಗಾಯತ ಗುರುವು ಕೇವಲ ದೀಕ್ಷಾ ವಿಧಿಗಳನ್ನು ತಿಳಿದಿದ್ದರೆ ಸಾಲದು - ಅವನು ಶಿಷ್ಯನಿಗೆ ಮಾರ್ಗದರ್ಶನ ನೀಡಲು ಯೋಗ್ಯನಾಗಿರಬೇಕು. ತಾನೆ ಮುಕ್ತನಲ್ಲದೆ, ಬೇರೆಯವರಿಗೆ ಮೋಕ್ಷ ಮಾರ್ಗ ಮಾಡುವುದು, ಒಬ್ಬ ಕುರುಡ ಮತ್ತೊಬ್ಬ ಕುರುಡನಿಗೆ ಮಾರ್ಗದರ್ಶನ ನೀಡಿದಂತೆ. ಆದುದರಿಂದ, ಬಸವಣ್ಣನವರು ಮಡಕೆಯ ಮಾಡುವರೆ ಮಣ್ಣೆ ಮೊದಲು . . . ಶಿವಪಥವನರಿವೊಡೆ ಗುರುಪಥವೇ ಮೊದಲು” ಎನ್ನುತ್ತಾರೆ.
ಮೋಕ್ಷ (ಲಿಂಗಾಂಗ ಸಾಮರಸ್ಯ)ವನ್ನು ಪಡೆದ ಗುರು ಲಿಂಗಕ್ಕೆ ಸಮಾನ. ಇಂಥಹ ಗುರುವಿಗಿರುವ ಕರುಣೆ ಅಪಾರ, ಈ ಕರುಣೆಯಿಂದಾಗಿಯೇ ಸಂಸಾರ ಬಂಧನದಲ್ಲಿ ತೊಳಲುತ್ತಿರುವವರಿಗೆಲ್ಲಾ ಅವನು ಲಿಂಗದೀಕ್ಷೆ ನೀಡುವುದು. ಆದರೆ ಅವನು ಕರುಣೆ ತೋರುವುದು ಯೋಗ್ಯ ಶಿಷ್ಯರಿಗೆ ಮಾತ್ರ.
ಗುರುವು ಹರನಷ್ಟೇ ಮುಖ್ಯ ಒಂದು ಮಾತನ್ನು ಸಮರ್ಥಿಸಲು ಚೆನ್ನ ಬಸವಣ್ಣ “ಹರತನ್ನ ರೂಪ ತೋರಬೇಕೆಂಬುದು, ಗುರುರೂಪಾಗಿ ಬಂದು, ಮನಸ್ಥಲಕ್ಕೆ ಮಂತ್ರವಾದ, ತನು ಸ್ಥಲಕ್ಕೆ ಪ್ರಸಾದವಾದ, ಕರಸ್ಥಲಕ್ಕೆ ಲಿಂಗವಾದ (೩:೨೨) ಎನ್ನುತ್ತಾರೆ. ಹರನಿಗಿರುವಷ್ಟು ಕರುಣೆ ಗುರುವಿಗೂ ಇರುವುದರಿಂದಲೇ, ಗುರುವು ಶಿಷ್ಯರನ್ನು ತನ್ನಂತೆ ಮಾಡಬೇಕೆಂಬ ಉದ್ದೇಶದಿಂದ ಕರುಣೆ ತೋರಿಸುತ್ತಾನೆ.
ಗುರು ಶಿಷ್ಯನಿಗೆ ಕೊಡುವ ಶಿಕ್ಷಣದ ವಿವಿಧ ರೀತಿಗಳಿಗನುಗುಣವಾಗಿ, ವಚನಕಾರರು ಗುರು ತ್ರಿವಿಧವೆಂದು ಗುರುತಿಸಿದ್ದಾರೆ. ಕರುಣೆಯಿಂದ ಶಿಷ್ಯನಿಗೆ ದೀಕ್ಷೆ ಕೊಟ್ಟು, ಲಿಂಗದ ಆವಶ್ಯಕತೆಯನ್ನೂ, ಅದರ ಪೂಜಾ ಕ್ರಮವನ್ನೂ ಆಚಾರವನ್ನೂ ಭೇದಿಸುವ ಗುರುವು ದೀಕ್ಷಾ ಗುರು: ಶಿಷ್ಯನು ಈ ಕ್ರಮವನ್ನು ಅಶ್ರದ್ದೆಯಿಂದ ಪಾಲಿಸದಂತೆ ನೈತಿಕ ನಿಯಮಗಳನ್ನು ಎಲ್ಲೂ ತಪ್ಪದಂತೆ ನೋಡಿಕೊಳ್ಳುವ ಹಾಗೂ ಎಲ್ಲಾದರೂ ತಪ್ಪಿದರೆ ಶಿಷ್ಯನನ್ನು ಶಿಕ್ಷಿಸುವ ಗುರು ಶಿಕ್ಷಾ ಗುರು. ಧಾರ್ಮಿಕ ಮತ್ತು ನೈತಿಕ ಆಚಾರಗಳನ್ನು ಬಹಳ ಶ್ರದ್ದೆ ಮತ್ತು ನಿಷ್ಠೆಯಿಂದ ಪಾಲಿಸಿದಾಕ್ಷಣ ಶಿಷ್ಯನಿಗೆ ಲಿಂಗಾಂಗ ಸಾಮರಸ್ಯ ಲಭಿಸುವುದಿಲ್ಲ. ಇವುಗಳನ್ನು ಪೂರ್ವಪೀಠಿಕೆಯಾಗಿಟ್ಟುಕೊಂಡು, ಅವನು ಲಿಂಗಧ್ಯಾನವನ್ನು ಕಲಿತುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಅವನು ಪ್ರಸಾದವೆಂದರೇನು, ಹೇಗೆ ಪ್ರಾಣಲಿಂಗಿಯಾಗಬೇಕು ಎಂಬುದನ್ನು, ಸಂಪೂರ್ಣ ಶರಣಾಗತಿ ಮತ್ತು ಲಿಂಗಸತಿ - ಶರಣಸತಿ ಭಾವವನ್ನು ತಿಳಿದುಕೊಳ್ಳಬೇಕು. ಹಾಗೂ ಕೊನೆಯಲ್ಲಿ ಲಿಂಗದಲ್ಲಿ ಹೇಗೆ ತನ್ನ ಅಂಗವನ್ನು ಐಕ್ಯಗೊಳಿಸಬೇಕೆಂಬುದನ್ನು ಕಲಿತುಕೊಳ್ಳಬೇಕು. ಇದು ಸಮರ್ಥ ಗುರುವಿನ ಮಾರ್ಗದರ್ಶನವಿಲ್ಲದೆ ಸಾಧ್ಯವಿಲ್ಲ. ಇದನ್ನು ಭೋದಿಸುವ ಗುರು ಮೋಕ್ಷ ಗುರು, ಈ ಮೂವರು ಬೇರೆ ಬೇರೆಯಾಗಿರಬೇಕೆಂಬ ನಿಯಮವೇನಿಲ್ಲ.
ಗುರು ತಾನೇ ಮೋಕ್ಷ ಪಡೆದವನಾಗಿರದಿದ್ದರೆ, ಶಿಷ್ಯ ತನ್ನ ಸಾಧನೆಯಲ್ಲಿ ಎಷ್ಟೇ ಶ್ರದ್ದೆ ಮತ್ತು ನಿಷ್ಠೆಯನ್ನು ತೋರಿಸಿದರೂ, ಅವನಿಗೆ ಧ್ಯೇಯವು ಸಿದ್ಧಿಸುವುದಿಲ್ಲ. ಲಾಂಛನಕ್ಕೆ ಶರಣೆಂಬೆ” ಎಂದು ಬಸವಣ್ಣ, ಗುರುವಿನಲ್ಲಿ ಗುಣವನರಸಬಾರದು? ಎಂದು ಇತರ ಶರಣರು ಹೇಳಿದರೂ, ಗುಣವಿಲ್ಲದ (ದುರ್ನಡತೆಯ) ಹಾಗೂ ಕೇವಲ ಲಾಂಛನಧಾರಿಗಳು ಮೋಕ್ಷಗುರುಗಳಾಗಲು ಸಾಧ್ಯವಿಲ್ಲ. ಅದೇ ರೀತಿ, ಗುರುವು ಎಷ್ಟೇ ಸಮರ್ಥನಿದ್ದರೂ ಶಿಷ್ಯನು ಚಂಚಲ ಮನಸ್ಸಿನವನಾಗಿದ್ದರೆ ಅವನು ಶಿಷ್ಯನಿಗೆ ಮೋಕ್ಷ ಕೊಡಿಸಲಾರ. ಒಬ್ಬನಿಗೆ ಹೋರಾಡಲು ಆಯುಧವನ್ನು ಕೊಡಬಹುದು ಆದರೆ ಗೆಲ್ಲಲು ಬೇಕಾದ ಪ್ರಬಲ ಮನಸ್ಸು ಮತ್ತು ಧೈರ್ಯವನ್ನು ಯಾರೂ ಅವನಿಗೆ ಕೊಡಲಾರರು. ಹಾಗೆಯೇ ಗುರುವು ದೀಕ್ಷೆ ಕೊಡಬಹುದು, ಮೋಕ್ಷಕ್ಕೆ ಅಗತ್ಯವಾದ ಬೋಧನೆಯನ್ನು ಕೊಡಬಹುದು. ಆದರೆ ಶ್ರದ್ಧೆ ಮತ್ತು ನಿಷ್ಠೆಯನ್ನು ಯಾರೂ ಅವನಿಗೆ ಕೊಡಲಾರರು. ಹೀಗೆ ಗುರುವಿನ ಯಶಸ್ಸು ಶಿಷ್ಯನ ಶ್ರದ್ಧೆ ಮತ್ತು ನಿಷ್ಠೆಯನ್ನು ಅವಲಂಬಿಸಿದೆ. ಗುರುಕರುಣ (ಗುರುಕಾರುಣ್ಯ) ಸ್ಥಲ : ಮನುಷ್ಯ ಸಂಸಾರ ಬಂಧನದಿಂದ ಬೇಸತ್ತು, ಪಾರಮಾರ್ಥಿಕ ಧ್ಯೇಯವನ್ನು ಸಾಧಿಸಬೇಕೆಂದು ನಿಶ್ಚಯಿಸಿದಾಗ, ಅವನಿಗೆ ದಾರಿ ಗೊತ್ತಾಗದೆ, ಮೊದಲು ಗುರುವಿನ ಕಡೆ ಮಾರ್ಗದರ್ಶನಕ್ಕೆ ಹೋಗುತ್ತಾನೆ. ಆಗ ಗುರು ಕರುಣೆಯಿಂದ ಮೋಕ್ಷಾರ್ಥಿಗೆ ಮಾರ್ಗದರ್ಶನ ನೀಡಲು ಇಚ್ಛಿಸುತ್ತಾನೆ. ಈ ರೀತಿ ಕರುಣೆ ಪಡೆಯುವ ಮೋಕ್ಷಾರ್ಥಿಯ ನಿಲವೇ ಗುರುಕಾರುಣ್ಯ ಸ್ಥಲ. (ನೋಡಿ : ಗುರು, ಸಂಸಾರ, ಸಂಸಾರಹೇಯ ಸ್ಥಲ)
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಕೈಲಾಸ | ಚಿತ್ತು (ಚಿತ್) |