ಜಂಗಮ | ಜ್ಞಾನವಾರು |
ಜ್ಞಾನ |
ವಚನಕಾರರು ಈ ಪದವನ್ನು ಕನಿಷ್ಠ ನಾಲ್ಕು ಅರ್ಥಗಳಲ್ಲಿ ಬಳಸಿರುವಂತೆ ಕಾಣುತ್ತದೆ.
೧. ಪದಾರ್ಥ, ಇಂದ್ರಿಯ ಮತ್ತು ಅಂತಃಕರಣಗಳ ಸನ್ನಿಕರ್ಷದಿಂದ ಉಂಟಾಗುವ ಪರಿಣಾಮ, ಉದಾಹರಣೆಗೆ, ಕಣ್ಣು ಕೆಂಪು ಬಣ್ಣವನ್ನು ನೋಡಿ, ಬುದ್ದಿ “ಈ ಹೂವು ಕೆಂಪಗಿದೆ” ಎಂದು ನಿರ್ಧರಿಸಿದಾಗ ನಮಗೆ ಈ ಹೂವಿನ ಜ್ಞಾನ ಉಂಟಾಯಿತೆಂದರ್ಥ. ಅದೇ ರೀತಿ, ಹೊಗೆಯನ್ನು ನೋಡಿ, ಬೆಂಕಿಯನ್ನು ನೋಡದೆಯೇ “ಅಲ್ಲಿ ಬೆಂಕಿಯಿರಬೇಕೆಂಬ ಜ್ಞಾನ ಪಡೆಯುತ್ತೇವೆ. ಅದೇ ರೀತಿ ವೇದ, ಉಪನಿಷತ್ತುಗಳನ್ನು ಓದಿ ನಮಗೆ ಆತ್ಮವಿದೆ ಎಂಬ ಜ್ಞಾನವನ್ನು ಪಡೆಯುತ್ತೇವೆ.
೨. ಕೆಲವು ವೇಳೆ ಜ್ಞಾನವೆಂದರೆ "ನಿಜವಾದ ಜ್ಞಾನ" ಎಂದಾಗುತ್ತದೆ. ಶಿವನ ಜ್ಞಾನವೊಂದೇ ನಿಜವಾದ ಜ್ಞಾನ, ಶಾಸ್ತ್ರಜ್ಞಾನ, ವೇದಪುರಾಣಗಳ ಜ್ಞಾನ ಇವು ನಿಜವಾದ ಜ್ಞಾನವಲ್ಲ. ಏಕೆಂದರೆ, ಅವುಗಳಿಂದ ನಮ್ಮ ವ್ಯವಹಾರ ಉತ್ತಮವಾಗಬಲ್ಲುದೆ ಹೊರತು, ಪರಮ ಪುರುಷಾರ್ಥವಾದ ಲಿಂಗಾಂಗ ಸಾಮರಸ್ಯ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗೇ ಬಸವಣ್ಣನವರು “ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನವಯ್ಯ” (೧ : ೭೯೯) ಎಂದಿದ್ದಾರೆ.
೩. ಅನುಭಾವ ಅಥವಾ ಯೋಗ ಪ್ರತ್ಯಕ್ಷ ಎಂಬುದು ಮತ್ತೊಂದು ಅರ್ಥ. ಅನುಭಾವದಲ್ಲಿ ಆತ್ಮನು ದೇಹ, ಇಂದ್ರಿಯ ಮತ್ತು ಅಂತಃಕರಣಗಳ ಜೊತೆಗಿನ ಸಂಬಂಧವನ್ನು ತಾತ್ಕಾಲಿಕವಾಗಿ ಕಳೆದುಕೊಂಡು ನಿಸ್ಸಂಗಿಯಾಗಿರುತ್ತಾನೆ. ತಾನು ಪರಮಾತ್ಮನ ಅಂಗವೆಂಬ ಅರಿವು ಆಗ ಮೂಡುತ್ತದೆ. ಆ ಅರಿವೇ .ಜ್ಞಾನ. ಇದು ಇಂದ್ರಿಯ ಪ್ರತ್ಯಕ್ಷದಿಂದಲೂ ಅನುಮಾನ (ತರ್ಕ)ದಿಂದಲೂ ಪಡೆದ ಜ್ಞಾನಕ್ಕಿಂತ ಭಿನ್ನ ಎಂಬುದು ಗಮನಾರ್ಹ.
೪. ಯಾವುದರಿಂದ ನಮ್ಮ ಬುದ್ದಿ ಚಿಂತಿಸಬಲ್ಲುದೋ, ಇಂದ್ರಿಯಗಳು ನೋಡಬಲ್ಲವೋ ಅದೇ ಜ್ಞಾನ ಅಥವಾ ಅರಿವು ಅಥವಾ ಚಿತ್ತು. ವಾಸ್ತವವಾಗಿ, ವಚನಕಾರರ ಪ್ರಕಾರ, ಚಿತ್ತೇ ಚಿಂತಿಸುವುದಿಲ್ಲ, ಆದರೆ ಅದರ ಸಾನ್ನಿಧ್ಯದಿಂದಾಗಿ ಬುದ್ದಿಯು ಚಿಂತಿಸುತ್ತದೆ. ಎಲ್ಲಿಯವರೆಗೆ ಜ್ಞಾನ (ಚಿತ್ತು) ನಮ್ಮಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ನಾವು ಜೀವಿಸಿರುತ್ತೇವೆ, ಚಿಂತಿಸುತ್ತೇವೆ, ನೋಡುತ್ತೇವೆ. ಅದು ದೇಹದಿಂದ ನಿರ್ಗಮಿಸಿದ ಕೂಡಲೇ ನಾವು ನಿರ್ಜೀವರಾಗುತ್ತೇವೆ. ನಾವು ಇತರ ವಸ್ತುಗಳ ಜ್ಞಾನ ಪಡೆಯುತ್ತಿರುವಾಗ, ನಮಗೆ ಚಿತ್ತು (ಜ್ಞಾನ) ಇದೆ ಎಂಬ ಅಸ್ಪಷ್ಟ ಅರಿವೂ ಇರುತ್ತದೆ. ಆದರೆ ಅನುಭಾವದಲ್ಲಿ ಆ ಜ್ಞಾನದ ಅರಿವೇ ಪ್ರಧಾನವಾಗಿ, ಇತರ ಜ್ಞಾನ ಇಲ್ಲವಾಗುತ್ತದೆ. ಅನುಭಾವದಲ್ಲಿ ಸಿದ್ಧವಾಗುವ ಚಿತ್ತು ಪರಶಿವನೆಂಬ ಮಹಾಚಿತ್ತಿನ ಅಂಶ. ಈ ಅರ್ಥದಲ್ಲಿ, ನಮ್ಮ ಚಿತ್ತು (ಆತ್ಮ) ಜ್ಞಾನ ಎಂದೂ ಪರಶಿವನು ಮಹಾಜ್ಞಾನ ಎಂದೂ ವಚನಕಾರರು ಹೇಳುತ್ತಾರೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಜಂಗಮ | ಜ್ಞಾನವಾರು |