Previous ನಿತ್ಯ ಷೋಡಶೋಪಚಾರ Next

ಜೀವಾತ್ಮ

ಜೀವಾತ್ಮ

೧. ಆತ್ಮತ್ರಯಗಳಾದ ಜೀವಾತ್ಮ, ಅಂತರಾತ್ಮ ಮತ್ತು ಪರಮಾತ್ಮ ಎಂಬುವುಗಳಲ್ಲಿ ಒಂದು ಪ್ರಭೇದ; ಅಂಗ ಮತ್ತು ಲಿಂಗವನ್ನು ಬೇರೆ ಬೇರೆಯೆಂದು ತಿಳಿದಿರುವವನು; “ಅಂಗ ಬೇರೆ ಲಿಂಗ ಬೇರೆಂದು ಲಿಂಗಾಂಗವೆರಡಕ್ಕೂ ಭಿನ್ನವಿಟ್ಟು ಕೊಂಡಾರಾಧಿಸುವಂಥ ಸಿದ್ಧಾಂತಿಯು” (ಬಸಟೀ. II, ೨೮೨-೯೨೮ ಟೀಕು); ಬಹಿರಂಗಾವಸ್ಥೆಯಲ್ಲಿರುವ ಜೀವಾತ್ಮನು ತಾಮಸ ಗುಣದಿಂದ ಕೂಡಿ ಯಾವಾಗಲೂ ಸಂಸಾರದಲ್ಲಿಯೇ ತೊಳಲಾಡುತ್ತಿರುತ್ತಾನೆ. ಜೀವಾತ್ಮನ ಪ್ರಗತಿ ಎಂದರೆ ಸ್ಥೂಲಶರೀರದಲ್ಲಿ ಸಂಬಂಧಿಸಿದ ಇಷ್ಟಲಿಂಗವು ಪ್ರಕಟಗೊಳ್ಳುವುದೇ ಆಗಿರುತ್ತದೆ : ಜೀವಾತ್ಮ ಅಂತರಾತ್ಮನ ಸುದ್ದಿಯ ಬೆಸಗೊಂಬಡೆ ಹೇಳಿಹೆ ಕೇಳಿ ಭೋ ಹುಸಿಯೆ ಸಂಕಲೆಯಾಗಿದ್ದಲ್ಲಿ ಕಾದುಕೊಂಡಿದ್ದನೊಬ್ಬ ಕಥೆ ಕನಸ ಮಾಡಿ ಹೇಳುತ್ತಿದ್ದನೊಬ್ಬ (ಬಸವ. ಸಮವ. ೧-೨೪೪-೯೨೭); ಜೀವಾತ್ಮ ಅಂತರಾತ್ಮ ಪರಮಾತ್ಮರೆಂದಾತ್ಮತ್ರಯಂಗಳವರಲ್ಲಿ ತಪ್ಪಾಯಃ ಪಿಂಡದಂತೆ ದೇಹಾದಿಗಳೊಡೆತನ ಸಂಬಂಧದಿಂ ಸಕಲ ಸಂಸಾರ ವ್ಯವಹಾರಮುಳ್ಳಾತನೇ ಜೀವಾತ್ಮನು;

೨. ಏಕೋತ್ತರ ಜಂಗಮಲಿಂಗಸ್ಥಲದಲ್ಲಿರುವ ಒಲವುಲಿಂಗದ ಮೂರು ಸ್ಥಲಗಳಲ್ಲಿ ಒಂದು; ಜೀವಭಾವವನ್ನು ನೀಗಿಕೊಂಡು, ದೇಹಗುಣವನ್ನು ಮರೆತು ಪ್ರಣವ ಧ್ಯಾನದಲ್ಲಿ ನಿರತನಾದ ಮಹಾಜ್ಞಾನಿಯಲ್ಲಿ ಪರಶಿವನು ನೆಲಸುವನೆಂಬುದನ್ನು ನಿರೂಪಿಸುವ ಸ್ಥಲ; ಲಿಂಗವು ಪ್ರಾಣಲಿಂಗಿಯಲ್ಲಿ ಜೀವಭಾವವನ್ನು ತೊಡೆದುಹಾಕಿ ಸಮ್ಯಗ್‌ ಜ್ಞಾನವನ್ನಳಡವಡಿಸುವ ಸ್ಥಲ : ಒಲವುಲಿಂಗತ್ರಿವಿಧ ಜೀವಾತ್ಮ ಅಂತರಾತ್ಮ ಪರಮಾತ್ಮ (ಚೆನ್ನಬ. ಸಮವ. ೩-೨೫೫-೮೪೯);

೩. ಆತ್ಮನ ವ್ಯವಹಾರಗಳ ವ್ಯತ್ಯಾಸದಿಂದಾದ ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ಮಲಾತ್ಮ, ಶುದ್ಧಾತ್ಮ, ಜ್ಞಾನಾತ್ಮ, ಮಹಾತ್ಮ ಮತ್ತು ಭೂತಾತ್ಮ ಎಂಬ ಎಂಟು ಪ್ರಕಾರಗಳಲ್ಲಿ ಒಂದು ;

೪. ಆತ್ಮನ ಪ್ರಗತಿಯ ಕುರುಹುಗಳೆಂದು ಹೇಳಲಾಗುವ ಒಂಬತ್ತು ಅವಸ್ಥೆಗಳಲ್ಲಿ ಒಂದು : ಆತ್ಮನ ವಿಕಾಸವೂ ಅದರಂತೆಯೇ ಹೆಚ್ಚುತ್ತ ಹೋಗುತ್ತದೆ. ವಿಕಾಸ ಹೊಂದಿದ ಹಾಗೆ ಆತ್ಮನು ಅನುಕ್ರಮವಾಗಿ ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ಮಲಾತ್ಮ, ಶುದ್ಧಾತ್ಮ, ಜ್ಞಾನಾತ್ಮ ಎಂದು ಹೇಳಲ್ಪಡುತ್ತಾನೆ ಮತ್ತು ಕಡೆಯ ಮೂರು ಆತ್ಮನ ಸ್ಥಿತಿಗಳು ಮಹಾತ್ಮ, ದಿವ್ಯಾತ್ಮ ಮತ್ತು ಚಿನ್ಮಯಾತ್ಮ ಎಂದು ಹೇಳಲ್ಪಡುತ್ತವೆ .

೫. ಮೂವತ್ತಾರು ಬಗೆಯ ತತ್ವಗಳಲ್ಲಿ ಒಂದು :

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ನಿತ್ಯ ಷೋಡಶೋಪಚಾರ Next