ಪ್ರಸಾದ | ಬಯಲು |
ಪ್ರಸಾದ ಪ್ರಭೇದ |
ಪ್ರಸಾದವು ಮೇಲ್ನೋಟಕ್ಕೆ ಒಂದೇ ತೆರನಂತೆ ಕಂಡರೂ ವಚನಕಾರರು ಪ್ರಸಾದಿಗಳ ವರ್ತನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪ್ರಸಾದದಲ್ಲಿರುವ ಪ್ರಭೇದಗಳನ್ನು ಗುರುತಿಸಿದ್ದಾರೆ. ಅವು ಮುಖ್ಯವಾಗಿ ನಾಲ್ಕು ರೀತಿಯವಿದೆ :
೧. ಉಪಜೀವನ ಪ್ರಸಾದ = ಉಳ್ಳವರು ಪ್ರಸಾದದ ಹೆಸರಿನಲ್ಲಿ ಪದೇ ಪದೇ ಸ್ವೀಕರಿಸುವ ಪ್ರಸಾದ.
೨. ತುಡುಗಣಿ ಪ್ರಸಾದ = ಬಡವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲೋಸ್ಕರ ಕದ್ದು ಪದೇ ಪದೇ ಸ್ವೀಕರಿಸುವ ಪ್ರಸಾದ.
೩. ದಳದುಳಿ ಪ್ರಸಾದ = ಯಾವ ಅಂಜಿಕೆ ಅಥವಾ ಸಂಕೋಚವಿಲ್ಲದೆಯೂ ಎಲ್ಲರಿಗೂ ಕಾಣುವಂತೆ ಸ್ವೀಕರಿಸುವ ಪ್ರಸಾದ.
೪. ಸ್ವಯ ಪ್ರಸಾದ = ದೇಹವೆಂಬ ದೇಗುಲದಲ್ಲಿರುವ ಅಂಗವೇ ಲಿಂಗ ಎಂಬ ಭಾವನೆಯಿಂದ, ಆ ಲಿಂಗಕ್ಕೋಸ್ಕರ ಸ್ವೀಕರಿಸುವ ಪ್ರಸಾದ (೩ : ೨೪೧).
ಪ್ರಸಾದ ಲಿಂಗದ ಪ್ರಸನ್ನತ್ವ : ತನ್ನ ತ್ವಗಿಂದ್ರಿಯದ ತುದಿಯಲ್ಲಿ ಪ್ರಸಾದ ಲಿಂಗವನ್ನು ಪ್ರತಿಷ್ಠಾಪಿಸಿಕೊಂಡವನು, ಯಾವ ಸ್ಪರ್ಶವನ್ನೂ ಲಿಂಗ ಮುಟ್ಟದೆ, ತಾನು ಮುಟ್ಟೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಅಲ್ಲದೆ, ಅವನು ತನ್ನ ತ್ವಗಿಂದ್ರಿಯವೇ ಶಿವನ ತ್ವಗಿಂದ್ರಿಯವೆಂದು ತಿಳಿದು, ಸ್ಪರ್ಶನದ ಸುಖ ತನಗಲ್ಲ, ಪರಶಿವನಿಗೆ ಎಂದು ತಿಳಿಯುತ್ತಾನೆ. ಹೀಗೆ ತ್ವಕ್ಕು, ಸ್ಪರ್ಶನ, ಸ್ಪರ್ಶನದ ಸುಖ ಮೂರನ್ನೂ ಪ್ರಸಾದ ಲಿಂಗಕ್ಕೆ ಅರ್ಪಿಸಿದ ಶರಣನು ಪ್ರಸಾದಲಿಂಗದ ಪ್ರಸನ್ನತೆಗೆ ಅರ್ಹವಾಗುತ್ತಾನೆ, ಹಾಗೂ ಆ ಮೂಲಕ, ತ್ವಗಿಂದ್ರಿಯದ ದುಷ್ಪಭಾವಗಳಿಂದ ಮುಕ್ತನಾಗುತ್ತಾನೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪ್ರಸಾದ | ಬಯಲು |