Previous ಲಿಂಗಾಂಗ ಸಾಮರಸ್ಯ ವಿಭೂತಿ Next

ವಿಮರ್ಶಾ ಶಕ್ತಿ

ವಿಮರ್ಶಾ ಶಕ್ತಿ

ವಿಮರ್ಶಾ ಶಕ್ತಿ ಅಥವಾ ನೆನಹು (ನೆನವು) ಸಹ ಶಕ್ತಿಯ ಅತ್ಯಂತ ಸೂಕ್ಷ್ಮರೂಪ. ಅದು ಎರಡು ವಿಧದಲ್ಲಿ ಕೆಲಸ ಮಾಡುತ್ತದೆ.

೧. ಸೃಷ್ಟಿಪೂರ್ವದ ಮೂಲಸ್ಥಿತಿಯಲ್ಲಿ ಪರಶಿವನು ಸರ್ವಶೂನ್ಯ ನಿರಾಲಂಬನಾಗಿರುತ್ತಾನೆ. ಅಂದರೆ ಅಂತಹ ಸ್ಥಿತಿಯಲ್ಲಿ ಪ್ರಪಂಚವೂ ಇಲ್ಲ, ಪ್ರಪಂಚದ ಉಪಾದಾನ ಕಾರಣವಾದ ಶಕ್ತಿಯೂ ಇಲ್ಲ, ಶಕ್ತಿಯ ವಿವಿಧ ರೂಪಗಳಾದ ಇಚ್ಛಾಶಕ್ತಿ, ಜ್ಞಾನಶಕ್ತಿ, ಮುಂತಾದವುಗಳೂ ಇಲ್ಲ, ಅವುಗಳನ್ನು ನಿಯಂತ್ರಿಸುವ ಸದಾಶಿವ, ಈಶ್ವರ, ಮುಂತಾದ ಅಧಿದೇವತೆಗಳೂ ಇಲ್ಲ. ಅಷ್ಟೇ ಏಕೆ, ಪರಶಿವನಿಗೆ ಸೃಷ್ಟಿಸಬೇಕು ಎಂಬ ಇಚ್ಛೆಯಾಗಲಿ ತಾನೊಬ್ಬನೇ ಇದ್ದೇನೆ ಎಂಬ ಅರಿವಾಗಲಿ ಅವನಿಗಿಲ್ಲ. ಇಂಥ ಒಂದು ಸಂದರ್ಭದಲ್ಲಿ ಅವನಲ್ಲಿ ನೆನಹು ತಲೆದೋರಿ, ತಾನೊಬ್ಬನೇ ಇರುವ ಅರಿವಾಗುತ್ತದೆ. ನೆನಹು ಒಂದು ಪ್ರಚೋದಕ ಶಕ್ತಿ, ಹೇಗೆಂದರೆ, ಆ ನೆನಹು ತಲೆದೋರದಿದ್ದರೆ, ಅವನಿಗೆ ತಾನೊಬ್ಬನೆ ಇರುವ ಅರಿವಾಗುತ್ತಿರಲಿಲ್ಲ. ಈ ಸ್ವ ಪ್ರಜ್ಞೆ ಇಲ್ಲದಿದ್ದರೆ ಅವನಿಗೆ ಸೃಷ್ಟಿಸುವ ಇಚ್ಛೆ ಉಂಟಾಗುತ್ತಿರಲಿಲ್ಲ, ಸೃಷ್ಟಿಸುವ ಇಚ್ಛೆಯೇ ಅವನಿಗೆ ಇಲ್ಲದಿದ್ದರೆ ಅವನು ಸೃಷ್ಟಿಕರ್ತನಾಗುತ್ತಿರಲಿಲ್ಲ. ಆದುದರಿಂದ ನೆನಹು ಒಂದು ಪ್ರಚೋದಕ ಶಕ್ತಿ, ಆದರೆ ಸಚೇತನ ವಸ್ತುವಿನಂಥ ಪ್ರಚೋದಕ ಶಕ್ತಿಯಲ್ಲ. ಅಂದರೆ, ವಿಮರ್ಶಾಶಕ್ತಿಯು ಮಾತ್ರ ಇಚ್ಛಾಶಕ್ತಿ (ಸೃಷ್ಟಿಸಬೇಕೆಂಬ ಇಚ್ಛೆ), ಜ್ಞಾನಶಕ್ತಿ, (ಏನನ್ನು, ಯಾವಾಗ, ಯಾವ ರೀತಿಯಲ್ಲಿ ಸೃಷ್ಟಿಸಬೇಕೆಂಬ ಜ್ಞಾನ ಮತ್ತು ಕ್ರಿಯಾಶಕ್ತಿ (ಇಚ್ಛೆಯನ್ನು ಜ್ಞಾನದ ಪ್ರಕಾರ ಕಾರ್ಯಗತ ಮಾಡಲು ಬೇಕಾದ ಉಪಾದಾನಕರಣಗಳಿಗೆ ಜನ್ಮ ನೀಡುತ್ತದೆ.

೨. ವಿಮರ್ಶಾಶಕ್ತಿಯು ಕೇವಲ ಪ್ರಚೋದಕ ಶಕ್ತಿಯಂಥ ನಿಮಿತ್ತಕಾರಣವಷ್ಟೇ ಅಲ್ಲ, ಅದು ಉಪಾದಾನಕರಣವೂ ಹೌದು. ನವಿಲಿನ ತತ್ತಿಯಲ್ಲಿ ಸಂಪೂರ್ಣ ನವಿಲು ಹೇಗೆ ಅವ್ಯಕ್ತವಾಗಿ ಅಡಕವಾಗಿದೆಯೋ ಹಾಗೆಯೇ ಇಡೀ ಜಗತ್ತಿನ ವೈವಿಧ್ಯಮಯ ಚರಾಚರವಸ್ತುಗಳು ಶಿವನಲ್ಲಿ ನೆನಹಿನ ರೂಪದಲ್ಲಿ ಅಡಕವಾಗಿವೆ. “ಲೋಕಾದಿಲೋಕಂಗಳೇನೂ ಇಲ್ಲದಂದು ಏಕಮೇವ ಪರಬ್ರಹ್ಮವು ತಾನೊಂದೇ ನೋಡಾ! ಅದು ತನ್ನನು ನೆನೆಯದೇ ಇದಿರನು ನೆನೆಯದೆ ನೆನಹು ನಿಷ್ಪತ್ತಿಯಾಗಿದ್ದಿತು. ನೋಡಾ! ನೆನಹಿಲ್ಲದ ಘನವಸ್ತು ನೆನೆದ ನೆನಪೇ ಸಾವಯವವಾಗಿ ಚಿತ್ತೆನಿಸಿಕೊಂಡಿತ್ತು. ಆ ಚಿತ್ತೇ ಸತ್ತು ಚಿತ್ತು ಆನಂದ ನಿತ್ಯ ಪರಿಪೂರ್ಣ ಎಂಬ ಐದಂಗನಂಗೀಕರಿಸಿ ನಿಃಕಲ ಶಿವತತ್ವವೆನಿಸಿಕೊಂಡಿತ್ತು ನೋಡಾ! ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ. ಇತ್ಯಾದಿ” ಎಂದು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹೇಳುವಾಗ, ನೆನಹು ಪರಶಿವನಲ್ಲಿ ಅಂಗಸ್ಥಲ ಮತ್ತು ಲಿಂಗಸ್ಥಲಗಳ ವಿಭಜನೆ ಉಂಟುಮಾಡುವುದಲ್ಲದೆ, ಇದರ ಮೂಲ ರೂಪಾದ ಚಿತ್ತಿನಲ್ಲಿಯೂ ಶಕ್ತಿ ಮತ್ತು ಭಕ್ತಿ ಎಂಬ ವಿಭಜನೆಗೆ ಕಾರಣವಾಗುತ್ತದೆ. ಆ ಶಕ್ತಿಯೇ ಮುಂದೆ ಆರು ತೆರನಾಗಿ, ಕೊನೆಗೆ ಬ್ರಹ್ಮನ ಅಧೀನದಲ್ಲಿ ಪ್ರಪಂಚವಾಗಿ ಮಾರ್ಪಡುತ್ತದೆ, ಎಂಬರ್ಥವಿದೆ. (೧೧:೩೩, ೩೮, ೩೯, ೪೪, ೬೩).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಲಿಂಗಾಂಗ ಸಾಮರಸ್ಯ ವಿಭೂತಿ Next