Previous ಆಚಾರ ಆತ್ಮ Next

ಆಚಾರ ಪ್ರಭೇದ

ಆಚಾರ ಪ್ರಭೇದ

ಧರ್ಮವು ಕೇವಲ ಕೆಲವು ಸಿದ್ಧಾಂತ ಅಥವಾ ನಂಬಿಕೆಗಳ ಕಂತೆಯಲ್ಲ. ನಂಬಿಕೆಗಳು ಬೇಕು, ಅವುಗಳಿಗೆ ಪೂರಕವಾದ ಆಚಾರಗಳೂ ಬೇಕು. ದೇವರು ಇದ್ದಾನೆ, ಆತ್ಮವು ಅವನ ಅಂಶ ಎಂಬ ನಂಬಿಕೆ ಇದ್ದರೆ ಸಾಲದು, ಆ ನಂಬಿಕೆಗೆ ತಕ್ಕಂತೆ ಸಾಧಕನು ಕೆಲವು ವಿಶಿಷ್ಟ ರೀತಿಯ ಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಅಂತಹ ಮೂಲಭೂತ ಕ್ರಿಯೆಗಳ ಪಟ್ಟಿಯೊಂದನ್ನು ಚೆನ್ನಬಸವಣ್ಣನವರು ಮಾಡಿ, ಅವನ್ನು ಲಿಂಗಾಯತನಾದವನು ಆಚರಿಸಬೇಕೆಂದು ವಿಧಿಸಿದ್ದಾರೆ. ಆ ಪಟ್ಟಿಯಲ್ಲಿ ಐವತ್ತು ಆಚಾರಗಳನ್ನು ಹೆಸರಿಸಿದ್ದಾರೆ.

೧. ಪರರ ಹೆಣ್ಣಿಗೆ ಕಣ್ಣಿಡಬಾರದು.
೨. ಪರರ ದ್ರವ್ಯವ ಅಪಹರಿಸಬಾರದು.
೩. ಸುಳ್ಳು ಹೇಳಬಾರದು.
೪. ವಿಶ್ವಾಸದ್ರೋಹ ಮಾಡಬಾರದು.
೫. ಪ್ರಾಣಿ ಹಿಂಸೆ ಮಾಡಬಾರದು.
೬. ಶಿವಶರಣರನ್ನು ಸಂತುಷ್ಟಿ ಪಡಿಸಬೇಕು.
೭. ಪ್ರಾಣ ಹೋದರೂ ನೇಮವನ್ನು ತ್ಯಜಿಸಬಾರದು.
೮. ಶಿವಭಕ್ತರ ಧಿಕ್ಕರಿಸುವವರನ್ನು ಕೊಲ್ಲಬೇಕು.
೯. ಕೆಟ್ಟ ಜನರ ಸಹವಾಸ ಮಾಡಬಾರದು.
೧೦. ಸಜ್ಜನರ ಸಂಗ ಬಿಡಬಾರದು.
೧೧. ಅನ್ಯದೇವತಾಚರಣೆಗೆ ಬೆನ್ನು ತಿರುಗಿಸಬೇಕು.
೧೨. ಶಿವನೇ ಸರ್ವೋತ್ತಮನೆಂದು ತಿಳಿಯಬೇಕು.
೧೩. ಶಿವಗಣಗಳಲ್ಲಿ ತಾರತಮ್ಯ ಮಾಡಬಾರದು.
೧೪. ಸರ್ವಹಿತ ಬಯಸಬೇಕು.
೧೫. ಸರ್ವಹಿತ ಮಾಡಬೇಕು.
೧೬. ಕಡ್ಡಿಯನ್ನು ಲಿಂಗಕ್ಕೆ ತೋರಿಸಿದ ನಂತರವೇ ಅದರಿಂದ ಹಲ್ಲುಜ್ಜಬೇಕು.
೧೭. ಎಲ್ಲ ಅವಯವಗಳನ್ನು ಸಚ್ಛವಾಗಿ ಪ್ರಕ್ಷಾಳನ ಮಾಡಬೇಕು.
೧೮. ಲಿಂಗಮುದ್ರೆ ಇಲ್ಲದ ಗುಡಿಯಲ್ಲಿ ಅಡಿಗೆ ಮಾಡಬಾರದು.
೧೯. ಪ್ರಣವ ಮುದ್ರೆ ಇಲ್ಲದ ವಸ್ತ್ರವ ಹೊದೆಯಬಾರದು.
೨೦. ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಾಡುವ ಮೊದಲು ತಾಯಹಾಲು, ಜೇನುತುಪ್ಪ ಮುಂತಾದವನ್ನು ಕೊಡಬಾರದು.
೨೧. ಕೊಟ್ಟಭಾಷೆಗೆ ತಪ್ಪಬಾರದು.
೨೨. ಸತ್ಯ ನುಡಿದು ಅದಕ್ಕೆ ತಪ್ಪಬಾರದು.
೨೩. ದನ ಕರುಗಳನ್ನು ರಕ್ಷಿಸಬೇಕು.
೨೪. ದನಕರುಗಳಿಗೆ ಲಿಂಗಮುದ್ರೆಯನಿಕ್ಕಿದನಂತರವೇ ಅವುಗಳಿಂದ ಹಾಲು ಕರೆಯಬೇಕು.
೨೫. ಮಂತ್ರಸಹಿತ ಗೋಮವನ್ನು ಸಂಚಯಿಸಿ ಮಂತ್ರಸಹಿತ ಸುಟ್ಟು ರಾಶಿ ಮಾಡಬೇಕು.
೨೬. ಹಾಗೇ ರಾಶಿ ಮಾಡಿದ ಭಸ್ಮ ರಾಶಿಯನ್ನು ಪಾದೋದಕದಿಂದ ಉಂಡೆ ಮಾಡಬೇಕು.
೨೭. ವಿಧ್ಯುಕ್ತವಾಗಿ ವಿಶಿಷ್ಟ ಸ್ಥಾನಗಳಲ್ಲಿ ರುದ್ರಾಕ್ಷಿ ಧರಿಸಬೇಕು.
೨೮. ಶಿವಾನುಭವವನ್ನು ಹೇಗೆ ಸಾಧಿಸಬೇಕೆಂಬುದನ್ನು ವಿಚಾರಿಸಿ ತಿಳಿದುಕೊಳ್ಳಬೇಕು.
೨೯. ಮನ ನೋಯಿಸುವಂತೆ ಮಾತನಾಡಬಾರದು.
೩೦. ಲಿಂಗದ ಸ್ವರೂಪವನ್ನು ಅರಿತು, ಅದನ್ನು ಪೂಜಿಸಬೇಕು.
೩೧. ಗುರುವಿನಿಂದ ಮಾನವನ ನಿಜ ಸ್ವರೂಪವೇನೆಂದು ತಿಳಿದುಕೊಳ್ಳಬೇಕು.
೩೨. ಅರಿಷಡ್ವರ್ಗಗಳನ್ನು ಜಯಿಸಿ, ಷಟ್‌ಸ್ಥಲವನ್ನು ಸಾಧಿಸಬೇಕು.
೩೩. ಮನಸ್ಸು ಮೂರು ರೀತಿಯ ಅಂಗಗಳಲ್ಲಿಯೂ ಅವಿಚ್ಛಿನ್ನವಾಗಿ ಬೆರೆತಿರಬೇಕು.
೩೪. ಇಷ್ಟಲಿಂಗವು ಕೇವಲ ಕಲ್ಲಿನ ತುಂಡು ಎಂದು ಅಲಕ್ಷ್ಯ ಮಾಡಬಾರದು.
೩೫. ಜಂಗಮರಲ್ಲಿ ಕುಲವನರಸಬಾರದು.
೩೬. ವಿಭೂತಿಯ ಬಿಡಬಾರದು.
೩೭. ಶುದ್ಧ ಮಾಡಿದ ರುದ್ರಾಕ್ಷಿಗಳನ್ನು ಧರಿಸಬೇಕು.
೩೮. ಪಾದೋದಕ ನಿರ್ಮಲ ಎಂದು ತಿಳಿಯಬೇಕು.
೩೯. ಪ್ರಸಾದದಲ್ಲಿ ರುಚಿಯ ನೋಡಬಾರದು.
೪೦. ದುರುದ್ದೇಶಕ್ಕೆ ಮಂತ್ರವನ್ನು ಬಳಸಬಾರದು.
೪೧. ಲಿಂಗಾರ್ಚನೆ ಮಾಡದೆ ಭೋಜನ ಮಾಡಬಾರದು.
೪೨. ಶರಣರನ್ನು ಸಮಾಧಿ ಮಾಡಿದ ನಂತರ ಲಿಂಗಪೂಜೆ ಮಾಡಬೇಕು.
೪೩. ಲಿಂಗಕ್ಕೆ ಅಪಚಾರ/ದ್ರೋಹ ಆದರೆ ಪ್ರಾಣಬಿಡಬೇಕು.
೪೪. ಜಂಗಮ ದ್ರೋಹ ಕೇಳಿದರೆ ಪ್ರಾಣಬಿಡಬೇಕು.
೪೫. ಲಿಂಗದ್ರೋಹಿಯನ್ನು ಕೊಲ್ಲಬೇಕು.
೪೬. ಜಂಗಮ ದ್ರೋಹಿಯನ್ನು ಕೊಲ್ಲಬೇಕು.
೪೭. ಅಷ್ಟಾವರಣದ ಆವಶ್ಯಕತೆಯನ್ನು ತಿಳಿದುಕೊಳ್ಳಬೇಕು.
೪೮. ತನಗೂ ಲಿಂಗಕ್ಕೂ ಭೇದವಿಲ್ಲವೆಂದು ತಿಳಿಯಬೇಕು.
೪೯. ತನ್ನ ನಿಜಸ್ವರೂಪವನ್ನು ತಿಳಿದುಕೊಂಡು ಬೇರೆಯವರಿಗೂ ಅದನ್ನು ಬೋಧಿಸಿ, ಅವರನ್ನು ತನ್ನಂತೆ ಮಾಡಬೇಕು.
೫೦. ಈ ಮೇಲಿನ ೪೯ ಆಚಾರಗಳನ್ನು ಕಡೆಯವರೆಗೂ ಬಿಡದೇ ಪಾಲಿಸುವುದೇ ಐವತ್ತನೆ ಆಚಾರ.

ಈ ಪಟ್ಟಿಯಲ್ಲಿರುವ ಆಚಾರಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಪರಿಗಣಿಸಿದರೆ, ಆಚಾರ ಎಂಬ ಪದವು ಎರಡು ಅರ್ಥಗಳಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ.

೧). ಗುರುವಿನಿಂದ ಮಾನವನ ನಿಜಸ್ವರೂಪವನ್ನು ತಿಳಿದುಕೊಳ್ಳಬೇಕು. ಎಂಬ ಮೂವತ್ತೊಂದನೆ ಆಚಾರ, ಇಷ್ಟಲಿಂಗವು ಕಲ್ಲಿನ ತುಂಡೆಂದು ಅಲಕ್ಷಿಸಬಾರದು ಎಂಬ ೩೪ನೇ ಆಚಾರ, "ಜಂಗಮರಲ್ಲಿ ಕುಲವನರಸಬಾರದು ಮತ್ತು ಪಾದೋದಕ ನಿರ್ಮಲ" ಎಂದು ತಿಳಿಯಬೇಕು ಎಂಬ ೩೫ ಮತ್ತು ೩೮ನೇ ಆಚಾರಗಳು, ಬೌದ್ಧಿಕ ಕ್ರಿಯೆಗಳಾದರೂ ಆಚಾರವೆನಿಸಿಕೊಳ್ಳುತ್ತವೆ. ಬೇರೆ ಸಂದರ್ಭಗಳಲ್ಲಿ ಅವುಗಳನ್ನು ನಾವು ನಂಬಿಕೆಗಳೆಂದು ಕರೆಯುತ್ತಿದ್ದೇವೇ ಹೊರತು, ಆಚಾರವೆಂದಲ್ಲ, ಆದರೆ ಚೆನ್ನಬಸವಣ್ಣನವರು ಅವುಗಳನ್ನೂ ಆಚಾರಗಳೆಂದೇ ಕರೆದಿದ್ದಾರೆ. ಅಂದರೆ ಆಚಾರ ಕೇವಲ ದೈಹಿಕ ಕ್ರಿಯೆಯಷ್ಟೆ ಅಲ್ಲ, ಬೌದ್ಧಿಕ ಕ್ರಿಯೆಯೂ ಹೌದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

೨). ಎರಡನೆಯ ರೀತಿಯ ಆಚಾರಗಳು ದೈಹಿಕ ಕ್ರಿಯೆಗಳು, ಲಿಂಗಪೂಜೆ ಮಾಡುವುದು, ಗುರು ಜಂಗಮರಿಗೆ ಭಕ್ತಿ ತೋರಿಸುವುದು, ಪಾದೋದಕ ಪ್ರಸಾದಗಳನ್ನು ಸ್ವೀಕರಿಸುವುದು ಇತ್ಯಾದಿಗಳೆಲ್ಲ ದೈಹಿಕ ಕ್ರಿಯೆಗಳು.

ಈ ಎಲ್ಲ ಆಚಾರಗಳನ್ನು ಮುಖ್ಯವಾಗಿ ಮೂರು ಗುಂಪುಗಳನ್ನಾಗಿ ಮಾಡಬಹುದು.
(ಅ) ಲಿಂಗಪೂಜೆ ಮಾಡುವುದು, ವಿಭೂತಿ ರುದ್ರಾಕ್ಷಿ ಧರಿಸುವುದು, ಮಂತ್ರ ಪಠಿಸುವುದು, ಗುರು ಮತ್ತು ಜಂಗಮರಿಗೆ ಭಕ್ತಿ ತೋರಿಸುವುದು, ಪಾದೋದಕ ಪ್ರಸಾದ ಸ್ವೀಕರಿಸುವುದು, ಅನ್ಯದೈವ ಪೂಜೆ ಮಾಡದಿರುವುದು ಮುಂತಾದ ಕ್ರಿಯೆಗಳನ್ನು ನಾವು ಧಾರ್ಮಿಕ ಆಚಾರಗಳೆಂದು ಪರಿಗಣಿಸಬಹುದು. ಇವು ಧರ್ಮದಿಂದ ಧರ್ಮಕ್ಕೆ ಬೇರೆಯಾಗುತ್ತವೆ. ಉದಾಹರಣೆಗೆ, ಬೌದ್ದ ಮತದಲ್ಲಾಗಲಿ, ವೈಷ್ಣವ ಪಂಥದಲ್ಲಾಗಲಿ ಲಿಂಗಪೂಜೆ ಮಾಡುವುದಿಲ್ಲ. ವಿಭೂತಿ ಧರಿಸುವುದಿಲ್ಲ. ಮಂತ್ರವನ್ನು ಎಲ್ಲರೂ ಪಠಿಸಿದರೂ ವೀರಶೈವರ ಮಂತ್ರವೆ ಬೇರೆ, ಬೌದ್ಧರ ಮಂತ್ರವೇ ಬೇರೆ, ವೈಷ್ಣವರ ಮಂತ್ರವೇ ಬೇರೆ.

(ಆ) ಪ್ರಾಣಿ ಹಿಂಸೆ ಮಾಡಬಾರದು, ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು, ಗುರುಹಿರಿಯರಿಗೆ ನಮ್ರತೆ ಹಾಗೂ ವಿಧೇಯತೆಯನ್ನು ತೋರಿಸಬೇಕು, ಮುಂತಾದ ಕ್ರಿಯೆಗಳೆಲ್ಲ ನೈತಿಕ ಆಚಾರಗಳು,

ಇ) ಸರ್ವಾವಯವ ಸ್ವಚ್ಛವಾಗಿ ಪ್ರಕ್ಷಾಳನ ಮಾಡುವುದು, ಪ್ರಣವ ಮುದ್ರೆಯಿಲ್ಲದ ವಸ್ತ್ರವ ಹೊದೆಯದೇ ಇರುವುದು, ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಾಡುವ ಮೊದಲು ತಾಯಿ ಹಾಲು, ಜೇನು ತುಪ್ಪ ಮುಂತಾದವನ್ನು ಕೊಡದೇ ಇರುವುದು, ಮುಂತಾದ ಕ್ರಿಯೆಗಳು ಧಾರ್ಮಿಕ ಆಚಾರಗಳೂ ಅಲ್ಲ, ನೈತಿಕ ಆಚಾರಗಳೂ ಅಲ್ಲ. ಜೀವನು ಶಿವನ ಜೊತೆ ನಡೆದುಕೊಳ್ಳುವುದು ಧಾರ್ಮಿಕ ಆಚಾರ. ಒಬ್ಬ ಜೀವನು ಮತ್ತೊಬ್ಬ ಜೀವನೊಡನೆ ನಡೆದುಕೊಳ್ಳುವುದು ನೈತಿಕ ಆಚಾರ, ಜೀವನು ಜೀವನೊಡನಾಗಲಿ ಶಿವನೊಡನಾಗಲಿ ನಡೆದುಕೊಳ್ಳದೆ ಕೆಲವು ನಿಯಮಗಳನ್ನು ಪಾಲಿಸುವುದು ಇತರ ಆಚಾರಗಳು. ಇವುಗಳನ್ನು ರೂಢಿ ಎನ್ನಬಹುದು.
ಒಂದು ವಿಶಾಲ ಅರ್ಥದಲ್ಲಿ ಬೌದ್ಧಿಕ ಆಚಾರಗಳೂ, ಮೂರು ರೀತಿಯ ದೈಹಿಕ ಆಚಾರಗಳೂ ಧಾರ್ಮಿಕ ಕ್ರಿಯೆಗಳೇ, ಹೇಗೆಂದರೆ ನಾವು ಆಚಾರವನ್ನು ತಿಳಿಯದೆ ಮಾಡಿದರೆ ಅದು ಧಾರ್ಮಿಕ ಆಚಾರವೆನಿಸಿಕೊಳ್ಳುವುದಿಲ್ಲ. ಮೊದಲು ನಾವು ಏನನ್ನು ಮಾಡಬೇಕು, ಏನನ್ನು ಮಾಡಬಾರದು, ನಮ್ಮ ಉದ್ದೇಶವೇನಿರಬೇಕು, ನಮ್ಮ ನಿಜಸ್ವರೂಪವೇನು ಮುಂತಾದ ನಂಬಿಕೆಗಳೇ ನಮ್ಮಲ್ಲಿಲ್ಲದಿದ್ದರೆ ನಾವು ಎಷ್ಟೇ ಆಚಾರಗಳನ್ನು ಮಾಡಿದರೂ, ಎಷ್ಟು ದೀರ್ಘಕಾಲ ಮಾಡಿದರೂ ನಾವು ಧಾರ್ಮಿಕರೆನಿಸಿಕೊಳ್ಳುವುದಿಲ್ಲ. ನಾವು ಮಾಡುವ ಆಚಾರಗಳೆಲ್ಲವನ್ನೂ ಒಂದು ಯಂತ್ರ ಮಾಡಬಲ್ಲುದು. ಆದರೆ ಅದನ್ನು ಧಾರ್ಮಿಕವೆಂದು ಪರಿಗಣಿಸಿವುದಿಲ್ಲವೇಕೆಂದರೆ ಅದಕ್ಕೆ ನಂಬಿಕೆಗಳಿಲ್ಲ. ಆದುದರಿಂದ ನಂಬಿಕೆಗಳೆಂಬ ಬೌದ್ಧಿಕ ಆಚಾರಗಳು ಆವಶ್ಯಕ.

ಧರ್ಮ ಎಂಬ ಪದದ ಅರ್ಥವನ್ನು ಮತ್ತಷ್ಟು ಹಿಗ್ಗಿಸಿದರೆ, ಆಗ ಅದು ನೀತಿಯನ್ನೂ ಒಳಗೊಳ್ಳುತ್ತದೆ. ಒಬ್ಬ ವ್ಯಕ್ತಿ ಯಾವ ಧರ್ಮಕ್ಕೆ ಸೇರದಿದ್ದರೂ ನೀತಿಯನ್ನು ಪಾಲಿಸಬಹುದು. ಆದರೆ ಯಾವುದಾದರೂ ಒಂದು ಧರ್ಮಕ್ಕೆ ಅವನು ಸೇರಿದರೆ, ಆಗ ಅವನು ನೀತಿಯನ್ನು ಪಾಲಿಸಬೇಕಾಗುತ್ತದೆ. ಆಗ ನೀತಿ ಧರ್ಮದ ಒಂದು ಅಂಗವಾಗುತ್ತದೆ. ದಯವಿಲ್ಲದ ಧರ್ಮವಾವುದಯ್ಯಾ ಎಂದು ಬಸವಣ್ಣನವರು ಕೇಳುವಾಗ ನೀತಿಯಿದ್ದರೆ ಮಾತ್ರ ಧರ್ಮ ಪೂರ್ಣವಾಗುತ್ತದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯವೆಂಬುದು ಖಚಿತವಾಗುತ್ತದೆ. ಅಂದರೆ, ಧರ್ಮವು ಪೂಜೆ, ಭಜನೆ, ಮಂತ್ರ ಮುಂತಾದ ಧಾರ್ಮಿಕ ಆಚಾರಗಳನ್ನೂ ಅಲ್ಲದ ನೈತಿಕ ಆಚಾರಗಳನ್ನೂ ಒಳಗೊಳ್ಳುತ್ತದೆ.

ಧರ್ಮ ಎಂಬ ಪದದ ಅರ್ಥವನ್ನು ಇನ್ನೂ ಸ್ವಲ್ಪ ಹಿಗ್ಗಿಸಿದರೆ, ಅದರಲ್ಲಿ ಇತರ ಆಚಾರಗಳನ್ನೂ ಸೇರಿಸಬಹುದು. ಈ ಅರ್ಥದಲ್ಲಿ ಇತರ ಆಚಾರಗಳೂ ಧರ್ಮದ ಭಾಗಗಳಾಗುತ್ತವೆ. ಧಾರ್ಮಿಕ ಆಚಾರಗಳನ್ನೂ ನೈತಿಕ ಆಚಾರಗಳನ್ನೂ ಮಾಡದಿದ್ದರೆ ಧರ್ಮ ಅಪೂರ್ಣವಾಗುತ್ತದೆ. ಉದಾಹರಣೆಗೆ ಒಬ್ಬ ಭಕ್ತ ತನ್ನ ಮನೆಯಲ್ಲಿ ದಾಸೋಹ ಮಾಡುತ್ತಿದ್ದಾನೆಂದು ಊಹಿಸೋಣ. ಆಗ ಅವನು “ಪ್ರಣವ ಮುದ್ರೆಯಿಲ್ಲದ ವಸ್ತ್ರವನ್ನು ಹೊದೆಯದಿಹುದೇ ಹತ್ತೊಂಬತ್ತನೇ ಆಚಾರ" ಎಂದು ಎಚ್ಚರಿಸುತ್ತಾರೆ. ಅಂಥ ಆಚಾರವಿಲ್ಲದಿದ್ದರೆ ಭಕ್ತನಲ್ಲ ಭೂತಪ್ರಾಣಿ, ಆಚಾರವಿಲ್ಲದಿದ್ದರೆ ದಾಸೋಹದ ಮನೆಯಲ್ಲ, ದೇಶಿಯ ಗುಡಿಸಲು ಎಂದೂ ಅವರು ಅವನನ್ನು ಎಚ್ಚರಿಸುತ್ತಾರೆ.

ಭಕ್ತನ ಪ್ರಾರಂಭಿಕ ಆಧ್ಯಾತ್ಮಿಕ ಜೀವನದಲ್ಲಿ ಈ ಎಲ್ಲ ಆಚಾರಗಳೂ ಆವಶ್ಯಕ. ಆದರೆ ಮುಂದೆ ಅವನು ಧಾರ್ಮಿಕ ಆಚಾರಗಳಲ್ಲಿ ಕೆಲವನ್ನೂ ನೈತಿಕ ಆಚಾರಗಳಲ್ಲಿ ಎಲ್ಲವನ್ನೂ ಪಾಲಿಸಿದರೆ, ಇತರ ಆಚಾರಗಳಲ್ಲಿ ಯಾವುದನ್ನೂ ಪಾಲಿಸುವುದಿಲ್ಲ. ಇಷ್ಟಲಿಂಗ ಪರಶಿವನಲ್ಲ, ಕೇವಲ ಪರಶಿವನ ಕುರುಹು ಎಂದು ತಿಳಿದಾಗ, ಅಥವಾ ಸಮರಸ ಭಕ್ತಿಯಿಂದ ಮಹಾಲಿಂಗದಲ್ಲಿ ತಾನು ಐಕ್ಯನಾದ ಮೇಲೆ, ಅವನಿಗೆ ಇಷ್ಟಲಿಂಗದ ಆವಶ್ಯಕತೆ ಕಾಣುವುದಿಲ್ಲ. ಅದೇ ರೀತಿ ಅವನು ಪ್ರಣವ ಮುದ್ರೆಯಿಲ್ಲದ ವಸ್ತ್ರವನ್ನು ಹೊದೆಯದಿರಬಹುದು. ಲಿಂಗೈಕ್ಯ ಸಾಧನೆಗೆ ಬೇಕಾದ ಆಚಾರಗಳು ಧರ್ಮವೇ ಹೊರತು ಬಾಹ್ಯ ಆಚಾರಗಳಲ್ಲ ಎಂಬುದು ಅವನಿಗೆ ಅರಿವಾದ ಮೇಲೆ ಬಾಹ್ಯ ಆಚಾರಗಳನ್ನು ಅವನು ಕ್ಷುಲ್ಲಕವಾಗಿ ಕಾಣುತ್ತಾನೆ.

ಕೆಲವರು ವ್ಯಾಯಾಮ ಮಾಡದೆಯೇ ಬಲಶಾಲಿಗಳಾಗುತ್ತಾರೆ. ಹಾಗೆಯೇ ಕೆಲವರು ಲಿಂಗದೀಕ್ಷೆ, ಇತ್ಯಾದಿಗಳಿಲ್ಲದೆಯೇ ಆಧ್ಯಾತ್ಮಿಕ ಸಾಧನೆ ಮಾಡುತ್ತಾರೆ. ಮತ್ತೆ ಕೆಲವರಿಗೆ ಮೊದಲ ಎಲ್ಲ ಬಾಹ್ಯ ಆಚಾರಗಳೂ ಬೇಕು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಆಚಾರ ಆತ್ಮ Next