Previous ಶರಣ ಶಿವ Next

ಶರಣಂಗೆ ಆಕಾಶವಂಗ

ಶರಣಂಗೆ ಆಕಾಶವಂಗ

ಕಂಠಸ್ಥಾನದಲ್ಲಿರುವ ವಿಶುದ್ಧ ಚಕ್ರದಲ್ಲಿ ಅಥವಾ ಅದರಲ್ಲಿರುವ ಆಕಾಶವೆಂಬ ತತ್ವದಲ್ಲಿ (ಅಥವಾ ಪರಾಶಕ್ತಿಯಲ್ಲಿ ಶಿವನು ನೆಲೆಸಿದ್ದು, ಪ್ರಸಾದಲಿಂಗವೆಂಬ ಹೆಸರಿನಿಂದ ಕರೆಯಲ್ಪಡುತ್ತಾನೆ. ಪ್ರಸಾದಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧಕನು ಆಗ ಶರಣಸ್ಥಲಕ್ಕೆ ಬಂದಿರುತ್ತಾನೆ. ಅವನು ಪ್ರಸಾದಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನಮ್ಮಲ್ಲಿರುವ ಆಕಾಶ ಎಂಬ ಭೂತದ ಅಥವಾ ಪರಾಶಕ್ತಿಯ ದುಷ್ಪರಿಣಾಗಳನ್ನು ಕಡಿಮೆ ಮಾಡಿ, ಅದನ್ನು ಶುದ್ಧ ಮಾಡಬೇಕಾಗುತ್ತದೆ. ಹೀಗೆ ಶುದ್ಧವಾದ ಪರಾಶಕ್ತಿಗೆ ಆನಂದ ಭಕ್ತಿಯೆಂದೂ ಹೆಸರಿದೆ. (೮:೧೯೬೯)

ಶರಣಸ್ಥಲಕ್ಕೆ ಬರುವ ಮುನ್ನ ಸಾಧಕನು ಆಗಲೇ ಅರಿಷಡ್ವರ್ಗ, ಅಷ್ಟಮದ, ದೇಹದ ಬಾಧೆಗಳು, ಅಂತಃಕರಣದ ತಮಸ್ಸು ಮುಂತಾದ ಆಧ್ಯಾತ್ಮಿಕ ದೋಷಗಳನ್ನು ಗೆದ್ದಿರುವುದರಿಂದ, ಹಾಗೂ ಸತ್ಯ, ದಯೆ, ಕ್ಷಮೆ, ಸೈರಣೆ, ಸಮಾಧಾನ, ಸಂತೋಷ, ಧೈರ್ಯ ಮುಂತಾದ ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಂಡಿರುವುದರಿಂದ, ಅವನಿಗೆ ಉಳಿದಿರುವ ಒಂದೇ ಒಂದು ಮೆಟ್ಟಲೆಂದರೆ, ಶಿವನಿಗೆ ತನ್ನನ್ನು ತಾನೇ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು. ಮೇಲಿನ ಆಧ್ಯಾತ್ಮಿಕ ಶಿಕ್ಷಣ ಪಡೆದ ಅವನಿಗೆ ಇದು ಕಷ್ಟದ ಮಾತೇನಲ್ಲ. ಹೀಗೆ ಸರ್ವವನ್ನೂ ಸಮರ್ಪಿಸಿಕೊಂಡ ಸಾಧಕನಿಗೆ ಶರಣ (ಶರಣಾಗತಿ ಭಾವವನ್ನು ಹೊಂದಿದವನು) ಎಂಬ ಹೆಸರಿದ್ದು, ಆ ಭಾವದ ಮೂಲಕ ಅವನು ಆನಂದವನ್ನು ಪಡೆಯುತ್ತಾನೆ. ಈ ಆನಂದವು ಪರಶಿವನ ಪ್ರಸಾದವಾದುದರಿಂದ, ಪರಶಿವನ ಆರೂಪಕ್ಕೆ ಪ್ರಸಾದಲಿಂಗವೆಂದು ಹೆಸರು.

ನಿರ್ಮಲವಾದ ಆಕಾಶದಲ್ಲಿ ಯಾವೊಂದು ದೋಷವೂ ಹೇಗಿರುವುದಿಲ್ಲವೋ ಹಾಗೆಯೇ ಶರಣನಲ್ಲಿ ಯಾವ ದೋಷಗಳೂ ಇಲ್ಲ, ಅಥವಾ ಶರಣನಲ್ಲಿರುವ ಶುದ್ಧವಾದ ಆಕಾಶ ತತ್ವವೇ ಪ್ರಸಾದಲಿಂಗದ ಕಾಯ (ಅಂಗ).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶರಣ ಶಿವ Next