Previous ಆತ್ಮ ಆನಂದ Next

ಆದಿ ಅನಾದಿ ಇಲ್ಲದಂದು

ಆದಿ ಅನಾದಿ ಇಲ್ಲದಂದು

ಅನೇಕ ವಚನಗಳು "ಆದಿ ಅನಾದಿ ಇಲ್ಲದಂದು, ಆದಿ ಇಲ್ಲದಂದು, ಅನಾದಿ ಇಲ್ಲದಂದು, "ಆದಿ ಅನಾದಿಗಳಿಂದತ್ತತ್ತ" ಎಂದು ಪ್ರಾರಂಭವಾಗುತ್ತದೆ. ಈ ಪದಗಳೂ, ಇವುಗಳ ಜೊತೆಗಿರುವ ಪದಗಳೂ, ಸೃಷ್ಟಿಪೂರ್ವದ ಪರಶಿವನ ಸ್ಥಿತಿಗೆ ಅನ್ವಯಿಸುತ್ತದೆ. ಶಿವನಿಗೆ ಸೃಷ್ಟಿಸಬೇಕೆಂಬ ಇಚ್ಛೆಯೂ, ತಾನೊಬ್ಬನೆ ಇದ್ದೇನೆಂಬ ಅರಿವೂ ಇಲ್ಲದ ಸ್ಥಿತಿಯದು. ಇದನ್ನೇ ಕೆಲವು ವೇಳೆ ಶೂನ್ಯ, ಬಯಲು, ಮುಂತಾಗಿ ಕರೆಯಲಾಗುತ್ತದೆ.

ಆದರೆ ಆದಿಯಾಗಲಿ ಅನಾದಿಯಾಗಲಿ ಇಲ್ಲದ ಕಾಲ ಅಥವಾ ವಸ್ತು ಏಕಕಾಲಕ್ಕೆ ಇರಲು ಸಾಧ್ಯವೇ? ಪ್ರಪಂಚವೇ ಇರಲಿಲ್ಲ ಎಂದಾಗ, ಆದಿಯುಳ್ಳ ಪ್ರಪಂಚವಿರಲಿಲ್ಲ ಎಂದರ್ಥವಾಗುತ್ತದೆ; ಆದರೆ ಅನಾದಿಯಾದ ಪರಶಿವ ಶೂನ್ಯಸ್ಥಿತಿಯಲ್ಲಿದ್ದ. ಅಂದ ಮೇಲೆ, ಸೃಷ್ಟಿಪೂರ್ವ ಸ್ಥಿತಿಯು ಆದಿ ಅನಾದಿಯಿಲ್ಲದ ಕಾಲ ಹೇಗಾಗುತ್ತದೆ, ಎಂಬುದೇ ಈ ಪದಪ್ರಯೋಗ ಸೃಷ್ಟಿಸುವ ಸಮಸ್ಯೆ. ಅದೇ ರೀತಿ, ಪರಶಿವನೆ ಅನಾದಿ ಎಂದಮೇಲೆ ಅವನನ್ನು ಆದಿ ಅನಾದಿಯಿಂದತ್ತತ್ತ ಎಂದು ವರ್ಣಿಸುವುದರ ಅರ್ಥವೇನು; ಎಂಬ ಸಮಸ್ಯೆಯೂ ಬರುತ್ತದೆ. ಈ ಸಮಸ್ಯೆಗೆ ಪ್ರಾಯಶಃ ಈ ಕೆಳಗಿನ ಉತ್ತರ ಸಮರ್ಪಕವೆನಿಸಬಹುದು.

ನಮಗೆ ಒಂದು ವಸ್ತುವಿನ ಜ್ಞಾನ ಉಂಟಾಗಬೇಕಾದರೆ, ಅದನ್ನು ನಾವು ಇಂದ್ರಿಯಗಳ ಮೂಲಕ ಅನುಭವಿಸಬೇಕಷ್ಟೇ ಅಲ್ಲ, ಅದನ್ನು ಇತರ ವಸ್ತುಗಳೊಡನೆ ಹೋಲಿಸಲೂ ಬೇಕಾಗುತ್ತದೆ. ಉದಾಹರಣೆಗೆ, ನಾವು ಒಂದು ಪುಸ್ತಕವನ್ನು ನೋಡಿದಾಗ, ಅದನ್ನು ಇತರ ಪುಸ್ತಕಗಳೊಡನೆ ಹೋಲಿಸಿ ಇದೂ ಸಹ ಒಂದು ಪುಸ್ತಕ ಎಂದು ಹೇಳುತ್ತೇವೆ. ಅಲ್ಲದೆ, ಪರೋಕ್ಷವಾಗಿ (ಹಾಗೂ ಮಾನಸಿಕವಾಗಿ), ಇದು ಕುರ್ಚಿಯಲ್ಲ, ಬೆಟ್ಟವಲ್ಲ, ಮುಂತಾಗಿಯೂ ಹೇಳುತ್ತೇವೆ. ಪ್ರಪಂಚದ ತುಂಬೆಲ್ಲ ಪುಸ್ತಕವಲ್ಲದೆ ಮತ್ತೇನೂ ಇಲ್ಲದಿದ್ದರೆ, ಅದಕ್ಕೆ ಪುಸ್ತಕ"ವೆಂಬ ಹೆಸರು ಇರುತ್ತಿರಲಿಲ್ಲ. ಆದರೆ ಅದನ್ನು ನೋಡುವ ಮನುಷ್ಯನೆಂಬ ಎರಡನೆ ವಸ್ತುವಿದ್ದರೆ, ಆಗ ಅವನು ತಾನು ಮನುಷ್ಯ, ಅದು ಪುಸ್ತಕ ಎಂದು ಭಿನ್ನಮಾಡುತ್ತಾನೆ. ಒಬ್ಬ ವ್ಯಕ್ತಿಯನ್ನು “ಬಸವ” ಅಥವಾ “ಕುಳ್ಳ” ಎಂದು ಕರೆಯುವುದು ಅವನನ್ನು ಇತರರಿಂದ (ಬಸವರಲ್ಲದ, ಕುಳ್ಳರಲ್ಲದವರಿಂದ) ಪ್ರತ್ಯೇಕಿಸುವ ಸಲುವಾಗಿ ಅದೇ ರೀತಿ ಒಂದು ಪುಸ್ತಕವನ್ನು ಅಥವಾ ಒಂದು ಬಣ್ಣವನ್ನು ಪುಸ್ತಕ ಅಥವಾ ಕೆಂಪು ಎಂದು ಕರೆಯುವುದು ಅದನ್ನು ಪುಸ್ತಕವಲ್ಲದ ವಸ್ತುಗಳಿಂದ ಅಥವಾ ಕೆಂಪಲ್ಲದ ಬಣ್ಣಗಳಿಂದ ಪ್ರತ್ಯೇಕಿಸುವುದಕ್ಕಾಗಿ. ಹೀಗೆ ಹೋಲಿಕೆ ವ್ಯತ್ಯಾಸಗಳನ್ನು ಅರಿಯದೆ ನಾವು ಏನನ್ನೂ ಅರಿಯಲು ಸಾಧ್ಯವಿಲ್ಲ.

ಅದೇ ರೀತಿ, ಒಂದು ವಸ್ತುವನ್ನು ನೋಡಿ, ಇದಕ್ಕೆ ಆದಿಯಿದೆ ಎನ್ನುತ್ತೇವೆ; ಅದನ್ನು ಮಾಡಿದವನಿಗೂ ಆದಿಯಿದೆ ಎನ್ನುತ್ತೇವೆ. ಆದರೆ ಇಡೀ ಪ್ರಪಂಚವನ್ನೇ ಗಣನೆಗೆ ತೆಗೆದುಕೊಂಡರೆ, ಪ್ರಪಂಚಕ್ಕೆ ಆದಿಯಿದೆ, ಅದನ್ನು ಸೃಷ್ಟಿಸಿದವನಿಗೆ (ಪರಶಿವನಿಗೆ) ಆದಿಯಿಲ್ಲ ಎನ್ನುತ್ತೇವೆ. ಆದರೆ ಪ್ರಪಂಚವೂ ಇಲ್ಲದೆ, ಪರಶಿವನಿಗೆ ಸೃಷ್ಟಿಸಬೇಕೆಂಬ ಇಚ್ಛೆಯೂ ಇಲ್ಲದಿದ್ದಾಗ, ಆದಿ-ಅನಾದಿ ಎಂಬ ಜೋಡಿ ಪದಕ್ಕೆ ಆ ಅರ್ಥಕೊಡಬಹುದೇ? ಇದನ್ನು ಮತ್ತೊಂದು ದೃಷ್ಟಾಂತದ ಮೂಲಕ ಪರಿಹರಿಸಬಹುದು.

ಒಬ್ಬ ವ್ಯಕ್ತಿ ಒಂದು ಧರ್ಮಕ್ಕೆ ಸೇರಿದವನಾಗಿದ್ದರೆ, ಅವನು ಲಿಂಗಾಯತನಾಗಿರಬೇಕು ಅಥವಾ ಲಿಂಗಯತೇತರನಾಗಿರಬೇಕು” ಎನ್ನುವುದು ಸತ್ಯ. “ಅವನು ಲಿಂಗಾಯತನೂ ಅಲ್ಲ, ಲಿಂಗಯತೇತರನೂ ಅಲ್ಲ” ಎನ್ನುವುದು ಅಸತ್ಯ. ಒಂದು ವೇಳೆ ಆ ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರದ ವ್ಯಕ್ತಿ ಆಗಿದ್ದರೆ, “ಅವನು ಲಿಂಗಾಯತನಾಗಿರಬೇಕು ಅಥವಾ ಲಿಂಗಾಯತೇತರನಾಗಿರಬೇಕು” ಎನ್ನುವುದು ಸರಿಯಲ್ಲ. ಅದೇ ರೀತಿ ನಾವು ಪ್ರಪಂಚವನ್ನು ನೋಡಿ, ಇದಕ್ಕೆ ಆದಿಯಿದೆ, ಪರಶಿವನು ಅನಾದಿ ಎನ್ನುತ್ತೇವೆ. ಆದರೆ ಪ್ರಪಂಚವೇ ಇಲ್ಲದಿದ್ದರೆ, ಅಂದರೆ ಹೋಲಿಕೆ ವ್ಯತ್ಯಾಸಗಳನ್ನು ಉಪಯೋಗಿಸಿಕೊಂಡು ತಿಳಿಯುವ ಮನುಷ್ಯನೇ ಇಲ್ಲದಿದ್ದರೆ, ಆದಿ ಅನಾದಿ ಎಂಬ ಪದಗಳಿಗೆ ಅರ್ಥವಿಲ್ಲವಾಗುತ್ತದೆ. ಅಂದರೆ ಪ್ರಪಂಚವೇ ಇಲ್ಲದಂಥ ಸಂದರ್ಭದಲ್ಲಿ ಅದನ್ನು ಆದಿ ಎಂದು ಕರೆಯಬೇಕಾಗಿಲ್ಲ; ಆದಿಯೆಂದು ಕರೆಯಬೇಕಾಗಿಲ್ಲವಾದುದರಿಂದ ಅದನ್ನು “ಅನಾದಿ” ಎಂಬುದರಿಂದ ಪ್ರತ್ಯೇಕಿಸಬೇಕಾಗಿಲ್ಲ. ಅಂದರೆ, ಶೂನ್ಯ ಕಾಲಕ್ಕೆ ಸಂಬಂಧಿಸಿದಂತೆ ಆದಿ-ಅನಾದಿ” ಎಂಬ ಪದ ಪ್ರಯೋಗ ನಿರರ್ಥಕ.

೨. “ಆದಿ ಅನಾದಿ ಇಲ್ಲದಂದು"ಎಂಬುದಕ್ಕೆ ಮತ್ತೊಂದು ರೀತಿಯ ಅರ್ಥ ಕೊಡಬಹುದು. ಕೆಲವು ವಚನಕಾರರು "ಆದಿ" ಎಂಬುದನ್ನು ದೇಹವೆಂದೂ, "ಅನಾದಿ" ಎಂಬುದನ್ನು ಆತ್ಮವೆಂದೂ ಅರ್ಥೈಸುತ್ತಾರೆ. ಆಗ ಸೃಷ್ಟಿ ಪೂರ್ವ ಸ್ಥಿತಿಯು ಆದಿ ಅನಾದಿಯಿಲ್ಲದ” ಕಾಲ ಎಂದು ವರ್ಣಿಸುವುದು ಸೂಕ್ತವಾಗಿದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಆತ್ಮ ಆನಂದ Next