Previous ಮಿಶ್ರಷಡುಸ್ಥಲ, ಮಿಶ್ರಲಿಂಗಾರ್ಪಣ ರೂಪು ನಿರೂಪು Next

ಮೂವತ್ತಾರು ತತ್ವಗಳು

ಮೂವತ್ತಾರು ತತ್ವಗಳು

ಸೃಷ್ಟಿಯ ವಚನಗಳು ಸಾಮಾನ್ಯವಾಗಿ ಮೂವತ್ತಾರು ತತ್ವಗಳ ವಿಚಾರವನ್ನು ಒಳಗೊಳ್ಳುತ್ತವೆ. ಸೃಷ್ಟಿ ಹೇಗಾಯಿತು, ಹೇಗೆ ಪ್ರಾರಂಭವಾಗಿ, ಯಾವ ಕ್ರಮದಲ್ಲಿ ಮುಂದುವರಿದು, ಹೇಗೆ ಕೊನೆಗೊಂಡಿತು, ಯಾವ ವಸ್ತುವು ಉಪಾದಾನವಾಗಿ ಬಳಸಲ್ಪಟ್ಟಿತು, ಯಾವ ಉದ್ದೇಶಕ್ಕಾಗಿ ಸೃಷ್ಟಿಯಾಯಿತು, ಎಂಬ ವಿಚಾರಗಳೂ ಅಂಥ ವಚನಗಳಲ್ಲಿ ಅಡಕವಾಗಿರುತ್ತವೆ.

ಸೃಷ್ಟಿಯಲ್ಲಿ ಮೂವತ್ತಾರು ತತ್ವಗಳು ಪಾಲ್ಗೊಳ್ಳುತ್ತವೆ ಎಂಬ ಮಾತನ್ನು ಎಲ್ಲ ವಚನಕಾರರು ಒಪ್ಪಿಕೊಂಡರೂ, ಆ ಮೂವತ್ತಾರು ತತ್ವಗಳಾವವು ಎಂಬ ವಿಷಯದಲ್ಲಿ ಅವರಲ್ಲಿ ಒಮ್ಮತವಿಲ್ಲ. ಆದರೆ ಆ ಮೂವತ್ತಾರು ತತ್ವಗಳಲ್ಲಿ ಮೊದಲನೆ ಹನ್ನೊಂದು ತತ್ವಗಳನ್ನು ಪ್ರಸ್ತಾಪಿಸುವಾಗ ಮಾತ್ರ ವಚನಕಾರರಲ್ಲಿ ಒಮ್ಮತವಿರುವಂತೆ ಕಾಣುತ್ತದೆ. ಆ ಒಮ್ಮತವನ್ನು ಹೀಗೆ ಸಂಕ್ಷಿಪ್ತವಾಗಿ ತಿಳಿಸಬಹುದು. ಮೊದಲು ಪರಶಿವನು ಏನೊಂದೇನೂ ಇಲ್ಲದಂಥ ಪರಿಸ್ಥಿತಿಯಲ್ಲಿ ತಾನೊಬ್ಬನೇ ಇದ್ದನು. ತಾನು ಸೃಷ್ಟಿಸಬೇಕಾದ ವಿಶ್ವದ ಬಗೆಗಾಗಲೀ ತನ್ನ ಬಗೆಗಾಗಲಿ ಅವನಿಗೆ ಅರಿವಿರಲಿಲ್ಲ. ಪರಶಿವನ ಅಂಥ ಪರಿಸ್ಥಿತಿಯನ್ನು ವಚನಕಾರರು ಶೂನ್ಯ, ಮಹಾಶೂನ್ಯ, ಸರ್ವಶೂನ್ಯ, ಮುಂತಾದ ಹೆಸರುಗಳಿಂದ ಕರೆದಿದ್ದಾರೆ. ಮುಂದೆ ಅವನಲ್ಲಿ ನೆನಹು (ಚಿತ್ತು ಅಥವಾ ಜ್ಞಾನಚಿತ್ತು) ತಲೆದೋರಿದಾಗ, ಅವನಿಗೆ ತಾನೊಬ್ಬನೇ ಇರುವುದರ ಅರಿವಾಗಿ, ಸೃಷ್ಟಿ ಮಾಡಬೇಕೆಂಬ ಬಯಕೆಯೂ ಅವನಲ್ಲಿ ಮೂಡುತ್ತದೆ. ಅವನ ಇಂಥ ಅವಸ್ಥೆಗೆ ಕೆಲವರು ನಿಃಕಲ (ನಿಷ್ಕಲ) ಲಿಂಗ ಸ್ಥಲ ಎಂಬ ಹೆಸರನ್ನೂ ಮತ್ತೆ ಕೆಲವರು ಮಹಾಲಿಂಗಸ್ಥಲ ಎಂಬ ಹೆಸರನ್ನೂ ಕೊಟ್ಟಿದ್ದಾರೆ.

ಕೆಲವು ವಚನಕಾರರ ಪ್ರಕಾರ, ನಿಕಲ ಲಿಂಗವು ತನ್ನಲ್ಲೇ ಇರುವ ಶಕ್ತಿಯೆಂಬ ಉಪಾದಾನ ಕಾರಣದಿಂದ ಹತ್ತು ವಿದ್ಯಾತತ್ವಗಳನ್ನೂ, ಇವುಗಳಿಂದ ಇಪ್ಪತ್ತೈದು ಆತ್ಮ ತತ್ವಗಳನ್ನೂ ಸೃಷ್ಟಿಸುತ್ತದೆ. ಈ ಹತ್ತು ವಿದ್ಯಾತತ್ವಗಳು ಯಾವುವೆಂದರೆ : ಶಿವಸಾದಾಖ್ಯ, ಅಮೂರ್ತಿಸಾದಾಖ್ಯ, ಮೂರ್ತಿಸಾದಾಖ್ಯ, ಕರ್ತುಸಾದಾಖ್ಯ ಮತ್ತು ಕರ್ಮಸಾದಾಖ್ಯ ಎಂಬ ಐದು ಸಾದಾಖ್ಯಗಳು ಮತ್ತು ಅವುಗಳ ಜೊತೆಗೆ ಇರುವ ನಿವೃತ್ತಿಕಲಾ ಪ್ರತಿಷ್ಠಾಕಲಾ, ವಿದ್ಯಾಕಲಾ, ಶಾಂತಿಕಲಾ ಮತ್ತು ಶಾಂತ್ಯತೀತಕಲಾ ಎಂಬ ಐದು ಕಲೆ ಅಥವಾ ಕಲಾಶಕ್ತಿಗಳು, ಈ ಹತ್ತು ವಿದ್ಯಾತತ್ವಗಳು ಪರಶಿವ ಮತ್ತು ಅವನ ಶಕ್ತಿಯ ವಿಕಸಿತ ರೂಪಗಳಷ್ಟೇ ಹೊರತು, ಅವು ಸ್ವತಂತ್ರ ತತ್ವಗಳಲ್ಲ.

ಈ ಹತ್ತು ವಿದ್ಯಾತತ್ವಗಳಿಂದ ಆಕಾಶ, ವಾಯು, ಅಗ್ನಿ, ಅಪ್ಪು, ಪೃಥ್ವಿಗಳೆಂಬ ಭೂತಪಂಚಕಗಳು, ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮಗಳೆಂಬ ಜ್ಞಾನೇಂದ್ರಿಯ ಪಂಚಕಗಳು, ಕೈ, ಕಾಲು, ಗುದ, ಗುಹ್ಯ, ವಾಕ್ಕು ಎಂಬ ಕರ್ಮೇಂದ್ರಿಯ ಪಂಚಕಗಳು, ಪ್ರಾಣ, ಅಪಾನ, ಉದಾನ, ವ್ಯಾನ ಮತ್ತು ಸಮಾನಗಳೆಂಬ ವಾಯು ಪಂಚಕಗಳು, ಜೀವಾತ್ಮ ಮತ್ತು ಅವನ ಜೊತೆಗಿರುವ ಚಿತ್ತ, ಬುದ್ದಿ, ಮನಸ್ಸು ಮತ್ತು ಅಹಂಕಾರ ಎಂಬ ಅಂತ ಕರಣ ಪಂಚಕಗಳು, ಉದ್ಭವಿಸುತ್ತವೆ.

ಕೆಲವು ವಚನಕಾರರು ಮೇಲೆ ಹೇಳಿದ ಸಾದಾಖ್ಯಗಳ ಬದಲು ಈಶ್ವರ, ಸದಾಶಿವ, ಬ್ರಹ್ಮ, ವಿಷ್ಣು ಮತ್ತು ರುದ್ರರ ಹೆಸರುಗಳನ್ನೂ ಮತ್ತೆ ಕೆಲವು ವಚನಕಾರರು ಈಶಾನ್ಯ, ತತ್ಪುರುಷ, ಅಘೋರ, ವಾಮದೇವ ಮತ್ತು ಸದ್ಯೋಜಾತ ಎಂಬ ಹೆಸರುಗಳನ್ನೂ ಬಳಸುತ್ತಾರೆ. ಅದೇ ರೀತಿ ಕಲೆಗಳ ಬದಲು ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳ ಹೆಸರನ್ನು ಬಳಸುತ್ತಾರೆ. ಈ ರೀತಿ ಒಂದು ಹೆಸರುಗಳ ಗುಂಪಿನ ಬದಲು ಮತ್ತೊಂದು ಹೆಸರುಗಳ ಗುಂಪನ್ನು ಬಳಸುವುದು ಅರ್ಥವಾಗುವ ವಿಷಯ. ಆದರೆ ಕೆಲವರು ಇಪ್ಪತ್ತೈದು ತತ್ವಗಳಲ್ಲಿನ ಪಂಚಕಗಳನ್ನ ಬದಲಾಯಿಸಿ ಗೊಂದಲವನ್ನುಂಟುಮಾಡಿದ್ದಾರೆ. ಉದಾಹರಣೆಗೆ ಕೆಲವರು ವಾಯುಪಂಚಕಗಳ ಬದಲು ವಿಷಯ ಪಂಚಕಗಳನ್ನು (ರೂಪರಸಾದಿ ತನ್ಮಾತ್ರೆಗಳನ್ನು ಜೋಡಿಸುತ್ತಾರೆ. ಆದರೆ ತೋಂಟದ ಸಿದ್ದಲಿಂಗ ಶಿವಯೋಗಿಗಳ ಪ್ರಕಾರ, ೨೫ ಆತ್ಮತತ್ವಗಳೆಂದರೆ, ಆತ್ಮನೂ ಸೇರಿ, ಅಂತ:ಕರಣ ಪಂಚಕ, ವಿಷಯ ಪಂಚಕ, ಬುದ್ದೀಂದ್ರಿಯ ಪಂಚಕ, ವಾಯು ಪಂಚಕ ಮತ್ತು ಕರ್ಮೇಂದ್ರಿಯ ಪಂಚಕ. ಇವರು ಪಂಚಭೂತಗಳನ್ನು ಹೆಸರಿಸದಿರುವುದು ಗಮನಾರ್ಹ. ಪ್ರಾಯಶ: ಪಂಚಭೂತಗಳು ಪಂಚಕಲೆ (ಪಂಚಶಕ್ತಿಗಳ ಪ್ರತೀಕವಾಗಿರುವುದರಿಂದ ಹಾಗೂ ಅವು ಆಗಲೇ ವಿದ್ಯಾತತ್ವದ ಗುಂಪಿನಲ್ಲಿ ಸೇರ್ಪಡೆಯಾಗಿರುವುದರಿಂದ, ಅವನ್ನು ಮತ್ತೆ ಹೆಸರಿಸುವುದು ಅನಾವಶ್ಯಕವೆಂಬ ಕಾರಣದಿಂದ ಅವನ್ನು ಕೈಬಿಟ್ಟಿರಬಹುದು.

ಆದರೆ ಸಿದ್ದಲಿಂಗ ಶಿವಯೋಗಿಗಳ ಕೆಲವು ಸೃಷ್ಟಿಯ ವಚನಗಳನ್ನು ಗಮನಿಸಿದರೆ, ತತ್ವಗಳು ಮೂವತ್ತಾರಕ್ಕಿಂತ ಹೆಚ್ಚಿರಬೇಕೆನಿಸುತ್ತದೆ. ಅವರ ಪ್ರಕಾರ, ನಿ:ಕಲ ಲಿಂಗದಿಂದ ಆರು ಲಿಂಗಗಳು, ಆರು ಶಕ್ತಿಗಳು, ಆರು ಕಲೆಗಳು, ಆರು ಸಾದಾಖ್ಯಗಳು, ಆರು ಅಕ್ಷರಗಳು, ಐದು ಕರ್ಮೇಂದ್ರಿಯಗಳು, ಐದು ವಿಷಯಗಳು, ಐದು ಮಹಾಭೂತಗಳು, ಐದು ವಾಯುಗಳು, ಐದು ಬುದ್ಧಿಂದ್ರಿಯಗಳು, ಐದು ಅಂತ:ಕರಣಗಳು ಉದ್ಭವಿಸುತ್ತವೆ. ಇವುಗಳ ಮೊತ್ತ ಅರವತ್ತಾಗುತ್ತದೆ. ಇವುಗಳ ಜೊತೆಗೆ ನಿ:ಕಲ ಲಿಂಗ, ಮುಂತಾದ ಪರಶಿವನ ಅವಸ್ಥೆಗಳನ್ನು ಸೇರಿಸಿದರೆ ಸಂಖ್ಯೆ ಇನ್ನೂ ದೊಡ್ಡಾದಾಗುತ್ತದೆ. ಆದರೆ ಅವರೇ ಮತ್ತೊಂದು ಕಡೆ, ಮೇಲೆ ಹೇಳಿರುವ ಮೂವತ್ತಾರು ತತ್ವಗಳನ್ನೂ ಪ್ರಸ್ತಾಪಿಸುತ್ತಾರೆ.

ಆದರೆ ಇವುಗಳನ್ನು ಪ್ರಸ್ತಾಪಿಸುವ ವಚನಗಳು ಈ ಎರಡು ತೀರ್ಮಾನಗಳನ್ನು ವ್ಯಕ್ತಪಡಿಸುತ್ತವೆ. (೧) ಸೃಷ್ಟಿಯು ಅಸ್ಪಷ್ಟ, ಅವ್ಯಕ್ತ ಮತ್ತು ಸೂಕ್ಷ್ಮ ಅವಸ್ಥೆಯಿಂದ ಸ್ಪಷ್ಟ, ವ್ಯಕ್ತ ಮತ್ತು ಸ್ಥೂಲ ಅವಸ್ಥೆಯ ಕಡೆಗೆ ಚಲಿಸುತ್ತದೆ. ಮೊದಲು ಶಕ್ತಿಯು ಅಸ್ಪಷ್ಟ, ಸೂಕ್ಷ್ಮ ಸ್ಥಿತಿಯಲ್ಲಿದ್ದು ಕೊನೆಗೆ ಇಂದ್ರಿಯಗೋಚರ ಸ್ಥೂಲ ಪ್ರವಂಚವಾಗಿ ವ್ಯಕ್ತವಾಗುತ್ತದೆ. (೨) ಶಿವ ತಾನೊಬ್ಬನೆ ಸೃಷ್ಟಿಸಲಾರ, ಶಕ್ತಿ ತಾನೊಂದೇ ವಿಕಾಸವಾಗಲಾರದು; ವಿಕಾಸವಾಗುವುದು ಶಕ್ತಿಯೇ ಆದರೂ ಅದಕ್ಕೆ ಚಾಲನೆ ನೀಡಿ, ಮಾರ್ಗದರ್ಶನ ನೀಡಲು ಚೈತನ್ಯ ಸ್ವರೂಪನಾದ ಶಿವ ಆವಶ್ಯಕ. ಶಕ್ತಿಯ ಪ್ರತಿ ವಿಕಾಸದ ಹಂತದಲ್ಲೂ ಶಿವ ಬೇರೆ ಬೇರೆ ರೂಪಗಳಲ್ಲಿ ಅದನ್ನು ನಿಯಂತ್ರಿಸಿ, ಅದಕ್ಕೆ ಮಾರ್ಗದರ್ಶನ ನೀಡುತ್ತಾನೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಿಶ್ರಷಡುಸ್ಥಲ, ಮಿಶ್ರಲಿಂಗಾರ್ಪಣ ರೂಪು ನಿರೂಪು Next