Previous ತ್ರಿಗುಣ ತ್ರಿವಿಧ ಸ್ಥಲ Next

ತ್ರಿವಿಧ ಪ್ರಸಾದ, ತ್ರಿವಿಧ ಭ್ರಮೆ

ತ್ರಿವಿಧ ಪ್ರಸಾದ

ಚೆನ್ನಬಸವಣ್ಣನವರು ಈ ಪದಕ್ಕೆ ಶುದ್ಧ ಪ್ರಸಾದ, ಸಿದ್ಧಪ್ರಸಾದ ಮತ್ತು ಪ್ರಸಿದ್ಧ ಪ್ರಸಾದ ಎಂಬ ಅರ್ಥವನ್ನು ಕೊಟ್ಟಿದ್ದರೂ, ಈ ಮೂರು ಪದಗಳಲ್ಲಿ ಪ್ರತಿಯೊಂದಕ್ಕೂ ಎರಡು ಬೇರೆ ಬೇರೆ ಅರ್ಥಕೊಟ್ಟಿದ್ದಾರೆ. ಗುರುವಿನಿಂದ ಪಡೆದ ಪ್ರಸಾದ ಶುದ್ಧ ಪ್ರಸಾದ. ಇದು ಗುರುವಿನಿಂದ ಪಡೆದುದಾದುದರಿಂದ, ಅದಕ್ಕೆ ಗುರುಪ್ರಸಾದ ಎಂಬ ಹೆಸರೂ ಇದೆ. ಲಿಂಗಕ್ಕರ್ಪಿಸಿ ಪಡೆದ ಪ್ರಸಾದವೇ ಸಿದ್ಧ ಪ್ರಸಾದ. ಇದು ಲಿಂಗದಿಂದ ಪಡೆದುದಾದುರಿಂದ, ಅದಕ್ಕೆ ಲಿಂಗ ಪ್ರಸಾದವೆಂಬ ಹೆಸರೂ ಇದೆ. ಜಂಗಮಕ್ಕರ್ಪಿಸಿ ಪಡೆದ ಪ್ರಸಾದಕ್ಕೆ ಪ್ರಸಿದ್ಧ ಪ್ರಸಾದ ಅಥವಾ ಜಂಗಮ ಪ್ರಸಾದ ಎಂಬ ಹೆಸರಿದೆ. ತನುವಿನ ಸ್ವಾರ್ಥಕ್ಕೆ ತೆಗೆದುಕೊಳ್ಳದೆ ಅದು ಶುದ್ಧಿಯಾಗಲಿ ಎಂಬ ಉದ್ದೇಶದಿಂದ ತೆಗೆದುಕೊಂಡ ಗುರುಪ್ರಸಾದವು ಶುದ್ಧ ಪ್ರಸಾದವೆನಿಸಿಕೊಳ್ಳುತ್ತದೆ. ರುಚಿ ಎಂಬ ಬಯಕೆಯನ್ನು ಪೂರೈಸಲು ಪ್ರಸಾದವನ್ನು ತೆಗೆದುಕೊಳ್ಳದೆ ರುಚಿ ಶುಚಿ ಹೇಗೇ ಇದ್ದರೂ ಕೇವಲ ನಿಷ್ಠೆಯಿಂದ ತೆಗೆದುಕೊಂಡ ಪ್ರಸಾದ ಸಿದ್ಧ ಪ್ರಸಾದ. ವಸ್ತುಗಳನ್ನು ಎಲ್ಲಿದ್ದರಲ್ಲಿಂದಲೇ, ಯಾವ ಸ್ವಾರ್ಥ ಉದ್ದೇಶವಿಲ್ಲದೆಯೇ ಅರ್ಪಿಸಿ ಪಡೆದ ಪ್ರಸಾದವೇ ಪ್ರಸಿದ್ಧ ಪ್ರಸಾದ. (೨ : ೨೪೫ ಮತ್ತು ೯೮)

ಚೆನ್ನಬಸವಣ್ಣನವರ ಮತ್ತೊಂದು ಅರ್ಥದ ಪ್ರಕಾರ, ಕಣ್ಣಿನಿಂದ ನೋಡುವ ವಿಷಯಗಳ ರೂಪದ ಗುಣಾವಗುಣಗಳನ್ನು ನಿಸ್ವಾರ್ಥ ಭಾವನೆಯಿಂದ ಇಷ್ಟಲಿಂಗಕ್ಕೆ ಅರ್ಪಿಸಿ, ಪಡೆದುದು ಶುದ್ಧ ಪ್ರಸಾದ, ರುಚಿಯ ಗುಣಾವಗುಣಗಳನ್ನು ನಿಸ್ವಾರ್ಥ ಭಾವನೆಯಿಂದ ಪ್ರಾಣಲಿಂಗಕ್ಕೆ ಅರ್ಪಿಸಿ ಪಡೆದುದು ಸಿದ್ಧ ಪ್ರಸಾದ. ಆಹಾರವೇನೇ ಇರಲಿ, ಅದರ ರುಚಿ ಏನೇ ಇರಲಿ, ನಿರ್ಭಾವದಿಂದ ಭಾವಲಿಂಗಕ್ಕರ್ಪಿಸಿ ಪಡೆದುದು ಪ್ರಸಿದ್ಧ ಪ್ರಸಾದ. (೩:೨೭೬)

ತ್ರಿವಿಧ ಭ್ರಮೆ

ಕಾಲಜ್ಞಾನ ಭ್ರಮೆ, ಕರ್ಮಜ್ಞಾನ ಭ್ರಮೆ, ಭಾವಜ್ಞಾನ ಭ್ರಮೆ. ಕಾಲಜ್ಞಾನ ಭ್ರಮೆ : ಲಿಂಗಾಂಗ ಸಾಮರಸ್ಯ ಸಾಧಿಸಿದವನಿಗೆ ತಾನು ಯಾವಾಗಲೂ ಶಿವೈಕ್ಯನಾಗೇ ಇದ್ದೇನೆಂಬ ಅರಿವು ಮೂಡಿದಾಗ, ಭೂತ, ಭವಿಷ್ಯತ್ ಮತ್ತು ವರ್ತಮಾನಗಳ ವ್ಯತ್ಯಾಸಮಾಡುವುದಿಲ್ಲ. ಆ ರೀತಿಯ ವ್ಯತ್ಯಾಸ ವ್ಯಾವಹಾರಿಕ ಕ್ರಿಯೆಗಳಿಗಷ್ಟೇ ಸಿಂಧುವಾಗುತ್ತದೆ. ಉದಾಹರಣೆಗೆ ನಾನು ನೋಡಿದೆ ಎಂದರೆ ನನ್ನ ನೋಟವೆಂಬ ಕ್ರಿಯೆಯು ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭವಾಗಿ, ಒಂದು ನಿರ್ದಿಷ್ಟ ಕಾಲದಲ್ಲಿ ಮುಗಿಯಿತು ಎಂದರ್ಥ. ಆದರೆ, ಒಂದು ವೇಳೆ ನನ್ನ ನೋಟಕ್ಕೆ ಆದಿ ಅಂತ್ಯಗಳೇ ಇಲ್ಲದಿದ್ದರೆ, ಆಗ ನನಗೆ ಕಾಲದ ಪರಿವೆಯೂ ಇರುವುದಿಲ್ಲ. ಆದುದರಿಂದ ಈಗ ೬ ಗಂಟೆ ಮುಂತಾದ ಕಾಲದ ಜ್ಞಾನವು ನಾವಿನ್ನೂ ಭ್ರಮಿತರಾಗಿದ್ದೇವೆಂಬುದರ ಸೂಚಕ.

ಕರ್ಮಜ್ಞಾನ ಭ್ರಮೆ : ಈ ಕೆಲಸ ಮಾಡುವುದರಿಂದ ಸುಖ, ಆ ಕೆಲಸ ಈ ಆ ಮಾಡುವುದರಿಂದ ದುಃಖ ಮುಂತಾಗಿ ತಿಳಿದು, ನಾವು ದುಃಖಕಾರಕ ಕೆಲಸಗಳನ್ನು ತ್ಯಜಿಸಿ, ಅನೈತಿಕವಾದರೂ ಸುಖದಾಯಕ ಕರ್ಮಗಳನ್ನೇ ಮಾಡುತ್ತೇವೆ. ಇದರಿಂದ ಸುಖ ಸಿಕ್ಕುತ್ತದೆಯೆಂಬ ಜ್ಞಾನವೂ ಸಹ ಭ್ರಮೆಯೇ. ಏಕೆಂದರೆ ಅನೈತಿಕ ಕಾರ್ಯಗಳು ಇಂದಲ್ಲ ನಾಳೆ ನಮಗೆ ದುಷ್ಪರಿಣಾಮವನ್ನುಂಟು ಮಾಡುತ್ತವೆ.

ಭಾವಜ್ಞಾನ ಭ್ರಮೆ : ನಾನು ಪರಶಿವನಿಂದ ಪ್ರತ್ಯೇಕ, ನನ್ನ ಸುಖವೇ ನನಗೆ ಮುಖ್ಯ ಎಂಬ ಜ್ಞಾನವೂ ಭ್ರಮೆಯೇ. ನಾನು ಪರಶಿವನಿಂದ ಪ್ರತ್ಯೇಕವಲ್ಲ, ಲಿಂಗಾನುಭವವೇ ನಿಜವಾದ ಸುಖ ಎಂಬ ತಿಳುವಳಿಕೆಯೇ ನಿಜವಾದ ಜ್ಞಾನ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತ್ರಿಗುಣ ತ್ರಿವಿಧ ಸ್ಥಲ Next