Previous ಶಿವಾದ್ವೈತ ಶೈವಸಿದ್ಧಾಂತ Next

ಶೈವ ಪ್ರಭೇದ

ಶೈವ ಪ್ರಭೇದ

ಶೈವರಲ್ಲಿ ಪ್ರಭೇದಗಳನ್ನು ಗುರುತಿಸುವಾಗ ಪ್ರಭೇದ ಸಂಖ್ಯೆಯಲ್ಲಾಗಲಿ, ಪ್ರಭೇದ ಲಕ್ಷಣಗಳಲ್ಲಾಗಲಿ ವಚನಕಾರರಲ್ಲಿ ಒಮ್ಮತವಿಲ್ಲ. ಶಾಂತವೀರೇಶ್ವರ ಅಥವಾ ಶಾಂತವೀರೇಶ್ವರ ಪ್ರಭು ಎಂಬ ಅಂಕಿತವನ್ನುಳ್ಳ ವಚನಗಳ ಕರ್ತೃವು ಶೈವರಲ್ಲಿ ನಾಲ್ಕು ಪ್ರಭೇದಗಳನ್ನು ಗುರುತಿಸಿದ್ದಾನೆ. ಸಾಮಾನ್ಯ ಶೈವ, ಮಿಶ್ರಶೈವ, ಶುದ್ಧಶೈವ, ವೀರಶೈವ - ಇವೇ ಆ ನಾಲ್ಕು ಪ್ರಭೇದಗಳೆಂದು ತಿಳಿಸಿ, ಆ ವಚನಕಾರನು ಪ್ರತಿಯೊಂದರ ಮುಖ್ಯ ಲಕ್ಷಣಗಳನ್ನು ವಿವರಿಸಿದ್ದಾನೆ.

ಸಾಮಾನ್ಯ ಶೈವ : ಕೇವಲ ವಿಭೂತಿ ಪಟ್ಟದಿಂದಲೇ ಶುದ್ಧನಾಗಿ, ಆ ಮೂಲಕ ಶೈವನೆನಿಸಿಕೊಳ್ಳುವವನೇ ಸಾಮಾನ್ಯಶೈವ, ದೇವ, ದಾನವ, ಅಥವಾ ಮಾನವರಿಂದ ಪ್ರತಿಷ್ಠಾಪಿಸಲ್ಪಟ್ಟ ಲಿಂಗವನ್ನು ದರ್ಶನ, ನಮಸ್ಕಾರ, ಅರ್ಚನ ಮತ್ತು ಪ್ರದಕ್ಷಿಣೆ ಮಾಡುವುದು ಇವನ ಮುಖ್ಯ ಲಕ್ಷಣ. ಶಿವಕೀರ್ತಿ, ಶಿವವಚನ, ಶಿವಭಕ್ತರಲ್ಲಿ ಪ್ರೀತಿ ಇವನಿಗಿದೆ.

ಮಿಶ್ರಶೈವ : ಮಿಶ್ರಶೈವನು ಕೇವಲ ಸ್ಥಾವರ ಲಿಂಗವನ್ನಷ್ಟೇ ಅಲ್ಲ, ವಿಷ್ಣು, ದೇವಿ, ಷಣ್ಮುಖ, ಗಣಪತಿ, ಸೂರ್ಯ, ಇಂದ್ರಾದಿ ದೇವತೆಗಳ ಪೂಜೆಯನ್ನು ಮಾಡುತ್ತಾನೆ. ಅವನಿಗೆ ಯಾವೊಂದು ದೈವವೂ ದೊಡ್ಡದಲ್ಲ. ಯಾವೊಂದು ದೈವವೂ ಸಣ್ಣದಲ್ಲ, ಎಲ್ಲ ದೈವಗಳಲ್ಲಿಯೂ ಅವನಿಗೆ ಸಮಾನ ಭಕ್ತಿಯಿದೆ. ಕೆಲವು ವೇಳೆ ಅವನು ಉಳಿದೆಲ್ಲ ದೈವಗಳನ್ನು ಶಿವಸಮಾನವೆಂದು ತಿಳಿದು, ಅದರಂತೆ ಪೂಜಿಸುತ್ತಾನೆ.

ಶುದ್ಧಶೈವ : ಶಿವನ ಉದ್ದೇಶದಿಂದ ಜನಿಸಿದವನು ಶುದ್ಧಶೈವ. ಆ ಶುದ್ಧ ಶೈವನಿಂದ ಹುಟ್ಟಿದವನು ಶೈವ ಬ್ರಾಹ್ಮಣ ಅಥವಾ ಆದಿಶೈವ. ಅಂದರೆ, ಶಿವನ ಐದು ಮುಖಗಳಲ್ಲಿ ಹುಟ್ಟಿದ ಕೌಶಿಕ, ಕಾಶ್ಯಪ, ಭಾರದ್ವಾಜ, ಅತ್ರಿ, ಮತ್ತು ಗೌತಮರೆಂಬ ಐದು ಶಿವದೀಕ್ಷಿತರ ವಂಶದವರೆಲ್ಲಾ ಶೈವ ಬ್ರಾಹ್ಮಣರು. ಇವರು ವೇದೋಕ್ತ, ಶಾಸ್ರೋಕ್ತ ಸಮಸ್ತ ಕ್ರಿಯಾದಿಗಳನ್ನು ಮಾಡುವವರು. ಹಾಗೂ ಸ್ಥಾವರಲಿಂಗ ಪೂಜೆ ಮಾಡುವವರು.

ಇವರು ಮಾಡುವ ಶಿವಪೂಜೆಯು ಆತ್ಮಾರ್ಥ ಮತ್ತು ಪರಾರ್ಥ ಎಂದು ಎರಡು ವಿಧವಾಗಿದೆ. ಹೃದಯಸ್ಥಾನದಲ್ಲಿಯೂ ಗುರುಕೊಟ್ಟ ಲಿಂಗದಲ್ಲಿಯೂ ಇರುವ ಪೂಜೆಯನ್ನು ಮಾಡುವುದೇ ಆತ್ಮಾರ್ಥ ಪೂಜೆ, ಪ್ರತಿಷ್ಠಾಪಿತವಾದ ಶಿವಲಿಂಗ ಪೂಜೆಯನ್ನು ಎಲ್ಲಿರಿಗೂ ಹಿತವಾಗುವ ಉದ್ದೇಶದಿಂದ ಮಾಡಿದರೆ, ಆ ಪೂಜೆ ಪರಾರ್ಥ ಪೂಜೆ ಎನಿಸಿಕೊಳ್ಳುತ್ತದೆ. ಆದರೆ ಶುದ್ಧ ಶೈವನು ವಿಷ್ಣು, ಇತ್ಯಾದಿ ದೈವಗಳನ್ನು ಶಿವಾವರಣಗಳಲ್ಲಿ ಆತ್ಮಾರ್ಥಕ್ಕಾಗಿ ಅಥವಾ ಪರಾರ್ಥಕ್ಕಾಗಿ ಪೂಜಿಸಬಾರದು; ಸ್ವಾರ್ಥ ದೃಷ್ಟಿಯಿಂದಲೂ ಪೂಜಿಸಬಾರದು. ಒಂದು ವೇಳೆ ವಿಷ್ಣು ಇತ್ಯಾದಿ ದೈವಗಳನ್ನು ಪರಾರ್ಥವಾಗಿ ಪೂಜಿಸುವುದೇ ಆದರೆ, ಅಂಥ ದೈವಗಳು ಶಿವನ ಪರಿವಾರದವರೆಂದು ತಿಳಿದು ಪೂಜಿಸಬೇಕು. ಆದರೆ ಶಿವಾಲಯದ ಹೊರಗೆ ಇರುವ ವಿಷ್ಣು, ಸಪ್ತಮಾತೃಕೆ ಮುಂತಾದವರ ವಿಗ್ರಹಗಳ ಪೂಜೆ ವರ್ಜ, ಕ್ರಿಯಾದಿಗಳ ಮೂಲಕ ಮಾಡುವ ಪೂಜೆಗಿಂತ ಮಂತ್ರಗಳ ಮೂಲಕ ಲಿಂಗಪೂಜೆಯು ಉತ್ತಮ. ಅಂಥವನ ಶರೀರವು ಮಂತ್ರಪಿಂಡವಾಗಿ ಅವನು ಶಿವಾನುಗ್ರಹಕ್ಕೆ ಅರ್ಹನಾಗುತ್ತಾನೆ.

ವೀರಶೈವ : ಈ ಮೂರು ಪ್ರಭೇದಗಳಿಗಿಂತ ವೀರಶೈವವು ಉತ್ತಮವಾದುದು. ವೀರಶೈವ ಪ್ರೋಕ್ತ ಆಚಾರಗಳು ಬಹಳ ಸುಲಭವಾದುವು. ಅಲ್ಲದೆ ಆ ಆಚಾರದಿಂದ ಲಭ್ಯವಾದಂಥ ಜ್ಞಾನವು ಅಥವಾ ಲಿಂಗಾಂಗ ಐಕ್ಯವು ಕೈಲಾಸ ಮುಂತಾದ ಲಾಭಗಳಿಗಿಂತ ಹೆಚ್ಚಿನದು. ವೀರಶೈವನು ಜ್ಞಾನ ಅಥವಾ ವಿದ್ಯೆಯಲ್ಲಿ (ವಿ) ರಮಿಸುವವನು (ರ) ಅಥವಾ ವಿನೋದಿಸುತ್ತಿರುವವನು ಎಂದಾದುದರಿಂದ ಅವನು ಶಮದಮಾದಿ ಷಟ್‌ ಸಂಪತ್ತಿಯಿಂದ ಶೋಭಿಸುತ್ತಿರುತ್ತಾನೆ, ಅಲ್ಲದೆ ಅವನು ಮಾಯೆಯನ್ನು ಗೆದ್ದವನಾದುದರಿಂದ ಅವನನ್ನು ವೀರಮಾಹೇಶ್ವರನೆಂದೂ ಕರೆಯಲಾಗುತ್ತದೆ. ಶಿವೈಕ್ಯರಾದ ವೀರಶೈವರು ಜ್ಞಾನಯಜ್ಞದಲ್ಲಿ ನಿರತರಾಗಿರುತ್ತಾರೆ.

ಅವರಿಗೆ ಯಾವ ಸ್ವಾರ್ಥಪರ ಆಸೆಗಳೂ ಇಲ್ಲವಾದುದರಿಂದ ಅವರು ಕರ್ಮಯೋಗಿಗಳೂ ಹೌದು. ಇತರ ಶೈವರು ಮಾಡಬೇಕೆಂದು ಇಚ್ಛಿಸಿದ್ದ ಎಲ್ಲ ಸತ್ಕಾರ್ಯಗಳನ್ನೂ ವೀರಶೈವರು ಬಹಿರಂಗದಲ್ಲಿ ಮಾಡಿ ತೋರಿಸುತ್ತಾರೆ. ಬಹಳ ಕ್ರಿಯೆಗಳನ್ನು ಮಾಡಿ ಅಲ್ಪಫಲವನ್ನು ಪಡೆಯುವುದು ಇತರ ಶೈವ ಪ್ರಭೇದಗಳ ಗುಣವಾದರೆ, ಅಲ್ಪ ಕ್ರಿಯೆಗಳನ್ನು ಮಾಡಿ ಬಹಳ ಫಲವನ್ನು ಪಡೆಯುವುದು ವೀರಶೈವದ ಗುಣವಾಗಿದೆ.

ವೀರಶೈವದಲ್ಲೂ ಮೂರು ಪ್ರಭೇದಗಳಿವೆ. ಅವೆಂದರೆ ಸಾಮಾನ್ಯ, ವಿಶೇಷ ಮತ್ತು ನಿರಾಭಾರಿ. ಹಸ್ತ ಮಸ್ತಕ ಸಂಯೋಗವನ್ನೊಳಗೊಂಡ ದೀಕ್ಷೆಯ ಮೂಲಕ ವೀರಶೈವನಾದವನು ಸಾಮಾನ್ಯ ವೀಠಶೈವ. ಪಂಚಾಕ್ಷರಿ ಮಂತ್ರದಿಂದ ದೀಕ್ಷೆ ಪಡೆದು ಉತ್ತಮಾಂಗಾದಿ ಯಾವುದಾದರೂ ಸ್ಥಾನದಲ್ಲಿ ಇಷ್ಟಲಿಂಗವನ್ನೂ ವಿಭೂತಿಯನ್ನೂ ಅವನು ಧರಿಸುತ್ತಾನೆ, ಹಾಗೂ ಪ್ರತಿದಿನ ಒಂದು ಸಾರಿ, ಸಾಧ್ಯವಾದರೆ ಎರಡು ಸಾರಿ, ಸಾಧ್ಯವಾದರೆ ಮೂರು ಸಾರಿ ಅದನ್ನು ಪೂಜಿಸುತ್ತಾನೆ.

ಶುದ್ಧವೀರಶೈವರು ಮಾಡುವ ದೀಕ್ಷಾ ವಿಧಾನವನ್ನು ಅನುಸರಿಸಿ, ಶಿವಕುಂಭವನ್ನು ಸ್ಥಾಪಿಸಿ, ಅದರಲ್ಲಿರುವ ಶಿವನನ್ನು ಪೂಜಿಸಿ, ದೀಕೋತ್ಸವಕ್ಕೆ ಬಂದಿರುವ ಒಡೆಯರುಗಳನ್ನು ಸಂತುಷ್ಟಗೊಳಿಸುವ ಸಲುವಾಗಿ ಅವರಿಗೆ ವಿಭೂತಿ ವೀಳೆಯವನ್ನು ಕೊಡುವವನು ವಿಶೇಷ ವೀರಶೈವ. ಅವನು ಗುರು ಹೇಳಿದ ಎಲ್ಲ ದೀಕ್ಷಾ ಕರ್ಮಗಳನ್ನು ಮಾಡುವುದಲ್ಲದೇ ತನ್ನ ಮಲತ್ರಯಗಳನ್ನೂ ನಿರ್ಮೂಲನೆ ಮಾಡಿಕೊಳ್ಳುತ್ತಾನೆ. ಶಿವಾಚಾರ್ಯನು ಅಂಥ ವಿಶೇಷ ವೀರಶೈವ ಶಿಷ್ಯನನ್ನು ಕೃಪಾದೃಷ್ಟಿಯಿಂದ ನೋಡಿ, ಅವನ ದೇಹವನ್ನು ಚಿತ್ರ ಶರೀರವನ್ನಾಗಿ ಮಾಡುತ್ತಾನೆ. ಅನಂತರ ದೀಕ್ಷಿತನು ಷಟ್‌ಚಕ್ರ, ಷಡಂಗ ಮತ್ತು ಷಡಗಳನ್ನು ಜಾಗೃತಗೊಳಿಸುತ್ತಾನೆ. ವಿಶೇಷ ವೀರಶೈವನು ತನ್ನ ದೇಹ ಮತ್ತು ಪ್ರಾಣ ಬೇರಾಗದ ಹಾಗೆ ವರ್ತಿಸುತ್ತಾನೆ, ಅಂದರೆ ಅವನು ಲಿಂಗದಲ್ಲಿ ಪ್ರಾಣವನ್ನಿರಿಸಿ ತನ್ನ ಎಲ್ಲ ಕೆಲಸ ಮತ್ತು ಚಿಂತನೆಗಳನ್ನು ಲಿಂಗಾಭಿಮುಖವಾಗಿ ಮಾಡುತ್ತಾನೆ.

ನಿರಾಭಾರಿ ವೀರಶೈವನು ಸಕಲ ಸಾಂಸಾರಿಕ ವ್ಯಾಪಾರಗಳನ್ನು ದೂರೀಕರಿಸಿ, ದಂಡ, ಕೌಪೀನ, ಕಾಷಾಂಬರ, ಜಟಾಬಂಧ, ನಾರುಡುಗೆಗಳನ್ನು ಧರಿಸಿ, ಚಿತ್ರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿಕೊಂಡಿರುತ್ತಾನೆ. ಅವನು ಕೂರುವುದು ಕೃಷ್ಣಾಜಿನ ಅಥವಾ ವ್ಯಾಘ್ರಾಜಿನದ ಮೇಲೆ, ಕೇಳುವುದು ಶಿವಲೀಲಾ ಕಥನ, ಭುಂಜಿಸುವುದು ನಿಯತ ಭಿಕ್ಷಾನ್ನ, ಸ್ವಾರ್ಥತ್ಯಾಗ ಮಾಡಿದ ಅವನಿಗೆ ಯಾವ ಪಾಪವೂ ಪ್ರಾಯಶ್ಚಿತ್ತವೂ ಇಲ್ಲ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶಿವಾದ್ವೈತ ಶೈವಸಿದ್ಧಾಂತ Next