Previous ಏಕಾದಶವರ್ಮ ( ಹನ್ನೊಂದು ರಹಸ್ಯಗಳು) ಐವತ್ತಕ್ಷರ Next

ಏಕಾದಶವಿಧ ಅರ್ಪಣೆ (ಏಕಾದಶವಿಧ ಪ್ರಸಾದ)

ಏಕಾದಶವಿಧ ಅರ್ಪಣೆ (ಏಕಾದಶವಿಧ ಪ್ರಸಾದ)

ಪರಶಿವನು ನಮ್ಮನ್ನೂ ನಮಗಾಗಿ ಪ್ರಪಂಚವನ್ನೂ ಸೃಷ್ಟಿಸಿದುದಕ್ಕಾಗಿ ನಾವು ತೋರಿಸಬೇಕಾದ ಕೃತಜ್ಞತೆಯೇ ಭಕ್ತಿ, ನಮ್ಮ ಇಂದ್ರಿಯಗಳಾಗಲಿ ಕರಣಗಳಾಗಲಿ, ದೇಹವಾಗಲಿ, ನಮ್ಮವಲ್ಲ, ಅವೆಲ್ಲ ನಾವು ಪರಶಿವನಿಂದ ಪಡೆದ ಸಾಲ ಎಂದು ನಾವು ತಿಳಿಯಬೇಕು. ಹಾಗೆ ತಿಳಿದ ಮೇಲೆ ನಾವು ಭಕ್ತಿಯಿಂದ ಅವೆಲ್ಲವನ್ನೂ ಹಿಂದಿರುಗಿಸಬೇಕು. ಇದನ್ನೇ ಅರ್ಪಣೆ ಎನ್ನುತ್ತೇವೆ. ಹೀಗೆ ಮನಸ್ಸಿನಲ್ಲಿ ಅದೆಲ್ಲವನ್ನೂ ಪರಶಿವನಿಗೆ ಅರ್ಪಿಸಿ, ಅನಂತರ ಅವುಗಳನ್ನು ಉಪಯೋಗಿಸುವುದರಿಂದ ಅವು ಪ್ರಸಾದವಾಗುತ್ತವೆ. ಹೀಗೆ ತಿಳಿಯುವವನ ದೇಹವು ಪ್ರಸಾದಕಾಯ, ವಚನಕಾರರ ಪ್ರಕಾರ ಹೀಗೆ ನಾವು ಹನ್ನೊಂದು ರೀತಿಯಲ್ಲಿ ಪ್ರಸಾದವನ್ನಾಗಿ ಮಾಡಿಕೊಳ್ಳಬಹುದು. ಅವೆಂದರೆ :

೧. ನಮ್ಮ ಮನಸ್ಸನ್ನು ಪರಶಿವನಿಗೆ ಅರ್ಪಿಸುವುದು.
೨. ಪರಸ್ತ್ರೀ ಪರಧನಕ್ಕೆ ಆಸೆ ಮಾಡುವುದು, ಕಳ್ಳತನ ಮಾಡುವುದು, ಕೊಲ್ಲುವುದು, ಮುಂತಾದ ಅನೈತಿಕ ಕಾರ್ಯಗಳನ್ನು ಮಾಡುವುದಿಲ್ಲ ಎಂಬ ನಮ್ಮ ದೃಢ ನಿರ್ಧಾರವನ್ನು ಅರ್ಪಿಸುವುದು.
೩. ನಮ್ಮ ಸಮಾಧಾನವನ್ನು ಅರ್ಪಿಸುವುದು.
೪. ಯಾವುದೇ ವಿಷಯಗಳಿಗೆ ಆಸೆಪಡದ ನಿರ್ವಿಷಯಿ ಬುದ್ಧಿಯನ್ನು ಅರ್ಪಿಸುವುದು.
೫. ನಮ್ಮ ಇಂದ್ರಿಯಗಳೆಂಬ ಐದು ಮುಖ (ಪಂಚವಕ್ರ)ಗಳನ್ನು ಅರ್ಪಿಸುವುದು.
೬. ಎಲ್ಲ ರೂಪಗಳನ್ನು ಅರ್ಪಿಸಿ ನಿರೂಪನಾಗುವುದು.
೭. ಆತ್ಮನನ್ನೇ ಅರ್ಪಿಸುವುದು.
೮. ಮರೆವನ್ನು ಅರ್ಪಿಸಿ ಜ್ಞಾನವನ್ನು ಪಡೆಯುವುದು.
೯. ಸಹಸ್ರದಳ ಪದ್ಮ (ಬ್ರಹ್ಮರಂಧ್ರ)ದಲ್ಲಿರುವ ತೃಪ್ತಿಯನ್ನು ಅರ್ಪಿಸುವುದು.
೧೦. ಸುಷಮ್ಮಾ ನಾಳದಿಂದ ಒಸರುವ ಅಮೃತವನ್ನು ಅರ್ಪಿಸುವುದು,
೧೧. ತಾನಾರೆಂಬುದನ್ನು ಮರೆತು, ತನ್ನನ್ನೇ ಅರ್ಪಿಸಿಕೊಳ್ಳುವುದು. (೩:೧೪೧೬)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಏಕಾದಶವರ್ಮ ( ಹನ್ನೊಂದು ರಹಸ್ಯಗಳು) ಐವತ್ತಕ್ಷರ Next