ಚತುರ್ವಿಧ ಫಲ ಪದವಿ | ಚಾರ್ವಾಕ |
ಚಕ್ರ |
ಯೋಗಶಾಸ್ತ್ರಕ್ಕೆ ಅನುಗುಣವಾಗಿ ದೇಹಮಧ್ಯೆ, ಲಿಂಗ, ನಾಭಿ, ಹೃದಯ, ಕಂಠ ಮತ್ತು ಭೂಮಧ್ಯ -ಎಂಬ ಶರೀರದ ಆರು ಭಾಗಗಳಲ್ಲಿರುವ ಆಧಾರಚಕ್ರ, ಸ್ವಾಧಿಷ್ಟಾನಚಕ್ರ, ಮಣಿಪೂರಕಚಕ್ರ, ಅನಾಹತಚಕ್ರ, ವಿಶುದ್ಧಿಚಕ್ರ ಮತ್ತು ಆಜ್ಞಾಚಕ್ರ -ಎಂಬ ಆರು ಕೇಂದ್ರ ಸ್ಥಾನಗಳು;
ಮಿದುಳಿನಲ್ಲಿ ಉಂಟಾಗುವ ಚಲನೆಯು ಸ್ನಾಯುಗಳ ಮೂಲಕ ಈ ಚಕ್ರಗಳಿಗೆ ಸೇರಿ ದೈಹಿಕಕ್ರಿಯೆಗಳಿಗೆ ಕಾರಣವಾಗುತ್ತದೆ. ಈ ಷಟ್‌ಚಕ್ರಗಳಲ್ಲದೆ ಬ್ರಹ್ಮಚಕ್ರ, ಶಿಖಾಚಕ್ರ ಮತ್ತು ಪಶ್ಚಿಮಚಕ್ರ ಎಂಬುವು ನೆತ್ತಿ ಮಸ್ತಕಾಗ್ರ ಮತ್ತು ತಲೆಯ ಹಿಂಭಾಗದಲ್ಲಿ ಇವೆ. ಮಿದುಳಿನಲ್ಲಿರುವ ಬ್ರಹ್ಮಚಕ್ರವು ಉಳಿದ ಚಕ್ರಗಳಿಗೆ ನೇರವಾಗಿ ಸಂಬಂಧಪಟ್ಟಿದೆ. ಪಟ್‌ಚಕ್ರಗಳಿಗೆ ಅನುಕ್ರಮವಾಗಿ ೪, ೬, ೧೦, ೧೨, ೧೬ ಮತ್ತು ೨ ದಳಗಳಿದ್ದು, ಅವುಗಳಲ್ಲಿ ೫೦ ಅಕ್ಷರಗಳಿವೆ. ಈ ಪ್ರಣವಾಕ್ಷರಗಳ ಮೂಲಕವೇ ಮಿದುಳಿನ ಚಲನೆಗಳು ಶಕ್ತಿರೂಪವಾಗಿ ನಾಡಿಗಳಲ್ಲಿ ಹರಿಯುತ್ತವೆ.
ಲಿಂಗನಿಷ್ಠರಾದ ಲಿಂಗಾಯತರು ಈ ಶಕ್ತಿಗಳನ್ನು ಲಿಂಗಮುಖವನ್ನಾಗಿ ಮಾಡಿ ತಮ್ಮ ಕಾರ್ಯಗಳನ್ನು ಮಾಡುತ್ತಾರೆ. ಈ ಆರು ಚಕ್ರಗಳಿಗೆ ಅನುಕ್ರಮವಾಗಿ ಪೀತ, ಶ್ವೇತ, ಹರಿತ, ಮಾಂಜಿಷ್ಟ, ಕಪೋತ ಮತ್ತು ಮಾಣಿಕ್ಯ ಎಂಬ ವರ್ಣಗಳು ಇವೆ. ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ, ದರ್ಪಣಾಕೃತಿ ಮತ್ತು ಜ್ಯೋತಿರಾಕೃತಿ ಎಂಬ ಆರು ಆಕಾರಗಳಿಂದಲೂ ನಿವೃತ್ತಿ ಪ್ರತಿಷ್ಯಾ, ವಿದ್ಯಾ, ಶಾಂತಿ, ಶಾಂತ್ಯಾತೀತ ಮತ್ತು ಶಾಂತ್ಯಾತೀತೋತ್ತರ ಎಂಬ ಆರು ಕಲೆಗಳಿಂದಲೂ ಕೂಡಿವೆ. ಈ ಚಕ್ರಗಳ ಅಧಿದೇವತೆಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮತ್ತು ಮಹೇಶ್ವರ: ಆಧಾರಚಕ್ರ ಸ್ವಾಧಿಷ್ಠಾನ... ಪಶ್ಚಿಮಚಕ್ರ ಈ ಚಕ್ರಂಗಳು ಈ ಚಕ್ರಂಗಳಿಗೆ ವರ್ಣಂಗಳಾವಾವೆಂದಡೆ ಪೀತವರ್ಣ ಶ್ವೇತವರ್ಣ ...ವಜ್ರದ ವರ್ಣ ಈ ವರ್ಣಂಗಳು (ಚೆನ್ನಬ. ಸಮವ. ೩-೪೬೧-೧೩೦೮); ಚಕ್ರಗಳು -ಇವು ಮೂಲಚಿಕ್ಕುವಿನ ಮೂಲಕ ಮಿದುಳಿನಲ್ಲಿ ಉಂಟಾಗುವ ಚೈತನ್ಯಕ್ಕೆ ಕೇಂದ್ರಸ್ಥಾನಗಳೆಂದು ಹೇಳಬಹುದು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಚತುರ್ವಿಧ ಫಲ ಪದವಿ | ಚಾರ್ವಾಕ |