ಏಕಾದಶವಿಧ ಅರ್ಪಣೆ (ಏಕಾದಶವಿಧ ಪ್ರಸಾದ) | ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಪ್ರಾಣಿಗಳು |
ಐವತ್ತಕ್ಷರ |
ವಚನಕಾರರು ತಂತ್ರಗಳನ್ನನುಸರಿಸಿ, ಮಾನವನ ದೇಹದಲ್ಲಿ ಆರು ಚಕ್ರಗಳಿವೆ ಎಂದು ನಂಬುತ್ತಾರೆ. ಈ ಚಕ್ರಗಳಿಗೆ ಪದ್ಮಗಳೆಂದೂ ಕರೆಯಲಾಗಿದ್ದು, ಪ್ರತಿಯೊಂದು ಪದ್ಮಕ್ಕೂ ತನ್ನದೇ ಆದ ವಿಶಿಷ್ಟ ಸಂಖ್ಯೆಯ ಎಸಳು (ದಳ)ಗಳಿವೆಯೆಂದೂ, ಆ ಎಸಳುಗಳ ಮೇಲೆ ಅಕ್ಷರಗಳಿವೆಯೆಂದೂ ನಂಬಲಾಗುತ್ತದೆ. ಅವುಗಳ ವಿವರ ಈ ಪ್ರಕಾರ ಇದೆ :
ಆಧಾರ ಅಥವಾ ಮೂಲಾಧಾರ ಪದ್ಮದಲ್ಲಿ ನಾಲ್ಕು ದಳಗಳಿವೆ. ಅವುಗಳ ಮೇಲೆ ವ, ಶ, ಷ ಮತ್ತು ಸ ಎಂಬ ನಾಲ್ಕು ಅಕ್ಷರಗಳಿವೆ. ಅದಕ್ಕಿಂತ ಮೇಲಿರುವ ಸ್ವಾಧಿಷ್ಠಾನ ಪದ್ಮದಲ್ಲಿ ಆರು ದಳಗಳಿದ್ದು, ಅವುಗಳ ಮೇಲೆ ಬ, ಭ, ಮ, ಯ, ರ ಮತ್ತು ಲ ಎಂಬ ಆರು ಅಕ್ಷರಗಳನ್ನು ಬರೆಯಲಾಗಿದೆ. ಅದಕ್ಕಿಂತ ಮೇಲಿರುವ ಮಣಿಪೂರಕ ಚಕ್ರಕ್ಕೆ ಹತ್ತು ದಳಗಳಿದ್ದು, ಅವುಗಳ ಮೇಲೆ ಡ, ಢ, ಣ ತ, ಥ, ದ, ಧ, ನ, ಪ ಮತ್ತು ಫ ಎಂಬ ಹತ್ತು ಅಕ್ಷರಗಳು ಮೂಡಿವೆ. ಅದಕ್ಕಿಂತ ಇನ್ನೂ ಮೇಲಿರುವ ಅನಾಹತ ಪದ್ಮದಲ್ಲಿ ಹನ್ನೆರಡು ದಳಗಳಿದ್ದು ಅವುಗಳ ಮೇಲೆ ಕ, ಖ, ಗ, ಘ, ಇ, ಚ, ಛ, ಜ, ಝ, ಜ, ಟ ಮತ್ತು ಈ ಎಂಬ ಹನ್ನೆರಡು ಅಕ್ಷರಗಳು ಮೂಡಿವೆ. ಅನಾಹತ ಪದ್ಮದ ಮೇಲಿರುವ ವಿಶುದ್ಧಿ ಪದ್ಮದಲ್ಲಿ ಹದಿನಾರು ಎಸಳುಗಳಿದ್ದು, ಅವುಗಳ ಮೇಲೆ, ಅ, ಆ, ಇ, ಈ, ಉ, ಊ, ಋ, ಋ, ೮, ಲೂ, ಏ, ಐ, ಓ, ಔ, ಅಂ, ಅ ಎಂಬ ಹದಿನಾರು ಅಕ್ಷರಗಳು ಮೂಡಿವೆ. ಈ ಐದೂ ಚಕ್ರಗಳು ಮನುಷ್ಯನ ಮೇರುದಂಡದಲ್ಲಿ (ಬೆನ್ನು ಹುರಿಯೊಳಗೆ) ಇವೆ ಎಂದು ನಂಬಲಾಗಿದೆ.
ಆರನೆಯ ಪದ್ಮವಾದ ಆಜ್ಞಾ ಚಕ್ರವು ಭೂಮಧ್ಯದಲ್ಲಿದ್ದು, ಅದಕ್ಕೆ ಎರಡೇ ದಳಗಳಿವೆಯೆಂದೂ, ಅವುಗಳ ಮೇಲೆ ಹ ಮತ್ತು ಕ್ಷ ಎಂಬ ಎರಡಕ್ಷರಗಳು ಮೂಡಿರುತ್ತವೆ ಎಂದೂ ನಂಬಲಾಗಿದೆ.
ಆದರೆ ತಂತ್ರಗಳು ಚಕ್ರ ಅಥವಾ ಪದ್ಯಗಳೆಂದರೆ ಇವೇ ಆರೆಂದು ಹೇಳಿದರೂ, ಬ್ರಹ್ಮರಂಧ್ರ ಎಂಬ ಮತ್ತೊಂದು ಸಹಸ್ರದಳ ಪದ್ಮವಿದೆಯೆಂದೂ ಹೇಳುತ್ತಾರೆ. ನೆತ್ತಿ ಮತ್ತು ಮೆದುಳಿನ ಮಧ್ಯದಲ್ಲಿರುವ ಬ್ರಹ್ಮರಂಧ್ರದಲ್ಲಿ ಸಹಸ್ರದಳಗಳಿದ್ದರೂ ಅವುಗಳ ಮೇಲೆ "ಓಂ" ಎಂಬ ಒಂದೇ ಅಕ್ಷರವಿದೆಯೆಂದು ಹೇಳುತ್ತಾರೆ (೨:೧೮೮).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಏಕಾದಶವಿಧ ಅರ್ಪಣೆ (ಏಕಾದಶವಿಧ ಪ್ರಸಾದ) | ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಪ್ರಾಣಿಗಳು |