Previous ಷಡ್ರಸಾಮೃತ ಷಡ್ವಿಧ ಲಿಂಗಧಾರಣೆ Next

ಷಡ್ವಿಧ ಆಚಾರಲಿಂಗ

ಷಡ್ವಿಧ ಆಚಾರಲಿಂಗ

ಮಿಶ್ರಷಡುಸ್ಥಲ ಸಿದ್ಧಾಂತದ ಪ್ರಕಾರ, ಪ್ರತಿಯೊಂದು ಅಂಗಸ್ಥಲದಲ್ಲಿಯೂ ಉಳಿದ ಅಂಗಸ್ಥಲಗಳು ಅಡಕವಾಗಿವೆ. ಉದಾಹರಣೆಗೆ : ಭಕ್ತನ ಭಕ್ತ, ಭಕ್ತನ ಮಹೇಶ, ಭಕ್ತನ ಪ್ರಸಾದಿ, ಭಕ್ತನ ಪ್ರಾಣಲಿಂಗಿ, ಭಕ್ತನ ಶರಣ ಮತ್ತು ಭಕ್ತನ ಐಕ್ಯ. ಹಾಗೆಯೇ ಪ್ರತಿಯೊಂದು ಅಂಗಸ್ಥಲದಲ್ಲಿಯೂ ಉಳಿದ ಅಂಗಸ್ಥಲಗಳು ಅಡಕವಾಗಿವೆ. ಆಚಾರದಲ್ಲಿ ಆಚಾರಲಿಂಗ, ಆಚಾರದಲ್ಲಿ ಗುರುಲಿಂಗ, ಆಚಾರದಲ್ಲಿ ಶಿವಲಿಂಗ, ಆಚಾರದಲ್ಲಿ ಜಂಗಮಲಿಂಗ, ಆಚಾರದಲ್ಲಿ ಪ್ರಸಾದಲಿಂಗ, ಆಚಾರದಲ್ಲಿ ಮಹಾಲಿಂಗ, ಹೀಗಾದರೆ ಭಕ್ತನು ಆಚಾರಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುವುದೆಂದರೆ, ಆರು ಲಿಂಗಗಳನ್ನೂ ಸಾಕ್ಷಾತ್ಕರಿಸಿಕೊಳ್ಳುವುದೆಂದರ್ಥ. ಹಾಗೆ ಸಾಕ್ಷಾತ್ಕರಿಸಿಕೊಳ್ಳಲು ಅವನು ಭಕ್ತಸ್ಥಲದಲ್ಲಿ ನಡೆದುಕೊಂಡಂತೆ ನಡೆದುಕೊಂಡರೆ ಸಾಲದು, ಅದರ ಜೊತೆಗೆ ಉಳಿದ ಐದೂ ಸ್ಥಲಗಳ ಸಾಧಕನಂತೆ ಆಚರಿಸಬೇಕಾಗುತ್ತದೆ. ಅದು ಹೇಗೆಂಬುದನ್ನು ಷಡ್ವಿಧ ಆಚಾರಲಿಂಗ ಪರಿಕಲ್ಪನೆಯು ತಿಳಿಸುತ್ತದೆ. ಆಚಾರಲಿಂಗದ ಆಚಾರಲಿಂಗವನ್ನು ತೃಪ್ತಿಪಡಿಸಲು ಅವನು ಪಂಚಾಚಾರ ನಿರತನಾಗಬೇಕು. (ನೋಡಿ : ಪಂಚಾಚಾರ), ಆಚಾರಲಿಂಗದಲ್ಲಿನ ಗುರುಲಿಂಗವನ್ನು ಒಲಿಸಿಕೊಳ್ಳಲು ಸದಾ ಪಂಚಾಕ್ಷರಿ ಮಂತ್ರವನ್ನು ಉಚ್ಚರಿಸುತ್ತಿರಬೇಕು, ಆಚಾರಲಿಂಗದಲ್ಲಿರುವ ಶಿವಲಿಂಗವನ್ನು ಒಲಿಸಿಕೊಳ್ಳಲು, ಪೂಜಾ "ಸಮಯದಲ್ಲಿ ತದೇಕ ದೃಷ್ಟಿಯಿಂದ ಇಷ್ಟಲಿಂಗವನ್ನು ನಿರೀಕ್ಷಿಸಬೇಕು. ಆಚಾರದಲ್ಲಿರುವ ಜಂಗಮಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಲು, ಅವನು ಯಜ್ಞ (ದಾಸೋಹ) ಮಾಡಬೇಕು. ಅಷ್ಟವಿಧಾರ್ಚನೆ ಮತ್ತು ಷೋಡಶೋಪಚಾರಗಳನ್ನೂ ಮಾಡಬೇಕು. (ನೋಡಿ:ದಾಸೋಹ, ಅಷ್ಟವಿಧಾರ್ಚನೆ, ಷೋಡಶೋಪಚಾರ), ಆಚಾರಲಿಂಗದಲ್ಲಿನ ಪ್ರಸಾದಲಿಂಗವನ್ನು ತೃಪ್ತಿಪಡಿಸಲು ಪರಶಿವನನ್ನು ಕುರಿತು ಯಾವಾಗಲೂ ಸ್ತೋತ್ರ ಮಾಡಬೇಕು; ಆಚಾರಲಿಂಗದೊಳಗಿನ ಮಹಾಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಲು, ಮಹಾಲಿಂಗವನ್ನು ವೇಧಿಸಿ, ತಾನು ಅದರಲ್ಲಿ ಐಕ್ಯವಾಗಬೇಕು. ಹೀಗೆ ಷಡ್ವಿಧ ಆಚಾರಲಿಂಗವು ಕ್ರಿಯೆ, ಮಂತ್ರ, ನಿರೀಕ್ಷಣೆ, ಯಜನ, ಈಶನ, (ಸ್ತೋತ್ರ) ಮತ್ತು ವೇಧಾ ಎಂಬ ಆರು ಕ್ರಿಯೆಗಳನ್ನು ಒಳಗೊಂಡಿದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಷಡ್ರಸಾಮೃತ ಷಡ್ವಿಧ ಲಿಂಗಧಾರಣೆ Next