Previous ಮಹಾಶೂನ್ಯ ಪ್ರಸಾದಿ Next

ಭಾವಲಿಂಗ

ಭಾವಲಿಂಗ

೧. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ ಆತ್ಮ ಚೈತನ್ಯಾತ್ಮಕ ಲಿಂಗ (ಪರಶಿವ)ದ ಅಂಶ. ಅದೇ ಪ್ರಾಣದ ರೂಪದಲ್ಲಿ ಪ್ರಾಣಲಿಂಗವೆಂತಲೂ, ದೇಹದ ಮೇಲೆ ಕಾಣುವ ಇಷ್ಟಲಿಂಗವೆಂತಲೂ ಕರೆಯಲ್ಪಟ್ಟಿದೆ, ಎಂಬುದು ವಚನಕಾರರ ಸಿದ್ಧಾಂತ. ಜೀವಾತ್ಮ, ಅಂಗ, ಎಂಬ ಪದಗಳು ಭಾವಲಿಂಗದ ಪರ್ಯಾಯ ಪದಗಳು, ಸಾಮರಸ್ಯ ಸಿದ್ದಿಸಿದನಂತರ ಭಾವಲಿಂಗ ಮತ್ತು ಪರಶಿವ ಇವರಿಗಿರುವ ವ್ಯತ್ಯಾಸ ಇಲ್ಲವಾಗಿ, ಶರಣನಿಗೆ ತಾನು ಪರಶಿವನ ಅಂಗ ಎಂಬ ಭಾವ ಮೂಡುತ್ತದೆ.

೨. ಮನುಷ್ಯನಲ್ಲಿರುವ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಲ್ಲಿ ಪ್ರಕಟಗೊಳ್ಳುವ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ ಎಂಬ ತ್ರಿವಿಧಲಿಂಗಗಳಲ್ಲಿ ಒಂದು; ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗಗಳ ಮುಖಾಂತರ ಮನುಷ್ಯನ ಸ್ಥೂಲ, ಸೂಕ್ಷ್ಮ ಮತ್ತು ಕಾರಣಶರೀರಗಳಲ್ಲಿ ಶಿವಕಳೆಯು ಇಷ್ಟ, ಪ್ರಾಣ, ಭಾವಲಿಂಗಗಳಾಗಿ ನೆಲೆಗೊಳ್ಳುವುವು. ಭ್ರಮೆಗಳು ನಾಶವಾಗಿ ಭಾವಲಿಂಗವು ಕಾರಣತನುವಿನಲ್ಲಿ ಪ್ರಕಟಗೊಂಡಾಗ ಲಿಂಗವನ್ನುಳಿದು ಬೇರೆ ಏನನ್ನೂ ಭಾವಸದಿರುವ ಸ್ಥಿತಿಯು ಉಂಟಾಗುತ್ತದೆ. ಪರಿಪೂರ್ಣವಾದ ಇದನ್ನು ಭಾವದಿಂದಲೇ ಗ್ರಹಿಸಬಹು- ದಾಗಿದೆ ಇದರಲ್ಲಿ ಪ್ರಸಾದಲಿಂಗ, ಮಹಾಲಿಂಗ ಎಂಬ ಎರಡು ವಿಧಗಳಿವೆ ;

ಅಯ್ಯಾ ತನುಶುದ್ಧವಾಗಿ ಇಷ್ಟಲಿಂಗವ ಪೂಜಿಸಬೇಕು ಮನಶುದ್ಧನಾಗಿ ಪ್ರಾಣಲಿಂಗವ ಧ್ಯಾನಿಸಬೇಕು ಭಾವಶುದ್ಧನಾಗಿ ಭಾವಲಿಂಗವ ಭಾವಿಸಬೇಕು (ಚೆನ್ನಬ. ಸಮವ. ೩-೨೯೮-೯೩೯);

ಭಾವಲಿಂಗದಿಂದ ತ್ರಿವಿಧನಆದಹೆನೆಂದಡೆ ಭಾವಲಿಂಗವನೆ ಮಹಾಲಿಂಗವಾಗಿ ಅಳವಡಿಸಿದನು ಎನ್ನ ಗುರು ಚೆನ್ನಬಸವಣ್ಣನು (ಸಿದ್ದರಾ, ಸಮವ. ೪-೨೫೪-೮೯೪);

ಭಾವಭ್ರಮೆಗಳು ನಷ್ಟವಾಗಿ ಅನುಭಾವದಲ್ಲಿ ಲೀನವಾಗಿ ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯಂಗಳಲ್ಲಿ ಭರಿತವಾಗಿ ಭಾವಬ್ರಹ್ಮವೆಂಬ ಭೇದವಿಲ್ಲದೆ ಸನ್ನಿಹಿತಭಾವದಿಂದಿಪ್ಪುದೇ ಭಾವಲಿಂಗ (ಆದಯ್ಯ, ಸಮವ. ೬-೨೩೬-೭೬೬); ಪರತತ್ತ್ವವೆಂಬುದೇ ಭಾವಲಿಂಗ (ಶಿವಚಿಂ, ೪೯-೯).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಹಾಶೂನ್ಯ ಪ್ರಸಾದಿ Next