Previous ಚತುರ್ವಿಧ ಪ್ರಸಾದ ಅಂಗಸ್ಥಲ Next

ಇಪ್ಪತ್ತುನಾಲ್ಕು ಶೀಲ

ಪಾಲ್ಕುರಿಕೆ ಸೋಮೇಶ್ವರನು ಹೇಳಿರುವಂತೆ - ಇಪ್ಪತ್ತುನಾಲ್ಕು ಶೀಲ

ಪಾಲ್ಕುರಿಕೆ ಸೋಮೇಶ್ವರನು ಹೇಳಿರುವಂತೆ - ಲಿಂಗದೀಕ್ಷೆಯನ್ನು ಸ್ವೀಕರಿಸಿದವನು ಅನುಸರಿಸಬೇಕಾದ ಇಪ್ಪತ್ತುನಾಲ್ಕು ಬಗೆಯ ಸದಾಚಾರಗಳು; P ಶೀಲಗಳು ಅಪಾರಸಂಖ್ಯೆಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ಅರುವತ್ತುನಾಲ್ಕು ಮತ್ತು ಇಪ್ಪತ್ತುನಾಲ್ಕು ಶೀಲಗಳನ್ನು ಹೇಳುತ್ತಾರೆ.

೧. ಜೀವಭಾವವನ್ನು ತ್ಯಜಿಸಿ, ಗುರುಲಿಂಗಜಂಗಮಭಕ್ತಿಯಲ್ಲಿ ನಿರತನಾಗಿ ಜಂಗಮ ತೀರ್ಥವನ್ನು ಲಿಂಗಕ್ಕೆ " ಅರ್ಪಿಸಿಕೊಳ್ಳುವುದು.
೨. ತನ್ನ ಪರಿಜನರೊಂದಿಗೆ ಸದಾಚಾರಿಯಾಗಿದ್ದು ಸಾವಧಾನದಿಂದ ಇರುವುದು.
೩. ಹೆಂಡತಿ, ಮಕ್ಕಳು ಮುಂತಾದವರು ಸತ್ಕ್ರಿಯೆಗಳಿಂದ ಕೂಡಿದ ಸೇವೆಯನ್ನು ಮಾಡುವುದು.
೪. ನದಿ, ತಟಾಕಗಳಿಂದ ಸರ್ವಾಂಗಪಾವಡೆಯಿಂದ ಶುದ್ಧವಾಗಿರುವ ಉದಕವನ್ನು ತಂದು ಜಂಗಮತೃಪ್ತಿಯನ್ನು ಮಾಡಿ, ಆ ಪ್ರಸಾದವನ್ನು ಲಿಂಗಾರ್ಪಣೆ ಮಾಡುವುದು.
೫. ಸರ್ವಧಾನ್ಯ, ಬೆಲ್ಲ, ಭವಿಪಾಕಗಳನ್ನು ವರ್ಜಿಸಿ ಕಟ್ಟಳೆಯಂತೆ ಕೂಪಾದಿಜಲವನ್ನು ತರುವುದು.
೬. ಈಶಸೇವೆಗೆಂದು ಒದಗಿಸಿದ ಪದಾರ್ಥಗಳಲ್ಲಿ ಕಟ್ಟಿಗೆ, ಬೆಂಕಿ ಮುಂತಾದುವನ್ನು ಭವಿಗಳಿಗೆ ಕೊಡದಿರುವುದು.
೭. ಲಿಂಗಜಂಗಮದ ಸೇವೆಯನ್ನು ತಾನೇ ಮಾಡಿ ಉಳಿದ ಪ್ರಸಾದವನ್ನು ಪರಿಜನರಿಗೆ ಕೊಡದೆ ತಾನೇ ಸ್ವೀಕರಿಸುವುದು.
೮. ಭವಿ ಸಂಬಂಧವನ್ನು ಬಿಟ್ಟು, ಕರಣವ್ಯಾಪಾರಗಳನ್ನು ಲಿಂಗಕ್ಕೆ ಅರ್ಪಿಸಿ ಜಂಗಮವೇ ಪರಿವನೆಂದು ಭಾವಿಸುವುದು.
೯. ಭವಿಶಬ್ದ, ಕುಶಬ್ದ, ಹಿಂಸಾಶಬ್ದ, ಶ್ವಪಚಶಬ್ದ, ಕರ್ಕಶಶಬ್ದ, ಡಾಂಭಿಕಶಬ್ದ, ಉಗ್ರಶಬ್ದ ಮತ್ತು ಭೀಭತ್ಸಕಶಬ್ದಗಳೆಂಬ ಎಂಟು ಬಗೆಯ ಶಬ್ದಗಳನ್ನಾಡದಿರುವುದು.
೧೦. ಹೇಳಿದ ಮಾತಿನಂತೆ ನಡೆಯುವುದು.
೧೧. ಅಯೋಗ್ಯವಸ್ತುಗಳಾದ ಮದ್ಯ, ಮಾಂಸ, ಅಣಬೆ, ಗುಂಡುಸೋರೆಯ ಕಾಯಿ, ಜೇನುತುಪ್ಪ, ಎಮ್ಮೆಯ ಹಾಲು, ತಾಮ್ರಪಾತ್ರೆಯಲ್ಲಿಟ್ಟ ಹಾಲು, ಉಪ್ಪು, ಹಂದಿ ಕೋಳಿಗಳು ಮುಟ್ಟಿದ ವಸ್ತುಗಳು ಎಂಬುವನ್ನು ದೂಷ್ಯವೆಂದು ಭಾವಿಸುವುದು.
೧೨. ಭಕ್ತರಲ್ಲದವರ ಮನೆಗೆ ಹೋಗದಿರುವುದು.
೧೩. ನಾಯಿ ಮುಟ್ಟಿದ ಪದಾರ್ಥಗಳನ್ನೂ ಚರ್ಮ ಮೊದಲಾದುವುಗಳಿಂದಾದ ವಸ್ತುಗಳನ್ನೂ ಬಿಡುವುದು.
೧೪. ಭವಿಯನ್ನು ಸ್ತುತಿಸದಿರುವುದು.
೧೫. ಆಸನ, ಶಯನಗಳಲ್ಲಿ ಭವಿಸಂಗವನ್ನು ಬಿಡುವುದು.
೧೬. ವಿಷಯ ಮುಳ್ಳು, ಆಯುಧಗಳು ತಾಗಿದ ಪದಾರ್ಥಗಳನ್ನು, ಹಂದಿ ನಾಯಿ ಕೋಳಿ ಮುಂತಾದುವುಗಳು ನೋಡಿ ಮುಟ್ಟಿದ ಪದಾರ್ಥಗಳನ್ನು ಬಿಡುವುದು.
೧೭. ಭಕ್ತಿಯಲ್ಲಿ ಅತಿವ್ಯಾಮೋಹದಿಂದ ಕೂಡಿರುವುದು.
೧೮. ಜಲ, ಪುಷ್ಪ, ಫಲ, ಪತ್ರೆ, ಯೋಗ್ಯಪಾತ್ರ, ಗೋತ್ರಗಳೆಂಬ ಆರು ವಿಷಯಗಳಿಗೆ ಸಂಬಂಧಿಸಿದ ಸಂಸ್ಕಾರಗಳನ್ನು ಅನುಸರಿಸುವುದು.
೧೯. ಷೋಡಶದ್ರವ್ಯ ಸಂಸ್ಕಾರಗಳನ್ನು ಪಾಲಿಸುವುದು.
೨೦. ದಾಸ, ವೀರದಾಸ, ನೃತ್ಯ, ವೀರನೃತ್ಯ, ಸಮಯಾಚಾರಿ, ಸಕಲಾವಸ್ಥ ಎಂಬ ಷಡ್ವಿಧ ಸಜ್ಜನರೊಡನೆ ಸಂಬಂಧಗೊಂಡಿರುವುದು.
೨೧. ಅಕಾರ್ಪಣ್ಯ, ನಿರಾಯಾಸಶೌಚ, ಶಾಂತಿ, ದಯೆ, ಅಕಾಮ, ಅನಸೂಯೆ, ಪ್ರತಿಜ್ಞೆ -ಎಂಬ ಸಪ್ತವಿಧ ಶುದ್ಧಶೀಲಗಳಿಂದ ಕೂಡಿರುವುದು.
೨೨. ಸಪ್ತವ್ಯಸನ, ಅಷ್ಟಮದ, ಅರಿಷಡ್ವರ್ಗ, ವಾದ ವಶ್ಯ ಸ್ತಂಭನಗಳನ್ನೂ ಆದಿಮಾಂಸ, ಮಧ್ಯಮಾಂಸಗಳನ್ನೂ ತ್ಯಜಿಸುವುದು.
೨೩. ಮಹಾಪಾಪಕರವಾದ ಸುಳ್ಳು ಹೇಳುವುದನ್ನು ಬಿಡುವುದು.
೩೪. ಗುರುವಿತ್ತ ಲಿಂಗವನ್ನು ದೇಹದಿಂದಗಲಿಸುವ ಭವಿಗಳೊಂದಿಗೆ, ಅಭಕ್ತರೊಂದಿಗೆ, ಲಿಂಗಧಾರಿಯಾಗಿ ಅಭಕ್ಷ ಭಕ್ಷಣಗಳನ್ನು ಮಾಡುವವರೊಂದಿಗೆ ಬೆರೆಯದಿರುವುದು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಚತುರ್ವಿಧ ಪ್ರಸಾದ ಅಂಗಸ್ಥಲ Next