Previous ವ್ರತ, ನೇಮ, ಶೀಲ ಶಕ್ತಿ ಮತ್ತು ತತ್ವ Next

ಶಕ್ತಿ

ಶಕ್ತಿ

ಜಗತ್ತಿನಲ್ಲಾಗುವ ಸಣ್ಣ ಸಣ್ಣ ಬದಲಾವಣೆಗಳಿಗೆ ಮನುಷ್ಯ, ಪ್ರಾಣಿ, ಸೂರ್ಯ, ಚಂದ್ರ, ಮುಂತಾದವುಗಳೇ ಕಾರಣವೆಂದು ನಾವು ನಂಬುತ್ತೇವೆ. ಆದರೆ ಇಡೀ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಪ್ರಲಯಗಳನ್ನು ಗಣನೆಗೆ ತೆಗೆದುಕೊಂಡರೆ ಮನುಷ್ಯ, ಪ್ರಾಣಿ, ಸೂರ್ಯ, ಚಂದ್ರ ಮುಂತಾದವುಗಳೇ ಕಾರಣವೆಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ, ಏಕೆಂದರೆ, ಆಗ ಈ ಕಾರಣಗಳೆ ಇನ್ನೂ ಸೃಷ್ಟಿಯಾಗಿರುವುದಿಲ್ಲ; ಮನುಷ್ಯ ಜಗತ್ತಿನ ಪ್ರಳಯ ಮಾಡಲು ಸಾಧ್ಯವಿಲ್ಲ. ಆಗ ನಾವು ಇಂಥ ಜಾಗತಿಕ ಬದಲಾವಣೆಗಳಿಗೆ ಕಾರಣಗಳಾವವು ಎಂಬುದಕ್ಕೆ ಉತ್ತರ ಕೊಡಲು ಈ ಜಗತ್ತಿನ ಮೂಲ ವಸ್ತುವಾವುದೆಂಬುದನ್ನು ಹುಡುಕುತ್ತೇವೆ. ಇದಕ್ಕೆ ಸಾಂಖ್ಯರು ಪ್ರಕೃತಿ ಮತ್ತು ಪುರುಷರೇ (ಆತ್ಮಗಳೇ) ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವೆಂದು ಹೇಳಿದರೆ, ಪೃಥ್ವಿ, ಅಪ್ಪು, ತೇಜ ಮತ್ತು ವಾಯು ಎಂಬ ನಾಲ್ಕು ಭೂತಗಳೆ ಕಾರಣವೆಂದು ಚಾರ್ವಾಕರು ನಂಬುತ್ತಾರೆ. ಈ ಎರಡು ಸಿದ್ಧಾಂತಗಳು ಪ್ರಕೃತಿ ಪುರುಷರಿಗಿಂತ ಮತ್ತು ಚತುರ್ಭೂತಗಳಿಗಿಂತ ಹೆಚ್ಚಿನ ತತ್ವವೇನೂ ಇಲ್ಲವೆಂದು ಪ್ರತಿಪಾದಿಸುವುದರಿಂದ, ಅವು ನಿರೀಶ್ವರವಾದಿ ಮತಗಳೆನಿಸಿಕೊಳ್ಳುತ್ತವೆ. ವಚನಕಾರರು ಈ ಸಿದ್ಧಾಂತಗಳನ್ನು ಖಂಡಿಸಿದ್ದಾರೆ.

ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳಿಗೆ ಪ್ರಕೃತಿ ಇತ್ಯಾದಿ ಮೂಲ ವಸ್ತುಗಳು ಬೇಕು ಎಂಬ ಮಾತನ್ನು ವಚನಕಾರರು ಒಪ್ಪುತ್ತಾರೆ. ಈ ಮೂಲವಸ್ತುವನ್ನು ಅವರು ಶಕ್ತಿ ಎಂದು ಕರೆದಿದ್ದಾರೆ. ಆದರೆ ಅವರ ಪ್ರಕಾರ ಶಕ್ತಿಯೊಂದೇ ಈ ಕೆಲಸಗಳನ್ನು ಮಾಡಲಾರದು. ಏಕೆಂದರೆ ಶಕ್ತಿಯು ಜಡ (ಅಚೇತನ) ವಸ್ತುವಾಗಿದ್ದು, ಅದು ತಂತಾನೆ ಪ್ರಪಂಚದ ವಿವಿಧ ವಸ್ತುಗಳನ್ನು ರಚಿಸಲು ಸಾಧ್ಯವಿಲ್ಲ. ಅದು ಯಾವಾಗ ಬದಲಾವಣೆಯಾಗಬೇಕು, ಯಾವ ಕಾಲಕ್ರಮದಲ್ಲಿ ಬದಲಾವಣೆಯಾಗಬೇಕು ಎಂಬುದನ್ನು ನಿರ್ಧರಿಸಿ, ನಿಯಂತ್ರಿಸಲು ಮಾರ್ಗದರ್ಶನ ನೀಡಲು, ಜಡಶಕ್ತಿಯಲ್ಲದ, ಆದರೆ ಜಡಶಕ್ತಿಗಿಂತ ಹೆಚ್ಚಿನ, ಚೈತನ್ಯ ಬೇಕಾಗುತ್ತದೆ. ಈ ಚೈತನ್ಯವನ್ನು ವಚನಕಾರರು ಹಲವಾರು ಹೆಸರುಗಳಿಂದ ಕರೆದಿದ್ದು, ಅವುಗಳಲ್ಲಿ ಒಂದಾದ "ಪರಶಿವ" ಎಂಬುದನ್ನು ನಾವೀಗ ಆರಿಸಿಕೊಳ್ಳೋಣ.

ವಚನಕಾರರ ಪರಶಿವನು ಅತಿಗಳ ಬ್ರಹ್ಮವಂತೆ ನಿರ್ಗುಣನಲ್ಲ ಪರಶಿವನಿಗೆ ಅನೇಕ ಗುಣಗಳಿವೆ. ಅವೆಲ್ಲದನ್ನೂ "ಶಕ್ತಿ" ಎಂಬ ಪದದಡಿಯಲ್ಲಿ ತರಬಹುದು. ಹಾಗಾದರೆ "ಶಕ್ತಿ" ಎಂದರೇನು?.

ವಚನಗಳಲ್ಲಿ "ಶಕ್ತಿ" ಎಂಬ ಪದಕ್ಕೆ ಕನಿಷ್ಠ ಎರಡು ವಿಭಿನ್ನ ಅರ್ಥಗಳಿವೆ. ಉದಾಹರಣೆಗೆ “ಕುಂಬಾರನಿಗೆ ಮಡಕೆ ಮಾಡುವ ಶಕ್ತಿಯಿದೆ ಮತ್ತು ಬೀಜಕ್ಕೆ ಮರವಾಗುವ ಶಕ್ತಿಯಿದೆ ಎಂಬ ಎರಡು ವಾಕ್ಯಗಳಲ್ಲಿ ಶಕ್ತಿ ಎಂಬ ಪದವು ಹೇಗೆ ಬೇರೆ ಬೇರೆ ಅರ್ಥಗಳಲ್ಲಿ ಬಳಸಲು ಸಾಧ್ಯವಾಗಿದೆ ಎಂಬುದನ್ನು ಗಮನಿಸೋಣ. ಕುಂಬಾರನು ಮಣ್ಣಿನ ಮುದ್ದೆಯನ್ನು ಕೆಲವು ಸಲಕರಣೆಗಳ ಮೂಲಕ ಮಡಕೆಯನ್ನಾಗಿ ಪರಿವರ್ತಿಸುತ್ತಾನೆ, ಹಾಗೆ ಮಾಡುವ ಶಕ್ತಿ ಅವನಿಗಿದೆ, ಎಂಬುದು ಮೊದಲನೆ ವಾಕ್ಯದ ಅರ್ಥ. ಆದರೆ ಬೀಜದಲ್ಲಿರುವ ಶಕ್ತಿಯು ತಾನೇ ಮರವಾಗುತ್ತದೆ. ಅಂದರೆ ಕುಂಬಾರನ ಯಾವ ಶಕ್ತಿಯೂ ಮಡಕೆಯಾಗುವುದಿಲ್ಲ. ಆದುದರಿಂದ ಕುಂಬಾರ ಮತ್ತು ಬೀಜ ಎರಡಕ್ಕೆ ಶಕ್ತಿ ಇದ್ದರೂ ಕುಂಬಾರನಿಗಿರುವ ಶಕ್ತಿಯು (ಬಲವು) ನಿಮಿತ್ತ ಕಾರಣವೆನಿಸಿದರೆ, ಬೀಜಶಕ್ತಿಯು ಉಪಾದಾನಕಾರಣವೆನಿಸಿಕೊಳ್ಳುತ್ತದೆ.

ವಚನಕಾರರು ಶಕ್ತಿಯೆಂಬ ಪದವನ್ನು ಈ ಎರಡು ಅರ್ಥಗಳಲ್ಲಿಯೂ ಬಳಸಿದ್ದಾರೆ. ಶಕ್ತಿಯೇ ಪ್ರಪಂಚವಾಗಿ ಮಾರ್ಪಡುತ್ತದೆ ಎಂದಾಗ ಶಕ್ತಿ ಎಂಬುದು ಒಂದು ವಸ್ತುವೆಂದು, ಶಿವನಿಗೆ ಅದನ್ನು ನಿಯಂತ್ರಿಸಿ ನಿರ್ದೇಶನ ನೀಡಬಲ್ಲ ಶಕ್ತಿ ಇದೆ ಎಂದಾಗ ಶಕ್ತಿ ಎಂಬುದು ಶಿವನ ಒಂದು ಗುಣವೆಂದು ಅರ್ಥವಾಗುತ್ತದೆ. ಈಗ ಶಕ್ತಿ ಎಂಬುದಕ್ಕೆ ಮೊದಲನೆ ಅರ್ಥದ ಒತ್ತುಕೊಡೋಣ.

ಈಶ್ವರ ಕೃಷ್ಣನ ಸಾಂಖ್ಯದರ್ಶನದ ಪ್ರಕಾರ ಮೂಲಪ್ರಕೃತಿಯೇ ಶಕ್ತಿಯ ಆಗರ. ಬೀಜವು ಮರವಾಗಿ ಹೇಗೆ ಮಾರ್ಪಡುತ್ತದೆಯೋ ಹಾಗೆಯೇ ಪ್ರಕೃತಿ ಎಂಬ ಶಕ್ತಿಯು ಬುದ್ದಿ, ಮನಸ್ಸು, ಅಹಂ, ಪಂಚೇಂದ್ರಿಯಗಳು ಇತ್ಯಾದಿಯಾಗಿ ಮಾರ್ಪಡುತ್ತದೆ. ಇವೇ ತತ್ವಗಳು ಹಿಮ್ಮುಖವಾಗಿ ಚಲಿಸಿ ಮೂಲ ಪ್ರಕೃತಿಯ ಸಾಮ್ಯಾವಸ್ಥೆಯನ್ನು ತಲುಪಿದರೆ ಆಗ ಪ್ರಲಯವಾಗುತ್ತದೆ. ಆದರೆ ಪ್ರಕೃತಿಯು ಪ್ರಲಯದಿಂದ ಸೃಷ್ಟಿಯೆಂಬ ಅವಸ್ಥೆಗೆ ವಿಕಾಸವಾಗುವಾಗಲಾಗಲಿ, ಸೃಷ್ಠಿಯಿಂದ ಪ್ರಲಯಸ್ಥಿತಿಗೆ ಹಿಂದಿರುವಾಗಲಾಗಲೀ ಅಥವಾ ಇವೆರಡರ ಮಧ್ಯದ ಅವಸ್ಥೆಯಲ್ಲಿ ನಡೆಯುವ ಭೌತಿಕ, ರಾಸಾಯನಿಕ, ಮಾನಸಿಕ, ಮತ್ತು ಜೈವಿಕ ಬದಲಾವಣೆಗಳು ಆಗುವಾಗಲಾಗಲಿ, ಅದು ಹೊರಗಿನ, ಈಶ್ವರನಂಥ, ನಿಮಿತ್ತ ಕಾರಣಗಳನ್ನು ಅವಲಂಬಿಸುವುದಿಲ್ಲ. ಈ ಎಲ್ಲ ರೀತಿಯ ಬದಲಾವಣೆಗಳಿಗೆ ಅಗತ್ಯವಾದ ಶಕ್ತಿಯು ಪ್ರಕೃತಿಯಲ್ಲೇ ಇದೆ.

ಒಂದು ವಸ್ತುವಿನ ಸೃಷ್ಟಿಗೆ ಅಥವಾ ಕ್ರಿಯೆ ಅಥವಾ ಚಲನೆಗೆ ಬೇಕಾಗುವ ತತ್ವವೇ ಶಕ್ತಿ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಆದರೆ ಶಕ್ತಿಯು ಬಣ್ಣ, ಭಾರ, ರುಚಿಗಳಂತಹ ಅಮೂರ್ತ ಗುಣವಲ್ಲ. ಏಕೆಂದರೆ ಅಮೂರ್ತ ಗುಣದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಉದಾಹರಣೆಗೆ ಮೃದುವಾದ ವಸ್ತುವಿನಿಂದ ಏನನ್ನಾದರೂ ರಚಿಸಬಹುದು. ಆದರೆ, ಮೃದುತ್ವದಿಂದ ಏನನ್ನೂ ರಚಿಸಲು ಬರುವುದಿಲ್ಲ. ಅಂದರೆ, ಶಕ್ತಿ ಎಂಬುದು ಒಂದು ದ್ರವ್ಯವೇ ಹೊರತು ಒಂದು ಗುಣವಲ್ಲ. ಉದಾಹರಣೆಗೆ “ಪರಶಿವನಿಂದ ಚಿಚ್ಛಕ್ತಿ, ಚಿಚ್ಛಕ್ತಿಯಿಂದ ಪರಾ, ಆದಿ, ಜ್ಞಾನ, ಕ್ರಿಯಾ ಎಂಬ ಪಂಚಕಲಾ ಶಕ್ತಿಯರುದಯರಾದರು ನೋಡಾ ಆ ಕ್ರಿಯಾಶಕ್ತಿಯಿಂದ ನಿವೃತ್ತಿ ಕಲೆ, ಆ ನಿವೃತ್ತಿಕಲೆಯಿಂದ ಮಹಾಮಾಯೆ ಹುಟ್ಟಿತ್ತು ನೋಡಾ ಆ ಮಹಾಮಾಯಾ ಶಕ್ತಿಯಿಂದ ಸಮಸ್ತ ಜಗತ್ತಿನ ಜನನ ನೋಡಾ” ಎಂದು ತೋಂಟದ ಸಿದ್ದಲಿಂಗ ಶಿವಯೋಗಿಗಳು ಹೇಳುವಾಗ (೧೧.೬೫) ಜಗತ್ತಿನ ಸೃಷ್ಟಿಗೆ ಬೇಕಾಗುವ ಮೂಲವಸ್ತು ಒಂದು ದ್ರವ್ಯ ಅಥವಾ ವಸ್ತುವಾಗಿರಬೇಕೇ ಹೊರತು, ಗುಣವಾಗಿರಬಾರದು, ಎಂಬುದು ಸ್ಪಷ್ಟವಾಗುತ್ತದೆ. ಕೆಲವು ವಚನಕಾರರೇನೋ ಶಿವ ಶಕ್ತಿಯರ ಸಂಬಂಧವನ್ನು ಹೇಳುವಾಗ, ಶಿವನೇ ದ್ರವ್ಯವೆಂದು ಶಕ್ತಿಯೇ ಗುಣವೆಂದೂ (ಉದಾಹರಣೆಗೆ ಶಿವ, ಹೂವು, ಶಕ್ತಿ, ಗಂಧ) ಹೇಳುತ್ತಾರೆ. ಆದರೆ ಅಂಥ ಉಪಮೆಗಳು ಶಿವಶಕ್ತಿಯರ ಸಂಬಂಧಕ್ಕೆ ಅನ್ವಯಿಸುತ್ತವೆ ಹೊರತು, ಶಿವಶಕ್ತಿಯರ ಸ್ವರೂಪಕ್ಕೆ ಅನ್ವಯಿಸುವುದಿಲ್ಲ.

ಮತ್ತೆ ಕೆಲವು ವಚನಕಾರರು ಶಕ್ತಿಯನ್ನು ಪರಶಿವನ ಹೆಂಡತಿಯೆಂಬಂತೆ ಚಿತ್ರಿಸಿದ್ದಾರೆ. ಉದಾಹರಣೆಗೆ ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣವಪ್ಪ ಪರಶಿವನ ಚಿತ್ರಾಣಶಕ್ತಿಯಿಂದ ಪರಮಜ್ಞಾನಶಕ್ತಿ ಉದಯಿಸಿದಳು ನೋಡಾ" (೧೧.೪೪), "ನಿಃಕಲ ಶಿವನ ಮಧ್ಯದಲ್ಲಿ ಬಿಚ್ಚಕ್ತಿ ಉದಯಿಸಿದಳು...." (೧೧.೬೩) "ಲೀಲೆಯಾದೊಡೆ ಉಮಾಪತಿ, ಲೀಲೆ ತಪ್ಪಿದೊಡೆ ಸ್ವಯಂಭೂ" (೨.೧೪೫) ಶಕ್ತಿ ಎಂದರೆ ಒಂದು ಅಚೇತನ ಮೂಲವಸ್ತು ಎಂದು ಹಿಂದೆ ಹೇಳಿ, ಈಗ ಶಕ್ತಿಯು ಶಿವನ ಹೆಂಡತಿ (ಒಬ್ಬ ವ್ಯಕ್ತಿ) ಎಂದೂ ಆ ವ್ಯಕ್ತಿಗೆ ಸೃಷ್ಟಿಸುವ ಶಕ್ತಿ ಇದೆ ಎಂದೂ ಹೇಳಿದರೆ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಶಿವನೇ ಸೃಷ್ಟಿಕರ್ತ ಎಂದು ಮೊದಲು ಹೇಳಿ, ಈಗ ಸೃಷ್ಟಿಸುವ ಶಕ್ತಿ ಉಮೆಗಿದೆ ಎಂದು ಹೇಳುವುದು ವಿರೋದಾಭಾಸವೆನಿಸುತ್ತದೆ. ಉಮೆಗೆ ಸೃಷ್ಟಿಸುವ ಶಕ್ತಿ ಇದ್ದರೆ, ಶಿವನೇಕೆ ಬೇಕು ಎಂಬ ಮತ್ತೊಂದು ಸಮಸ್ಯೆ ಏಳುತ್ತದೆ. ಆದುದರಿಂದ ಶಕ್ತಿಯನ್ನು ವಾಚಕದಿಂದ ಸಂಬೋಧಿಸುವುದು ಒಂದು ಅಲಂಕಾರಿಕ ಭಾಷೆಯೇ ಹೊರತು, ವಸ್ತುಸ್ಥಿತಿಗೆ ಅನ್ವಯಿಸುವ ಭಾಷೆಯಲ್ಲ. ಆ ಭಾಷೆ ಪುರಾಣಗಳಿಗೆ ಯೋಗ್ಯವೇ ಹೊರತು, ದರ್ಶನಕ್ಕಲ್ಲ.

ಶಕ್ತಿಯೇ ಪ್ರಪಂಚವಾಗಿ ಮಾರ್ಪಡುತ್ತದೆ ಎಂದರೆ ಆ ಗುಣವು ಶಿವನ ದಿಗ್ದರ್ಶನ ಮತ್ತು ನಿಯಂತ್ರಣವಿಲ್ಲದೇ ಸಾಧ್ಯವಿಲ್ಲ. ಆದುದರಿಂದ ಶಕ್ತಿಯು ಉಪಾದಾನ ಕಾರಣ. ಪರಶಿವನು ನಿಮಿತ್ತ ಕಾರಣ, ಎರಡೂ ವಸ್ತುಗಳೇ : ಶಿವ ಚಿದ್ದಸ್ತು, ಶಕ್ತಿ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ವ್ರತ, ನೇಮ, ಶೀಲ ಶಕ್ತಿ ಮತ್ತು ತತ್ವ Next