Previous ಅಧಿದೇವತೆಗಳು ಮತ್ತು ಶಕ್ತಿಗಳು ಅನುಭಾವ Next

ಅನಿರ್ವಾಚ್ಯ ಅನುಭಾವ

ಅನಿರ್ವಾಚ್ಯ ಅನುಭಾವ

ಎಲ್ಲ ಅನುಭಾವಿಗಳೂ ಅನುಭಾವದ ವಸ್ತು ವಿಷಯವನ್ನು ವರ್ಣಿಸುವ ಪ್ರಸಂಗ ಬಂದಾಗ ಅದು ಅನಿರ್ವಚನೀಯ (ಅನಿರ್ವಾಚ್ಯ) ಎನ್ನುತ್ತಾರೆ. ಅದರ ಸುಖವನ್ನೇನೆಂದು ವರ್ಣಿಸಲಿ, ಅದು ಉಪಮೆಗೂ ಸಿಕ್ಕದ ಸುಖ ಮುಂತಾಗಿ ಹೇಳುವುದು ಎಲ್ಲ ಅನುಭಾವಿಗಳ ಮತ, ಅನುಭಾವದ ವಿಷಯವು ಅವರ್ಣನೀಯ ಏಕೆಂಬುದಕ್ಕೆ ನಾವು ಎರಡು ಕಾರಣಗಳನ್ನು ಕೊಡಬಹುದು.

ಮೊದಲನೆಯದಾಗಿ, ಅನುಭಾವದ ಸ್ವರೂಪವೇ ಹಾಗಿದೆ. ನಾವು ಒಂದು ವಸ್ತುವನ್ನು ನೋಡಿ ತಿಳಿದುಕೊಳ್ಳುವಾಗ ಜ್ಞಾತೃ ಜ್ಞೇಯಗಳ ದ್ವೈತವಿರುತ್ತದೆ. ಆದರೆ ಅನುಭಾವದಲ್ಲಿ ಅನುಭಾವಿಯೂ ಚೈತನ್ಯವೂ ಒಂದಾಗಿ, ಜ್ಞಾತೃ ಜ್ಞೇಯಗಳ ದ್ವೈತ ಮಾಯವಾಗುತ್ತದೆ. ನಾನು ಪುಸ್ತಕವನ್ನು ನೋಡುತ್ತಿದ್ದೇನೆ ಎಂದಾಗ ಸ್ವಪ್ರಜ್ಞೆ (ನಾನು ಎಂಬ ಪ್ರಜ್ಞೆ) ಮತ್ತು ಪರಪ್ರಜ್ಞೆ (ವಸ್ತುವಿನ ಪ್ರಜ್ಞೆ) ಎರಡೂ ಇರಬೇಕು. ಆದರೆ ಅನುಭಾವದಲ್ಲಿ ಸ್ವಪ್ರಜ್ಞೆಯೂ ಇರುವುದಿಲ್ಲ, ಪರಪ್ರಜ್ಞೆಯೂ ಇರುವುದಿಲ್ಲ. ಆದುದರಿಂದ ಅಂತಹ ವಿಚಿತ್ರ ಅನುಭವವನ್ನು ಏನೆಂದು ವರ್ಣಿಸಲು ಸಾಧ್ಯ? ನಮ್ಮ ಯಾವ ಭಾಷೆಗೂ ಇದು ವರ್ಣನಾತೀತ ಹಾಗೂ ಮನೋತಿತ. ಅನುಭಾವ (ಸಮಾಧಿ ಸ್ಥಿತಿ) ಮುಗಿದ ನಂತರ ಅದರ ಬಗ್ಗೆ ಏನೂ ಹೇಳಲಾರದ ಅನುಭಾವಿ ಶಬ್ದ ಮುಗ್ಧನಾದರೆ ಅಲ್ಲಿ ಆಶ್ಚರ್ಯವೇನಿಲ್ಲ.

ಎರಡನೆಯದಾಗಿ, ಅದು ಆನಂದದಾಯಕ ಅನುಭವ ಎಂದು ಹೇಳಿದಾಗಲೂ ಆ ಆನಂದವು ವರ್ಣನೆಗೆ (ಭಾಷೆಗೆ ಹಾಗೂ ಮನೋಚಿತ್ರಣಕ್ಕೆ) ಸಿಕ್ಕುವುದಿಲ್ಲ. ಒಬ್ಬ ವ್ಯಕ್ತಿಗೆ ಬಹಳ ದುಃಖವಾದಾಗ, "ಅವನಿಗೆ ಬಹಳ ದುಃಖವಾಗಿದೆ" ಎಂದು ಹೇಳಿದರೆ ಅದು ಅವನ ದುಃಖದ ಸಮರ್ಪಕ ವರ್ಣನೆಯಾಗಲಾರದು. ಏಕೆಂದರೆ ವರ್ಣನೆ ಎಂಬ ಕ್ರಿಯೆಗೆ ಕೆಲವು ಮಿತಿಗಳುಂಟು. ಒಂದು ಗೋಡೆಯ ವರ್ಣನೆ ಮಾಡುವುದೆಂದರೆ, ಅದರ ಗಾತ್ರ, ಆಕಾರ, ಬಣ್ಣ, ವಾಸನೆ, ಇತ್ಯಾದಿಗಳನ್ನು ವರ್ಣಿಸುವುದು. ಈ ದೃಷ್ಟಿಯಿಂದ ನೋಡಿದಾಗ ದುಃಖವು ವರ್ಣನೆಗೆ ಸಿಕ್ಕಲಾರದು. ಒಬ್ಬನ ದುಃಖವನ್ನು ವರ್ಣಿಸಲು ನಾವು ಎಷ್ಟೇ ಶಬ್ದಗಳನ್ನು ಖರ್ಚು ಮಾಡಿದರೂ, ಗೋಡೆಯ ವರ್ಣನೆಗಿರುವಷ್ಟು ಖಚಿತತೆ ಮತ್ತು ಸ್ಪಷ್ಟತೆ, ಅವನ ದುಃಖದ ವರ್ಣನೆಗೆ ಬರುವುದಿಲ್ಲ. ಅದೇ ರೀತಿ, ಅನುಭಾವಿಗೆ ಉಂಟಾಗುವ ಸುಖ ಅನಿರ್ವಾಚ್ಯ.

ಕೆಲವು ವೇಳೆ ನಾವು ಉಪಮೆಯನ್ನು ಬಳಸಿ ವರ್ಣಿಸುತ್ತೇವೆ. ಆದರೆ ಉಪಮೆಗಳಿಗೂ ಕೆಲವು ಮಿತಿಗಳಿರುತ್ತವೆ. ಉದಾಹರಣೆಗೆ, ಆತ್ಮ ಬ್ರಹ್ಮರ ಐಕ್ಯತೆಯನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ (IV.೩.೨೧) "ಗಂಡನು ಹೆಂಡತಿಯ ಅಪ್ಪುಗೆಯಲ್ಲಿದ್ದಾಗ, ಅವನಿಗೆ ಒಳಗು- ಹೊರಗುಗಳ ವ್ಯತ್ಯಾಸದ ಅರಿವು ಹೇಗೆ ಉಂಟಾಗುವುದಿಲ್ಲವೋ ಹಾಗೆಯೇ ಬ್ರಹ್ಮನಲ್ಲಿ ಲೀನವಾದವನಿಗೆ ಒಳ ಹೊರಗುಗಳ ವ್ಯತ್ಯಾಸದ ಅರಿವಾಗುವುದಿಲ್ಲ" ಎಂದು ಹೇಳಲಾಗಿದೆ. ಸ್ತ್ರೀ ಪುರುಷರು ಅಪ್ಪುಗೆಯನಂತರ ಮತ್ತೆ ಬೇರೆ ಬೇರೆಯಾಗುವಂತೆ, ಆತ್ಮನೂ ಅನುಭಾವ (ಸಮಾಧಿ ಸ್ಥಿತಿ) ಮುಗಿದನಂತರ ಮತ್ತೆ ಬೇರೆ ಬೇರೆಯಾಗುತ್ತಾರೆಯೇ ಎಂಬ ಸಂದೇಹ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಕಾರಣವಿಷ್ಟೇ: ನಾವು ಭಾಷೆಯನ್ನು ಕಲಿಯುವುದು ಇಂದ್ರಿಯಾನುಭವದ ಮೂಲಕ. ಅಂದರೆ ನಾವು ಕಲಿತ ಭಾಷೆಯು ಬಳಕೆಯಾಗುವುದು ಇಂದ್ರಿಯಾನುಭವದ ಪ್ರಪಂಚದ ಮಿತಿಯಲ್ಲಿ ಮಾತ್ರ. ಆದರೆ ಅನುಭಾವವು ಒಂದು ಅತೀಂದ್ರಿಯ ಮತ್ತು ಅತಿಬೌದ್ಧಿಕ ಅನುಭವವಾದುದರಿಂದ, ಅದನ್ನು ವರ್ಣಿಸಲು ಇಂದ್ರಿಯಾನುಭವದ ಮೂಲಕ ಕಲಿತ ಭಾಷೆ ಅಶಕ್ತವಾಗುತ್ತದೆ. (ನೋಡಿ: ಅನುಭಾವ)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಧಿದೇವತೆಗಳು ಮತ್ತು ಶಕ್ತಿಗಳು ಅನುಭಾವ Next