Previous ಮಹಾಮನೆ, ಮಹಮನೆ ಪ್ರಣವ Next

ತುರೀಯ

ತುರೀಯ

ಆನಂದಬ್ರಹ್ಮದಲಿ ತಾನೊಂದು ರೂಪಾಗಿ ತಾನು ತನ್ನೊಳಗೆ ತುರಿಯಾತುರಿಯದ ಭಾನುವಿನ ಉದಯದೊಳು ಆನತವು ಕಮಳಕ್ಕೆ ಸ್ವಾನುಭೂತೈಕ್ಯದೊಳು ತನುಲಿಂಗದ ಸೀಮೆಯನು ಪರದಲ್ಲಿ ...ಕಾಣಲರಿದು (ಸಿದ್ದರಾ. ಸಮವ. ೪-೪೧-೧೪೨); ೧. = ತುರೀಯ : ಹೊಲಮೇರೆಯಿಂ ಮೇರೆ ಹೊಲಬುದಪ್ಪಿದ ನಾದಕಳೆಗಳ ಮೀಜೆರ್ದ ತುರ್ಯಂಗಳ ಗುರುವಿನ ಕರುಣದ ಅನಿಮಿಷದ ಮನೆಯಲ್ಲಿ ಹೊಲಬುದಪ್ಪಿದ ಕಂಡೆ ಮಧ್ಯಮವನು (ಸಿದ್ದರಾ, ಸಮವ. ೪-೨೪೦-೮೪೭).
೨. ಜೀವನ್ಮುಕ್ತ ಆದಿಯನಡೆದಡೆ ಗುರುಕರಜಾತನೆಂಬೆ ಮಧ್ಯವನಡೆದಡೆ ಜಂಗಮಸಹಚರಿಯೆಂಬೆ ಅವಸಾನವನಆದಡೆ ಮಹಾಲಿಂಗೈಕ್ಯನೆಂಬೆ ಇಂತೀ ತ್ರಿವಿಧವನಡೆದಡೆ ತುರ್ಯನೆಂಬೆ (ಸಿದ್ದರಾ, ಸಮವ. ೪-೩೯-೧೩೫).

ಜಾಗ್ರತ, ಸ್ವಪ್ನ, ಸುಷುಪ್ತಿ ತುರ್ಯ ಮತ್ತು ತುರ್ಯಾತೀತ ಎಂಬ ಐದು ಬಗೆಯ ಅವಸ್ಥೆಗಳಲ್ಲಿ ಒಂದು; ಮನುಷ್ಯನು ಪರಮಾತ್ಮಧ್ಯಾನದಿಂದ ಸುಷುಪ್ತಾವಸ್ಥೆಯನ್ನು ಹೊಂದಿದಾಗ ಆಗುವ ಆನಂದಾನುಭವದಿಂದ ಅಂತರಂಗ ಬಹಿರಂಗ ಭೇದಗಳೇ ಅಳಿದುಹೋಗಿ ಉಂಟಾಗುವ ಕಟ್ಟಕಡೆಯ ಸ್ಥಿತಿ ಪರಮಾತ್ಮನೊಡನೆ ಬೆರೆತು ಒಂದಾಗುವ ಸ್ಥಿತಿ : ಎನ್ನ ಕಂಗಳೊಳಗಣ ರೂಹಿಂಗೆ ಆನು ಬೇಟಗೊಂಡು ಬಳಲುವಂತೆ ಹಿಡಿದು ನೆರೆಯಲಿಲ್ಲಯ್ಯಾ ತುರೀಯದ ತವಕವನೇನೆಂಬೆನಯ್ಯಾ (ಅಲ್ಲಮ. ಸಮವ. ೨-೧೬೦-೬೦೧);

ಜೀವನಿಗೆ ಜಾಗ್ರತ, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳಿದ್ದು, ಅವುಗಳಲ್ಲಿ ತುರೀಯವೇ ನಾಲ್ಕನೆಯ ಮತ್ತು ಅತ್ಯಂತ ಹೆಚ್ಚಿನದಾಗಿದೆ. ಜಾಗೃತಾವಸ್ಥೆಯಲ್ಲಿ ಆತ್ಮನು ಇಂದ್ರಿಯ, ಮನಸ್ಸು, ಚಿತ್ತ, ಬುದ್ದಿ ಮತ್ತು ಅಹಂಕಾರಗಳ ಸಹಯೋಗದಿಂದ ಜ್ಞಾನವನ್ನು ಪಡೆದರೆ, ತುರೀಯಾವಸ್ಥೆಯಲ್ಲಿ ಅವನು ತಾತ್ಕಾಲಿಕವಾಗಿ ಅವುಗಳಿಂದ ಪ್ರತ್ಯೇಕವಾಗಿರುತ್ತಾನೆ. ತಾನೊಬ್ಬನೇ ಇದ್ದೇನೆ, ತನಗೆ ದೇಹಾದಿಗಳಿಲ್ಲ ಎಂಬ ಅರಿವೇ ಆತ್ಮದ ತುರೀಯಾವಸ್ಥೆ. (೨ : ೬೦೧)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಹಾಮನೆ, ಮಹಮನೆ ಪ್ರಣವ Next