Previous ಶಿವಯೋಗ ಶಿವಾದ್ವೈತ Next

ಶಿವಶಕ್ತಿ ಸಂಪುಟ

ಶಿವಶಕ್ತಿ ಸಂಪುಟ

ಶಿವ ಮತ್ತು ಶಕ್ತಿ ಇವುಗಳ ಕೂಟ. ಶಿವ ಎಂದರೆ ಚಿತ್ತು, ಶಕ್ತಿ ಎಂದರೆ ಇಂದ್ರಿಯಗಳಿಗೂ ಮನಸ್ಸಿಗೂ ಗೋಚರವಾಗುವ ಉಳಿದ ತತ್ವ, ಶಕ್ತಿ ವಿಕಾಸ ಹೊಂದಿ ನಮ್ಮೆಲ್ಲರ ಬುದ್ದಿ, ಮನಸ್ಸು, ಅಹಂ, ಚಿತ್ರ, ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು, ತನ್ಮಾತ್ರೆಗಳು ಮತ್ತು ಪಂಚಭೂತಗಳಾಗಿ, ಅವುಗಳೇ ವಿವಿಧ ಪರಿಣಾಮಗಳಲ್ಲಿ ಮಿಶ್ರಣ ಹೊಂದಿ ಜಗತ್ತಿನ ನಾನಾ ರೂಪದ ವಸ್ತುಗಳಾಗಿವೆ. ಶಿವನು ಇಚ್ಛಿಸದ ಹೊರತು ಶಕ್ತಿ ವಿಕಾಸ ಹೊಂದುವುದಿಲ್ಲ.

ಆದರೆ ಶಿವ ತತ್ವ ಮತ್ತು ಶಕ್ತಿ ತತ್ವ ಹೀಗೆ ಎರಡು ವಿಭಿನ್ನ ತತ್ವಗಳಾದರೂ ಅವೆರಡರಲ್ಲೂ ಅವಿನಾ ಸಂಬಂಧವಿದೆ. ಅವೆರಡೂ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಬಂದು ಕೂಡಿದವು, ಅಲ್ಲಿಂದ ಮುಂದೆ ಅವುಗಳಲ್ಲಿ ಅವಿನಾ ಸಂಬಂಧ ಏರ್ಪಟ್ಟಿತು, ಎಂಬುದು ಇದರ ಅರ್ಥವಲ್ಲ. ಈ ಸಂಬಂಧಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಶಿವ ಯಾವಾಗಲೂ ಶಕ್ತಿಯೊಂದಿಗೇ ಇರುತ್ತಾನೆ. ಶಕ್ತಿಗೆ ಸ್ವತಂತ್ರ ಅಸ್ತಿತ್ವವೂ ಇಲ್ಲ, ಸ್ವತಂತ್ರ ಕಾರ್ಯಶಕ್ತಿಯೂ ಇಲ್ಲ. ಅದು ಶಿವನನ್ನೇ ಆಶ್ರಯಿಸುವುದರಿಂದ, ಅವನ ಇಚ್ಛೆಯ ಮೇರೆಗೆ ಸೃಷ್ಟಿಯಾಗುತ್ತದೆ, ಅವನ ಇಚ್ಛೆಯ ಮೇರೆಗೆ ಲಯವಾಗುತ್ತದೆ.

"ಶಿವಶಕ್ತಿ ಸಂಪುಟ" ಎಂಬುದರ ಅರ್ಥವನ್ನು ನಾವು ಒಂದು ಉಪಮೆಯ ಮೂಲಕ ಸ್ಪಷ್ಟಪಡಿಸಬಹುದು ; ನಮ್ಮ ಜೀವಂತ ದೇಹವು ಶಕ್ತಿಯ ರೂಪಾಂತರ; ಅದರಲ್ಲಿರುವ ಇಂದ್ರಿಯಗಳೂ, ಬುದ್ದಿ ಮುಂತಾದ ಅಂತಃಕರಣಗಳೂ, ಅಲ್ಲಿ ನಡೆಯುವ ಯೋಚನೆ, ಪ್ರಶ್ನೆ, ಸಿಟ್ಟು, ಆಶ್ಚರ್ಯ, ದುಃಖ, ಮುಂತಾದ ಮಾನಸಿಕ ವ್ಯಾಪಾರಗಳೂ ಶಕ್ತಿಯ ರೂಪಾಂತರವೇ. ಆದರೆ ಈ ಶಕ್ತಿಯ ಕಾರ್ಯಗಳು ಚಿದ್ವಸ್ತುವಾದ ಆತ್ಮವಿಲ್ಲದಿದ್ದರೆ ನಡೆಯುವುದಿಲ್ಲ. ಆದರೂ ಇದು ಆತ್ಮ, ಇದು ಶಕ್ತಿಯ ರೂಪಾಂತರ, ಎಂದು ತೋರಿಸಲು ಬರುವುದಿಲ್ಲ. ಅವೆರಡರಲ್ಲಿ ಯಾವುದೋ ಒಂದು ನಿಗೂಢ ರೀತಿಯಲ್ಲಿ ಪರಸ್ಪರ ಸಂಬಂಧವಿದೆ. ವ್ಯಕ್ತಿ ಎಂಬ ಒಂದೇ ಸಂಪುಟದಲ್ಲಿ ಬದಲಾಗದ ಚಿತ್ತು ಬದಲಾಗುವ ಶಕ್ತಿ ಎರಡೂ ಇವೆ. ಹಾಗೆಯೇ ಪರಶಿವನೆಂದರೆ ಚಿತ್ ಮತ್ತು ಶಕ್ತಿ ಎಂಬ ಎರಡು ತತ್ವಗಳ ಒಂದು ಸಂಪುಟ.

ಇಷ್ಟಾದರೂ ಶಿವನಿಗೆ ಶಕ್ತಿ ಇದೆ ಎಂದು ಹೇಳುವುದು ಸೂಕ್ತವೇ ಹೊರತು, ಶಕ್ತಿಗೆ ಚೈತನ್ಯವಿದೆ ಎಂದು ಹೇಳುವುದಲ್ಲ. ಏಕೆಂದರೆ, ಚಿತ್ತು ಶಕ್ತಿಯನ್ನು ನಿಯಂತ್ರಿಸುತ್ತದೆಯೇ ಹೊರತು, ಶಕ್ತಿ ಚಿತ್ತನ್ನು ನಿಯಂತ್ರಿಸುವುದಿಲ್ಲ. (೩:೫೮೯)

ವಚನಕಾರರ ಪರವಸ್ತುವು ಶೂನ್ಯ (ಬಯಲು) ಸ್ಥಿತಿಯಲ್ಲಿದ್ದಾಗ ನಿರ್ಗುಣ, ನಿರಾಕಾರ, ನಿಷ್ಕ್ರಿಯವೇ ಆದರೂ, ಅನಂತರ ಅದರಲ್ಲಿ 'ನಾನು' ಎಂಬ ಪ್ರಜ್ಞೆ ಉಂಟಾಗುತ್ತದೆ. ಕೆಲವು ವೇಳೆ ಇದನ್ನೇ ವಚನಕಾರರು 'ಚಿತ್ತು', 'ನೆನಹು', ಎನ್ನುತ್ತಾರೆ. ಇಂಥ ನೆನಹಿಗೆ ಮುಂದೆ ಪ್ರಪಂಚವಾಗಿ ರೂಪಾಂತರಗೊಳ್ಳುವ ಶಕ್ತಿಯಿರುವುದರಿಂದ ಅದಕ್ಕೆ ಚಿತ್‌ಶಕ್ತಿ ಎಂಬ ಹೆಸರೂ ಇದೆ.

ಪರವಸ್ತುವಿನಲ್ಲಿ ನೆನಹು ತಲೆದೋರುವುದೆಂದರೆ ಪರಶಿವನಿಗೆ ತಾನೊಬ್ಬನೆ ಇರುವುದರ ಅರಿವಾಗುವುದು ಎಂದರ್ಥ. ಆಗ ಅವನಲ್ಲಿ ಸೃಷ್ಟಿ ಮಾಡಬೇಕೆಂಬ ಇಚ್ಛೆ ತಲೆದೋರುತ್ತದೆ. ಈ ಹಂತದ ಪರವಸ್ತುವಿಗೆ ಸ್ವಯಂಭೂಲಿಂಗ ಅಥವಾ ನಿಷ್ಕಲಲಿಂಗ ಎಂದು ಹೆಸರು. ನಿಷ್ಕಲಲಿಂಗಕ್ಕೆ ಸತ್, ಚಿತ್, ಆನಂದ, ನಿತ್ಯ ಪರಿಪೂರ್ಣ ಎಂಬ ಐದು ಲಕ್ಷಣಗಳಿವೆ. ಆದರೆ ಅದಿನ್ನೂ ಸೃಷ್ಟಿಕಾರ್ಯದಲ್ಲಿ ತೊಡಗಿಲ್ಲ. ಅಂದರೆ ಶಕ್ತಿಯನ್ನೊಳಗೊಂಡ ಲಿಂಗದಲ್ಲಿ ಮುಂದೆ ಉಂಟಾಗಲಿರುವ ಸಕಲ ಚರಾಚರವಸ್ತುಗಳು ಇನ್ನೂ ನಾಮರೂಪವಿಲ್ಲದೆ ಅವ್ಯಕ್ತ ಸ್ಥಿತಿಯಲ್ಲಿವೆ. ಆಗ ಅದರಲ್ಲಿದ್ದ ಚಿತ್‌ಶಕ್ತಿಯು ಚಲನೆಗೊಳಗಾಗುತ್ತದೆ.

ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ
ಶೂನ್ಯದಲ್ಲಿ ನಿಂದು ಸ್ವಯಂಭುವಾದಿರಲ್ಲ.
ಬೀಜ ವೃಕ್ಷದಂತೆ ಸಾಕಾರ ನಿರಾಕಾರವು ನೀವೆಯಾದಿರಲ್ಲ.
ಸಕಲವೆಲ್ಲಕ್ಕೆ ಮೂಲಿಗರಾದಿರಲ್ಲ.
ನಿಮ್ಮ ನಿಜವ ನೀವೇ ಅರಿವುತ್ತಿರ್ದಿರಲ್ಲ.
ನಿಮ್ಮ ಮಹಿಮೆಯ ನೀವೇಬಲ್ಲಿರಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, (೧೧: ೭೮೯)

ಲಿಂಗದಲ್ಲಿದ್ದ ಶಕ್ತಿಯೇ ಮುಂದೆ ಆರು ಕಲಾಶಕ್ತಿಗಳಾಗಿ ಆರು ಭಕ್ತಿಶಕ್ತಿಗಳಾಗಿ, ಜಗತ್ತಿನ ಚರಾಚರವಸ್ತುಗಳಾಗುತ್ತದೆ. ಆದರೆ ಹೀಗೆ ಶಕ್ತಿ ವಿವಿಧ ರೂಪ ಪಡೆಯುತ್ತದೆ ಎಂದರೂ ಒಂದೇ, ಪರಶಿವ ಸೃಷ್ಟಿಯಲ್ಲಿ ತೊಡಗಿದ್ದಾನೆ ಎಂದರೂ ಒಂದೇ. ಪರಶಿವ ಸೃಷ್ಟಿಯಲ್ಲಿ ತೊಡಗುವ ಮುನ್ನ, (ಅಂದರೆ ನಿಷ್ಕಲಲಿಂಗದ ಸ್ಥಿತಿಯಲ್ಲಿ) ನಿಷ್ಕ್ರಿಯ ಶಕ್ತಿಯು ಅವನಲ್ಲಿಯೆ ಇರುತ್ತದೆ, ಈ ಕಾರಣಕ್ಕಾಗಿ ಪರಶಿವನನ್ನು ಶಿವ-ಶಕ್ತಿ ಸಂಪುಟ ಎಂದು ಕರೆಯಲಾಗಿದೆ. ಶಿವ ಇರುವಲ್ಲಿ ಅವನ ಶಕ್ತಿ ಇರುತ್ತದೆ, ಶಕ್ತಿ ಇರುವಲ್ಲಿ ಶಿವ ಇರುತ್ತಾನೆ. ಇದನ್ನು ಹೀಗೂ ಹೇಳಬಹುದು: ವ್ಯಕ್ತಿಯೆಂದರೆ ಹೇಗೆ ದೇಹ ಮತ್ತು ಆತ್ಮಗಳ ಸಂಪುಟವೋ, ಹಾಗೆ ನಿಷ್ಕಲಲಿಂಗವು ಶಿವ ಮತ್ತು ಶಕ್ತಿಗಳ ಸಂಪುಟ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಶಿವಯೋಗ ಶಿವಾದ್ವೈತ Next