Previous ಪಿಂಡತ್ರಯ ಪ್ರಸಾದ Next

ಪೂಜಾರಿಗಳು

ಪೂಜಾರಿಗಳು

ಪೂಜಾರಿ" ಎಂದರೆ ಪೂಜಿಸುವವನು (ಪೂಜಕ) ಎಂದರ್ಥ. ಈ ಪದವು ಸಾಪೇಕ್ಷ ಪದವಿದ್ದು, ಅದು ಪೂಜ್ಯ ಎಂಬ ಪದವನ್ನು ಅವಲಂಬಿಸಿದೆ. ಪೂಜ್ಯ ವಸ್ತು ಅಥವಾ ವ್ಯಕ್ತಿಯ ಬಗೆಗೆ ಭಯ, ಗೌರವ ಮತ್ತು ಭಕ್ತಿ ಇದ್ದರೆ ಮಾತ್ರ ಪೂಜಾರಿಯು ಪೂಜ್ಯವಸ್ತು ಅಥವಾ ವ್ಯಕ್ತಿಯನ್ನು ಪೂಜಿಸುತ್ತಾನೆ. ಪೂಜ್ಯವ್ಯಕ್ತಿಯನ್ನು ಸಂತುಷ್ಟಪಡಿಸಿ, ಅವನ ಕೃಪೆಗೆ ಪಾತ್ರನಾಗಬೇಕೆಂಬುದೇ ಪೂಜೆಯ ಉದ್ದೇಶ. ಪೂಜ್ಯವನ್ನು ಪೂಜಾರಿಯು ಪೂಜೆಯ ಮೂಲಕ ಅಥವಾ ಕೆಲವೊಂದು ಕೃತ್ಯಗಳ ಮೂಲಕ ತೃಪ್ತಿಪಡಿಸಬಹುದು. ವಚನಕಾರರ ಪ್ರಕಾರ ಲಿಂಗ ಅಥವಾ ಪರಶಿವನೇ ಪೂಜ್ಯ, ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಮಹೇಶ್ವರ, ಪರಮೇಶ್ವರ, ಸರ್ವೆಶ್ವರ ಮತ್ತು ಮಹಾದೇವ ಎಂಬುವರೇ ಪೂಜಾರಿಗಳು,

ಬ್ರಹ್ಮಾಂಡವನ್ನು ಪಿಂಡಾಂಡವನ್ನೂ ಸೃಷ್ಟಿಸುವ ಬ್ರಹ್ಮನು ಪ್ರತಿ ಮಾನವನಲ್ಲಿ ಅವ್ಯಕ್ತವಾಗಿ ನೆಲೆಸಿದ್ದಾನೆ. ಒಂದು ಅರ್ಥದಲ್ಲಿ ಗುರುವೂ ಸಹ ಬ್ರಹ್ಮನೇ. ಗುರುವಿನಿಂದ ಲಿಂಗದೀಕ್ಷೆಯನ್ನು ಪಡೆದುಕೊಂಡ ಶಿಷ್ಯನು, ಪುನರ್ಜಾತ ಎನಿಸಿಕೊಳ್ಳುತ್ತಾನೆ. ಈ ಕಾರಣಕ್ಕೆ ಅವನನ್ನು ಗುರುಕರ ಸಂಜಾತ ಎಂದು ಕರೆಯಲಾಗಿದೆ. ದೀಕ್ಷಿತನಾದವನು (ಆಧ್ಯಾತ್ಮಿಕವಾಗಿ ಮತ್ತೊಂದು ಜನ್ಮ ಪಡೆದಿರುವುದರಿಂದ ಹಾಗೂ ಗುರುವೇ ಆ ಆಧ್ಯಾತ್ಮಿಕ ಜನ್ಮಕ್ಕೆ ಕಾರಣನಾದುದರಿಂದ, ಗುರುವೂ ಸಹ ಬ್ರಹ್ಮನೇ, ಆದರೆ ವಾಸ್ತವವಾಗಿ ಶಿಷ್ಯನೇ ಗುರುವಾದರೆ ಮಾತ್ರ ಅವನು ಪುನರ್ಜಾತನೆನಿಸಿಕೊಳ್ಳುತ್ತಾನೆಯೇ ಹೊರತು (ಅಂದರೆ, ಪ್ರತಿಯೊಬ್ಬ ದೀಕ್ಷಿತನೂ ತನ್ನಲ್ಲೊಬ್ಬ ಹೊಸ ಮನುಷ್ಯನನ್ನು ಸೃಷ್ಟಿಸದ ಹೊರತು), ಬೇರೆ ಯಾರೋ ಹೊರಗಿನವರು ಅವನನ್ನು ಸೃಷ್ಟಿಸಲಾರರು. ಬ್ರಹ್ಮನು ಹೇಗೆ ಶಿವನನ್ನು ಸಂತುಷ್ಟಿಪಡಿಸಲು ಅವನು ಆಜ್ಞಾಪಿಸಿದ ಸೃಷ್ಟಿಕಾರ್ಯವನ್ನು ಮಾಡುತ್ತಾನೋ (ಅಥವಾ ಬ್ರಹ್ಮನ ಸೃಷ್ಟಿಕಾರ್ಯವು ಹೇಗೆ ಒಂದು ಪೂಜೆಯೋ) ಹಾಗೆಯೇ ಮಾನವನೂ ತನ್ನನ್ನು ಆಧ್ಯಾತ್ಮಿಕವಾಗಿ ಪರಿವರ್ತಿಸಿಕೊಳ್ಳುವ ಮೂಲಕ ಶಿವನ ಪೂಜಾರಿಯಾಗಬೇಕು.

ವಿಷ್ಣುವು ಜಗತ್ತನ್ನು ರಕ್ಷಿಸುವ ಮೂಲಕ ಪರಶಿವನನ್ನು ತೃಪ್ತಿಪಡಿಸುತ್ತಾನೆ. ಪ್ರತಿ ಮನುಷ್ಯನಲ್ಲಿಯೂ ಒಬ್ಬ ವಿಷ್ಣುವಿದ್ದಾನೆ. ಜಗತ್ತು ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ ವಿಷ್ಣುವಿನ ಕರ್ತವ್ಯವೋ ಹಾಗೆಯೇ ದೀಕ್ಷೆ ಪಡೆದ ಶಿಷ್ಯನು ಧಾರ್ಮಿಕ ಮತ್ತು ನೈತಿಕ ಹಾದಿಯನ್ನು ಬಿಟ್ಟು ಹಾಳಾಗದಂತೆ ನೋಡಿಕೊಳ್ಳುವುದು ಗುರುವಿನ ಕೆಲಸ. ಗುರುವಿನ ಆ ಕೆಲಸವನ್ನು ಶಿಷ್ಯನು, ತಾನೇ ಅರಿತುಕೊಂಡು ಮಾಡಬೇಕು. ಅಂದರೆ, ಶಿಷ್ಯನು ತಾನೇ ಹೇಗೆ ತನ್ನಲ್ಲೊಂದು ಹೊಸ ವ್ಯಕ್ತಿತ್ವವನ್ನು ಸೃಷ್ಟಿಸಿ ಬ್ರಹ್ಮನಾಗುತ್ತಾನೋ ಹಾಗೆಯೇ ಆ ಹೊಸವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ಒಬ್ಬ ವಿಷ್ಣವೂ ಆಗಬೇಕು. ರುದ್ರನು ಹೇಗೆ ಕೊನೆಯಲ್ಲಿ ಎಲ್ಲದನ್ನೂ ಸಂಹಾರ ಮಾಡುವ ಮೂಲಕ ಸಂಹಾರವೆಂಬ ಪೂಜೆಯ ಮೂಲಕ) ಶಿವನನ್ನು ತೃಪ್ತಿಪಡಿಸುತ್ತಾನೋ ಹಾಗೆಯೇ ಸಾಧಕನಲ್ಲಿರುವ ರುದ್ರನೆಂಬ ಪೂಜಾರಿಯು ಅವನ ಸ್ಥೂಲಶರೀರದ ಎಲ್ಲ ದೋಷಗಳನ್ನೂ ನಾಶಮಾಡಿ ಶಿವನ ಅನುಗ್ರಹಕ್ಕೆ ಪಾತ್ರನಾಗುವಂತೆ ಮಾಡಬೇಕು. ಇಲ್ಲಿಯೂ ಸಹ ಶಿಷ್ಯನೇ ರುದ್ರನಾಗಬೇಕು ಎಂಬ ಮಾತನ್ನು ಮರೆಯಬಾರದು.

ನಮ್ಮ ಹಳೆಯ ಕರ್ಮಕ್ಕನುಗುಣವಾಗಿ ಈಶ್ವರನು ತನ್ನ ತಿರೋಧಾನ ಶಕ್ತಿಯ ಮೂಲಕ ನಮ್ಮನ್ನು ಹೇಗೆ ಕತ್ತಲೆಯಲ್ಲಿಟ್ಟು ಶಿವನ ಪ್ರಕಾಶ ಕಾಣದಂತೆ ಮಾಡುತ್ತಾನೋ ಹಾಗೆಯೇ ಸಾಧಕರಲ್ಲಿರುವ ಈಶ್ವರನು ಪಾಪಕ್ಕೂ ಪುಣ್ಯಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿಕೊಡುವ ಮೂಲಕ ಶಿವಾನುಗ್ರಹಕ್ಕೆ ಪಾತ್ರನಾಗುತ್ತಾನೆ. ನಮ್ಮಲ್ಲಿರುವ ಸದಾಶಿವನನ್ನು ಜಾಗೃತಗೊಳಿಸುವ ಮೂಲಕ (ಸದಾಶಿವನನ್ನು ಪೂಜಾರಿಯಾಗಿ ಮಾಡಿಕೊಂಡು), ನಾವು ಇತರರಿಗೆ ಅನುಗ್ರಹ ತೋರಿಸಬೇಕು. ಪರಶಿವನನ್ನು ಕುರಿತು ಧ್ಯಾನಿಸುವ ಮೂಲಕ, ಅವನ ಬಗೆಗಿನ ಕತೆ, ಪ್ರವಚನ ಇತ್ಯಾದಿಗಳನ್ನು ಕೇಳುವ ಮೂಲಕ, ಆಗಮ ಇತ್ಯಾದಿಗಳನ್ನು ಅಧ್ಯಯನ ಮಾಡುವ ಮೂಲಕ ನಾವು ಶಿವಯೋಗವನ್ನು ಆಚರಿಸಬಹುದು. ಹೀಗೆ ಆಚರಿಸುವುದೆಂದರೆ, ನಮ್ಮಲ್ಲಿರುವ ಮಹೇಶ್ವರನು ಪರಶಿವನನ್ನು ಪೂಜಿಸುತ್ತಿದ್ದಾನೆಂದರ್ಥ. ಸಾಧಕನು ಗುರುವಿನ ರೂಪದಲ್ಲಿ ಇತರರಿಗೆ ಅಷ್ಟಾಂಗಯೋಗವನ್ನು ಬೋಧಿಸಿದರೆ, ಆಗ ಅವನಲ್ಲಿರುವ ಪರಮೇಶ್ವರನು ಪರಶಿವನ ಪೂಜಾರಿಯಾಗಿದ್ದಾನೆಂದರ್ಥ. ಗುರುವು ತನ್ನ ಶಿಷ್ಯರನ್ನು ಬೇರೆಯವರು ತುಳಿದ ಆಧ್ಯಾತ್ಮಿಕ ಮಾರ್ಗದಲ್ಲೇ ಕರೆದುಕೊಂಡು ಹೋಗುವ ಮೂಲಕ, ಅವನು ಸರ್ವೆಶ್ವರನಂತೆ ಪರಶಿವನನ್ನು ಪೂಜಿಸುತ್ತಿದ್ದಾನೆಂದರ್ಥ. ಕೈಲಾಸದಲ್ಲಿರುವ ಪ್ರಮಥರಂತೆ ಸಾಧಕರನ್ನು ಮಾಡಿದರೆ, ಅಂಥ ಗುರುವು ಮಹಾದೇವನೆಂಬ ಪೂಜಾರಿ.

ಸಾಧಕನಲ್ಲೇ ಎಲ್ಲ ತಂತ್ರಗಳೂ ಇದ್ದು, ಅವುಗಳನ್ನು ನಿಯಂತ್ರಿಸುವ ಬ್ರಹ್ಮ, ವಿಷ್ಣು, ಮುಂತಾದ ಅಧಿದೇವತೆಗಳೂ ಅಲ್ಲಿಯೇ ಇದ್ದಾರೆಂದೂ ಹೇಳುವುದೂ ಒಂದೇ ಸಾಧಕನು ತಾನೇ ಬ್ರಹ್ಮ, ವಿಷ್ಣು, ಮುಂತಾದವರ ಕರ್ತವ್ಯಗಳನ್ನು ಮಾಡಿ ಪರಶಿವನ ಅನುಗ್ರಹಕ್ಕೆ ಪಾತ್ರನಾಗಬೇಕೆಂದು ಹೇಳುವುದೂ ಒಂದೇ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಿಂಡತ್ರಯ ಪ್ರಸಾದ Next