Previous ಸಪ್ತವ್ಯಸನಗಳು ಸಾಂಖ್ಯಯೋಗ Next

ಸಪ್ತವರ್ಣಗಳ ಪರಿಣಾಮಗಳು

ಸಪ್ತವರ್ಣಗಳ ಪರಿಣಾಮಗಳು

ಮನುಷ್ಯನ ದೇಹದಲ್ಲಿ ಏಳು ವರ್ಣಗಳಿದ್ದು, ಅವು ರಕ್ತಮಾಂಸದ ಕಣ್ಣುಗಳಿಗೆ ಕಾಣುವುದಿಲ್ಲ. ಆದರೆ ಅವು ವಿವಿಧ ಹಂತದ ಸಾಧಕನಿಗೆ ಕಾಣಿಸಿಕೊಳ್ಳುವುವು. ವಿವಿಧ ಚಕ್ರಗಳು ಜಾಗ್ರತವಾದಾಗ ವಿವಿಧ ಬಣ್ಣಗಳು ಕಾಣಿಸಿಕೊಳ್ಳುತ್ತವೆ. ಸಾಧನೆ ಇನ್ನೂ ಫಲಪ್ರದವಾಗದೆ ಇದ್ದಾಗ ಅವು ಮಾನವನ ವರ್ತನೆಯ ಮೇಲೆ ಕೆಲವು ಪರಿಣಾಮ ಮಾಡುತ್ತವೆ (೩:೧೧೨೪).

ಮೂಲಾಧಾರದಲ್ಲಿ ಪ್ರಧಾನ ಅಂಶ ಪೃಥ್ವಿತತ್ವ, ಅದರಲ್ಲಿ ಕಪಿಲ ವರ್ಣವಿದೆ. ಈ ವರ್ಣದಿಂದಾಗಿ ಮನುಷ್ಯನ ದೇಹದಲ್ಲಿ ಅಳುಕು ಉಂಟಾಗುತ್ತದೆ. ಸ್ವಾಧಿಷ್ಠಾನ ಚಕ್ರದಲ್ಲಿ ಅಪ್ಪುವಿದ್ದು, ಅದರಲ್ಲಿ ನೀಲವರ್ಣವಿದೆ. ಇದರಿಂದಾಗಿ ದೇಹ ನಡುಗುವುದು, ಮಣಿಪೂರಕ ಚಕ್ರದಲ್ಲಿ ಅಗ್ನಿ ತತ್ವವಿದ್ದು, ಅದರಲ್ಲಿ ಮಾಂಜಿಷ್ಟ ವರ್ಣವಿದೆ. ಇದರ ಪರಿಣಾಮವಾಗಿ ನಾವು ಕನಸು ಕಾಣುತ್ತೇವೆ. ಅನಾಹತ ಚಕ್ರದಲ್ಲಿ ವಾಯು ಅಂಶಪ್ರಧಾನವಾಗಿದ್ದು, ಅದರಲ್ಲಿ (ಪೀತ) ಹಳದಿ ವರ್ಣವಿರುತ್ತದೆ. ಇದರ ಪರಿಣಾಮವಾಗಿ ದೇಹದ ಒಳಗಡೆ ಒತ್ತು ಉಂಟಾಗುತ್ತದೆ. ವಿಶುದ್ಧಿ ಚಕ್ರದಲ್ಲಿ ಆಕಾಶ ತತ್ವ ಪ್ರಧಾನವಾಗಿದ್ದು, ಅದರಲ್ಲಿ ಕಪ್ಪು ವರ್ಣವಿದೆ. ಇದರ ಪ್ರಾಬಲ್ಯದಿಂದಾಗಿ ನಮಗೆ ಗೊಂದಲ ಉಂಟಾಗಿ, ದೇಹವು ತತ್ತರಿಸುತ್ತದೆ. ಆಜ್ಞಾಚಕ್ರದಲ್ಲಿ ಚಂದ್ರನಿದ್ದು, ಅದರಲ್ಲಿ ಶ್ವೇತವರ್ಣವಿದೆ. ಇದರಿಂದಾಗಿ ನಮಗೆ ಚಿಂತೆ ಉಂಟಾಗುತ್ತದೆ. ಬ್ರಹ್ಮರಂಧ್ರದಲ್ಲಿ ಸೂರ್ಯನಿದ್ದು, ಅದರಲ್ಲಿ ಗೌರವರ್ಣವಿದೆ. ಇದರಿಂದಾಗಿ ದೇಹದಲ್ಲಿ ಸಂಚಲನೆ ಉಂಟಾಗುತ್ತದೆ. ಸಾಧಕನು ತನ್ನ ಸಾಧನೆಯಿಂದಾಗಿ ಈ ಪರಿಣಾಮಗಳನ್ನು ನಿಯಂತ್ರಿಸಬೇಕೆಂಬುದು ಈ ವಚನದ ಸೂಚ್ಯ ಉಪದೇಶ (೩:೧೧೨೪).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಪ್ತವ್ಯಸನಗಳು ಸಾಂಖ್ಯಯೋಗ Next