ಷಡ್ವಿಧ ಲಿಂಗಧಾರಣೆ | ಸಗುಣ ನಿರ್ಗುಣ |
ಷಡ್ವಿಧ ವಿಭೂತಿಧಾರಣೆ |
ಶಿವಭಕ್ತರಾದವರೆಲ್ಲರೂ ವಿಭೂತಿಧರಿಸಬೇಕೆಂಬ ನಿಯಮವಿದೆ. ಆದರೆ ಯಾರಾರು ಯಾವಾವ ಸ್ಥಲದಲ್ಲಿ ಧರಿಸಿದರೆ ಯಾವಾವ ಲಾಭಗಳುಂಟಾಗುತ್ತವೆ ಎಂಬುದನ್ನು ಚೆನ್ನ ಬಸವಣ್ಣನವರು ಈ ರೀತಿ ತಿಳಿಸಿಕೊಡುತ್ತಾರೆ.
೧. ಸಹಜಲಿಂಗಧಾರಕರು ವಿಭೂತಿಯನ್ನು ತಮ್ಮ ಶರೀರದ ಎಂಟು ಸ್ಥಾನಗಳಲ್ಲಿ ಧರಿಸಬೇಕು, ಹಾಗೆ ಧರಿಸಿದವರಿಗೆ ಗುರುದೀಕ್ಷೆಯುಂಟಾಗುತ್ತದೆ.
೨. ಕ್ರಿಯಾದೀಕ್ಷೆ ಪಡೆದ ಉಪಾಧಿಕ ಭಕ್ತರು ತಮ್ಮ ಶರೀರದ ಹದಿನಾರು ಸ್ಥಾನಗಳಲ್ಲಿ ವಿಭೂತಿಧಾರಣೆ ಮಾಡಬೇಕು ಹಾಗೆ ಮಾಡಿದರೆ, ಅವರಿಗೆ ಗುರಲಿಂಗ ಜಂಗಮದ ಸದ್ಭಕ್ತಿ ಫಲಿಸುವುದು.
೩. ಕ್ರಿಯಾದೀಕ್ಷೆ ಮತ್ತು ಮಂತ್ರದೀಕ್ಷೆ ಪಡೆದ ನಿರುಪಾಧಿಕ ಭಕ್ತರು ತಮ್ಮ ಅಂಗದ ಮೂವತ್ತೆರಡು ಸ್ಥಾನಗಳಲ್ಲಿ ವಿಭೂತಿಧಾರಣೆ ಮಾಡಬೇಕು ಹಾಗೆ ಮಾಡಿದರೆ, ಅವರು ತ್ರಿವಿಧಪಾದೋದಕ ಪ್ರಸಾದಕ್ಕೆ ಯೋಗ್ಯರಾಗುತ್ತಾರೆ.
೪. ಕ್ರಿಯಾದೀಕ್ಷೆ, ಮಂತ್ರದೀಕ್ಷೆ ಮತ್ತು ವೇಧಾದೀಕ್ಷೆ ಪಡೆದ ಸಹಜ ಭಕ್ತರು ತಮ್ಮ ಶರೀರದ ಮೂವತ್ತಾರು ಸ್ಥಾನಗಳಲ್ಲಿ ವಿಭೂತಿಯನ್ನು ಧರಿಸಬೇಕು. ಹಾಗೆ ಮಾಡಿದರೆ ಅವರಿಗೆ ಸಚ್ಚಿದಾನಂದಪದ ದೊರೆಯುತ್ತದೆ.
೫. ಕ್ರಿಯಾದೀಕ್ಷೆ, ಮಂತ್ರದೀಕ್ಷೆ, ವೇಧಾದೀಕ್ಷೆ ಮತ್ತು ಸಚ್ಚಿದಾನಂದ ದೀಕ್ಷೆಯನ್ನು ಪಡೆದ ನಿರ್ವಂಚನ ಭಕ್ತರು ನಲವತ್ತುನಾಲ್ಕು ಸ್ಥಾನಗಳಲ್ಲಿ ವಿಭೂತಿಯನ್ನು ಧರಿಸಬೇಕು. ಹಾಗೆ ಮಾಡಿದರೆ ಅವರಿಗೆ ನಿರ್ಮಾಣಪದ ಲಭಿಸುತ್ತದೆ.
೬. ಕೊನೆಯದಾಗಿ, ಕ್ರಿಯಾದೀಕ್ಷೆ, ಮಂತ್ರದೀಕ್ಷೆ, ವೇಧಾದೀಕ್ಷೆ, ಸಚ್ಚಿದಾನಂದ ದೀಕ್ಷೆ ಮತ್ತು ನಿರ್ವಾಣಪದದೀಕ್ಷೆಗಳನ್ನು ಪಡೆದ ಸದ್ಭಕ್ತರು ತಮ್ಮ ಅಂಗದ ನಾಲ್ವತ್ತೆಂಟು ಸ್ಥಾನಗಳಲ್ಲಿ ಮಂತ್ರವನ್ನು ಪಠಿಸುತ್ತಾ ವಿಭೂತಿ ಧಾರಣೆ ಮಾಡಬೇಕು, ಹಾಗೆ ಮಾಡಿದರೆ ಅವರಿಗೆ, ಜಂಗಮರೊಡನಾಟ ಮತ್ತು ಪರಶಿವನೊಡನೆ ಕೂಟ ಉಂಟಾಗಿ, ಕೊನೆಯಲ್ಲಿ ನಿರವಯ ಸಮಾಧಿ ಉಂಟಾಗುತ್ತದೆ (೩:೯೪೬,೯೪೭).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಷಡ್ವಿಧ ಲಿಂಗಧಾರಣೆ | ಸಗುಣ ನಿರ್ಗುಣ |