Previous ಸಾದಾಖ್ಯ ಸ್ಥಲ Next

ಸೃಷ್ಟಿ

ಸೃಷ್ಟಿ

ವಚನಗಳಲ್ಲಿ ಈ ಪದಕ್ಕೆ ಎರಡು ಅರ್ಥಗಳಿವೆ. ಒಂದರ್ಥದಲ್ಲಿ ಅದು ಪರಶಿವನ ಸೃಷ್ಟಿಕಾರ್ಯಕ್ಕೆ ಅನ್ವಯಿಸಿದರೆ, ಮತ್ತೊಂದರ್ಥದಲ್ಲಿ ಸೃಷ್ಟಿಯು ಸೃಷ್ಟಿಯಾದ ಜಗತ್ತಿಗೆ ಅನ್ವಯಿಸುತ್ತದೆ. ಮೊದಲನೆಯದು ಒಂದು ಪ್ರಕ್ರಿಯೆ, ಎರಡನೆಯದು ಆ ಪ್ರಕ್ರಿಯೆಯ ಪರಿಣಾಮ. ಈಗ ಮೊದಲಿನ ಅರ್ಥಕ್ಕೆ ಒತ್ತು ಕೊಡೋಣ.

ಜೈನರೂ, ಮೂಲ ಪೂರ್ವಮೀಮಾಂಸಕರೂ ಪ್ರಪಂಚವು ಸೃಷ್ಟಿಯಾಗಿದೆ ಎಂಬ ಮಾತನ್ನು ಒಪ್ಪುವುದಿಲ್ಲ. ಅವರ ಪ್ರಕಾರ, ಪ್ರಪಂಚವು ಅನಾದಿಕಾಲದಿಂದಲೂ ಇದೆ. ಸಾಂಖ್ಯರು ಮತ್ತು ವೈಶೀಷಿಕ ದರ್ಶನದ ಪ್ರವರ್ತಕನಾದ ಕಣಾದ ಮಹರ್ಷಿ ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಕ್ರಿಯೆಗಳು ಚಕ್ರ ತಿರುಗಿದಂತೆ ಒಂದಾಮೇಲೊಂದರಂತೆ ಜರಗುತ್ತವೆ ಎಂದೂ, ಇವು ಅನಾದಿ ಅನಂತವೆಂದೂ ಹೇಳುತ್ತಾರೆ. ಆದರೆ ಜೈನ, ಬೌದ್ಧ, ಚಾರ್ವಾಕ, ಪೂರ್ವ ಮೀಮಾಂಸಕ, ಸಾಖ್ಯ, ವೈಶೀಷಿಕ ಇವರಾರೂ ಸೃಷ್ಟಿಕರ್ತನಿದ್ದಾನೆಂಬ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಭೌತವಸ್ತುವಲ್ಲದ ಮತ್ತೇನನ್ನೂ ಒಪ್ಪಿಕೊಳ್ಳದ ಚಾರ್ವಾಕನಿಗೆ ಸೇಶ್ವರವಾದ ವರ್ಜ; ಪ್ರಪಂಚವು ಅನಾದಿಕಾಲದಿಂದಲೂ ಇರುವುದರಿಂದ ಅದನ್ನು ಸೃಷ್ಟಿಸಲು ಈಶ್ವರ ಬೇಕಿಲ್ಲ, ಎಂದು ಪೂರ್ವ ಮೀಮಾಂಸಕ, ಜೈನ ಮತ್ತು ಬೌದ್ಧರು ವಾದಿಸುತ್ತಾರೆ. ಸೃಷ್ಟಿ, ಸ್ಥಿತಿ, ಮತ್ತು ಲಯ ಎಲ್ಲವೂ ಆತ್ಮಗಳು ಮಾಡಿದ ಕರ್ಮ ಅಥವಾ ಅದೃಷ್ಟಕ್ಕೆ ತಕ್ಕಂತೆ ನಡೆಯುತ್ತವೆ ಎಂಬುದು ಸಾಂಖ್ಯ ಮತ್ತು ಮೂಲ ವೈಶೇಷಿಕರ ವಾದ.

ಆದರೆ, ವಚನಕಾರರ ಪ್ರಕಾರ, ಪ್ರಪಂಚದಲ್ಲಿರುವ ಎಲ್ಲ ವಸ್ತುಗಳೂ ಶಕ್ತಿಯಿಂದ ಮಾಡಲ್ಪಟ್ಟಿವೆ. ಆದರೆ ಶಕ್ತಿಯು ಮೂಲತಃ ಜಡವಾಗಿದ್ದು ಅದು ಬದಲಾವಣೆಗೊಳಪಡಬೇಕಾದರೆ ಅದನ್ನು ಪ್ರಚೋದಿಸುವ, ಚೇತನ ಬೇಕು. ಈ ಚೇತನವೇ ಪರಶಿವ. ಶಕ್ತಿಯು ಪರಶಿವನ ಹೊರಗಿಲ್ಲ. ಅವನಿಗೂ ಶಕ್ತಿಗೂ ಇರುವ ಸಂಬಂಧ ಕುಂಬಾರ ಮತ್ತು ಮಣ್ಣಿಗೂ ಇರುವ ಸಂಬಂಧದಂತಲ್ಲ. ಶಕ್ತಿಯು ಶಿವನ ಒಂದು ವಿಶೇಷಣ. ಆದುದರಿಂದಲೇ ಅವನನ್ನು ಶಕ್ತಿ ವಿಶಿಷ್ಟಶಿವ ಎಂದು ಕರೆಯಲಾಗುತ್ತದೆ. ಕುಂಬಾರ ಮತ್ತು ಮಣ್ಣು ಎರಡು ಬೇರೆ ಬೇರೆ ರೀತಿಯ ಮತ್ತು ಪರಸ್ಪರರಿಂದ ದೂರ ಇರುವ ವಸ್ತುಗಳಾದರೆ, ಪರಶಿವ ಮತ್ತು ಶಕ್ತಿ ಒಂದೇ ವಸ್ತು. ಇದನ್ನು ನಾವು ಒಂದು ಉಪಮೆಯ ಮೂಲಕ ಹೀಗೆ ವಿವರಿಸಬಹುದು: ಹೂವು ಮತ್ತು ಅದರ ಸುಗಂಧ ಬೇರೆ ಬೇರೆ ರೀತಿಯ ವಸ್ತುಗಳಾದರೂ ಹೂವಿಲ್ಲದೆ ಸುಗಂಧವಿಲ್ಲ, ಸುಗಂಧವಿಲ್ಲದೇ ಹೂವಿಲ್ಲ. ಅದೇ ರೀತಿ ಪರಶಿವನಿಲ್ಲದೆ ಶಕ್ತಿಯೊಂದೇ ವಿಕಾಸವಾಗಲಾರದು, ವಿಕಾಸವಾಗುತ್ತದೆ ಎಂದು ಹೇಳಿದರೆ ಅದು ಸಾಂಖ್ಯದರ್ಶನವಾಗುತ್ತದೆ. ಆದರೆ ಈ ಮಾತನ್ನು ವಚನಕಾರರು ಒಪ್ಪುವುದಿಲ್ಲ. ಅದೇ ರೀತಿ ಶಕ್ತಿಯಿಲ್ಲದೆ ಪರಶಿವನೊಬ್ಬನೆ ಇರಬಲ್ಲನು ಎಂಬ ಅತಿಗಳ ಮಾತು ವಚನಕಾರರಿಗೆ ಒಪ್ಪಿಗೆಯಾಗುವುದಿಲ್ಲ. ಶಕ್ತಿಯಿಲ್ಲದ ಪರಶಿವ ಯಾವುದರಿಂದ ಸೃಷ್ಟಿಮಾಡುತ್ತಾನೆ? ಒಂದು ವೇಳೆ ಸೃಷ್ಟಿಯೇ ಇಲ್ಲವೆಂದರೆ, ಅದೂ ತಪ್ಪಾಗುತ್ತದೆ. ಏಕೆಂದರೆ, ಹಾಗೆ ಹೇಳುವವನಾದರೂ ಸೃಷ್ಟಿಯಾಗಿರಬೇಕು. ಆದುದರಿಂದ ಸೃಷ್ಟಿಯಾದ ಜಗತ್ತಿದೆ, ಪರಶಿವನೂ ಇದ್ದಾನೆ, ಆದರೆ ಪರಶಿವನಿಗೆ ಸೃಷ್ಟಿಸಲು ಬೇಕಾದ ಶಕ್ತಿಯಿಲ್ಲ ಎಂದು ಹೇಳುವುದು ಅಸಮಂಜಸ.

ಕೆಲವು ವೇಳೆ ಪೃಥ್ವಿ, ಅಪ್ಪು, ತೇಜಸ್ಸು, ವಾಯು, ಆಕಾರ, ಆತ್ಮ, ಸೂರ್ಯ ಮತ್ತು ಚಂದ್ರ ಎಂಬ ಎಂಟು ತತ್ವಗಳಿಂದ ಪರಶಿವನು ಸೃಷ್ಟಿಸುತ್ತಾನೆಂದೂ, ಆ ಸೃಷ್ಟಿಯೇ (ಅಥವಾ ಎಂಟು ತತ್ವಗಳೇ) ಪರಶಿವನ ಶರೀರವೆಂದೂ ವಚನಕಾರರು ಹೇಳುತ್ತಾರೆ. ಇಂಥ ಜಗತ್ತು (ಶಿವನ) ಅಷ್ಟತನು.

ಶಿವ ಮತ್ತು ಶಕ್ತಿಗಳ ಸಂಬಂಧ ಹೀಗಿರುವುದರಿಂದ ಪ್ರಪಂಚದ ಸೃಷ್ಟಿಗೆ ಬೇಕಾಗುವುದು ಪರಶಿವನ ಇಚ್ಛೆ ಮಾತ್ರ. ಅವನು ಇಚ್ಛಿಸಿದ ಕೂಡಲೆ ಅವನಲ್ಲಿ ಅವ್ಯಕ್ತವಾಗಿ ಅಡಗಿದ್ದ ಶಕ್ತಿಯು ವಿಕಾಸವಾಗಲು ಪ್ರಾರಂಭವಾಗುತ್ತದೆ. ಶಕ್ತಿವಿಕಾಸವು ಒಂದು ಕ್ರಮವನ್ನನುಸರಿಸುತ್ತದೆ. ವಚನಕಾರರ ಈ ಪರಿಕಲ್ಪನೆಯನ್ನು ಸ್ಥೂಲವಾಗಿ ಹೀಗೆ ಮಂಡಿಸಬಹುದು.

ಮೊದಲು ಪರಶಿವನು ತಾನೊಬ್ಬನೇ ಇರುತ್ತಾನೆ. ಆಗ ಅವನಿಗೆ ಪ್ರಪಂಚದ ಬಗೆಗಿನ ಅರಿವು ಇರುವುದಿಲ್ಲ. ಏಕೆಂದರೆ ಆಗ ಪ್ರಪಂಚವೇ ಇನ್ನೂ ಸೃಷ್ಟಿಯಾಗಿರುವುದಿಲ್ಲ. ಪ್ರಪಂಚವನ್ನು ಸೃಷ್ಟಿಸಬೇಕೆಂಬ ಇಚ್ಛೆ ಉಂಟಾಗುತ್ತದೆ. ಇದನ್ನು ನಿಃಕಲ (ನಿಷ್ಕಲ) ಲಿಂಗ ಸ್ಥಲ ಎಂದು ಕರೆಯುವುದು ರೂಢಿ. ಆಗ ಶಕ್ತಿಯಲ್ಲಿ ಕ್ಷೋಭೆ (ಚಲನೆ) ಉಂಟಾಗಿ ನಿಷ್ಕಲ ಲಿಂಗವು ಲಿಂಗಸ್ಥಲ ಮತ್ತು ಅಂಗಸ್ಥಲ ಎಂಬ ಎರಡು ಭಾಗವಾಗುತ್ತದೆ. ಅದೇ ರೀತಿ ನಿಷ್ಕಲಲಿಂಗದಲ್ಲಿದ್ದ ಶಕ್ತಿಯೂ ಎರಡು ಭಾಗವಾಗಿ, ಲಿಂಗಸ್ಥಲದಲ್ಲಿರುವ ಶಕ್ತಿಯು ಕಲಾಶಕ್ತಿಯೊಂದೂ, ಅಂಗಸ್ಥಲದಲ್ಲಿರುವ ಶಕ್ತಿಯು ಭಕ್ತಿ ಶಕ್ತಿಯೆಂದೂ ಎನಿಸಿಕೊಳ್ಳುತ್ತದೆ. ಲಿಂಗಸ್ಥಲವೆಂದರೆ ಪೂಜ್ಯಲಿಂಗ, ಅಂಗಸ್ಥವೆಂದರೆ ಪೂಜಕ ಅಂಗ, ಲಿಂಗಸ್ಥಲವು ಮತ್ತೆ ಆರು ಭಾಗವಾಗಿ, ಅದರ ಜೊತೆಯಲ್ಲಿರುವ ಕಲಾಶಕ್ತಿಯೂ ಆರು ಭಾಗವಾಗುತ್ತದೆ, ಅಲ್ಲದೆ ನಿಷ್ಕಲ ಲಿಂಗದ ಜೊತೆಗಿರುವ ಶಕ್ತಿಯು ಹೇಗೆ ಅದರ ಅವಿಭಾಜ್ಯ ಅಂಗವಾಗಿರುತ್ತದೆಯೋ ಹಾಗೆಯೇ ಲಿಂಗಸ್ಥಲದ ಆರು ಭಾಗಗಳ ಜೊತೆಗಿರುವ ಆರು ಕಲಾಶಕ್ತಿಗಳೂ ಅವುಗಳ ಅವಿಭಾಜ್ಯ ಅಂಗಗಳಾಗಿರುತ್ತವೆ. ಲಿಂಗಸ್ಥಲದ ಆರು ಭಾಗಗಳು ಮತ್ತು ಅವುಗಳ ಅಂಗಗಳಾದ ಆರು ಕಲಾಶಕ್ತಿಗಳ ವಿವರ ಹೀಗಿದೆ :

ಮಹಾಲಿಂಗ ಮತ್ತು ಚಿತ್‌ಶಕ್ತಿ, ಪ್ರಸಾದಲಿಂಗ ಮತ್ತು ಪರಾಶಕ್ತಿ, ಜಂಗಮಲಿಂಗ ಮತ್ತು ಆದಿಶಕ್ತಿ, ಶಿವಲಿಂಗ ಮತ್ತು ಇಚ್ಛಾಶಕ್ತಿ, ಗುರುಲಿಂಗ ಮತ್ತು ಜ್ಞಾನಶಕ್ತಿ, ಆಚಾರಲಿಂಗ ಮತ್ತು ಕ್ರಿಯಾಶಕ್ತಿ, ಕೆಲವು ವೇಳೆ ಲಿಂಗಗಳ ಬದಲು ಅಧಿದೇವತೆಗಳ ಹೆಸರನ್ನು ಬಳಸಲಾಗುತ್ತದೆ. ಮತ್ತೆ ಕೆಲವು ವೇಳೆ ಸಾದಾಖ್ಯಗಳ ಹೆಸರುಗಳನ್ನು ಬಳಸಲಾಗಿತ್ತದೆ. ಪರಶಿವನು ಈ ಶಕ್ತಿಗಳನ್ನೂ ಈ ಅಧಿದೇವತೆಗಳನ್ನೂ ಒಂದೇ ಏಟಿಗೆ ಸೃಷ್ಟಿಸದೆ ಒಂದಾದ ನಂತರ ಒಂದರಂತೆ ಈ ಕೆಳಗಿನಂತೆ ಸೃಷ್ಟಿಸುತ್ತಾನೆ ಎಂದು ಚೆನ್ನಬಸವಣ್ಣನವರು ಹೇಳುತ್ತಾರೆ :

ಸಹಜದಿಂದ ನಿರಾಲಂಬವಾಯ್ತು, ನಿರಾಲಂಬದಿಂದ ನಿರವಯವಾಯಿತ್ತು;
ನಿರವಯದಿಂದ ನಿರಾಕಾರವಾಯಿತ್ತು, ನಿರಾಕಾರದಿಂದ ಆದಿಯಾಯಿತ್ತು;
ಆದಿಯಿಂದ ಮೂರ್ತಿಯಾದವನೊಬ್ಬ ಶರಣ;
ಆ ಶರಣನ ಮೂರ್ತಿಯಿಂದ ಸದಾಶಿವನಾದ:
ಆ ಸದಾಶಿವ ಮೂರ್ತಿಗೆ ಜ್ಞಾನಶಕ್ತಿಯಾದಳು;
ಆ ಸದಾಶಿವಂಗೆಯೂ ಜ್ಞಾನಶಕ್ತಿಯರಿಬ್ಬರಿಗೆಯೂ ಶಿವನಾದ;
ಆ ಶಿವಂಗೆ ಇಚ್ಛಾಶಕ್ತಿಯಾದಳು;
ಆ ಶಿವಂಗೆಯೂ ಇಚ್ಛಾಶಕ್ತಿಯಿಬ್ಬರಿಗೆಯೂ ರುದ್ರನಾದ;
ಆ ರುದ್ರಂಗೆ ಕ್ರಿಯಾಶಕ್ತಿಯಾದಳು.
ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ;
ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು.
ಆ ವಿಷ್ಣುವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ,
ಆ ಬ್ರಹ್ಮಂಗೆ ಸರಸ್ವತಿಯಾದಳು.
ಆ ಬ್ರಹ್ಮಂಗೆಯೂ ಸರಸ್ವತಿಯಿಬ್ಬರಿಗೆಯೂ
ನರರು ಸುರರು ದೇವರ್ಕಗಳು ಹೆಣ್ಣು ಗಂಡು,
ಸಚರಾಚರ ಸಹಿತವಾಗಿ ಎಂಬತ್ತು ನಾಲ್ಕು ಲಕ್ಷ ಜೀವ ಜಂತುಗಳು,
ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕಾಣಾ
ಕೂಡಲ ಚೆನ್ನ ಸಂಗಮದೇವಾ (೩:೧೭೩೭)

ಇಲ್ಲಿ ಶಕ್ತಿ ಮತ್ತು ಅಧಿದೇವತೆಯರ ಹೆಸರುಗಳು ಬೇರೆ ಬೇರೆಯಿವೆ. ಬೇರೆ ವಚನಕಾರರು ಇವುಗಳ ಬದಲು ಬೇರೆ ಹೆಸರುಗಳನ್ನು ಉಪಯೋಗಿಸುತ್ತಾರೆ ಎಂಬ ಅಂಶವನ್ನು ಬಿಟ್ಟರೆ, ಒಂದು ಅಂಶ ಮಾತ್ರ ಸ್ಪಷ್ಟವಾಗುತ್ತದೆ. ಅದೆಂದರೆ : ಅತ್ಯಂತ ಸೂಕ್ಷ್ಮ ಶಕ್ತಿಯಾದ ಜ್ಞಾನಶಕ್ತಿ ಮತ್ತು ಅದನ್ನು ನಿಯಂತ್ರಿಸುವ ಸದಾಶಿವನು ಮೊದಲು ಸೃಷ್ಟಿಯಾಗಿ, ಕೊನೆಯಲ್ಲಿ ಸರಸ್ವತಿಯಿಂದ ಬ್ರಹ್ಮನು ಹುಟ್ಟಿ, ಬ್ರಹ್ಮನು ಪ್ರಪಂಚದ ಸಕಲ ಚರಾಚರ ವಸ್ತುಗಳನ್ನು ಸೃಷ್ಟಿಸುತ್ತಾನೆ. ಆದರೆ, ಪರಶಿವನೂ ಅಲ್ಲದೆ, ಬ್ರಹ್ಮ, ವಿಷ್ಣು, ಮುಂತಾದ ಪ್ರತ್ಯೇಕ ವ್ಯಕ್ತಿಗಳಿದ್ದಾರೆ ಎಂಬುದು ಇದರ ಅರ್ಥವಲ್ಲ. ಬ್ರಹ್ಮಾದಿಗಳೆಲ್ಲ ಶಿವನ ವಿವಿಧ ರೂಪಾಂತರಗಳು. ಅದೇ ರೀತಿ, ಅವನಿಂದ ಹುಟ್ಟಿದ ಚರಾಚರ ವಸ್ತುಗಳೂ ಅವನ ರೂಪಾಂತರವೇ. ಆದರೆ ಮನುಷ್ಯನು ಇದನ್ನು ಅಜ್ಞಾನದಿಂದ ಮರೆತು, ಎಲ್ಲವೂ ಬೇರೆ ಬೇರೆ ಎಂದು ತಿಳಿಯುತ್ತಾನೆ.

ಅಂಗಸ್ಥಲ ಮತ್ತು ಲಿಂಗಸ್ಥಲ ಎಂಬ ಪದಗಳನ್ನು ಬಳಸಿಕೊಂಡು ಹೇಳುವುದಾದರೆ: ಮೇಲೆ ಹೇಳಿದ ಆರು ಲಿಂಗಗಳು ಅಥವಾ ಆರು ಸಾದಾಖ್ಯ ಅಥವಾ ಅಧಿದೇವತೆಗಳು ಪ್ರಪಂಚದ ಎಲ್ಲ ಕಡೆಯೂ ಇರುವುದಲ್ಲದೆ ಮಾನವನ ದೇಹದಲ್ಲೂ ಇವೆ. ಈ ಕಾರಣಕ್ಕಾಗಿಯೇ ವಚನಕಾರರು ಪ್ರಪಂಚವೆಂಬ ಬ್ರಹ್ಮಾಂಡಕ್ಕೂ ಮಾನವನೆಂಬ ಪಿಂಡಾಂಡಕ್ಕೂ ವ್ಯತ್ಯಾಸ ಮಾಡದಿರುವುದು.
ಪ್ರಪಂಚ ಮತ್ತು ಜೀವರಾಶಿಗಳನ್ನು ಸೃಷ್ಟಿಮಾಡಿದ ಮೇಲೆ ಪರಶಿವನು ಅವುಗಳಿಂದ ಹೊರಗಿರದೆ ಅವುಗಳಲ್ಲೇ ಅಂತಸ್ಥವಾಗಿರುತ್ತಾನೆ. ಎತ್ತೆತ್ತ ನೋಡಿದರತ್ತ ನೀನೇ ದೇವಾ, ಸಕಲ ವಿಸ್ತಾರದ ರೂಹು ನೀನೇ ದೇವಾ' ಎಂದು ಬಸವಣ್ಣನವರು ಹೇಳುವಾಗಲೂ, “ಗಿರಿಗಳ ಗುಹೆಗಳ ಕಂದರದಲ್ಲಿ, ನೆಲಹೊಲದಲ್ಲಿ, ಇಪ್ಪ ದೇವಾ, ಎಲ್ಲಿ ನೋಡಿದಲ್ಲಿ ಇಪ್ಪೆ ದೇವಾ” ಎಂದು ಅಲ್ಲಮ ಪ್ರಭು ಹೇಳುವಾಗಲೂ, “ಎಲ್ಲೆಲ್ಲಿ ನೋಡಿದಲ್ಲಿ ನೀನೇ ದೇವಾ, ಪಿಂಡಾಂಡದೊಳಗೆಲ್ಲ ನೀನೇ ದೇವಾ” ಎಂದು ಸ್ವತಂತ್ರ ಸಿದ್ದಲಿಂಗೇಶ್ವರರು ಹೇಳುವಾಗಲೂ, ಪರಶಿವನು ವಿಶ್ವದ ತುಂಬ ಮತ್ತು ವಿಶ್ವದ ಹೊರಗೆಲ್ಲ ಇದ್ದಾನೆಂದೂ, ಆದರೆ, ಅನುಭಾವಿಗಳಿಗಷ್ಟೇ ಗೋಚರವಾಗುತ್ತಾನೆಂದೂ ಅರ್ಥವಾಗುತ್ತದೆ.

ಪ್ರಪಂಚದಲ್ಲಿರುವ (ಪ್ರಪಂಚದ ವಸ್ತುಗಳಾಗಿ ರೂಪಾಂತರಗೊಂಡಿರುವ) ಶಕ್ತಿಗಳಿಗೆ ಕಲಾಶಕ್ತಿ ಅಥವಾ ಅಧೋಮಾಯೆ ಎಂದು ಹೆಸರು. ಮನುಷ್ಯನು ತನ್ನ ಕರ್ಮಗಳಿಂದಾಗಿ ಅಧೋಸ್ಥಿತಿಗೆ ಇಳಿದಿದ್ದಾನಾದುದರಿಂದ, ಅವಕ್ಕೆ ಆ ಹೆಸರು ಬಂದಿದೆ. ಒಂದು ವೇಳೆ ಅವನಿಗೆ ಸಮರ್ಥ ಗುರುವೊಬ್ಬ ಸಿಕ್ಕಿ, ಅವನಿಂದ ಸರಿಯಾದ ಆಧ್ಯಾತ್ಮಿಕ ಶಿಕ್ಷಣ ದೊರೆತರೆ, ಅವನು ಅದೇ ಶಕ್ತಿಗಳನ್ನು ಲಿಂಗಾಂಗ ಸಾಮರಸ್ಯದ ಸಿದ್ಧಿಗಾಗಿ ಬಳಸಿಕೊಳ್ಳಬಹುದು. ಅಂಥ ಸಿದ್ಧಿಗೆ ಬಳಸಿಕೊಂಡ ಶಕ್ತಿಗಳು ಪರಿವರ್ತಿತವಾಗಿ ಭಕ್ತಿ ಶಕ್ತಿ ಅಥವಾ ಊರ್ಧ್ವ ಮಾಯೆ ಎನಿಸಿಕೊಳ್ಳುತ್ತದೆ.

ಪ್ರಪಂಚದಲ್ಲಿ ಎಲ್ಲೆಲ್ಲೂ ಪರಮಾತ್ಮನಿದ್ದರೂ ಅವನು ಅನುಭಾವಿಗಳಿಗಷ್ಟೇ ಕಂಡು ಉಳಿದವರಿಗೆ ಹೇಗೆ ಕಾಣುವುದಿಲ್ಲವೋ, ಹಾಗೆಯೇ ಮನುಷ್ಯನಲ್ಲೇ ಆಚಾರಲಿಂಗಾದಿಯಾಗಿ ಆರು ರೂಪಗಳಲ್ಲಿ ಪರಶಿವನು ನೆಲೆಸಿದ್ದರೂ, ಅನುಭಾವಿಗಳಿಗಷ್ಟೇ ಕಂಡು, ಇತರರಿಗೆ ಕಾಣುವುದಿಲ್ಲ. ಅಧೋ ಮಾಯೆಯನ್ನು ಊರ್ಧ್ವ ಮಾಯೆಯನ್ನಾಗಿ ಪರಿವರ್ತಿಸಿ, ಆ ಮೂಲಕ ಅನುಭಾವ ಪಡೆದು, ಆ ಮೂಲಕ ಶಿವಸಾಕ್ಷಾತ್ಕಾರ ಪಡೆಯುವುದೇ ಶಿವಯೋಗ, ಆದುದರಿಂದ ವಚನಕಾರರ ಪ್ರಕಾರ, ಸೃಷ್ಟಿ ವಿಚಾರವು ಶಿವಯೋಗಕ್ಕೆ ಬುನಾದಿ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಾದಾಖ್ಯ ಸ್ಥಲ Next