ಮಹೇಶ್ವರನಿಗೆ ಅಪ್ಪು ಅಂಗ | ಮಿಶ್ರಷಡುಸ್ಥಲ, ಮಿಶ್ರಲಿಂಗಾರ್ಪಣ |
ಮಾಯೆ |
ವಚನಕಾರರು ಈ ಪದವನ್ನು ಕನಿಷ್ಟ ನಾಲ್ಕು ಅರ್ಥಗಳಲ್ಲಿ ಬಳಸಿರುವಂತೆ ಕಾಣುತ್ತದೆ.
೧. ಶಂಕರರ ಚಿದದ್ವೈತದಲ್ಲಿ ಮಾಯೆ" ಎಂಬ ಪದವನ್ನು ಭ್ರಮ ಎಂಬರ್ಥದಲ್ಲಿಯೂ ಕೆಲವು ವೇಳೆ ಅನಿತ್ಯ ಅಥವಾ ಅಶಾಶ್ವತವಾದುದು" ಎಂಬ ಅರ್ಥದಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ ಜಗನ್ಮಿಥ್ಯಾ" ಎಂಬ ಪ್ರಯೋಗದಲ್ಲಿ ಜಗತ್ತು ಇಂದ್ರಿಯಗೋಚರವಾದರೂ, ಅದು ಬ್ರಹ್ಮನಂತೆ ಸತ್ಯವಲ್ಲ. ಹಗ್ಗವು ಕತ್ತಲೆಯಲ್ಲಿ ಹಾವಿನಂತೆ ಕಾಣು(ತೋರು)ತ್ತದೆ. ಅದೇ ರೀತಿ ನಿರ್ಗುಣ ಬ್ರಹ್ಮವು ಅಥವಾ ಅನಂತ ಚಿತ್ತು ಪರಿಮಿತವಾದ ಜಡ ಅಥವಾ ಭೌತ ಜಗತ್ತಿನಂತೆ ತೋರುತ್ತದೆ. ಈ ತೋರಿಕೆ (ಭ್ರಮ) ಅಬಾಧಿತವಲ್ಲ. ಬೆಳಕು ಬಂದ ಕೂಡಲೇ ನಾವು ನೋಡಿದುದು ಹಾವಲ್ಲ, ಹಗ್ಗ ಮಾತ್ರ ಎಂಬ ಅರಿವು ಹೇಗೆ ಮೂಡುತ್ತದೆಯೋ ಹಾಗೆಯೇ, ಬ್ರಹ್ಮಜ್ಞಾನ ಉಂಟಾದ ಕೂಡಲೇ ಜಗತ್ತಿನಂತೆ ಕಾಣುತ್ತಿದ್ದುದು ನಿರ್ಗುಣ ಚಿತ್ತು ಎಂಬ ಅರಿವು ಮೂಡುತ್ತದೆ. ಇದೆಲ್ಲ ತೋರಿಕೆಯೂ ಅಜ್ಞಾನ ಅಥವಾ ಮಾಯೆಯಿಂದ.
ಆದರೆ ವಚನಕಾರರು ಪ್ರಪಂಚವು ಭ್ರಮೆಯಲ್ಲವೆಂದೂ, ವಾಸ್ತವಿಕ ಸತ್ಯವೆಂದೂ ಹೇಳುತ್ತಾರೆ. ಅದು ಪರಶಿವನ ಶಕ್ತಿಯಿಂದಾದ ಉತ್ಪನ್ನ, ಶಿವಶಕ್ತಿಗೆ ಮಾಯೆ ಎಂಬ ಪರ್ಯಾಯ ಪದವನ್ನೂ ವಚನಕಾರರು ಬಳಸುತ್ತಾರೆ. ಆದುದರಿಂದ ಜಗತ್‌ಸೃಷ್ಟಿಗೆ ಮಾಯೆಯು ಉಪಾದಾನ ಕಾರಣ.
ಮಾಯೆಯು "ಅಧೋಮಾಯೆ” ಮತ್ತು “ಊರ್ಧ್ವ ಮಾಯೆ” ಎಂದು ಎರಡು ಬಗೆಯಾಗಿದೆ. ಈ ಎರಡು ಪದಗಳು ಕಲಾಶಕ್ತಿ ಮತ್ತು ಭಕ್ತಿಶಕ್ತಿ" ಎಂಬ ಪದಗಳಿಗೆ ಪರ್ಯಾಯ ಪದಗಳಾಗಿವೆ (ನೋಡಿ : ಶಕ್ತಿ).
೨. ಮತ್ತೊಂದರ್ಥದಲ್ಲಿ ಯಾವುದು ಸಕಲರನ್ನೂ ಕಾಡುತ್ತದೆಯೋ ಅದೇ ಮಾಯೆ. ಮುಂದುಗೆಡಿಸಿತ್ತು ಮಾಯೆ” (೧:೧೪), ಇದಾವ ಪರಿಯಲ್ಲಿ ಕಾಡಿಹಿತು ಮಾಯೆ (೧:೧೫) ಎಂಬಲ್ಲಿ ಈ ಅರ್ಥ ಸ್ಪಷ್ಟವಾಗುತ್ತದೆ. ಮಾಯೆ ಇಂದ್ರಾದಿ ದೇವತೆಗಳನ್ನು ಕಾಡುತ್ತದೆ ಮುಂತಾದ ವಾಕ್ಯಗಳು ಮಾಯೆ" ಎಂದರೆ ಕಷ್ಟ ಅಥವಾ ಕೇಡು ಮಾಡುವ ಶಕ್ತಿ ಎಂದಾಗುತ್ತದೆ. ಹರಿ ಹಂದಿಯಾದುದು, ಬ್ರಹ್ಮನಿಗೆ ಶಿರ ಹೋದುದು, ದೇವೇಂದ್ರನು ಶಾಪಗ್ರಸ್ತನಾಗಿ ರೋಗಿಯಾದುದು, ಇತ್ಯಾದಿಗಳೆಲ್ಲ ಪರಶಿವನ ಮಾಯೆಯಿಂದಾಗಿಯೇ. ಆದರೆ ಮಾಯೆ ಒಬ್ಬ ಹೆಂಗಸು ಎಂದು ತಿಳಿಯುವುದು ತಪ್ಪು. ವಚನಕಾರರು ಮಾಯೆಯನ್ನು ಮಾಯಾಂಗನೆ, ಮುಂತಾಗಿ ಸ್ತ್ರೀವಾಚಕ ಪದಗಳಿಂದ ಕರೆದಿದ್ದರೂ, ಮಾಯೆ ಹೆಂಗಸಲ್ಲ. ವಚನಸಾಹಿತ್ಯದಲ್ಲಿ ಕ್ರಿಯಾಶಕ್ತಿ, ಇಚ್ಛಾಶಕ್ತಿ, ಇತ್ಯಾದಿ ಶಕ್ತಿಗಳ ಪಟ್ಟಿಯಲ್ಲಾಗಲಿ, ಸದಾಶಿವ, ಈಶ್ವರ, ಇತ್ಯಾದಿ ಸಾದಾಖ್ಯ (ಅಧಿದೇವತೆ)ಗಳ ಪಟ್ಟಿಯಲ್ಲಾಗಲಿ ಮಾಯೆ ಎಂಬ ವ್ಯಕ್ತಿಯು ಸೇರ್ಪಡೆಯಾಗಿಲ್ಲ.
೩. ಆಸೆ” ಎಂಬುದು ಮಾಯೆಯ ಮತ್ತೊಂದು ಅರ್ಥ. ಮನದ ಮುಂದಣ ಆಸೆಯೇ ಮಾಯೆ” ಎಂಬಲ್ಲಿ ಇದು ಸ್ಪಷ್ಟವಾಗುತ್ತದೆ. ಪ್ರಾಯಶಃ ಅನಿಯಂತ್ರಿತ ಆಸೆ ಎಂಬುದು ಅದರ ಒಳಾರ್ಥವಿರಬಹುದು.
೪. ಮರವು ಅಥವಾ ಅಜ್ಞಾನ (ಅವಿದ್ಯೆ) ಎಂಬುದು ಮತ್ತೊಂದು ಅರ್ಥ. ನಾವು ನಮ್ಮ ನಿಜವಾದ ಸ್ವರೂಪದ ಬಗ್ಗೆ ಅಥವಾ ಜೀವನದ ನಿಜವಾದ ಧ್ಯೇಯದ ಬಗ್ಗೆ ಜ್ಞಾನವಿಲ್ಲದಿದ್ದರೆ, ನಾವು ಮಾಯೆಗೊಳಗಾಗಿದ್ದೇವೆಂದರ್ಥ (ನೋಡಿ : ಮಾಯಾಕಾವಳ, ಮಾಯಾಛಾಯೆ).
ಸಿದ್ಧರಾಮನು ಇವೆಲ್ಲವನ್ನೂ ತಾತ್ಪರ್ಯರೂಪದಲ್ಲಿ “ಯೋಗಿಗೆ ಕೋಪವೇ ಮಾಯೆ, ರೋಗಿಗೆ ಅಪಥ್ಯವೇ ಮಾಯೆ, ಜ್ಞಾನಿಗೆ ಮಿಥ್ಯವೇ ಮಾಯೆ ಅರಿದೆನೆಂಬುವಂಗೆ ನಾನು ನೀನೆಂಬುದೆ ಮಾಯೆ” (೪:೬೯೭) ಎನ್ನುತ್ತಾನೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಮಹೇಶ್ವರನಿಗೆ ಅಪ್ಪು ಅಂಗ | ಮಿಶ್ರಷಡುಸ್ಥಲ, ಮಿಶ್ರಲಿಂಗಾರ್ಪಣ |