Previous ಗಣಾಚಾರ ಮಹಾಮನೆ, ಮಹಮನೆ Next

ಜಂಗಮಲಿಂಗ

ಜಂಗಮಲಿಂಗ

ಜಂಗಮಲಿಂಗ = ಚರಲಿಂಗ
೧. ಜಂಗಮರೂಪದಲ್ಲಿರುವ ಲಿಂಗ; ಚರಲಿಂಗ ; ಜಂಗಮ ; ಗಮನವುಳ್ಳುದೇ ಜಂಗಮಲಿಂಗ ನಿರ್ಗಮನಿಯಾದುದೆ ಲಿಂಗಜಂಗಮ ಅದು ಸಂಯೋಗಸಂಬಂಧವ ವೇದಿಸಿ ನಡೆಯಬಲ್ಲರೆ ಕೂಡಲಚೆನ್ನಸಂಗಮದೇವನೆಂಬೆನು (ಚೆನ್ನಬ, ಸಮವ. ೩-೧೪೯-೪೬೬); ಊಡಿದಡುಂಡು ನೀಡಿದಡೊಲಿದು ಬೇಡಿದ ವರವ ಕೊಡುವ ಜಂಗಮಲಿಂಗದ ಪಾದವ ಹಿಡಿದು ಬದುಕಿದೆ ಕಾಣಾ (ಅಕ್ಕಮ. ಸಮವ. ೫-೨೮-೭೫); ಸಜ್ಜನಶುದ್ಧ ಶಿವಾಚಾರಸಂಪನ್ನರಾದ ಜಂಗಮಲಿಂಗದ ಮಾತ ಕೇಳದೆ ...ಮಿಕ್ಕಿದ ಕೂಳ ತನ್ನಿಷ್ಟಲಿಂಗಕ್ಕೆ ತೋಟೆ ತಿಂಬ ಲಿಂಗದ್ರೋಹಿಗಳಿಗೆ ಕುಂಭೀಪಾತಕ ನಾಯಕನರಕ ತಪ್ಪದು (ಮಡಿವಾ, ಸಮವ. ೮-೨೩೪-೬೧೧).

೨. ಷಟ್‌ಸ್ಥಲಗಳಿಗನುಗುಣವಾಗಿರುವ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗ ಎಂಬ ಷಡ್ಲಿಂಗಗಳಲ್ಲಿ ಒಂದು; ಇದು ಷಟ್‌ಸ್ಥಲಗಳಲ್ಲಿ ಪ್ರಾಣಲಿಂಗ ಸಲಕ್ಕೆ ಸಂಬಂಧಿಸಿದೆಂದು. ಇದು ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮ, ಆದಿಪ್ರಸಾದಿ, ಅಂತ್ಯಪ್ರಸಾದಿ ಮತ್ತು ಸೇವಪ್ರಸಾದಿ ಎಂದು ಒಂಬತ್ತು ಪ್ರಕಾರಗಳಾಗಿವೆ. ಲಿಂಗನಿಷ್ಠೆಯುಳ್ಳವನು ಷಟ್‌ಚಕ್ರಗಳ ಮೂಲಕ ತನ್ನ ಶರೀರದಲ್ಲಿ ಹರಿಯುವ ಶಕ್ತಿಗಳನ್ನು ಲಿಂಗಮುಖವನ್ನಾಗಿ ಮಾಡಿದಾಗ ಜಂಗಮಲಿಂಗವು ಅನಾಹತಚಕ್ರದಲ್ಲಿ ನೆಲೆಗೊಳ್ಳುತ್ತದೆ. ಮನುಷ್ಯನ ಚಿತ್ತ, ಬುದ್ಧಿ, ಅಹಂಕಾರ, ಮನ, ಜ್ಞಾನ ಮತ್ತು ಭಾವಗಳ ಮೂಲಕ - ಕ್ರಿಯೆಗಳು ನಡೆಯುತ್ತವೆ. ಇವುಗಳಲ್ಲಿ ಮನವು ಜಂಗಮಲಿಂಗಕ್ಕೆ ಸಂಬಂಧಿಸಿದೆ. ಜಂಗಮಲಿಂಗವು ಸಾಧಕನ ಸರ್ವಾಂಗದಲ್ಲಿಯೂ ಇರುವ ತ್ವಕ್ಕಿನಲ್ಲಿ ಸರ್ವವ್ಯಾಪಿಯಾಗಿ ನೆಲಸಿರುತ್ತದೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗವೆಂದಿಂತು ಲಿಂಗಸ್ಥಲವಾಜಕ್ಕಂ ವಿವರ (ಚೆನ್ನಬ. ಸಮವ. ೩-೩೨೦-೯೮೭);

೩. ಇಷ್ಟಲಿಂಗ, ಪ್ರಾಣಲಿಂಗ ಮತ್ತು ಜಂಗಮಲಿಂಗ ಎಂಬ ತ್ರಿವಿಧಲಿಂಗಗಳಲ್ಲಿ ಒಂದು (?)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಗಣಾಚಾರ ಮಹಾಮನೆ, ಮಹಮನೆ Next