ದಶವಾಯುಗಳು | ದಾಸೋಹ |
ದಶವಿಧ ಉದಕ |
೧. ಗುರು ಅಥವಾ ಜಂಗಮರ ಪಾದಕ್ಕೆ ಉದಕವನ್ನೆರೆದರೆ, ಅದು ಪಾದೋದಕ.
೨. ಆ ಪಾದೋದಕವನ್ನೇ ಲಿಂಗಕ್ಕೆರೆಯಬೇಕೆಂಬ ಇಚ್ಛೆ ಉಂಟಾದಲ್ಲಿ, ಅದು ಲಿಂಗೋದಕ.
೩. ಅದನ್ನು ಲಿಂಗದ ಮಜ್ಜನಕ್ಕೆರೆದರೆ, ಮಜ್ಜನೋದಕ.
೪. ಆ ಉದಕವನ್ನು ಐದು ಬೆರಳಿನಿಂದ ಮುಟ್ಟಿದರೆ, ಅದು ಸ್ಪರ್ಶನೋದಕವೆನಿಸಿಕೊಳ್ಳುತ್ತದೆ.
೫. ಅದನ್ನು ಎಚ್ಚರಿಕೆಯಿಂದ (ಸಾವಧಾನದಿಂದ) ಸ್ವೀಕರಿಸಿದರೆ, ಅದು ಅವಧಾನೋದಕವೆನಿಸಿಕೊಳ್ಳುತ್ತದೆ.
೬. ಆ ಸೇವನೆಯಿಂದ ಸಂತೋಷ (ಆಪ್ಯಾಯನ) ಉಂಟಾಗುವುದರಿಂದ, ಅದು ಆಪ್ಯಾಯನೋದಕವೆನಿಸಿಕೊಳ್ಳುತ್ತದೆ.
೭. ಆ ಹಸ್ತದೊಳಗಿದ್ದ ಉದಕವನ್ನು ಲಿಂಗಕ್ಕೆ ಸಲ್ಲಿಸಿದರೆ, ಹಸ್ತೋದಕವಾಗುತ್ತದೆ.
೮. ಬಟ್ಟಲಲ್ಲಿದ್ದ ಉದಕವನ್ನು ಮೂರು ಸಲ ಸೇವಿಸಿದರೆ, ಅದು ಪರಿಣಾಮೋದಕವೆನಿಸಿಕೊಳ್ಳುತ್ತದೆ.
೯. ಈ ಸೇವನೆಯಿಂದ ನಮ್ಮ ಅಶುದ್ಧತೆ ನಿರ್ನಾಮವಾಗುವುದರಿಂದ, ಆ ಉದಕವು ನಿರ್ನಾಮೋದಕವೆನಿಸಿಕೊಳ್ಳುತ್ತದೆ.
೧೦. ನಾವು ಸ್ವೀಕರಿಸಿದ ಉದಕವು ಬ್ರಹ್ಮರಂಧ್ರದಲ್ಲಿರುವ ಅಮೃತಕ್ಕೆ ಸಮ ಎಂದು ಸ್ವೀಕರಿಸಿದರೆ, ಅದು ಸತ್ತೋದಕವೆನಿಸಿಕೊಳ್ಳುತ್ತದೆ.
ಕೆಲವು ವೇಳೆ ಈ ಪಟ್ಟಿಯಲ್ಲಿರುವ ಉದಕಗಳಲ್ಲಿ ಕೆಲವು ಬದಲಾಗುತ್ತವೆ; ಮತ್ತೆ ಕೆಲವು ವೇಳೆ ಹೆಸರುಗಳು ಅವೇ ಇದ್ದು, ಅವುಗಳ ಸೂಚಕತೆ ಬೇರೆಯಾಗಿರುತ್ತದೆ. ಚೆನ್ನ ಬಸವಣ್ಣನವರ ಪ್ರಕಾರ, ಮೊದಲನೆಯದು ಕೇವಲ ಪಾದೋದಕವಲ್ಲ, ಅದು ಗುರು ಪಾದೋದಕ, ಲಿಂಗದಲ್ಲಿ ಲೀಯವಾಗಬೇಕೆಂಬ ಉದ್ದೇಶದಿಂದ ಗುರುಪಾದೋದಕವನ್ನು ಲಿಂಗಕ್ಕೆರೆಯಬೇಕೆಂಬ ಇಚ್ಛೆ ಉಂಟಾದಲ್ಲಿ, ಅದು ಲಿಂಗೋದಕವೆನಿಸಿಕೊಳ್ಳುತ್ತದೆ. ಮಜ್ಜನೋದಕಕ್ಕೆ ಜಂಗಮೋದಕವೆಂದೂ ಹೆಸರು. ಹಾಗೆಯೇ ಸ್ವರ್ಶನೋದಕವು ಆಧಾರ ಚಕ್ರ ಅಥವಾ ಚತುರ್ದಳ ಪದ್ಮ (ಪುಷ್ಪವನ್ನು ಜಾಗೃತಗೊಳಿಸುವುದರಿಂದ, ಅದಕ್ಕೆ ಪುಷ್ಪದಕವೆಂದೂ ಹೆಸರು. (೩:೧೪೧೪, ೧೪೧೬)
ಅಂತೂ ಪಾದೋದಕ ಸೇವನೆಯ ಮೂಲಕ ಆಧ್ಯಾತ್ಮಿಕ ಪ್ರಗತಿಯು ಸಾಧ್ಯ ಎಂಬುದನ್ನು ಇದು ತೋರಿಸಿಕೊಡುತ್ತದೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ದಶವಾಯುಗಳು | ದಾಸೋಹ |